Sunday, March 1, 2020

ದೆಹಲಿ ರಾಜೀವ್ ಚೌಕ ಮೆಟ್ರೋ ನಿಲ್ದಾಣದಲ್ಲಿ ಗೋಲಿ ಮಾರೊ’ ಘೋಷಣೆ: ೬ ಜನರ ಬಂಧನ

ದೆಹಲಿ ರಾಜೀವ್ ಚೌಕ ಮೆಟ್ರೋ ನಿಲ್ದಾಣದಲ್ಲಿ
ಗೋಲಿ ಮಾರೊ ಘೋಷಣೆ: ಜನರ ಬಂಧನ
ನವದೆಹಲಿ: ಈಶಾನ್ಯ ದೆಹಲಿ ಗಲಭೆಗಳಿಂದ ಈಗಷ್ಟೇ ಚೇತರಿಸುತ್ತಿರುವ ದೆಹಲಿಯ  ಜನನಿಬಿಡ ರಾಜೀವ್ ಚೌಕ ಮೆಟ್ರೋ ನಿಲ್ದಾಣದೊಳಗೆ ದೇಶ್ ದೇಶ್ ಕೆ ಗದ್ದಾರೋಂ ಕೋ, ಗೋಲಿ ಮಾರೊ ಸಾಲೋಂಕೊ (ದೇಶದ್ರೋಹಿಗಳಿಗೆ ಗುಂಡಿಕ್ಕಿ) ಎಂಬುದಾಗಿ ಘೋಷಣೆ ಕೂಗಿದ ಘಟನೆ 2020 ಫೆಬ್ರುವರಿ 29ರ ಶನಿವಾರ ಸಂಭವಿಸಿದ್ದು, ಘಟನೆ ಸಂಬಂಧವಾಗಿ ಆರು ಮಂದಿಯನ್ನು  ಬಂಧಿಸಲಾಯಿತು.

ಮೆಟ್ರೋ ನಿಲ್ದಾಣದಲ್ಲಿ ದಿಢೀರನೆ ಸಂಭವಿಸಿದ ಘಟನೆಯ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ಶನಿವಾರ ಬೆಳಿಗ್ಗೆ ೧೦.೫೨ ಸುಮಾರಿಗೆ ವೈರಲ್ ಆಯಿತು.
"ಈದಿನ ಆರು ಯುವಕರು ರಾಜೀವ್ ಚೌಕ ಮೆಟ್ರೋ ನಿಲ್ದಾಣದಲ್ಲಿ ದೇಶ್ ಕೆ ಗದ್ದಾರೋಂ ಕೋ ಗೋಲಿ ಮಾರೊ ಸಾಲೋಂ ಕೋ ಎಂಬ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿತು. ಅವರನ್ನು ವಶಕ್ಕೆ ಪಡೆದುಕೊಂಡು ರಾಜೀವ್ ಚೌಕ್ ಮೆಟ್ರೋ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ" ಎಂದು ಡಿಸಿಪಿ (ಮೆಟ್ರೋ) ವಿಕ್ರಮ್ ಪೊರ್ವಾಲ್ ಹೇಳಿದರು.

ಕೇಸರಿ ಶರ್ಟ್ ಮತ್ತು ಕುರ್ತಾ ಧರಿಸಿ, ರೈಲು ನಿಲ್ಲುತ್ತಿದ್ದಂತೆಯೇ ಯುವಕರ ಗುಂಪು ಮೆಟ್ರೋ ನಿಲ್ದಾಣದಲ್ಲಿ  ಘೋಷಣೆ ಮಾಡಲು ಪ್ರಾರಂಭಿಸಿತು. ರೈಲಿನಿಂದ ಇಳಿದ ಬಳಿಕವೂ ಅವರು ಪ್ರಚೋದನಕಾರಿ ಘೋಷಣೆ ಮುಂದುವರೆಸಿದರು. ಕೆಲವು ಪ್ರಯಾಣಿಕರು ಅವರೊಂದಿಗೆ ಸೇರಿಕೊಂಡರೆ, ಇತರರು ವೀಡಿಯೊ ಮಾಡಿಕೊಳ್ಳುವ ಸಲುವಾಗಿ ತಮ್ಮ ತಮ್ಮ ಕ್ಯಾಮೆರಾಗಳನ್ನು ಹೊರತೆಗೆದಿದ್ದರು. ಹಠಾತ್ ಕೋಲಾಹಲದಿಂದ ನಿಲ್ದಾಣದಲ್ಲಿದ್ದ ಅನೇಕರು ತತ್ತರಿಸಿ ದಿಕ್ಕಾಪಾಲಾಗಿ ಓಡಿದರು ಎಂದು ವರದಿಗಳು ತಿಳಿಸಿವೆ.

