Monday, May 18, 2020

ಪಶ್ಚಿಮ ಬಂಗಾಳ, ಒಡಿಶಾಕ್ಕೆ ೨೧ ವರ್ಷಗಳ ಬಳಿಕ ‘ಅಂಪನ್’ ಸೂಪರ್ ಸೈಕ್ಲೋನ್

ಪಶ್ಚಿಮ ಬಂಗಾಳ,  ಒಡಿಶಾಕ್ಕೆ ೨೧ ವರ್ಷಗಳ ಬಳಿಕ  ಅಂಪನ್’  ಸೂಪರ್ ಸೈಕ್ಲೋನ್
ನವದೆಹಲಿ: ಸುಮಾರು ೨೧ ವರ್ಷಗಳ ಬಳಿಕ ಪಶ್ಚಿಮ ಬಂಗಾಳ ಮತ್ತು ಒಡಿಶಾ ಮಹಾ ಚಂಡಮಾರುತ (ಸೂಪರ್ ಸೈಕ್ಲೋನ್) ಎದುರಿಸಲು ಸಜ್ಜಾಗಿದ್ದು, ಅಂಪನ್ ಚಂಡಮಾರುತವುಸೂಪರ್ ಸೈಕ್ಲೋನ್ ಬಿರುಗಾಳಿಯಾಗಿ ಪರಿವರ್ತನೆಗೊಂಡು ಈಶಾನ್ಯ ಬಂಗಾಳ ಕೊಲ್ಲಿಯತ್ತ ಚಲಿಸಿ ಮೇ ೨೦ರಂದು ದಿಘಾ ಮತ್ತು ಹಟಿಯಾ ದ್ವೀಪಗಳ ಮಧ್ಯೆ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಕರಾವಳಿಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ  2020 ಮೇ 18ರ ಸೋಮವಾರ (ಐಎಂಡಿ) ತಿಳಿಸಿತು.
ಅಂಪನ್ ಚಂಡಮಾರುತವು ಬಂಗಾಳ ಕೊಲ್ಲಿಯಲ್ಲಿ ಉಗ್ರ ಸ್ವರೂಪ ತಾಳುತ್ತಾ ನಿಧಾನವಾಗಿ ಕರಾವಳಿಯತ್ತ ಸಾಗುತ್ತಿದೆ. ಈಗ ಅದು ಸೂಪರ್ ಸೈಕ್ಲೋನ್ ರೂಪವನ್ನು ತಾಳಿದ್ದು ಬುಧವಾರ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿತು.
ಚಂಡಮಾರುತವು ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ, ದಕ್ಷಿಣ ಮತ್ತು ಉತ್ತರ ೨೪ ಪರಗಣಗಳು, ಹೌರಾ, ಹೂಗ್ಲಿ ಮತ್ತು ಕೋಲ್ಕತ ಜಿಲ್ಲೆಗಳಲ್ಲಿ ಅನಾಹುತಗಳನ್ನು ಉಂಟು ಮಾಡಬಹುದು ಎಂದು ಐಎಂಡಿ ಎಚ್ಚರಿಸಿದೆ.

೨೧ ವರ್ಷಗಳ ಹಿಂದೆ, ೧೯೯೯ರಲ್ಲಿ ಭಾರೀ ಚಂಡಮಾರುತವೊಂದು ಒಡಿಶಾ ಮತ್ತು ಪಶ್ಚಿಮ ಬಂಗಾಳದ ಗಂಗಾನದಿ ಮುಖಜ ಭೂಮಿ ಪ್ರದೇಶದಲ್ಲಿ ಅಪ್ಪಳಿಸಿ ಭಾರೀ ಹಾನಿ ಉಂಟು ಮಾಡಿತ್ತು. ಸೂಪರ್ ಸೈಕ್ಲೋನಿನ ಹಾವಳಿಯಿಂದ ಆದ ಹಾನಿಯನ್ನು ಸರಿಪಡಿಸಲು ಒಡಿಶಾಕ್ಕೆ ಹಲವಾರು ತಿಂಗಳುಗಳು ಬೇಕಾಗಿದ್ದವು.

ಚಂಡಮಾರುತದ ವೇಗಕ್ಕೆ ದೂರಸಂಪರ್ಕ ಹಾಗೂ ವಿದ್ಯುತ್ ಕಂಬಗಳು ಬುಡಮೇಲಾಗಿ ಸಂಪರ್ಕ ಹಾಗೂ ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತಗೊಳ್ಳಬಹುದು, ರೈಲು, ರಸ್ತೆ ಮಾರ್ಗಗಳು ಬಂಗಾಳ ಮತ್ತು ಒಡಿಶಾದ ಹಲವಡೆಗಳಲ್ಲಿ ಹಾನಿಗೊಳ್ಳಬಹುದು, ಬೆಳೆದು ನಿಂತ ಫಸಲು, ತೋಟಗಳು, ಆರ್ಚರ್ಡ್‌ಗಳಿಗೆ ತೀವ್ರ ನಷ್ಟ ಉಂಟಾಗಬಹುದು ಎಂದು ಐಎಂಡಿ ಎಚ್ಚರಿಸಿದೆ.

ಅಂಪನ್ ಚಂಡಮಾರುತದ ಹಿನ್ನೆಲೆಯಲ್ಲಿ ಪ್ರದೇಶದ ಮೂಲಕ ಸಾಗುವ ಶ್ರಮಿಕ ವಿಶೇಷ ರೈಲುಗಳನ್ನು ಅಮಾನತುಗೊಳಿಸುವಂತೆ ಒಡಿಶಾ ಸರ್ಕಾರ ಮನವಿ ಮಾಡಿದೆ. ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವ ವಲಸಿಗರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಎಂದೂ ಒಡಿಶಾ ಸರ್ಕಾರ ಪ್ರಕಟಿಸಿದೆ. ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆಯೂ ಐಎಂಡಿ ಸೂಚನೆ ನೀಡಿದೆ.

No comments:

Advertisement