Wednesday, April 29, 2020

ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ

ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್  ಇನ್ನಿಲ್ಲ
ಮುಂಬೈ: ಪಶ್ಚಿಮ ಜಗತ್ತಿನಲ್ಲಿ ಭಾರತದ ಮುಖವಾಗಿ ಮಿಂಚಿದ್ದ ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ (೫೩) ಅವರು ಮುಂಬೈಯ ಕೋಕಿಲಾ ಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ   2020 ಏಪ್ರಿಲ್  29ರ ಬುಧವಾರ ಬೆಳಗ್ಗೆ ವಿಧಿವಶರಾದರು. ಖಾನ್ ನಿಧನದಿಂದ ಚಲನಚಿತ್ರ ಜಗತ್ತು ಮತ್ತು ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಕಂಬನಿ ಮಿಡಿದರು.

ತಮಗೆ ಅಪರೂಪದ ನ್ಯೂರೋಎಂಡೋಕ್ರೈನ್ ಟ್ಯೂಮರ್ ಬಾಧಿಸಿರುವುದು ಪತ್ತೆಯಾಗಿದೆ ಎಂದು ೨೦೧೮ರಲ್ಲಿ ಸ್ವತಃ ಪ್ರಕಟಿಸುವ ಮೂಲಕ ಇರ್ಫಾನ್ ಖಾನ್ ಭಾರತವನ್ನು ದಂಗು ಬಡಿಸಿದ್ದರು.

ನಾನು ಶರಣಾಗಿದ್ದೇನೆ, ಇದು ನನ್ನ ನಂಬಿಕೆ ಎಂಬುದಾಗಿ ಇರ್ಫಾನ್ ಖಾನ್ ೨೦೧೮ರಲ್ಲಿ ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆಯಲು ಆರಂಭಿಸಿದಾಗಲೇ ಬರೆದಿದ್ದ ಟಿಪ್ಪಣಿಯನ್ನು ಉದ್ಘರಿಸುವ ಮೂಲಕ ಇರ್ಫಾಣ್ ಕುಟುಂಬವು ಖಾನ್ ಸಾವಿನ ಸುದ್ದಿಯನ್ನು ದೃಢ ಪಡಿಸಿತು.

ಇರ್ಫಾನ್ ಪತ್ನಿ ಸುತಪಾ ಸಿಕದರ್ ಹಾಗೂ ಪುತ್ರರಾದ ಬಬಿಲ್ ಮತ್ತು ಆಯಾ ಖಾನ್ ಆಸ್ಪತ್ರೆಯಲ್ಲೇ ಇದ್ದರು ಎಂದು ವರದಿ ತಿಳಿಸಿತು.

ದೊಡ್ಡ ಕರುಳಿನ ಸೋಂಕಿನ ಸಮಸ್ಯೆಯಿಂದ ಬಳಲುತ್ತಿದ್ದ ಇರ್ಫಾನ್ ಖಾನ್ ಅವರನ್ನು ಮಂಗಳವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಖಾನ್ ಅವರು ಆಸ್ಪತ್ರೆಗೆ ದಾಖಲಾದ ಬಗ್ಗೆ ನಟನ ಆಪ್ತ ಕಾರ್ಯದರ್ಶಿ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದರು.

ಇರ್ಫಾನ್ ಅವರು ದೊಡ್ಡ ಕರುಳಿನ ಸೋಂಕಿನ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿತ್ತು. ’ಹೌದು, ಇರ್ಫಾನ್ ಖಾನ್ ಅವರು ಕೋಕಿಲಾಬೆನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ. ನಾವು ಪ್ರತಿ ಕ್ಷಣದ ವಿವರವನ್ನು ತಿಳಿಸುತ್ತೇವೆ. ಇರ್ಫಾನ್ ಅವರು ವೈದ್ಯರ ನಿಗಾದಲ್ಲಿದ್ದಾರೆ. ಈವರೆಗೂ ಅವರ ಧೈರ್ಯ ಮತ್ತು ಸಾಮರ್ಥ್ಯವೇ ಅವರಿಗೆ ಹೋರಾಡಲು ಶಕ್ತಿ ನೀಡಿದೆ. ಅವರಲ್ಲಿ ಅದ್ಭುತವಾದ ಇಚ್ಛಾಶಕ್ತಿ ಇದೆ. ಅವರು ಆರೋಗ್ಯದಿಂದ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ನಟನ ಅಧಿಕೃತ ವಕ್ತಾರ ಪ್ರಕಟಣೆಯಲ್ಲಿ ತಿಳಿಸಿದ್ದರು.

