Wednesday, March 4, 2020

ಕೊರೋನಾವೈರಸ್ ಪ್ರಕರಣ ೨೮ಕ್ಕೆ ಜಿಗಿತ, ಎಲ್ಲ ದೇಶಗಳ ಪ್ರಯಾಣಿಕರ ತಪಾಸಣೆ


ಕೊರೋನಾವೈರಸ್ ಪ್ರಕರಣ ೨೮ಕ್ಕೆ ಜಿಗಿತ, ಎಲ್ಲ ದೇಶಗಳ ಪ್ರಯಾಣಿಕರ ತಪಾಸಣೆ
ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕು ತಗುಲಿದವರ ಸಂಖ್ಯೆ ಬುಧವಾರ ೨೮ಕ್ಕೆ ಏರಿದ್ದು, ಮುಂಜಾಗರೂಕತಾ ಕ್ರಮವಾಗಿ ಭಾರತವು ಎಲ್ಲ ದೇಶಗಳಿಂದ ಬರುವ ಪ್ರಯಾಣಿಕರನ್ನು ಈಗ ವೈದ್ಯಕೀಯ ತಪಾಸಣೆಗೆ ಗುರಿಪಡಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು 2020 ಮಾರ್ಚ್  04ರ ಬುಧವಾರ ಪ್ರಕಟಿಸಿದರು.

ಇನ್ನು ಮುಂದೆ, ಭಾರತವು ಮೊದಲು ಪಟ್ಟಿ ಮಾಡಿದ ೧೨ ರಾಷ್ಟ್ರಗಳು ಮಾತ್ರವೇ ಅಲ್ಲ, ಎಲ್ಲ ದೇಶಗಳಿಂದ ಬರುವ ವಿಮಾನಗಳು ಮತ್ತು ಪ್ರಯಾಣಿಕರನ್ನು ಸಾರ್ವತ್ರಿಕ ತಪಾಸಣೆಗೆ ಗುರಿಪಡಿಸುವುದು ಎಂದು ಸಚಿವರು ನುಡಿದರು.

ಕೊರೋನಾವೈರಸ್ ಕುರಿತಂತೆ ರಾಷ್ಟ್ರ ರಾಜಧಾನಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹರ್ಷ ವರ್ಧನ್ ಅವರು ವಿಚಾರವನ್ನು ತಿಳಿಸಿದರು. ಹಿಂದೆ ೧೨ ದೇಶಗಳ ವಿಮಾನಗಳು ಮತ್ತು ಪ್ರಯಾಣಿಕರನ್ನು ತಪಾಸಣೆಗೆ ಗುರಿಪಡಿಸಲು ನಿರ್ಧರಿಸಲಾಗಿತು.

ಕೊರೋನಾವೈರಸ್ ಸೋಂಕು ಖಚಿತಪಟ್ಟ, ಆಗ್ರಾದಲ್ಲಿ ವಾಸವಾಗಿರುವ ದೆಹಲಿ ನಿವಾಸಿಯ ಕುಟುಂಬದಲ್ಲಿ ಮಂದಿ ದಸ್ಯರಿದ್ದು, ಎಲ್ಲ ಆರು ಮಂದಿಗೂ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎಂದೂ ಸಚಿವರು ಹೇಳಿದರು.

ಮಧ್ಯೆ, ದೆಹಲಿಯ ಚಾವ್ಲಾದಲ್ಲಿನ ಐಟಿಬಿಪಿಯ ಏಕಾಂಗಿವಾಸದ ಸವಲತ್ತಿನ ವಾರ್ಡಿನಲ್ಲಿದ್ದ ೨೧ ಮಂದಿ ಇಟಲಿ ಪ್ರಜೆಗಳು ಮತ್ತು ಮೂವರು ಭಾರತೀಯರಿಗೂ ಸೋಂಕು ತಗುಲಿರುವುದು ಖಚಿತಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೈಪುರದಲ್ಲಿ ಏಕಾಂಗಿವಾಸದ ವಾರ್ಡಿಗೆ ಸೇರಿಸಲಾಗಿರುವ ಇಬ್ಬರು ಇಟಲಿ ಪ್ರವಾಸಿಗಳಿಗೂ ಕೊರೋನಾವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ.

