Sunday, March 1, 2020

ನಿರ್ಭಯಾ ಪ್ರಕರಣ: ರಾಷ್ಟ್ರಪತಿಗೆ ಮತ್ತೆ ಅಕ್ಷಯ್ ಕ್ಷಮಾದಾನ ಕೋರಿಕೆ ಅರ್ಜಿ!

ನಿರ್ಭಯಾ ಪ್ರಕರಣ: ರಾಷ್ಟ್ರಪತಿಗೆ ಮತ್ತೆ
ಅಕ್ಷಯ್ ಕ್ಷಮಾದಾನ ಕೋರಿಕೆ ಅರ್ಜಿ!
ನವದೆಹಲಿ: ೨೦೧೨ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಶಿಕ್ಷಿತ ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ರಾಷ್ಟ್ರಪತಿಗೆ ಹೊಸದಾಗಿ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಎರಡನೇ ಬಾರಿಗೆ 2020 ಫೆಬ್ರುವರಿ 29ರ ಶನಿವಾರ ಸಲ್ಲಿಸಿದ. ಹಿಂದೆ ಸಲ್ಲಿಸಿದ ಅರ್ಜಿಯಲ್ಲಿ ಎಲ್ಲ ಮಾಹಿತಿಗಳು ಇರದಿದ್ದ ಕಾರಣ ಅರ್ಜಿ ಸಲ್ಲಿಸಿರುವುದಾಗಿ ಆತ ಸಮರ್ಥನೆ ಮಾಡಿಕೊಂಡ.

ಮರಣದಂಡನೆಯನ್ನು ಜೀವಾವಧಿ ಶಿಕ್ಷಿಗೆ ಪರಿವರ್ತಿಸಬೇಕು ಎಂಬುದಾಗ ಕೋರಿದ ಅಕ್ಷಯ್ ಕುಮಾರನ  ಹೊಸ ಅರ್ಜಿಯನ್ನು ದೆಹಲಿ ನ್ಯಾಯಾಲಯದ ಆದೇಶದಂತೆ ಗಲ್ಲುಶಿಕ್ಷೆ ಜಾರಿಗಾಗಿ ಹೊಸದಾಗಿ ನಿಗದಿಯಾಗಿರುವ ಮಾರ್ಚ್ ೩ರ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿ ರಾಷ್ಟ್ರಪತಿಗೆ ಸಲ್ಲಿಸಲಾಗಿದೆ. ಅಕ್ಷಯ್ ಕುಮಾರ್  ಫೆಬ್ರುವರಿ ರಂದು ಸಲ್ಲಿಸಿದ್ದ ಕ್ಷಮಾದಾನ ಕೋರಿಕೆಯ ಮೂಲ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಫೆಬ್ರುವರಿ ರಂದು ತಿರಸ್ಕರಿಸಿದ್ದರು.

ಮತ್ತೊಬ್ಬ ಅಪರಾಧಿ ಪವನ್ ಕುಮಾರ್ ಗುಪ್ತಾ ತನ್ನ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಬೇಕೆಂದು  ಕೋರಿ ಶುಕ್ರವಾರ ಸುಪ್ರೀಂ ಕೋರ್ಟಿಗೆ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿದ್ದಾನೆ. ಕುರೇಟಿವ್ ಅರ್ಜಿಯನ್ನು ಸಲ್ಲಿಸಿದ ನಾಲ್ವರು ಅಪರಾಧಿಗಳಲ್ಲಿ ಗುಪ್ತಾ ಕೊನೆಯವನಾಗಿದ್ದಾನೆ.

ಮುಕೇಶ್ ಕುಮಾರ್ ಸಿಂಗ್, ವಿನಯ್ ಕುಮಾರ್ ಶರ್ಮಾ ಮತ್ತು ಅಕ್ಷಯ್ ಕುಮಾರ್ ಎಂಬ ಮೂವರು ಅಪರಾಧಿಗಳ ಕ್ಷಮಾದಾನ ಕೋರಿಕೆ ಅರ್ಜಿಗಳನ್ನು ಹಿಂದೆ ರಾಷ್ಟ್ರಪತಿಗಳು ವಜಾಗೊಳಿಸಿದ್ದರು. ತನ್ನ ಕ್ಷಮಾದಾನ ಕೋರಿಕೆ ಅರ್ಜಿಗಳನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಮುಕೇಶ್ ಕುಮಾರ್ ಸಿಂಗ್ ಮತ್ತು ವಿನಯ್ ಕುಮಾರ್ ಶರ್ಮಾ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

ಮಾರ್ಚ್ ರಂದು ಅಪರಾಧಿಗಳನ್ನು ಗಲ್ಲಿಗೇರಿಸಲಾಗುವುದು ಎಂದು ದೆಹಲಿ ನ್ಯಾಯಾಲಯವು ಫೆಬ್ರವರಿ ೧೭ ರಂದು ಹೊಸದಾಗಿ ಹೊರಡಿಸಿದ್ದ ಡೆತ್ ವಾರಂಟಿನಲ್ಲಿ ತಿಳಿಸಿತ್ತು, ಇದು ನ್ಯಾಯಾಲಯ ಹೊರಡಿಸಿದ್ದ ಮೂರನೇ ಡೆತ್ ವಾರಂಟ್. ಅಪರಾಧಿಗಳು ತಮಗೆ ಲಭ್ಯವಿರುವ ಕಾನೂನುಬದ್ಧ ಪರಿಹಾರವನ್ನು ಬಳಸಿಕೊಳ್ಳಲು ಮುಂದಾದ ಪರಿಣಾಮವಾಗಿ ಮೊದಲು ನಿಗದಿ ಪಡಿಸಲಾಗಿದ್ದ ಎರಡು ಡೆತ್ ವಾರಂಟ್ಗಳನ್ನು ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ.

೨೦೧೨ರ ಡಿಸೆಂಬರ್ ೧೬ರ ರಾತ್ರಿ ಒಟ್ಟು ಆರು ಮಂದಿ ದೆಹಲಿಯ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ, ಕಬ್ಬಿಣದ ಸರಳಿನಿಂದ ಕ್ರೂರವಾಗಿ ಚಿತ್ರಹಿಂಸೆ ನೀಡಿ ರಸ್ತೆಗೆ ಎಸೆದಿದ್ದರು. ಜೀವನ್ಮರಣ ಹೋರಾಟದ ಬಳಿಕ ಯುವತಿ ಡಿಸೆಂಬರ್ ೨೯ರಂದು ಸಿಂಗಾಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.ಆರು ಆರೋಪಿಗಳ ಪೈಕಿ ಒಬ್ಬ ವ್ಯಕ್ತಿ ವಿಚಾರಣಾ ಕಾಲದಲ್ಲಿಯೇ ತಿಹಾರ್ ಸೆರೆಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡನೆಂದು ಆಪಾದಿಸಲಾಗಿದ್ದರೆ, ಇನ್ನೊಬ್ಬ ಅಪ್ರಾಪ್ತ ಬಾಲಕನನ್ನು ಮೂರು ವರ್ಷಗಳ ಸುಧಾರಣಾವಾಸದ ಬಳಿಕ ಅಜ್ಞಾತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿತ್ತು. ಉಳಿದ ನಾಲ್ವರಿಗೆ ನ್ಯಾಯಾಲಯ ಮರಣದಂಡನೆಯನ್ನು ವಿಧಿಸಿತ್ತು.

No comments:

Advertisement