ಇರ್ಫಾನ್ ತಾಯಿ ಸಯೀದಾ ಬೇಗಂ (೯೫ವರ್ಷ) ಅವರು ವಯೋಸಹಜ ಖಾಯಿಲೆಯಿಂದ ಜೈಪುರದಲ್ಲಿ ಕಳೆದ ಶನಿವಾರವಷ್ಟೇ ನಿಧನರಾಗಿದ್ದರು. ಆದರೆ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಕಾರಣ ಪುತ್ರ ಇರ್ಫಾನ್ ಅವರಿಗೆ ತಾಯಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಮಂಗಳವಾರ ಇರ್ಫಾನ್ ತೀವ್ರ ಅನಾರೋಗ್ಯದಿಂದ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು.

ಬಾಲಿವುಡ್‌ನ ವಾರಿಯರ್, ಮಕ್ಬೂಲ್, ಹಾಸಿಲ್, ಪಾನ್ ಸಿಂಗ್ ತೋಮರ್, ರೋಗ್. ಲೈಫ್ ಆಫ್ ಪೈ, ನೇಮ್ ಸೇಕ್, ಸೇರಿದಂತೆ ಹಲವಾರು ಚಿತ್ರಗಳ ಮೂಲಕ ಇರ್ಫಾನ್ ಚಿತ್ರಪ್ರೇಮಿಗಳ ಮನಗೆದ್ದಿದ್ದರು.
ವಿಶ್ವ ಮಟ್ಟದ ಸಿನಿಮಾಗಳ ಪೈಕಿ ಇರ್ಫಾನ್ ಖಾನ್ ಅವರು ಸ್ಲಂಡಾಗ್ ಮಿಲಿಯನೇರ್, ದಿ ಲೈಫ್ ಆಫ್ ಪೈ, ದಿ ಮೈಟಿ ಹಾರ್ಟ್ ಹಾಗೂ ಜುರಾಸಿಕ್ ವರ್ಲ್ಡ್ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ.
ನಾವು ಪುನಃ ಅವರ ಸಿನಿಮಾಗಳನ್ನು ವೀಕ್ಷಿಸುವ ಮೂಲಕ ಅವರ ಬದುಕು ಮತ್ತು ಕಾರ್ಯವನ್ನು ಸಂಭ್ರಮಿಸುತ್ತೇವೆ ಎಂದು ಇರ್ಫಾನ್ ಖಾನ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ನೆಚ್ಚಿನ ನಟನ ಅಗಲಿಕೆಯ ನೋವಿಗೆ ದುಃಖಿಸಿದ್ದಾರೆ.

ಜೈಪುರ ಸಮೀಪದ ಟೋಂಗ್ ಗ್ರಾಮದಲ್ಲಿ ಮುಸ್ಲಿಂ ಸಮುದಾಯದಲ್ಲಿ ೧೯೬೭, ಜನವರಿ ೭ರಂದು ಇರ್ಫಾನ್ ಜನಿಸಿದರು. ಪಾಲಕರ ಮೂವರು ಮಕ್ಕಳಲ್ಲಿ ಇರ್ಫಾನ್ ಹಿರಿಯ ಮಗ. ಅವರ ತಂದೆ ಸಾವಿನ ನಂತರದಲ್ಲಿ ಅವರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್ಡಿ) ಸೇರಿದರು.
ಇರ್ಫಾನ್ ಅವರಲ್ಲಿನ ಕ್ರಿಯಾಶೀಲತೆ ಮತ್ತು ಕಲೆಯನ್ನು ಗುರುತಿಸಿದ ಮೀರಾ ನಾಯರ್ ಅವರುಸಲಾಂ ಬಾಂಬೆ ಚಿತ್ರಕ್ಕೆ ೧೯೮೮ರಲ್ಲಿ ಆಯ್ಕೆ ಮಾಡಿದರು. ಸಿನಿಮಾದ ಸಂಪಾದನೆ ವೇಳೆ ಅವರ ಪಾತ್ರಕ್ಕೆ ಕತ್ತರಿ ಬಿದ್ದಿತ್ತು. ನಿರ್ದೇಶಕಿ ಮೀರಾ ೨೦೦೬ರಲ್ಲಿದಿ ನೇಮ್ಸೇಕ್ ಸಿನಿಮಾದಲ್ಲಿ ಮತ್ತೆ ಇರ್ಫಾನ್ ಅವರನ್ನು ಆಯ್ಕೆ ಮಾಡಿಕೊಂಡರು.

