Wednesday, March 18, 2020

ಬಂಡಾಯ ಶಾಸಕರ ಭೇಟಿಗೆ ದಿಗ್ವಿಜಯ್‌ಗೆ ನಕಾರ: ಪೊಲೀಸರ ಕ್ರಮ ಎತ್ತಿ ಹಿಡಿದ ಹೈಕೋರ್ಟ್

ಬಂಡಾಯ ಶಾಸಕರ ಭೇಟಿಗೆ ದಿಗ್ವಿಜಯ್ಗೆ ನಕಾರ: ಪೊಲೀಸರ ಕ್ರಮ ಎತ್ತಿ ಹಿಡಿದ ಹೈಕೋರ್ಟ್
ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ನಗರದ ಖಾಸಗಿ ರೆಸಾರ್ಟ್ನಲ್ಲಿರುವ ಬಂಡಾಯ ಶಾಸಕರ ಭೇಟಿಗೆ ತಮಗೆ ಅವಕಾಶ ನೀಡುವಂತೆ ಪೊಲೀಸರಿಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ 2020 ಮಾರ್ಚ್  18ರ  ಬುಧವಾರ ತಿರಸ್ಕರಿಸಿತು. ಇದರೊಂದಿಗೆ ದಿಗ್ವಿಜಯ್ ಸಿಂಗ್ ಅವರಿಗೆ ಭಾರೀ ಹಿನ್ನಡೆಯಾಯಿತು.

ಬಂಡಾಯ ಶಾಸಕರ ಭೇಟಿಗೆ ಅವಕಾಶ ಕೋರಿ ದಿಗ್ವಿಜಯ್ ಸಿಂಗ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್ ದೇವದಾಸ್ ಅವರು, ಮಧ್ಯ ಪ್ರದೇಶ ಶಾಸಕರು ತಮ್ಮ ಜೀವಕ್ಕೆ ಅಪಾಯವಿದ್ದು, ಇದನ್ನು ತಪ್ಪಿಸಲು ಮಧ್ಯ ಪ್ರದೇಶದ ಯಾವುದೇ ಕಾಂಗ್ರೆಸ್ ನಾಯಕರಿಗೆ ತಮ್ಮ ಭೇಟಿಗೆ ಅವಕಾಶ ನೀಡಬಾರದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಮಾಡಿದ್ದನ್ನು ಉಲ್ಲೇಖಿಸಿದರು.

ವಿಚಾರದಲ್ಲಿ ಪೊಲೀಸರ ಕ್ರಮದಿಂದ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದೂ ನ್ಯಾಯಮೂರ್ತಿ ಹೇಳಿದರು.

ಇದೇ ವೇಳೆ, ತಮ್ಮನು ಅಕ್ರಮವಾಗಿ ಬಂಧಿಸಲಾಗಿದೆ ಎಂಬುದಾಗಿ ದಿಗ್ವಿಜಯ್ ಸಿಂಗ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತು.

ನಾನು ರಾಜ್ಯಸಭಾ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದು, ಪ್ರಚಾರ ನಡೆಸಿ ಮತ ಕೇಳುವುದು ನಮ್ಮ ಹಕ್ಕು. ಹಾಗಾಗಿ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರರಿಂದ ಮತ ಕೇಳಲು ಇಲ್ಲಿಗೆ ಬಂದಿದ್ದೆ. ಆದರೆ , ಶಾಸಕರ ಭೇಟಿಗೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ. ಹಾಗಾಗಿ ನನಗೆ ಅವರ ಭೇಟಿಗೆ ಅವಕಾಶ ನೀಡುವಂತೆ ಸೂಕ್ತ ನಿರ್ದೇಶನ ನೀಡಬೇಕುಎಂದು ದಿಗ್ವಿಜಯ್ ಸಿಂಗ್ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಮುನ್ನ ನಗರದ ಖಾಸಗಿ ರೆಸಾರ್ಟ್ನಲ್ಲಿ ಶಾಸಕರು ಇದ್ದ ಕೊಠಡಿ ಪ್ರವೇಶಿಸಲು ಯತ್ನಿಸಿದ್ದ ದಿಗ್ವಿಜಯ್ ಸಿಂಗ್ ಮತ್ತು ಇತರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

No comments:

Advertisement