೨೧ ದಿನಗಳ ಲಾಕ್‌ಡೌನ್ ವಿಸ್ತರಣೆ ಇಲ್ಲ
ವದಂತಿ ನಿರಾಕರಿಸಿದ ಕೇಂದ್ರ ಸರ್ಕಾರ
ನವದೆಹಲಿ: ಮಾರಕ ಕೊರೋನಾವೈರಸ್ ಪ್ರಸಾರ ಸರಪಣಿ ತುಂಡರಿಸಿ ಸೋಂಕು ಹರಡದಂತೆ ತಡೆಯುವ ಸಲುವಾಗಿ ಘೋಷಿಸಲಾಗಿರುವ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು (ಲಾಕ್ ಡೌನ್) ವಿಸ್ತರಿಸಲಾಗುವುದು ಎಂಬ ವರದಿಗಳು ಆಧಾರ ರಹಿತ ಎಂಬುದಾಗಿ ಕೇಂದ್ರ ಸರ್ಕಾರ 2020 ಮಾರ್ಚ್ 30ರ ಸೋಮವಾರ ಸ್ಪಷ್ಟ ಪಡಿಸಿತು.
‘ದಿಗ್ಬಂಧನ ಅವಧಿ ಮುಕ್ತಾಯವಾದಾಗ ಸರ್ಕಾರವು ಅದನ್ನು ವಿಸ್ತರಿಸಲಿದೆ ಎಂಬುದಾಗಿ ಪ್ರತಿಪಾದಿಸಿರುವ ವದಂತಿಗಳು ಮತ್ತು ವರದಿಗಳು ಇವೆ. ಸಂಪುಟ ಕಾರ್ಯದರ್ಶಿಯವರು ಈ ವರದಿಗಳನ್ನು ನಿರಾಕರಿಸಿದ್ದಾರೆ ಮತ್ತು ಇವೆಲ್ಲವೂ ಆಧಾsರರಹಿತ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ’ ಎಂದು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಟ್ವೀಟ್ ಮಾಡಿತು.
‘ಇಂತಹ ವರದಿಗಳನ್ನು ನೋಡಿ ನನಗೆ ಅಚ್ಚರಿಯಾಗಿದೆ, ದಿಗ್ಬಂಧನವನ್ನು ವಿಸ್ತರಿಸುವ ಯಾವುದೇ ಯೋಜನೆಯೂ ಇಲ್ಲ’ ಎಂದು ಸಂಪುಟ ಕಾರ್ಯದರ್ಶಿ ರಾಜೀವ ಗೌಬಾ ಸುದ್ದಿ ಸಂಸ್ಥೆ ಜೊತೆ ಮಾತನಾಡುತ್ತಾ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಬಳಿಕ ಮಾರ್ಚ್ ೨೫ರ ಬುಧವಾರದಿಂದ ದಿಗ್ಬಂಧನ (ಲಾಕ್ ಡೌನ್) ಜಾರಿಗೆ ಬಂದಿದೆ. ಇದರ ಹಿಂದಿನ ದಿನ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಸೋಂಕಿನ ಸರಪಣಿಯನ್ನು ತುಂಡರಿಸುವ ಮತ್ತು ಕೊರೋನಾ ವೈರಸ್ (ಕೋವಿಡ್ -೧೯) ಸಾಂಕ್ರಾಮಿಕ ಪಿಡುಗು ಹರಡದಂತೆ ನಿಯಂತ್ರಿಸುವ ಸಲುವಾಗಿ ದಿಗ್ಬಂಧನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದರು.
ದಿಗ್ಬಂಧನದ ಅವಧಿಯಲ್ಲಿ ಎಲ್ಲಿ ಇದ್ದೀರೋ ಅಲ್ಲೇ ಉಳಿದುಕೊಳ್ಳಿ ಎಂದು ಪ್ರಧಾನಿ ಜನರನ್ನು ಆಗ್ರಹಿಸಿದ್ದರು.
ಇದಕ್ಕೆ ಮುನ್ನ ಮಾರ್ಚ್ ೧೯ರಂದು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ತಮ್ಮ ಮೊದಲ ರಾಷ್ಟ್ರವ್ಯಾಪಿ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಸಾಂಕ್ರಾಮಿಕ ಸೋಂಕಿನ ಅಪಾಯಗ ಬಗ್ಗೆ ಎಚ್ಚರಿಸಿದ್ದರು ಮತ್ತು ಮಾರ್ಚ್ ೨೨ರಂದು ಜನತಾ ಕರ್ಫ್ಯೂವಿಗೆ ಕರೆ ನೀಡಿದ್ದರು.