ಕೆಲವು ಸಮಯ ಟಿವಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಇರ್ಫಾನ್ ಅವರಿಗೆ, ಆಸಿಫ್ ಕಪಾಡಿಯಾ ಅವರದಿ ವಾರಿಯರ್ ಸಿನಿಮಾ ಒಂದು ದೊಡ್ಡ ಬ್ರೇಕ್ ನೀಡಿತು. ಬಳಿಕ, ಸುದ್ದಿಯಾಗುತ್ತಿದ್ದ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ಖಾನ್ ನಿರ್ವಹಿಸಿದರು. ಹಾಲಿವುಡ್ ಸಿನಿಮಾಗಳಲ್ಲಿಯೂ ಅವರ ಅಭಿನಯ ಗಮನ ಸೆಳೆಯಿತು.

ಲಂಡನ್ನಿನಲ್ಲಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ್ದ ಇರ್ಫಾನ್, ೨೦೧೯ರ ಫೆಬ್ರುವರಿಯಲ್ಲಿಅಂಗ್ರೇಜಿ ಮೀಡಿಯಂ ಚಿತ್ರದ ಶೂಟಿಂಗ್‌ನಲಿ ಪಾಲ್ಗೊಂಡಿದ್ದರು.

ಬಳಿಕ ಪುನಃ ಲಂಡನ್ನಿಗೆ ಚಿಕಿತ್ಸೆಗಾಗಿ ತೆರಳಿದ್ದರು. ಶಸ್ತ್ರ ಚಿಕಿತ್ಸೆ ಮತ್ತು ಇತರೆ ಚಿಕಿತ್ಸೆಗಳ ಬಳಿಕೆ ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಭಾರತಕ್ಕೆ ವಾಪಸಾಗಿದ್ದರು. ಭಾರತದಲ್ಲಿ ರಾಷ್ಟ್ರವ್ಯಾಪಿ ದಿಗ್ಬಂಧನ ಘೋಷಣೆಯಾಗುವ ಕೆಲವೇ ದಿನಗಳ ಮುನ್ನಅಂಗ್ರೇಜಿ ಮೀಡಿಯಂ ಚಿತ್ರ ಬಿಡುಗಡೆಯಾಗಿತ್ತು.
ಚಿತ್ರೀಕರಣದಲ್ಲಿ
ಭಾಗಿಯಾಗಿದ್ದ ಸಿನಿಮಾಗಳ ಪೈಕಿ ಇದೇ ಅವರ ಕೊನೆಯ ಚಿತ್ರವಾಗಿತ್ತು.

ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಚಿತ್ರಸಲಾಂ ಬಾಂಬೆ!’ ಮೂಲಕ ಚಿತ್ರರಂಗ ಪ್ರವೇಶಿಸಿದ ಇರ್ಫಾನ್ ಖಾನ್ ಅಭಿನಯನವನ್ನು ನೆಚ್ಚಿಕೊಳ್ಳದ ಸಿನಿಮಾ ಪ್ರಿಯರು ಅತ್ಯಂತ ಕಡಿಮೆ. ಮಕ್ಬೂಲ್ (೨೦೦೪), ಪಾನ್ ಸಿಂಗ್ ತೋಮರ್ (೨೦೧೧), ದಿ ಲಂಚ್ ಬಾಕ್ಸ್ (೨೦೧೩), ಹೈದರ್ (೨೦೧೪), ಗುಂಡೇ (೨೦೧೪), ಪಿಕು (೨೦೧೫), ತಲ್ವಾರ್ (೨೦೧೫) ಹಾಗೂ ಹಿಂದಿ ಮೀಡಿಯಮ್ (೨೦೧೭) - ಇವು ಖಾನ್ ಅವರ ಅಭಿನಯದ ಕೆಲವು ಪ್ರಮುಖ ಬಾಲಿವುಡ್ ಸಿನಿಮಾಗಳು.