ಸರ್ಕಾರವು ವಾರಾರಂಭದಲ್ಲಿ ಕೊರೋನಾವೈರಸ್ ಸೋಂಕು ತಗುಲಿದ ಹೊಸ ಪ್ರಕರಣಗಳನ್ನು ದೃಢ ಪಡಿಸಿತ್ತು.

ಗುಂಪುಗಳಲ್ಲಿ ವೈರಸ್ ಹರಡುತ್ತಿರುವ ಬಗ್ಗೆ ಶಂಕಿಸಿರುವ ಭಾರತ, ಕೊರೋನಾವೈರಸ್ ವಿರುದ್ಧ ತನ್ನ ಸಿದ್ಧತೆಗಳನ್ನು ಇನ್ನಷ್ಟು ತೀವ್ರಗೊಳಿಸಿದೆ.

ರಾಷ್ಟ್ರ ರಾಜಧಾನಿಯ ಎಲ್ಲ ಆಸ್ಪತ್ರೆಗಳಿಗೂ ಉತ್ತಮ ಗುಣಮಟ್ಟದ ಏಕಾಂಗಿ ವಾಸದ ವಾರ್ಡುಗಳನ್ನು ರಚಿಸಲು ನಿರ್ದೇಶನ ನೀಡಲಾಗಿದೆ ಎಂದು ಆರೋಗ್ಯ ಸಚಿವರು ನುಡಿದರು.

ಚೀನಾ, ಮಲೇಶ್ಯಾ, ಸಿಂಗಾಪುರ, ಥಾಯ್ಲೆಂಡ್, ಹಾಂಕಾಂಗ್, ಜಪಾನ್, ದಕ್ಷಿಣ ಕೊರಿಯಾ, ವಿಯೆಟ್ನಾಮ್, ಇಟಲಿ, ನೇಪಾಳ ಮತ್ತು ಇರಾನ್ ಸೇರಿದಂತೆ ಒಟ್ಟು ೧೨ ರಾಷ್ಟ್ರಗಳ ಪ್ರವಾಸಿಗರನ್ನು ತಪಾಸಣೆಗೆ ಗುರಿಪಡಿಸಲು ಮೊದಲು ಭಾರತ ನಿರ್ಧರಿಸಿತ್ತು.

ದೇಶಾದ್ಯಂತ ಸಮುದ್ರ ತಡಿಯ ೧೦ ದೊಡ್ಡ ಮತ್ತು ೫೦ ಸಣ್ಣ ಬಂದರುಗಳಲ್ಲಿ ಕೂಡಾ ಹಡಗು, ದೋಣಿಗಳಲ್ಲಿ ಆಗಮಿಸುವ ಪ್ರಯಾಣಿಕರನ್ನು ಹಾಗೂ ದೇಶದ ೨೧ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಕೂಡಾ ಪ್ರಯಾಣಿಕರನ್ನು ತಪಾಸಣೆಗೆ ಗುರಿ ಪಡಿಸಲಾಗುತ್ತಿದೆ.

ದೇಶದ ವಿಮಾನ ನಿಲ್ದಾಣಗಳಲ್ಲಿ ಈವರೆಗೆ ಲಕ್ಷ ಜನರನ್ನು ತಪಾಸಣೆಗೆ ಗುರಿಪಡಿಸಲಾಗಿದೆ.