ಮುಂಜಾಗರೂಕತಾ ಕ್ರಮವಾಗಿ ಅತ್ಯಗತ್ಯ ಎಂಬುದಾಗಿ ತಜ್ಞರು ಸಮರ್ಥಿಸಿರುವ ದಿಗ್ಬಂಧನದ ಪರಿಣಾಮವಾಗಿ ಆರ್ಥಿಕ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿದೆ ಮತ್ತು ನಗರಗಳಲ್ಲಿನ ವಲಸೆ ಕಾರ್ಮಿಕರು ತಮ್ಮ ಹಳ್ಳಿಗಳತ್ತ ಪಾದಯಾತ್ರೆ ಮೂಲಕ ’ಮಹಾವಲಸೆ’ ಹೊರಟಿದ್ದಾರೆ. ಇದರಿಂದಾಗಿ ಅವರು ರೋಗ ಹರಡುವ ಅಪಾಯದ ಪ್ರಕ್ರಿಯೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ ಎಂಬ ಭೀತಿ ವ್ಯಕ್ತವಾಗಿದೆ.
ಭಾನುವಾರ ಮತ್ತೊಮ್ಮೆ ತಮ್ಮ ’ಮನ್ ಕಿ ಬಾತ್’ ಮಾಸಿಕ ಬಾನುಲಿ ಕಾರ್‍ಯಕ್ರಮದ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ನಾಗರಿಕರಿಗೆ ವಿಶೇಷವಾಗಿ ಬಡ ಜನರಿಗೆ ಕಠಿಣ ನಿರ್ಧಾರಗಳ ಪರಿಣಾಮವಾಗಿ ಆಗಿರುವ ತೊಂದರೆಗಳಿಗಾಗಿ ಕ್ಷಮೆ ಯಾಚಿಸಿದ್ದರು.
ಆದರೆ ಇಡೀ ಜಗತ್ತನ್ನೇ ವ್ಯಾಪಿಸಿರುವ ಮಾರಕ ಸಾಂಕ್ರಾಮಿಕ ಸೋಂಕಿನ ವಿರುದ್ಧ ಹೋರಾಡಲು ಭಾರತದಂತಹ ಬೃಹತ್ ಗಾತ್ರದ ರಾಷ್ಟ್ರಕ್ಕೆ ಇದರ ವಿರುದ್ಧ ಬೇರೆ ಮಾರ್ಗ ಇಲ್ಲವಾದ್ದರಿಂದ ಜನರು ತಮ್ಮನ್ನು ಮನ್ನಿಸುವರು ಎಂಬ ವಿಶ್ವಾಸ ತಮಗಿದೆ ಎಂಬುದಾಗಿ ಪ್ರಧಾನಿ ಹೇಳಿದ್ದರು.
ಪಿಡುಗಿನ ವಿರುದ್ಧ ಆರಂಭದ ಹಂತದಲ್ಲೇ ಹೋರಾಡುವುದು ಅತ್ಯಂತ ಮಹತ್ವದ್ದಾಗಿದೆ, ರೋಗ ಬಿಗಡಾಯಿಸಿದರೆ ನಂvರ ಅದನ್ನು ಪರಾಭವಗೊಳಿಸುವುದು ತುಂಬಾ ಕಷ್ಟವಾಗುತ್ತದೆ ಎಂದೂ ಪ್ರಧಾನಿ ಒತ್ತಿ ಹೇಳಿದ್ದರು.
ಭಾನುವಾರದ ವೇಳೆಗೆ ಭಾರತದಲ್ಲಿ ಕೊರೋನಾಬಾಧಿತರ ಸಂಖ್ಯೆ ೧೦೦೦ವನ್ನು ದಾಟಿತ್ತು.
ಸಮುದಾಯ ವರ್ಗಾವಣೆಯ ಹಂತಕ್ಕೆ ಬಂದಿಲ್ಲ
ಈ ಮಧ್ಯೆ ಕೊರೋನಾವೈರಸ್ ಸೋಂಕು ಭಾರತದಲ್ಲಿ ಸಮುದಾಯ ವರ್ಗಾವಣೆಯ ಹಂತಕ್ಕೆ ತಲುಪಿಲ್ಲ. ಸಾಮೂಹಿಕವಾಗಿ ಸೋಂಕು ಹರಡಿದ ಯಾವುದೇ ಪ್ರಕರಣವೂ ಇಲ್ಲ ಎಂದು ಆರೋಗ್ಯ ಇಲಾಖೆಯು ಖಡಾಖಂಡಿತ ಹೇಳಿಕೆ ನೀಡಿದೆ.
