Monday, March 2, 2020

ಅಂಕಿತ್ ಶರ್ಮ ಕುಟುಂಬಕ್ಕೆ ದೆಹಲಿ ಸರ್ಕಾರದಿಂದ ೧ ಕೋಟಿ ರೂ. ಪರಿಹಾರ

ಗುಪ್ತಚರ ಅಧಿಕಾರಿ ಅಂಕಿತ್ ಶರ್ಮ ಕುಟುಂಬಕ್ಕೆ
ದೆಹಲಿ ಸರ್ಕಾರದಿಂದ ಕೋಟಿ ರೂ. ಪರಿಹಾರ
ನವದೆಹಲಿ: ದೆಹಲಿ ಹಿಂಸಾಚಾರದಲಿ ಸಾವನ್ನಪ್ಪಿದ ಗುಪ್ತಚರ ದಳದ (ಐಬಿ) ಅಧಿಕಾರಿ ಅಂಕಿತ್ ಶರ್ಮ ಅವರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರವನ್ನು ದೆಹಲಿ ಸರ್ಕಾರವು 2020 ಮಾರ್ಚ್ 02ರ ಸೋಮವಾರ ಪ್ರಕಟಿಸಿತು.

ಅಂಕಿತ್ ಶರ್ಮ ಅವರು ಒಬ್ಬ ದಿಟ್ಟ ಅಧಿಕಾರಿ. ಅವರು ದಂಗೆಯಲ್ಲಿ ಕ್ರೂರವಾಗಿ ಹತರಾಗಿದ್ದಾರೆ. ರಾಷ್ಟ್ರಕ್ಕೆ ಅವರ ಬಗ್ಗೆ ಹೆಮ್ಮೆ ಇದೆ. ದೆಹಲಿ ಸರ್ಕಾರವು ಅವರ ಕುಟುಂಬಕ್ಕೆ ಕೋಟಿ ರೂಪಾಯಿ ಪರಿಹಾರ ಮತ್ತ ಅವರ ಕುಟುಂಬದಲ್ಲಿ ಒಬ್ಬರಿಗೆ ನೌಕರಿ ಕೊಡಲು ನಿರ್ಧರಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಮ್ಮ  ಹಿಂದಿ ಟ್ವೀಟಿನಲ್ಲಿ ಸೋಮವಾರ ತಿಳಿಸಿದರು.

ಶರ್ಮ ಅವರು ಚಾಂದ್ ಬಾಗ್‌ನಲ್ಲಿ ವಾಸವಾಗಿದ್ದರು. ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಗಲಭೆಯ ಕಾಲದಲ್ಲಿ ಇಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಹಾನಿ, ಹಿಂಸಾಚಾರ ಸಂಭವಿಸಿತ್ತು. ಶರ್ಮ ಅವರ ದೇಹವನ್ನು ಬುಧವಾರ ಚರಂಡಿಯಿಂದ ಹೊರಗೆತ್ತಲಾಗಿತ್ತು.

ಶರ್ಮ ಅವರನ್ನು ಆಮ್ ಆದ್ಮಿ ಪಕ್ಷದ (ಆಪ್) ಕೌನ್ಸಿಲರ್ ತಾಹಿರ್ ಹುಸೇನ್ ಕೊಲ್ಲಿಸಿದ್ದಾರೆ ಎಂದು ಶರ್ಮ ಕುಟುಂಬ ಆಪಾದಿಸಿತ್ತು. ಅಂಕಿತ್ ಶರ್ಮ ಅವರು ಮಂಗಳವಾರ ಸಂಜೆ ಕಚೇರಿಯಿಂದ ವಾಪಸ್ ಬಂದಿದ್ದರು ಮತ್ತು ಪ್ರದೇಶದಲ್ಲಿ ಏನು ಗದ್ದಲವಾಗುತ್ತಿದೆ ಎಂದು ನೋಡಲು ಹೊರಕ್ಕೆ ಹೋಗಿದ್ದರು, ಆದರೆ ಮರಳಿ ಬರಲಿಲ್ಲ ಎಂದು ಅವರ ಸಹೋದರ ಅಂಕುರ್ ಶರ್ಮ ಹೇಳಿದ್ದರು.

ಕುಟುಂಬ ಸದಸ್ಯರು ಅಂಕಿತ್ ಶರ್ಮ ಪತ್ತೆಗಾಗಿ ಗಂಟೆಗಳ ಕಾಲ ತೀವ್ರ ಶೋಧ ನಡೆಸಿದ್ದರು, ಆದರೆ ಅಂತಿಮವಾಗಿ ಅವರ ಶವ ಚರಂಡಿಯಲ್ಲಿ ಪತ್ತೆಯಾಯಿತು ಎಂಬ ಮಾಹಿತಿ ಅವರಿಗೆ ಲಭಿಸಿತ್ತು.

ಶರ್ಮ ಅವರ ಕಟ್ಟಡ ಒಂದಕ್ಕೆ ಎಳೆದೊಯ್ಯಲಾಗಿತ್ತು ಮತ್ತು ತಾಹಿರ್ ಹುಸೇನ್ ಗುಂಪಿಗೆ ಐಬಿ ಅಧಿಕಾರಿಯನ್ನು ಕೊಲ್ಲುವಂತೆ ಪ್ರಚೋದಿಸಿದ್ದರು ಎಂದು ಶರ್ಮ ಅವರ ಕುಟುಂಬ ಆಪಾದಿಸಿತ್ತು. ಶರ್ಮ ಕುಟುಂಬ ಸದಸ್ಯರು ಬಗ್ಗೆ ಪ್ರಥಮ ಮಾಹಿತಿ ವರದಿಯನ್ನೂ (ಎಫ್ ಐಆರ್) ದಾಖಲಿಸಿದ್ದಾರೆ.

ಮಧ್ಯೆ ಆಪ್ ನಾಯಕ ತಮ್ಮ ವಿರುದ್ಧದ ಎಲ್ಲ ಆಪಾದನೆಗಳನ್ನೂ ತಿರಸ್ಕರಿದ್ದಾರೆ ಮತ್ತು ಹಿಂಸಾಚಾರದಲ್ಲಿ ತಮ್ಮ ಮನೆಯ ಮೇಲೂ ದಾಳಿ ನಡೆದಿದ್ದು, ಶರ್ಮ ಹತ್ಯೆಗಿಂತ ಮೊದಲೇ ತಾನು ಪ್ರದೇಶದಿಂದ ತೆರಳಿದ್ದುದಾಗಿ ಹೇಳಿದ್ದಾರೆ.

ಶರ್ಮ ಅವರು ಗುಪ್ತಚರ ದಳದಲ್ಲಿ ಭದ್ರತಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅವರ ತಂದೆ ದೆಹಲಿ ಪೊಲೀಸ್ ಇಲಾಖೆಯಲ್ಲಿ ಅಸಿಸ್ಟೆಂಟ್ ಸಬ್-ಇನ್‌ಸ್ಪೆಕ್ಟರ್ ಆಗಿ ದುಡಿಯುತ್ತಿದ್ದಾರೆ.

No comments:

Advertisement