Monday, March 16, 2020

ಹಿರಿಯ ಸಾಹಿತಿ, ಪತ್ರಕರ್ತ ನಾಡೋಜ ಡಾ. ಪಾಟೀಲ ಪುಟ್ಟಪ್ಪ ವಿಧಿವಶ

ಹಿರಿಯ ಸಾಹಿತಿ, ಪತ್ರಕರ್ತ ನಾಡೋಜ ಡಾ. ಪಾಟೀಲ ಪುಟ್ಟಪ್ಪ ವಿಧಿವಶ
ಹುಬ್ಬಳ್ಳಿ: ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ‘ಪಾಪು ಎಂದೇ ಖ್ಯಾತರಾಗಿದ್ದ ಹಿರಿಯ ಸಾಹಿತಿ ಶತಾಯುಷಿ ಡಾ. ಪಾಟೀಲ ಪುಟ್ಟಪ್ಪ ಅವರು  2020 ಮಾರ್ಚ್ 16ರ ಸೋಮವಾರ ರಾತ್ರಿ  ವಿಧಿವಶರಾದರು.  ಅವರಿಗೆ ೧೦೧ ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಡಾ. ಪಾಟೀಲ ಪುಟ್ಟಪ್ಪನವರು ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕರ್ನಾಟಕದ ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡದ ಅಸ್ಮಿತೆಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪಾಪು, ಹಲವಾರು ಕನ್ನಡ ಪರ ಹೋರಾಟಗಳ ನೇತೃತ್ವವನ್ನು ವಹಿಸಿ ಈ ಭಾಗದಲ್ಲಿ ಕನ್ನಡದ ಸಾಕ್ಷಿ ಪ್ರಜ್ಞೆಯಾಗಿ ಎಲ್ಲರಿಗೂ ಮಾದರಿಯಾಗಿದ್ದರು. ಡಾ, ಪಾಟೀಲ ಪುಟ್ಟಪ್ಪನವರು ಬೆಳಗಾವಿಯಲ್ಲಿ ನಡೆದಿದ್ದ ೭೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಪ್ರಪಂಚ ಪತ್ರಿಕೆಯ ಸಂಪಾದಕರಾಗಿದ್ದ ಪುಟ್ಟಪ್ಪನವರು ತಮ್ಮ ಪತ್ರಿಕೆಯ ಮೂಲಕ ಈ ಭಾಗದಲ್ಲಿ ಕನ್ನಡದ ಅರಿವನ್ನು ಜನಸಾಮಾನ್ಯರಲ್ಲಿ ಮೂಡಿಸುವ ಕೆಲಸವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದರು. ‘ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಡಾ. ಪುಟ್ಟಪ್ಪನವರ ಅಂಕಣ ಬರಹ ‘ಪಾಪು ಪ್ರಪಂಚ ಅವರ ಬರಹದ ವೈಶಿಷ್ಟ್ಯತೆಯನ್ನು ಕರ್ನಾಟಕದ ಜನರಿಗೆ ಪರಿಚಯಿಸಿತ್ತು. ‘ವಿಶ್ವವಾಣಿ’ಯ ಸಂಸ್ಥಾಪಕರೂ ಆಗಿದ್ದರು.

ಕನ್ನಡಿಗರು ಬಹುಸಂಖ್ಯಾತರಾಗಿದ್ದ ಗಡಿಭಾಗದ ಪ್ರದೇಶಗಳ ಒಗ್ಗೂಡುವಿಕೆಗೆ ಆಗ್ರಹಿಸಿ ೧೯೪೦ ಹಾಗೂ ೧೯೫೦ರಲ್ಲಿ ನಡೆದಿದ್ದ ಹಕ್ಕೊತ್ತಾಯ ಹೋರಾಟದಲ್ಲಿ ಪಾಟೀಲ ಪುಟ್ಟಪ್ಪನವರು ಮುಂಚೂಣಿಯಲ್ಲಿದ್ದರು.

ಕರ್ನಾಟಕದ ಏಕೀಕರಣಕ್ಕೆ ಒತ್ತಾಯಿಸಿ ಡಾ. ಪಾಟೀಲ ಪುಟ್ಟಪ್ಪನವರು ೧೯೪೮ ದಾವಣಗೆರೆಯಲ್ಲಿ ಮೊಟ್ಟ ಮೊದಲ ನಿರ್ಣಯವನ್ನು ಹೊರಡಿಸಿದ್ದರು. ಆ ಮೂಲಕ ಕನ್ನಡ ಭಾಷಾವಾರು ಪ್ರಾಂತ್ಯಗಳ ಒಗ್ಗೂಡುವಿಕೆಗೆ ಪಾಪು ಅವರು ಮೊದಲ ಅಡಿಗಲ್ಲನ್ನು ಸ್ವಾತಂತ್ರ್ಯ ದಕ್ಕಿದ ಆರಂಭದ ವರ್ಷಗಳಲ್ಲೇ ಹಾಕಿದ್ದರು ಎಂಬುದು ವಿಶೇಷ.

ಕರ್ನಾಟಕದ ಕವಿ ಲೇಖಕರು, ‘ಕರ್ನಾಟಕ ಸಂಗೀತ ಕಲಾರತ್ನರು, ‘ಬದುಕಲು ಬೇಕು ಬದುಕುವ ಈ ಮಾತು, ‘ನೀವು ನಗಬೇಕು, ‘ನೆನಪಿನ ಬುತ್ತಿ, ‘ಮಾತು ಮಾಣಿಕ್ಯ, ‘ಕನ್ನಡದ ಕಂಪು, ‘ಸುವರ್ಣ ಕರ್ನಾಟಕ, ‘ಪುಸ್ತಕ ಸಂಸ್ಕೃತಿ ಮೊದಲಾದ ಕೃತಿಗಳ ಮೂಲಕ ಪಾಟೀಲ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು.

ಕನ್ನಡ ವಿಶ್ವವಿದ್ಯಾನಿಲಯ ಕೊಡಮಾಡುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಪರಿಷತ್ ನಿಂದ ೨೦೦೮ರಲ್ಲಿ ನೃಪತುಂಗ ಪ್ರಶಸ್ತಿ, ೨೦೧೦ರಲ್ಲಿ ವೂಡಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಸಮ್ಮಾನ ಗೌರವಗಳು ಈ ಶತಾಯುಷಿ ಸಾಹಿತಿಯನ್ನು ಅರಸಿಕೊಂಡು ಬಂದಿದ್ದವು.

ಮುಖ್ಯಮಂತ್ರಿ ಬಿ.ಎಸ್.  ಯಡಿಯೂರಪ್ಪ ಸೇರಿದಂತೆ ನಾಡಿನ ಗಣ್ಯರು ಪಾಪು ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದರು.

No comments:

Advertisement