ದೆಹಲಿ ಮೆಟ್ರೊದ ಭದ್ರತೆಯ ಜವಾಬ್ದಾರಿ ವಹಿಸಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ಪ್ರತಿಭಟನಾಕಾರರನ್ನು ತಡೆದು ವಶಕ್ಕೆ ಪಡೆದು ದೆಹಲಿ ಪೊಲೀಸರಿಗೆ ಒಪ್ಪಿಸಿದರು.

"ಫೆಬ್ರವರಿ ೨೯ ರಂದು, ಸುಮಾರು ೧೦:೨೫ ಗಂಟೆ ಸುಮಾರಿಗೆ, ಆರು ಯುವಕರು ದೆಹಲಿಯ ರಾಜೀವ್ ಚೌಕ ಮೆಟ್ರೋ ನಿಲ್ದಾಣದಲ್ಲಿ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂತು. ಅವರನ್ನು ತಕ್ಷಣ ಸಿಐಎಸ್ಎಫ್ ಸಿಬ್ಬಂದಿ ತಡೆದರು ಮತ್ತು ನಂತರ ಮುಂದಿನ ಕ್ರಮಕ್ಕಾಗಿ ದೆಹಲಿ ಮೆಟ್ರೋ ರೈಲು ಪೊಲೀಸ್ ಅಧಿಕಾರಿಗಳಿಗೆ ಒಪ್ಪಿಸಿದರು. ಮೆಟ್ರೋ ರೈಲು ಸಂಚಾರಕ್ಕೆ ಯಾವುದೇ ಅಡ್ಡಿಯಾಗಿಲ್ಲ ಎಂದು ಸಿಐಎಸ್ಎಫ್ ಹೇಳಿಕೆ ತಿಳಿಸಿತು.

ಡಿಎಂಆರ್ಸಿಯ ಕಾರ್ಪೊರೇಟ್ ಕಮ್ಯುನಿಕೇಷನ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಅನುಜ್ ದಯಾಳ್ ಅವರು ಘಟನೆಯನ್ನು ದೃಢ ಪಡಿಸಿದರು.

"ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊ ದೃಶ್ಯಾವಳಿಯನ್ನು ಉಲ್ಲೇಖಿಸಿದ ಅವರು ರಾಜೀವ್ ಚೌಕ ಮೆಟ್ರೋ ನಿಲ್ದಾಣದಲ್ಲಿ ಕೆಲವು ಪ್ರಯಾಣಿಕರು ಘೋಷಣೆಗಳನ್ನು ಕೂಗಿದ್ದಾರೆ, ಬೆಳಗ್ಗೆ ನಿಲ್ದಾಣದಲ್ಲಿ ಘಟನೆ ನಡೆದಿದೆ ಎಂಬುದು ಸರಿ. ಡಿಎಂಆರ್ ಸಿ / ಸಿಐಎಸ್ಎಫ್ ಸಿಬ್ಬಂದಿ ಮುಂದಿನ ಅಗತ್ಯ ಕ್ರಮಕ್ಕಾಗಿ ಅವರನ್ನು ತತ್ ಕ್ಷಣ ದೆಹಲಿ ಮೆಟ್ರೋ ರೈಲು ಪೊಲೀಸರಿಗೆ ಒಪ್ಪಿಸಿದರು ಎಂದು ಹೇಳಿದರು.

ದೆಹಲಿ ಮೆಟ್ರೋ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ ೨೦೦೨ ಪ್ರಕಾರ, ದೆಹಲಿ ಮೆಟ್ರೋ ಆವರಣದಲ್ಲಿ ಯಾವುದೇ ರೀತಿಯ ಪ್ರದರ್ಶನ ಅಥವಾ ಕುರುಕುಳ ನೀಡುವಿಕೆಯನ್ನು ನಿಷೇಧಿಸಲಾಗಿದೆ. ಅಂತಹ ಕೃತ್ಯದಲ್ಲ್ಲಿ ಪಾಲ್ಗೊಳ್ಳುವ ಯಾವುದೇ ಪ್ರಯಾಣಿಕರನ್ನು ಕಾಯಿದೆಯ ಪ್ರಕಾರ ಮೆಟ್ರೋ ಆವರಣದಿಂದ ಹೊರಕ್ಕೆ ಹಾಕಬಹುದು ಎಂದು ದಯಾಳ್  ನುಡಿದರು.

