Saturday, May 30, 2020

ದಿಗ್ಬಂಧನ 5: ಜೂನ್ ೩೦ರವರೆಗೆ, ಜೂನ್ ೮ರಿಂದ ದೇಗುಲ ಪ್ರವೇಶ

ದಿಗ್ಬಂಧನ 5:  ಜೂನ್ ೩೦ರವರೆಗೆ, ಜೂನ್ ೮ರಿಂದ ದೇಗುಲ ಪ್ರವೇಶ

ನವದೆಹಲಿ: ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಜೂನ್ ೩೦ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರವು 2020 ಮೇ 30ರ ಶನಿವಾರ ಆದೇಶ ಹೊರಡಿಸಿತು.  ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕಡೆ ಹಂತ ಹಂತವಾಗಿ ಆರ್ಥಿಕ ಚಟುವಟಿಕೆಗಳು ಪುನಾರಂಭಗೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿತು.

ಕೊರೋನಾವೈರಸ್ ಸೋಂಕಿನ ಪ್ರಸರಣ ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಹೇರಲಾದ ದಿಗ್ಬಂಧನದ ನಾಲ್ಕನೇ ಹಂತವು ಭಾನುವಾರಕ್ಕೆ ಮುಕ್ತಾಯಗೊಳ್ಳಲಿತ್ತು.

ಧಾರಕ ವಲಯಗಳಲ್ಲಿ (ಕಂಟೈನ್ಮೆಂಟ್ ಝೋನ್) ದಿಗ್ಬಂಧನವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಆದೇಶ ತಿಳಿಸಿತು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಿದ ಬಳಿಕ ನೂತನ ಮಾರ್ಗಸೂಚಿಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯವು ಹೇಳಿತು.

ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸಮಾಲೋಚನೆ ನಡೆಸಿದ್ದರು. ಬಳಿಕ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ವಿವಿಧ ಮುಖ್ಯಮಂತ್ರಿಗಳು ನೀಡಿದ ಸಲಹೆಗಳನ್ನು ಪ್ರಧಾನಿಗೆ ತಿಳಿಸಿದ್ದರು. ಶನಿವಾರ ಗೃಹ ವ್ಯವಹಾರಗಳ ಸಚಿವಾಲಯವು ದಿಗ್ಬಂಧನವನ್ನು ವಿಸ್ತರಿಸಿತು.


ಮೊದಲ ಹಂತದಲ್ಲಿ ಧಾರ್ಮಿಕ ಸ್ಥಳಗಳು ಮತ್ತು ಪೂಜಾ ಸ್ಥಳಗಳನ್ನು ಸಾರ್ವಜನಿಕರಿಗಾಗಿ ತೆರೆಯಲಾಗುವುದು. ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಇತರ ಆತಿಥ್ಯ ಸೇವೆಗಳು ಮತ್ತು ಶಾಪಿಂಗ್ ಮಾಲ್ಗಳಿಗೆ ಜೂನ್ ೮ರಿಂದ ತೆರೆಯಲು ಅವಕಾಶ ನೀಡಲಾಗುವುದು ಎಂದು ಆದೇಶ ಹೇಳಿದೆ.

ಮೇಲಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಆರೋಗ್ಯ ಸಚಿವಾಲಯವು ಕೋವಿಡ್ -೧೯ ಹರಡದಂತೆ ತಡೆಯಲು ಸಾಮಾಜಿಕ ಅಂತರ ಪಾಲನೆಯ ಖಾತರಿಗಾಗಿ ಕೇಂದ್ರೀಯ ಸಚಿವಾಲಯಗಳು ಮತ್ತು ಸಂಬಂಧಪಟ್ಟ ಇಲಾಖೆಗಳು ಹಾಗೂ ಇತರ ಪಾಲುದಾg ಜೊತೆ ಸಮಾಲೋಚಿಸಿದ ಬಳಿಕ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿದೆ.

ಎರಡನೇ ಹಂತದಲ್ಲಿ ಶಾಲೆಗಳು, ಕಾಲೇಜುಗಳು ಇತ್ಯಾದಿ ತೆರೆಯಲಿವೆ. ಸಂಸ್ಥೆಗಳ ಮಟ್ಟದಲ್ಲಿ ಪಾಲಕ/ಪೋಷಕರು ಮತ್ತು ಇತರ ಪಾಲುದಾರರ ಜೊತೆ ಸಮಾಲೋಚನೆಗಳನ್ನು ನಡೆಸುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ಮಾಡಲಾಗಿದೆ. ಸಮಾಲೋಚನೆಯ ಹಿಮ್ಮಾಹಿತಿಯನ್ನು ಅನುಸರಿಸಿ ಸಂಸ್ಥೆಗಳನ್ನು ಪುನಾರಂಭಿಸುವ ನಿಟ್ಟಿನಲ್ಲಿ ೨೦೨೦ರ ಜುಲೈ ತಿಂಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಸಚಿವಾಲಯವು ಬಳಿಕ ಸಂಸ್ಥೆಗಳಿಗಾಗಿ ಮಾರ್ಗಸೂಚಿ ಸಿದ್ಧ ಪಡಿಸುವುದು.

