ಕಾಂಗ್ರೆಸ್ಸಿನ ’ರಾಜಧರ್ಮ’ ಬೋಧನೆ: ಸೋನಿಯಾಗೆ ಬಿಜೆಪಿ ಎದಿರೇಟು
ನವದೆಹಲಿ: ಬಿಜೆಪಿಗೆ ಅದರ ’ರಾಜಧರ್ಮ’ ಹೇಗಿರಬೇಕು ಎಂಬುದಾಗಿ ನೆನಪಿಸಿದ್ದಕ್ಕಾಗಿ ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಅವರು 2020 ಫೆಬ್ರುವರಿ 28ರ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಎದಿರೇಟು ನೀಡಿದ್ದಾರೆ.
ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು ’ಕಾಂಗ್ರೆಸ್ ಪಕ್ಷದ ನಿಯೋಗವೊಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಗುರುವಾರ ಭೇಟಿ ಮಾಡಿ ಇತರರಿಗೆ ತಮ್ಮ ರಾಜಧರ್ಮದ ಬಗ್ಗೆ ನೆನಪಿಸಲು ಯತ್ನಿಸಿದೆ, ಆದರೆ ಕಾಂಗ್ರೆಸ್ ಪಕ್ಷವು ವಿಷಯಗಳಿಗೆ ಸಂಬಂಧಿಸಿದಂತೆ ಪದೇ ಪದೇ ತನ್ನ ನಿಲುವನ್ನು ಬದಲಾಯಿಸುತ್ತಿರುವುದು ಏಕೆ ಎಂದು ಸ್ಪಷ್ಟ ಪಡಿಸಬೇಕು’ ಎಂದು ಆಗ್ರಹಿಸಿದರು.
‘ನಿಮ್ಮ ಹಿರಿಯ ನಾಯಕರು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನದಲ್ಲಿ ಕಿರುಕುಳಕ್ಕೆ ಒಳಗಾದವರ ಬಗ್ಗೆ ಹೊಂದಿದ್ದ ಅಭಿಪ್ರಾಯದ ಬಗ್ಗೆ ನಾನು ಸೋನಿಯಾ ಗಾಂಧಿಯವರನ್ನು ಕೇಳುತ್ತೇನೆ. ಉಗಾಂಡಾದಿಂದ ಪಲಾಯನಗೈದ ಜನರಿಗೆ ಇಂದಿರಾಗಾಂಧಿಯವರು ನೆರವು ನೀಡಿದ್ದರು, ರಾಜೀವ ಗಾಂಧಿಯವರು ಶ್ರೀಲಂಕೆಯ ತಮಿಳರಿಗೆ ನೆರವಾಗಿದ್ದರು. ಮನಮೋಹನ್ ಸಿಂಗ್ ಅವರು ಪೌರತ್ವ ನೀಡಬೇಕು ಎಂದು ಎಲ್.ಕೆ. ಅಡ್ವಾಣಿ ಅವರನ್ನು ಒತ್ತಾಯಿಸಿದ್ದರು. ಅಶೋಕ ಗೆಹ್ಲೋಟ್ ಅವರು ಪೌರತ್ವಕ್ಕಾಗಿ ಯುಪಿಎ ಮತ್ತು ಎನ್ಡಿಎ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಅದೇ ರೀತಿ ತರುಣ್ ಗೊಗೋಯಿ ಆಗ್ರಹಿಸಿದ್ದರು. ಆದ್ದರಿಂದ ನಿಮ್ಮ ಪಕ್ಷವನ್ನು ತಿರುವು-ಮುರುವು ಮಾಡುತ್ತಿರುವ ಈ ’ರಾಜಧರ್ಮ’ ಯಾವುದು? ಎಂದು ರವಿಶಂಕರ ಪ್ರಸಾದ್ ಪ್ರಶ್ನಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ರ್ಯಾಲಿಯಲ್ಲಿ ಸೋನಿಯಾ ಗಾಂಧಿಯವರು ‘’ಇಸ್ ಪಾರ್ ಓರ್ ಉಸ್ ಪಾಸ್’ (ಈ ದಡವೋ ಆ ದಡವೋ) ಎಂಬುದು ಈಗ ನಿರ್ಧಾರವಾಗಬೇಕು ಎಂಬ ಹೇಳಿಕೆ ನೀಡಿ ಜನರನ್ನು ಪ್ರಚೋದಿಸಿದ್ದಾರೆ ಎಂದು ಸಚಿವರು ಆಪಾದಿಸಿದರು.
‘ಸಂಪೂರ್ಣ ವಿಷಯ ಸಂಸತ್ತಿನಲ್ಲಿ ಚರ್ಚೆಯಾಗಿದೆ, ಹಾಗಿರುವಾಗ ಈಗ ನೀವು ಜನರನ್ನು ಪ್ರಚೋದಿಸುತ್ತಿರುವುದು ಏಕೆ?’ ಎಂದು ಅವರು ಪ್ರಶ್ನಿಸಿದರು.
ನೀತಿ ನಿರ್ಣಯದ ವಿಷಯಗಳ ಕುರಿತ ತನ್ನ ನಿಲುವನ್ನು ಸತತ ಬದಲಾಯಿಸುವ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ ಎಂದು ಪ್ರಸಾದ್ ಟೀಕಿಸಿದರು.
೨೦೧೦ರ ಮಾರ್ಚ್ ೧೫ರಂದು ಯುಪಿಎ ರಾಷ್ಟೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಬಗ್ಗೆ ಹೇಳಿಕೆಯೊಂದನ್ನು ನೀಡಿತು ಮತ್ತು ಈಗ ಅದನ್ನು ವಿರೋಧಿಸುತ್ತಿದೆ..’ ಇದು ದೇಶದ ಹಿತಕ್ಕಾಗಿ ಎಂದು ಕಾಂಗ್ರೆಸ್ ಹೇಳಿತ್ತು, ನೀವು ಮಾಡಿದಾಗ ಅದನ್ನು ಅಂಗೀಕರಿಸುತ್ತೀರಿ ಮತ್ತು ನಾವು ಅದನ್ನು ಹೇಳಿದಾಗ ನೀವು ಜನರನ್ನು ಪ್ರಚೋದಿಸುತ್ತೀರಿ’ ಎಂದು ರವಿಶಂಕರ ಪ್ರಸಾದ್ ಕಾಂಗ್ರೆಸ್ ಧುರೀಣರನ್ನು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಪಕ್ಷದ ದಾಖಲೆ ಬಗ್ಗೆ ಹೇಳಲು ಬೇಕಾದಷ್ಟು ವಿಷಯಗಳಿವೆ. ದಂಗೆಗಳನ್ನು ರಾಜಕೀಯಗೊಳಿಸುವ ಕಾಂಗ್ರೆಸ್ ಯತ್ನಗಳನ್ನು ಬಿಜೆಪಿ ಖಂಡಿಸುತ್ತದೆ. ಕಾಂಗ್ರೆಸ್ ಕುಟುಂಬ ಮತ್ತು ಪಕ್ಷವನ್ನು ಆದ್ಯತೆಯ ವಿಷಯವನ್ನಾಗಿ ಮಾಡಿ, ಬಳಿಕ ರಾಷ್ಟ್ರ ಹಿತವನ್ನು ಗಮನಿಸುತ್ತದೆ’ ಎಂದು ಪ್ರಸಾದ್ ಟೀಕಿಸಿದರು.
No comments:
Post a Comment