ಪ್ರಾಸಂಗಿಕವಾಗಿ, ಇದೇ ವೇಳೆಗೆ ಈಶಾನ್ಯ ದೆಹಲಿಯ "ಜಿಹಾದಿ ಭಯೋತ್ಪಾದನೆ" ವಿರುದ್ಧ ಜಂತರ್ ಮಂತರ್ನಲ್ಲಿ  "ಶಾಂತಿ ಮೆರವಣಿಗೆ" ಸಂಘಟಿಸಲಾಗಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಈವಾರ ಗಲಭೆಗಳು ಸಂಭವಿಸುವ ಮುನ್ನ ಭಾನುವಾರ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆಪಾದನೆಗೆ ಗುರಿಯಾಗಿರುವ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರು ಶಾಂತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಫೆಬ್ರುವರಿ ತಿಂಗಳ ಆದಿಯಲ್ಲಿ ದೆಹಲಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪ್ರಚೋದಿಸಿದ್ದ ಮಾದರಿಯಲ್ಲೇ ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಯುವಕರ ಗುಂಪು ಶನಿವಾರ ಘೋಷಣೆ ಕೂಗಿತ್ತು.

೪೨ ಮಂದಿಯನ್ನು ಬಲಿ ತೆಗೆದುಕೊಂಡು ನೂರಾರು ಮಂದಿಯನ್ನು ಗಾಯಗೊಳಿಸಿದ ಈಶಾನ್ಯ ದೆಹಲಿಯ ಗಲಭೆಯ ನೆನಪು ಇನ್ನೂ ಹಸಿರಾಗಿರುವಾಗಲೇ ಶನಿವಾರದ ಘಟನೆ ಘಟಿಸಿದೆ.

ಗಲಭೆ ಪೀಡಿತ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಿದರೂ, ರಾಜಧಾನಿಯಲ್ಲಿನ  ಉದ್ವಿಗ್ನತೆ ಇನ್ನೂ ಮುಂದುವರೆದಿದೆ. ಈಶಾನ್ಯ ದೆಹಲಿಯ ನಡೆದ ಗಲಭೆಗಳ ಹಿನ್ನೆಲೆಯಲ್ಲಿ ದ್ವೇಷ ವಿಚಾರ ಹರಡುವುದರ ವಿರುದ್ಧ ದೂರು ಸಲ್ಲಿಸಲು ಸಾಧ್ಯವಾಗುವಂತೆ ವಾಟ್ಸಪ್ ಸಂಖ್ಯೆಯನ್ನು ನೀಡುವುದಾಗಿ ದೆಹಲಿ ಸರ್ಕಾರ ಹೇಳಿದೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬೆಂಬಲಿಗರು ಮತ್ತು ಕಾನೂನನ್ನು ವಿರೋಧಿಸುವವರ ನಡುವೆ ಭಾನುವಾರ ಪ್ರಾರಂಭವಾದ ಈಶಾನ್ಯ ದೆಹಲಿಯ ಘರ್ಷಣೆ ಹಾಗೂ ಹಿಂಸಾಚಾರವು ಸೋಮವಾರ ಕೋಮು ಸ್ವರೂಪ ಪಡೆದುಕೊಂಡು ಬುಧವಾರದ ವೇಳೆಗೆ ತೀವ್ರ ವಿಕೋಪಕ್ಕೆ ಹೋಗಿತ್ತು. ಬುಧವಾರ ಅಂತೂ ಇಂತೂ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಗಲಭೆಯನ್ನು ತಣ್ಣಗಾಗಿಸಿದ್ದರು.

ಹಿಂಸಾಚಾರ ಹರಡದಂತೆ ತಡೆಯುವಲ್ಲಿ ವಿಫಲರಾದುದಕ್ಕಾಗಿ ತರಾಟೆಗೆ ತುತ್ತಾದ ದೆಹಲಿಯ ಪೊಲೀಸ್ ಕಮೀಷನರ್  ಅಮುಲ್ಯ ಪಟ್ನಾಯಕ್ ಅವರಿಂದ ಶುಕ್ರವಾರ ಅಧಿಕಾರ ವಹಿಸಿಕೊಂಡ ಎಸ್ ಎನ್ ಶ್ರೀವಾಸ್ತವ ಅವರು ಪರಿಸ್ಥಿತಿ ಸುಧಾರಣೆ ನಿಟ್ಟಿನಲ್ಲಿ ಇದೇ ತಾನೇ ಹೆಜ್ಜೆ ಇರಿಸಲು ಆರಂಭಿಸಿದ್ದರು. 

No comments:

Advertisement