Saturday, April 4, 2020

ಕೊರೋನಾ ಪರಿಸ್ಥಿತಿ: ಏಪ್ರಿಲ್ ೮ರಂದು ಪ್ರಧಾನಿ ಸರ್ವ ಪಕ್ಷ ಸಭೆ

ಕೊರೋನಾ ಪರಿಸ್ಥಿತಿ: ಏಪ್ರಿಲ್ ೮ರಂದು ಪ್ರಧಾನಿ ಸರ್ವ ಪಕ್ಷ ಸಭೆ

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾವೈರಸ್ ಸೋಂಕಿನಿಂದ ಉದ್ಭವಿಸಿರುವ ಪರಿಸ್ಥಿತಿ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ ೮ರಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ಸರ್ವ ಪಕ್ಷ ಸಭೆ ನಡೆಸಲಿದ್ದಾರೆ ಎಂದು 2020 ಏಪ್ರಿಲ್ 04ರ ಶನಿವಾರ ಪ್ರಕಟಿಸಲಾಯಿತು.

ಮಾರಕ ಸೋಂಕು ದೇಶವನ್ನು ವ್ಯಾಪಿಸಲು ಆರಂಭವಾದ ಬಳಿಕ ವ್ಯಾಧಿ ಹರಡದಂತೆ ತಡೆಯಲು ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಘೋಷಿಸಿದ ಹಲವು ದಿನಗಳ ಬಳಿಕ ರಾಜಕೀಯ ಪಕ್ಷಗಳ ಜೊತೆ ಪ್ರಧಾನಿಯವರು ನಡೆಸುತ್ತಿರುವ ಮೊತ್ತ ಮೊದಲ ಸಭೆ ಇದಾಗಿದೆ.

ಸಂಸತ್ತಿನಲ್ಲಿ ಐದಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷಗಳ ಸದನ ನಾಯಕರನ್ನು ಸಭೆಯಲ್ಲಿ ಪಾಲ್ಗೊಳ್ಳಲು ಆಮಂತ್ರಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರ ಪತ್ರ ತಿಳಿಸಿತು.  ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಪ್ರವಾಸ ನಿಯಮಗಳ ಮಿತಿಯ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವಪೂರ್ಣವಾದ ಸಭೆಯನ್ನು ವಿಡಿಯೋ ಸಂವಹನ (ವಿಡಿಯೋ ಕಾನ್ಫರೆನ್ಸ್) ಮೂಲಕ ನಡೆಸಲಾಗುವುದು ಎಂದು ಪತ್ರ ಹೇಳಿತು.

ಸಾಂಕ್ರಾಮಿಕ ಪಿಡುಗು ಸಮಾಜದ ವಿವಿಧ ವರ್ಗಗಳ ಮೇಲೆ ಅದರಲ್ಲೂ ವಿಶೇಷವಾಗಿ ದೇಶದ ಆರ್ಥಿಕ ಸ್ಥಿತಿಯ ಮೇಲೆ ಬೀರುತ್ತಿರುವ ದೂರಗಾಮೀ ಪರಿಣಾಮಗಳ ಬಗ್ಗೆ ಚರ್ಚಿಸಲು ಪ್ರಧಾನಿಯವರ ಜೊತೆಗೆ ಸರ್ವಪಕ್ಷ ಸಭೆ ನಡೆಸುವಂತೆ ಹಲವಾರು ವಿರೋಧ ಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ.

ಪ್ರಧಾನಿಯವರು ಸಭೆಯಲ್ಲಿ ಮಾರಕ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುಂದಿನ ಮಾರ್ಗ ನಕ್ಷೆ ಕುರಿತು ವಿವಿಧ ಪಕ್ಷಗಳಿಂದ ಸಲಹೆ ಕೋರಲಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಸಭೆಯು ಪ್ರಧಾನಿ ಮೋದಿ ಅವರ ಪ್ರಾಸ್ತಾವಿಕ ಮಾತುಗಳೊಂದಿಗೆ ಬೆಳಗ್ಗೆ ೧೧ ಗಂಟೆಗೆ ಆರಂಭವಾಗಲಿದೆ. ಪ್ರಾಸ್ತಾವಿಕ ಭಾಷಣದಲ್ಲಿ ಪ್ರಧಾನಿಯವರು ಸರ್ಕಾರ ಈವರೆಗೆ ಕೈಗೊಂಡಿರುವ ಕ್ರಮಗಳನ್ನು ಪಕ್ಷ ನಾಯಕರಿಗೆ ತಿಳಿಸಲಿದ್ದಾರೆ.