ಕೇವಲ ಸೀಮಿತ ಚಟುವಟಿಕೆಗಳನ್ನು ಮಾತ್ರ ದೇಶಾದ್ಯಂತ ನಿಷೇಧಿತವಾಗಲಿವೆ. ಇವುಗಳೆಂದರೆ: ಪ್ರಯಾಣಿಕರ ಅಂತಾರಾಷ್ಟ್ರೀಯ ವಿಮಾನಯಾನ, ಮೆಟ್ರೋ ರೈಲು, ಚಿತ್ರಮಂದಿರಗಳು, ಜಿಮ್ನಾಷಿಯಂಗಳು, ಈಜುಕೊಳಗಳು, ಮನರಂಜನಾ ಪಾರ್ಕ್ಗಳು, ಚಿತ್ರ ಮಂದಿರಗಳು, ಬಾರ್ಗಳು ಮತ್ತು ಸಭಾಂಗಣಗಳು (ಆಡಿಟೋರಿಯಂ), ಅಸೆಂಬ್ಲಿ ಹಾಲ್ಗಳು ಮತ್ತು ಇದೇ ರೀತಿಯ ಸ್ಥಳಗಳು. ಸಾಮಾಜಿಕ, ರಾಜಕೀಯ, ಕ್ರೀಡಾ ಚಟುವಟಿಕೆಗಳು, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಮಾರಂಭಗಳು ಮತ್ತು ಇತರ ದೊಡ್ಡ ಪ್ರಮಾಣದ ಸಮಾವೇಶಗಳ ಮೇಲಿನ ನಿಷೇಧ ಮುಂದುವರೆಯಲಿದೆ.

ಮೂರನೇ ಹಂತದಲ್ಲಿ ಪರಿಸ್ಥಿತಿಯ ಅಂದಾಜನ್ನು ಅನುಸರಿಸಿ ಮೇಲಿನವುಗಳನ್ನು ತೆರೆಯುವ ಬಗ್ಗೆ ದಿನಾಂಕಗಳನ್ನು ನಿರ್ಧರಿಸಲಾಗುವುದು.

ಕಂಟೈನ್ಮೆಂಟ್ ವಲಯಗಳನ್ನು ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿದ ಮಾರ್ಗಸೂಚಿಗೆ ಅನುಗುಣವಾಗಿ ರಾಜ್ಯಗಳು ಗುರುತಿಸುವುವು. ಕಂಟೈನ್ಮೆಂಟ್ ವಲಯಗಳಲ್ಲಿ ಕಟ್ಟು ನಿಟ್ಟಿನ ನಿಯಂತ್ರಣ ಇರುತ್ತದೆ. ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು.

ಅಂತರರಾಜ್ಯ ಸಂಚಾರ ಮತ್ತು ಜನರು ಹಾಗೂ ವಸ್ತುಗಳ ಅಂತರರಾಜ್ಯ ಸಂಚಾರ/ ಸಾಗಣೆಗೆ ಯಾವುದೇ ನಿರ್ಬಂಧಗಳು ಇರುವುದಿಲ್ಲ. ಇಂತಹ ಚಲನವಲನಗಳಿಗೆ ಯಾವುದೇ ಪ್ರತ್ಯೇಕ ಅನುಮತಿ ಅಥವಾ ಅನುಮೋದನೆ ಅಥವಾ -ಅನುಮತಿಯ ಅಗತ್ಯವಿಲ್ಲ.

ರಾತ್ರಿ ಕರ್ಫ್ಯೂ ವಿಚಾರಕ್ಕೆ ಸಂಬಂಧಿಸಿದಂತೆ ವಿವರಿಸಿದ ಆದೇಶ, ಅನಗತ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾತ್ರಿ ಕರ್ಫ್ಯೂ ಮುಂದುವರೆಯುತ್ತದೆ. ಆದಾಗ್ಯೂ ರಾತ್ರಿ ೯ರಿಂದ ಬೆಳಗ್ಗೆ ಗಂಟೆವರೆಗಿನ ಪರಿಷ್ಕೃತ ವೇಳೆಯಲ್ಲಿ ಮಾತ್ರ ರಾತ್ರಿ ಕರ್ಫ್ಯೂ ಇರುತ್ತದೆ ಎಂದು ತಿಳಿಸಿದೆ.

No comments:

Advertisement