ಖಾನ್ ಚಿತ್ರಜೀವನದ ಘಟ್ಟಗಳು:
* ಮೊದಲ ಚಿತ್ರ ಸಲಾಂ ಬಾಂಬೆ (೧೯೮೮); ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಸಿನಿಮಾ
* ಏಕ್ ಡಾಕ್ಟರ್ ಕಿ ಮೌತ್ (೧೯೯೦) ಚಿತ್ರದಲ್ಲಿ  ಪತ್ರಕರ್ತನ ಪಾತ್ರದಲ್ಲಿ ಅಭಿನಯ; ಬೆಂಗಾಲಿ ನಿರ್ದೇಶಕ ತಪನ್ ಸಿನ್ಹಾ ನಿರ್ದೇಶನ
* ಹಾಸಿಲ್ (೨೦೦೩), ಮಕ್ಬೂಲ್ (೨೦೦೪): ಖಳನಟನ ಅಭಿನಯಕ್ಕೆ ಫಿಲಂ ಫೇರ್ ಪ್ರಶಸ್ತಿ
* ಲೈಫ್ ಇನ್ ... ಮೆಟ್ರೊ (೨೦೦೭): ಅತ್ಯುತ್ತಮ ಪೋಷಕ ನಟ ಫಿಲಂ ಫೇರ್ ಪ್ರಶಸ್ತಿ
* ಪಾನ್ ಸಿಂಗ್ ತೋಮರ್ (೨೦೧೧): ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
* ದಿ ಲಂಚ್ಬಾಕ್ಸ್ (೨೦೧೩): ಬಾಫ್ಟಾ ಪ್ರಶಸ್ತಿ ನಾಮನಿರ್ದೇಶಿತ ಚಿತ್ರ
ಕಮರ್ಷಿಯಲ್ ಹಿಟ್ ಚಲನಚಿತ್ರಗಳು:
ಹೈದರ್ (೨೦೧೪), ಗುಂಡೇ (೨೦೧೪), ಪಿಕು (೨೦೧೫) ಹಾಗೂ ತಲ್ವಾರ್ (೨೦೧೫), ಕೊನೆಯ ಚಿತ್ರ ಅಂಗ್ರೇಜಿ ಮೀಡಿಯಂ
ಅಂತರರಾಷ್ಟ್ರೀಯ ಮಟ್ಟದ ಚಿತ್ರಗಳು:
ದಿ ವಾರಿಯರ್ (೨೦೦೧), ದಿ ನೇಮ್ಸೇಕ್ (೨೦೦೬), ದಿ ಡಾರ್ಜಿಲಿಂಗ್ ಲಿಮಿಟೆಡ್ (೨೦೦೭), ಸ್ಲಂಡಾಗ್ ಮಿಲಿಯನೇರ್ (೨೦೦೮), ನ್ಯೂಯಾರ್ಕ್, ಲವ್ ಯು (೨೦೦೯), ದಿ ಅಮೇಜಿಂಗ್ ಸ್ಪೈಡರ್?ಮ್ಯಾನ್ (೨೦೧೨), ಲೈಫ್ ಆಫ್ ಪೈ (೨೦೧೨), ಜುರಾಸಿಕ್ ವರ್ಲ್ಡ್ (೨೦೧೫) ಹಾಗೂ ಇನ್ಫೆರ್ನೊ (೨೦೧೬).

ಪ್ರಧಾನಿ ಮೋದಿ ಕಂಬನಿ
ಬಹುಮುಖ ಅಭಿನಯ ಪ್ರತಿಭೆಗಾಗಿ ಅವರು ಸದಾ ನೆನಪಿನಲ್ಲಿ ಉಳಿಯುತ್ತಾರೆ ಎಂಬುದಾಗಿ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಇರ್ಫಾನ್ ಖಾನ್ ಅವರ ನಿಧನಕ್ಕೆ ಶೋಕ ವ್ಯಕ್ತ ಪಡಿಸಿದರು.

ಇರ್ಫಾನ್ ಖಾನ್ ಅವರ ನಿಧನವು ಚಿತ್ರ ಸಿನೆಮಾ ಜಗತ್ತು ಮತ್ತು ರಂಗಭೂಮಿಗೆ ದೊಡ್ಡ ನಷ್ಟ. ವಿವಿಧ ಮಾಧ್ಯಮಗಳ ಮೂಲಕ ನೀಡಿದ ತಮ್ಮ ವೈವಿಧ್ಯಮಯ ಪ್ರದರ್ಶನಗಳಿಗಾಗಿ ಅವರು ಸದಾ ನೆನಪಿನಲ್ಲಿ ಉಳಿಯುತ್ತಾರೆ. ಅವರ ಕುಟುಂಬ, ಗೆಳೆಯರು ಮತ್ತು ಅಭಿಮಾನಿಗಳ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರದಾನಿ ಟ್ವೀಟ್ ಮಾಡಿದರು.

ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಶಾರುಖ್ ಖಾನ್, ಕಮಲಹಾಸನ್, ಕರೀನಾ ಕಪೂರ್ ಖಾನ್, ಆಮೀರ್ ಖಾನ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ವಿವಿಧ ಗಣ್ಯರು ಇರ್ಫಾನ್ ಖಾನ್ ನಿಧನಕ್ಕೆ ಶೋಕ ವ್ಯಕ್ತ ಪಡಿಸಿದರು.

No comments:

Advertisement