ಸಭೆಯು ಕೋವಿಡ್-೧೯ ಸೋಂಕಿ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಸಂಬಂಧಿಸಿದಂತೆ ವಿಸ್ತೃತವಾದ ರಾಜಕೀಯ ಸಹಮತ ರೂಪಿಸಲು ಅವಕಾಶವನ್ನು ಒದಗಿಸಲಿದೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು.

ಮೋದಿ ಅವರ ಹೊರತಾಗಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಮತ್ತು ರಾಜ್ಯಸಭಾ ನಾಯಕ ಥಾವರ್ ಚಂದ್ ಗೆಹ್ಲೋಟ್ ಅವರೂ ಸಭೆಯಲ್ಲಿ ಹಾಜರು ಇರುವ ನಿರೀಕ್ಷೆ ಇದೆ.

ಪ್ರಧಾನಿ ಮೋದಿಯವರು ಕೊರೋನಾವೈರಸ್ ಹರಡದಂತೆ ತಡೆಯುವ ಸಲುವಾಗಿ ಮಾರ್ಚ್ ೨೪ರಂದು ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಘೋಷಿಸಿದ್ದರು. ಸಂಪೂರ್ಣ ದಿಗ್ಬಂಧನವು ವಿಶ್ವದಲ್ಲೇ ಅತ್ಯಂತ ಬೃಹತ್ ಸ್ವರೂಪದ ಕಾರ್‍ಯಾಚರಣೆ ಎಂಬುದಾಗಿ ಪರಿಗಣಿತವಾಗಿದೆ.

30 % ಕೊರೋನಾ ರೋಗಿಗಳು ತಬ್ಲಿಘಿ ಜಮಾತ್ ಸದಸ್ಯರು

ಭಾರತದಲ್ಲಿ ಕೋರೋನಾವೈರಸ್ ಸೋಂಕಿನ ಪ್ರಕರಣಗಳು ೩೦೦೦ದ ಸಮೀಪಕ್ಕೆ ಬಂದಿದ್ದು, ಪ್ರತಿ ಮೂವರು ರೋಗಿಗಳಲ್ಲಿ ಒಬ್ಬ ವ್ಯಕ್ತಿ ರಾಷ್ಟ್ರದ ರಾಜಧಾನಿ ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲಿಘಿ ಜಮಾತ್ ಸಮಾವೇಶದ ಜೊತೆಗೆ ಸಂಪರ್ಕ ಹೊಂದಿದ್ದಾನೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು 2020 ಏಪ್ರಿಲ್ 04ರ ಶನಿವಾರ ಪ್ರಕಟಿಸಿತು.

ಸರ್ಕಾರವು ಕಳೆದ ವಾರ ಕೇಂದ್ರ ದೆಹಲಿಯ ತಬ್ಲಿಘಿ ಜಮಾತ್ ಕೇಂದ್ರ ಕಚೇರಿ ಕಟ್ಟಡದಿಂದ ೨೦೦೦ ಮಂದಿ ಕಾರ್‍ಯಕರ್ತರನ್ನು ತೆರವುಗೊಳಿಸಿದ್ದು, ಅವರಲ್ಲಿ ೨೪ ಮಂದಿಗೆ ಅದಾಗಲೇ ಕೊರೋನಾವೈರಸ್ ಸೋಂಕು ತಗುಲಿತ್ತು ಮತ್ತು ಇತರ ೨೦೦ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು.  ಸಮಾವೇಶದ ಪ್ರತಿನಿಧಿಗಳು ದೆಹಲಿ ಮಾತ್ರವಲ್ಲದೆ ದೇಶದ ಇತರ ಭಾಗಗಳಲ್ಲೂ ಸೊಂಕು ಹರಡುವ ಭೀತಿ ವ್ಯಕ್ತವಾಗಿತ್ತು. ಇದೀಗ ಆರೋಗ್ಯ ಸಚಿವಾಲಯದ ಹೇಳಿಕೆ ಪ್ರಕಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ ೧೮ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಂಡು ಬಂದಿರುವ ಕೊರೋನಾವೈರಸ್ ಪ್ರಕರಣಗಳಿಗೆ ತಬ್ಲಿಘಿ ಸಂಪರ್ಕ ಇರುವುದು ಖಚಿತ ಪಟ್ಟಿದೆ.