ಗಾಬರಿ ಅನಗತ್ಯ, ತುರ್ತು ಚಿಕಿತ್ಸೆ: ಕೇಜ್ರಿವಾಲ್
ಮಧ್ಯೆ ಕೊರೋನಾವೈರಸ್ ಪ್ರಕರಣಗಳನ್ನು ತುರ್ತು ಪ್ರಕರಣಗಳಾಗಿ ಪರಿಗಣಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಭೀತರಾಗುವ ಅಥವಾ ಗಾಬರಿಪಡುವ ಅಗತ್ಯವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ನುಡಿದರು.

ಕೊರೋನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ಕರೆದ ಮುಖ್ಯಮಂತ್ರಿ ತಮ್ಮ ನಾಯಕತ್ವದಲ್ಲಿ ಕಾರ್ ಪಡೆ ಒಂದನ್ನು ರಚಿಸಲಾಗಿದ್ದು ಅದರಲ್ಲಿ ಎಲ್ಲ ಪಾಲುದಾರರನ್ನೂ ಸೇರ್ಪಡೆ ಮಾಡಲಾಗಿದೆ ಎಂದು ಹೇಳಿದರು.

ಕೊರೋನಾವೈರಸ್ ಪರಿಸ್ಥಿತಿಯನ್ನು ತುರ್ತುಸ್ಥಿತಿಯಾಗಿ ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾರ್ಯಪಡೆ ಸದಸ್ಯರಿಗೆ ಸೂಚಿಸಲಾಗಿದೆ ಎಂದು ಅವರು ನುಡಿದರು.

ರಾಷ್ಟ್ರ ರಾಜಧಾನಿಯ ಲೇಡಿ ಹಾರ್ಡಿಂಗ್ ಆಸ್ಪತ್ರೆಯಲ್ಲಿ ಕೊರೋನಾವೈರಸ್ ಪರೀಕ್ಷಾ ಲ್ಯಾಬೋರೇಟರಿಯನ್ನು ನಿರ್ಮಿಸಲಾಗುತ್ತಿದೆ. ಅಗತ್ಯ ಬಿದ್ದಲ್ಲಿ ಎಲ್ಎನ್ಜೆಪಿ ಆಸ್ಪತ್ರೆಯಲ್ಲೂ ಕೊರೋನಾವೈರಸ್ ಪರೀಕ್ಷಾ ಲ್ಯಾಬೋರೇಟರಿ ಸ್ಥಾಪಿಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹೇಳಿದರು.

ದೆಹಲಿಯಲ್ಲಿ ಕೊರೋನಾವೈರಸ್ ಸೋಂಕು ತಗುಲಿದ್ದು ದೃಢ ಪಟ್ಟಿರುವ ವ್ಯಕ್ತಿಯ ಜೊತೆಗೆ ಸಂಪರ್ಕಕ್ಕೆ ಬಂದಿದ್ದ ೮೮ ಜನರನ್ನು ಅಧಿಕಾರಿಗಳು ಗುರುತಿಸಿದ್ದಾರೆ ಮತ್ತು ಅವರೆಲ್ಲರನ್ನೂ ಸೋಂಕು ತಗುಲಿದೆಯೇ ಎಂಬುದಾಗಿ ಪರೀಕ್ಷಿಸಲು ತಪಾಸಣೆಗೆ ಗುರಿಪಡಿಸಲಾಗುವುದು ಎಂದು ಅವರು ನುಡಿದರು.

ಕೇಂದ್ರ ಸಚಿವ ಹರ್ಷ ವರ್ಧನ್ ಅವರು ಪತ್ರಿಕಾಗೋಷ್ಠಿಯಲ್ಲಿ ಇನ್ನು ಎಲ್ಲ ದೇಶಗಳ ಪ್ರಯಾಣಿಕರ ತಪಾಸಣೆ ನಡೆಸಲಾಗುವುದು ಎಂಬುದಾಗಿ ಪ್ರಕಟಿಸಿದ ಸ್ವಲ್ಪ ಹೊತ್ತಿನಲ್ಲೇ ಕೇಜ್ರಿವಾಲ್ ಅವರೂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

No comments:

Advertisement