‘ಸಮುದಾಯ’ ಪದ ಪ್ರಯೋಗ ಮಾqಬಾರದು. ಶಬ್ದಾರ್ಥಗಳಿಂದ ನಾವು ಹೊರಬರಬೇಕಾಗಿದೆ. ಎಲ್ಲೂ ನಾವು ಸಮುದಾಯ ವರ್ಗಾವಣೆಯ ಬಗ್ಗೆ ಹೇಳಿಲ್ಲ. ಅಂತಹದ್ದೇನಾದರೂ ಇದ್ದರೆ ನಿಮಗೆ ತಿಳಿಸುವಲ್ಲಿ ನಾವು ಮೊದಲಿಗರಾಗುತ್ತೇವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್‍ಯದರ್ಶಿ ಲವ ಅಗರವಾಲ್ ಹೇಳಿದರು.
‘ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಶೇಕಡಾ ೧೦೦ರಷ್ಟು ಪಾಲಿಸಿ, ಅದು ಶೇಕಡಾ ೯೯ರಷ್ಟಾದರೂ, ಅದು ನಮ್ಮನ್ನು ಮತ್ತೆ ಮೊದಲಿದ್ದ ಸ್ಥಳಕ್ಕೆ ತಂದು ನಿಲ್ಲಿಸಿಬಿಡಬಹುದು’ ಎಂದು ಅವರು ನುಡಿದರು.
ಏಮ್ಸ್ ಮತ್ತು ನಿಮ್ಹಾನ್ಸ್ ವೈದ್ಯಕೀಯ ಸಿಬ್ಬಂದಿಗೆ ತರಬೇತಿಗಳನ್ನು ಸಂಘಟಿಸುತ್ತಿವೆ. ಕೌಶಲ ಅಭಿವೃದ್ಧಿ ಸಚಿವಾಲಯ ಕೂಡಾ ಸಾಂಕ್ರಾಮಿಕವನ್ನು ನಿಭಾಯಿಸುವ ನಿಟ್ಟಿನಲ್ಲಿ ಜನರಿಗೆ ತರಬೇತಿ ನೀಡುವತ್ತ ಅಡಿ ಇಟ್ಟಿದೆ ಎಂದು ಅಗರವಾಲ್ ಹೇಳಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಧನಾತ್ಮಕ ಪರಿಣಾಮಗಳಾಗಿವೆ. ಭಾರೀ ಗಾತ್ರದ ಜನಸಂಖ್ಯೆಯ ಹೊರತಾಗಿಯೂ ನಾವು ಸೋಂಕಿನ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಪ್ರಮಾಣದಲ್ಲಿ ಇರಿಸಿಕೊಂಡಿದ್ದೇವೆ. ಭಾರತಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಇರುವ ರಾಷ್ಟ್ರಗಳಲ್ಲಿ ಪ್ರತಿದಿನವೂ ಸೋಂಕಿಗೆ ಒಳಗಾಗುವವರ ಸಂಖ್ಯೆ ಹೆಚ್ಚಿದೆ. ಆದರೆ ಇದು ಪ್ರತಿದಿನದ ಹೋರಾಟ. ಒಬ್ಬ ವ್ಯಕ್ತಿಯಿಂದ ೧೦೦ ಮಂದಿಗೆ ಸೋಂಕು ಹರಡಿದ ಉದಾಹರಣೆಗಳು ಜಗತ್ತಿನಲ್ಲಿ ಕಂಡು ಬಂದಿವೆ. ಆದ್ದರಿಂದ ಒಬ್ಬ ವ್ಯಕ್ತಿಯ ನಿರ್ಲಕ್ಷವೂ ಅಪಾಯಕಾರಿಯಾಗಬಲ್ಲುದು’ ಎಂದು ಅಗರವಾಲ್ ನುಡಿದರು.
ಭಾರತದಲ್ಲಿ ಸೋಂಕಿನ ಸಂಖ್ಯೆ ೧೦೭೧
ಏತನ್ಮಧ್ಯೆ ಭಾರತದಲ್ಲಿ ಕಳೆದ ೨೪ ಗಂಟೆಗಳಲ್ಲಿ ಒಟ್ಟು ೯೨ ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ ೧೦೭೧ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ ೨೯ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್‍ಯದರ್ಶಿ ಲವ ಅಗರವಾಲ್ ತಿಳಿಸಿದರು.
No comments:
Post a Comment