ಒಟ್ಟು ಪ್ರಕರಣಗಳಲ್ಲಿ ಶೇಕಡಾ ೩೦ರಷ್ಟು ಪ್ರಕರಣಗಳು ಒಂದು ನಿರ್ದಿಷ್ಟ ಸ್ಥಳದ ಜೊತೆಗೆ ಸಂಪರ್ಕ ಹೊಂದಿರುವುದು ಖಚಿತವಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್‍ಯದರ್ಶಿ ಲವ ಅಗರವಾಲ್ ಹೇಳಿದರು.

ರೋಗ ಪ್ರಸಾರದ ಸರಪಣಿಯನ್ನು ಮುರಿಯುವಲ್ಲಿ ರಾಷ್ಟ್ರ ಯಶಸ್ವಿಯಾಗಿರುವಂತೆ ಕಂಡು ಬಂದ ಹೊತ್ತಿನಲ್ಲೇ ಘಟಿಸಿರುವ ವಿದ್ಯಮಾನ ಎಚ್ಚರಿಕೆಯ ಗಂಟೆಯಾಗಿದೆ. ಇದು ದೈನಂದಿನ ಹೋರಾಟ. ಒಂದು ತಪ್ಪು ರಾಷ್ಟ್ರz ಆರೋಗ್ಯ ತುರ್ತುಸ್ಥಿತಿಯ ಹೊತ್ತಿನಲ್ಲಿ ಎಲ್ಲ ಸಿದ್ಧತೆಗಳನ್ನೂ ಹಾಳುಮಾಡಬಹುದು ಎಂಬುದಕ್ಕೆ ಉದಾಹರಣೆ. ಒಂದು ತಪ್ಪು ನಿಮ್ಮ ಯಶಸ್ಸನ್ನು ಅಯಸ್ಸಿನತ್ತ ತಳ್ಳಬಹುದು ಎಂದು ಅವರು ನುಡಿದರು.

ಸುಮಾರು ೨೨,೦೦೦ ತಬ್ಲಿಘಿ ಜಮಾತ್ ಕಾರ್‍ಯಕರ್ತರು ಮತ್ತು ಅವರ ಜೊತೆಗೆ ಸಂಪರ್ಕ ಇದ್ದವರನ್ನು ಪತ್ತೆ ಹಚ್ಚಿ ಕ್ಯಾರಂಟೈನ್‌ಗೆ ಒಳಪಡಿಸುವಲ್ಲಿ ನಮ್ಮ ಸಂಸ್ಥೆಗಳು ತೀವ್ರ ಪ್ರಯತ್ನದ ಮೂಲಕ ಯಶಸ್ಸು ಸಾಧಿಸಿವೆ ಎಂದು ಗೃಹ ಸಚಿವಾಲಯದ ಪುಣ್ಯ ಸಲಿಲ ಶ್ರೀವಾಸ್ತವ ಹೇಳಿದರು.

 

ವಿಶ್ವಾದ್ಯಂತ ಕೊರೋನಾ ಸೋಂಕು: ೧೧,೪೦,೧೩೪

ಕೊರೋನಾದಿಂದ  ಸಾವು: ೬೧,೧೭೪

ಚೇತರಿಸಿಕೊಂಡವರು: ,೩೬,೨೨೯

ಅತ್ಯಧಿಕ ಸೋಂಕು: ಅಮೆರಿಕ: ,೭೮,೪೯೬, ಸಾವು ,೪೩೧

ಸ್ಪೇನ್ ಸೋಂಕು: ,೨೪,೭೩೬, ಸಾವು ೧೧,೭೪೪

ಇಟಲಿ ಸೋಂಕು: ,೧೯,೮೨೭, ಸಾವು ೧೪,೬೮೧

ಜರ್ಮನಿ ಸೋಂಕು ೯೨,೦೫೦, ಸಾವು ,೨೯೫

ಚೀನಾ ಸೋಂಕು: ೮೧,೬೩೯, ಸಾವು ,೩೨೬

ಭಾರತ ಸೋಂಕು: ,೦೮೨, ಸಾವು ೮೬

*ಶನಿವಾರ ಒಂದೇ ದಿನ ಸ್ಪೇನಿನಲ್ಲಿ ೫೪೬ ಮತ್ತು ಇಂಗ್ಲೆಂಡಿನಲ್ಲಿ ೭೦೮ ಸಾವುಗಳು ಸಂಭವಿಸಿವೆ.

 (ಅಂಕಿ ಅಂಶಗಳು ವರ್ಲ್ಡೋಮೀಟರ್ ಅಂಕಿ ಅಂಶಗಳನ್ನು ಆಧರಿಸಿದೆ).

No comments:

Advertisement