Thursday, February 6, 2020

ಸುಪ್ರೀಂಕೋರ್ಟ್ ಅಂಗಳಕ್ಕೆ ಮತ್ತೆ ನಿರ್ಭಯಾ ಪ್ರಕರಣ

ಸುಪ್ರೀಂಕೋರ್ಟ್ ಅಂಗಳಕ್ಕೆ ಮತ್ತೆ ನಿರ್ಭಯಾ ಪ್ರಕರಣ
ಹೈಕೋರ್ಟ್ ಆದೇಶ ವಿರುದ್ಧ ಕೇಂದ್ರ, ದೆಹಲಿ ಸರ್ಕಾರದ ಅರ್ಜಿ
ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಗಲ್ಲು ಜಾರಿಗೆ ತಡೆಯಾಜ್ಞೆ ನೀಡಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ್ದರ ವಿರುದ್ಧ ಕೇಂದ್ರ ಸರ್ಕಾರ ಮತ್ತು ದೆಹಲಿ ನ್ಯಾಯಾಲಯ 2020 ಫೆಬ್ರುವರಿ 05ರ ಬುಧವಾರ  ಸುಪ್ರೀಂಕೋರ್ಟ್ ಮೆಟ್ಟಿಲೇರಿದವು.

‘ಮರಣದಂಡನೆಗೆ ಗುರಿಯಾಗಿರುವ ಶಿಕ್ಷಿತ ಅಪರಾಧಿಗಳನ್ನು ಒಟ್ಟಿಗೇ ಗಲ್ಲಿಗೇರಿಸಬೇಕು, ಪ್ರತ್ಯೇಕವಾಗಿ ಗಲ್ಲಿಗೇರಿಸಲಾಗದು ಎಂಬುದಾಗಿ ಬುಧವಾರ ಆದೇಶ ನೀಡಿದ ಹೈಕೋರ್ಟ್, ಕೇಂದ್ರ ಮತ್ತು  ದೆಹಲಿ ಸರ್ಕಾರಗಳ ಅರ್ಜಿಗಳನ್ನು ವಜಾಗೊಳಿಸಿತ್ತು. ಅಲ್ಲದೆ, ತಮ್ಮ ಕಾನೂನುಬದ್ಧ ಪರಿಹಾರಗಳನ್ನು ಬಳಸಿಕೊಳ್ಳಲು ಒಂದು ವಾರದ ಒಳಗಾಗಿ ಅರ್ಜಿ ಸಲ್ಲಿಸುವಂತೆ ಶಿಕ್ಷಿತ ಅಪರಾಧಿಗಳಿಗೆ ನಿರ್ದೇಶನ ನೀಡಿತ್ತು.

ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳ ಗಲ್ಲು ಜಾರಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ ಕೆಲವೇ ಗಂಟೆಗಳಲ್ಲಿ ಕೇಂದ್ರ ಮತ್ತು ದೆಹಲಿ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲು ತುಳಿದ ಬೆಳವಣಿಗೆ ನಡೆಯಿತು.

ವಿಚಾರಣಾ ನ್ಯಾಯಾಲಯದ ತಡೆಯಾಜ್ಞೆಯನ್ನು ಪ್ರಶ್ನಿಸಿ ಹೈಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ತಿಳಿಸಲಾಗಿದ್ದ ನೆಲೆಯಲ್ಲೇ ಸುಪ್ರೀಂಕೋರ್ಟಿಗೂ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಬೆಳವಣಿಗೆ ಬಗೆಗಿನ ಮಾಹಿತಿಯ ಅರಿವುಳ್ಳ ವಕೀಲರು ತಿಳಿಸಿದರು.

ಕ್ಷಮಾದಾನ ಕೋರಿಕೆ ಅರ್ಜಿ ಸೇರಿದಂತೆ ತನ್ನ ಎಲ್ಲ ಕಾನೂನುಬದ್ಧ ಪರಿಹಾರಗಳನ್ನು ಮುಕೇಶ್ ಈಗಾಗಲೇ ಬಳಸಿಕೊಂಡಿರುವುದರಿಂದ ಶಿಕ್ಷಿತ ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಬೇಕು ಎಂದು ಕೋರಿ ಸುಪ್ರಿಂಕೋರ್ಟಿಗೆ ಅರ್ಜಿ ಸಲ್ಲಿಸಲು ಕೇಂದ್ರ ಹಾಗೂ ದೆಹಲಿ ಸರ್ಕಾರ ನಿರ್ಧರಿಸಿವೆ.  ಹೈಕೋರ್ಟ್ ತೀರ್ಪಿನ ಪ್ರತಿಗಾಗಿ ಕಾಯಬೇಕಾಗುವದರಿಂದ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಕೆಗಾಗಿ ಇನ್ನಷ್ಟು ಕಾಯದೇ ಇರಲು ನಿರ್ಧರಿಸಲಾಗಿದೆ ಎಂದು ವಕೀಲರು ತಿಳಿಸಿದರು.

No comments:

Advertisement