ಕನ್ನಡಿಗರಿಗೆ
ಶೇ.೭೫ರಷ್ಟು ಉದ್ಯೋಗ: ಇಷ್ಟರಲ್ಲೇ ಮೀಸಲಾತಿ ಮಸೂದೆ
ಬೆಂಗಳೂರು:
ಆಂಧ್ರಪ್ರದೇಶದ ಮಾದರಿಯಲ್ಲಿ ಕರ್ನಾಟಕದಲ್ಲೂ ಕನ್ನಡಿಗರಿಗೆ ಶೇ.೭೫ರಷ್ಟು ಉದ್ಯೋಗ
ನೀಡುವ ಉದ್ಯೋಗ ಮೀಸಲಾತಿ ಕಾಯ್ದೆ ರೂಪಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ನೇತೃತ್ವದ ಬಿಜೆಪಿ ಸರ್ಕಾರ ಚಿಂತಿಸಿದೆ.
ಸರ್ಕಾರಿ
ಮತ್ತು ಖಾಸಗಿ ಕ್ಷೇತ್ರಗಳಲ್ಲೂ ಸ್ಥಳೀಯರಿಗೆ ಶೇ.೭೫ರಷ್ಟು ಉದ್ಯೋಗವನ್ನು
ಕಡ್ಡಾಯವಾಗಿ ಮೀಸಲು ಇಡುವ ಕಾಯ್ದೆ೩ ರೂಪಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಉನ್ನತ ಮೂಲಗಳು ತಿಳಿಸಿದವು.
ಕಾಯ್ದೆ
ರೂಪಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಕಾಯ್ದೆ ಯಾರ
ವಿರುದ್ಧವೂ ಅಲ್ಲ, ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸಿಗಬೇಕು ಎಂಬ ಆಶಯ ಮಾತ್ರ ಇದರ ಹಿಂದೆ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಕಾರ್ಮಿಕ
ಮತ್ತು ಸಕಾಲ ಸಚಿವ ಎಸ್. ಸುರೇಶ ಕುಮಾರ್ ಅವರು ಸುದ್ದಿ ಸಂಸ್ಥೆ ಒಂದರ ಜೊತೆಗೆ ಮಾತನಾಡುತ್ತಾ ತಿಳಿಸಿದರು.
‘ಈ
ನೆಲದ ಜನರ ಭಾವನೆಗಳನ್ನು ನಾವು ಸದಾ ಗೌರವಿಸುತ್ತೇವೆ. ರಾಜ್ಯದ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡುತ್ತೇವೆ. ಈ ನಿಟ್ಟಿನಲ್ಲಿಯೇ ಕನ್ನಡಿಗರಿಗೆ
ಶೇಕಡಾ ೭೫ರಷ್ಟು ಉದ್ಯೋಗ ಒದಗಿಸುವ ಕಾಯ್ದೆಗೆ ರೂಪ ಕೊಡುವ ಪ್ರಕ್ರಿಯೆ ಆರಂಭಿಸಿದ್ದೇವೆ’ ಎಂದು
ಸುರೇಶ ಕುಮಾರ್ ಹೇಳಿದರು.
ಸ್ಥಳೀಯರಿಗೆ
ಶೇ.೭೫ ಉದ್ಯೋಗ ಮೀಸಲಾತಿ
ಮಸೂದೆಗೆ ಆಂಧ್ರ ಪ್ರದೇಶದ ವಿಧಾನಸಭೆ ಜುಲೈ ತಿಂಗಳಲ್ಲಿ ಅನುಮೋದನೆ ನೀಡಿದೆ. ಇದೇ ಮಾದರಿಯ ಕಾನೂನನ್ನು ರಾಜ್ಯದಲ್ಲೂ ತರಬೇಕು ಎಂಬುದಾಗಿ ಕನ್ನಡಪರ ಹೋರಾಗಾರರು ಒತ್ತಾಯಿಸಿದ್ದರು. ಹಾಗೆಯೇ ರಾಜ್ಯದ ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಗರಿಷ್ಠ ಉದ್ಯೋಗ ಮೀಸಲಾತಿ ಒದಗಿಸಬೇಕು ಎಂಬ ಬೇಡಿಕೆ ಇದೆ ಎಂದು ಸಚಿವರು ನುಡಿದರು.
ಬೆಂಗಳೂರಿನ
ಕೆಲವು ಖಾಸಗಿ ಕಂಪನಿಗಳು ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಉತ್ತರ ಭಾರತದ ಅಭ್ಯರ್ಥಿಗಳಿಗೆ ವಿಶೇಷ ಪ್ರಾಮುಖ್ಯತೆ ನೀಡುತ್ತಿವೆ. ದಕ್ಷಿಣ ಭಾರತದ ಅಭ್ಯರ್ಥಿಗಳನ್ನು ಕಡೆಗಣಿಸುತ್ತಿರುವ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಸರ್ಕಾರವು
ಕನ್ನಡಿಗ ಮಕ್ಕಳಿಗೆ ಉದ್ಯೋಗದ ಹಕ್ಕು ಕಲ್ಪಿಸಲು ಮುಂದಾಗುತ್ತಿದೆ ಎಂದು ಅವರು ಹೇಳಿದರು.
ಕೇವಲ
ಸಿ ಮತ್ತು ಡಿ ದರ್ಜೆಯಲ್ಲದೆ ಉನ್ನತ
ದರ್ಜೆಯ ಹುದ್ದೆಗಳೂ ಕನ್ನಡಿಗರಿಗೆ ಸಿಗುವಂತಾಗಬೇಕು. ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳದಿದ್ದಲ್ಲಿ
ಕರ್ನಾಟಕದಲ್ಲಿ ಮುಂದಿನ ದಿನದಲ್ಲಿ ಕನ್ನಡಿಗರಿಗೆ ಸಂಕಟದ ದಿನಗಳು ಬರಲಿದೆ ಎಂದು ಸಚಿವರು ನುಡಿದರು.
ಉದ್ಯೋಗ
ನಿರೀಕ್ಷೆಯಿಂದಲೇ ಕಾರ್ಖಾನೆಗಳಿಗೆ ನಮ್ಮ ಪರಿಸರ, ಭೂಮಿಯನ್ನು ತ್ಯಾಗ ಮಾಡುತ್ತಿದ್ದೇವೆ. ಆದರೆ, ಹೊರ ರಾಜ್ಯದವರಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ. ಅರ್ಹತೆ ಮತ್ತು ಪ್ರತಿಭೆ ಇದ್ದರೂ ಕನ್ನಡಿಗರಿಗೆ ಕೆಲಸಗಳು ಸಿಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸದ
ಹೊರತು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಮಸೂದೆ
ಇನ್ನೂ ತಯಾರಿಯ ಹಂತದಲ್ಲಿ ಇರುವುದರಿಂದ ಶಾಸನಸಭೆಯ ಈ ಬಾರಿಯ ಅಧಿವೇಶನದಲ್ಲಿ
ಅದು ಮಂಡನೆಯಾಗದಿರಬಹುದು, ಆದರೆ ನಂತರದ ಅಧಿವೇಶನದ ವೇಳೆಗೆ ಮಸೂದೆ ಸಿದ್ಧವಾಗುವ ನಿರೀಕ್ಷೆ ಇದೆ ಎಂದು ಸಚಿವರು ಹೇಳಿದರು.
No comments:
Post a Comment