ವೇನಾಡ್ ‘ಹಸಿರು’ಸ್ಥಾನಮಾನ ಮಾಯ
ತಿರುವನಂತಪುರ/ ನವದೆಹಲಿ: ಹಸಿರುವಲಯವಾಗಿದ್ದ ಕೇರಳದ ವೇನಾಡ್ನಲ್ಲಿ
ಈಗ ೧೯ ಸಕ್ರಿಯ ಕೊರೋನಾವೈರಸ್ ಪ್ರಕರಣಗಳು ವರದಿಯಾಗಿವೆ. ಇದು ರಾಜ್ಯದಲ್ಲೇ ಅತ್ಯಂತ ಗರಿಷ್ಠ ಪ್ರಮಾಣದ ಕೋವಿಡ್ -೧೯ ಪ್ರಕರಣವಾಗಿದ್ದು, ತಮಿಳುನಾಡಿನ ಚೆನ್ನೈಯ ಕೊಯಂಬೇಡು ಮಾರುಕಟ್ಟೆಯಿಂದ ಹಿಂತಿರುಗಿದ ಟ್ರಕ್ ಚಾಲಕನ ಪ್ರಾಥಮಿಕ ಮತ್ತು ಎರಡನೇ ಸಂಪರ್ಕದಿಂದ ೧೫ ಮಂದಿಗೆ ಸೋಂಕು ಹರಡಿದೆ.
ಮೇ ೨ರಂದು ಚಾಲಕನಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿತ್ತು. ಇದರೊಂದಿಗೆ ವೇನಾಡ್ ತನ್ನ ’ಹಸಿರುವಲಯ’ ಸ್ಥಾನಮಾನವನ್ನು
ಕಳೆದುಕೊಂಡಿತ್ತು. ಚಾಲಕ, ಆತನ ಪತ್ನಿ, ತಾಯಿ, ಪುತ್ರಿ, ಅಳಿಯ, ಪುತ್ರ ಮತ್ತು ಮೊಮ್ಮಕ್ಕಳಿಗೂ ಸೋಂಕು ಹರಡಿತ್ತು.
‘ಚಾಲಕ ಕೊಯಂಬೇಡು ಮಾರುಕಟ್ಟೆಯಿಂದ ಏಪ್ರಿಲ್ ೨೬ರ ಸಂಜೆ ವಾಪಸಾಗಿದ್ದ. ಹೋಂ ಕ್ವಾರಂಟೈನಿನಲ್ಲಿ ಇರುವಂತೆ ಆತನಿಗೆ ಸೂಚಿಸಲಾಗಿತ್ತು. ಆತನ ಗಂಟಲ ದ್ರವ ಮಾದರಿಯನ್ನು ಏಪ್ರಿಲ್ ೨೮ರಂದು ಸಂಗ್ರಹಿಸಲಾಗಿತ್ತು. ಮೇ ೨ರಂದು ಆತನಿಗೆ ಕೋವಿಡ್ ಪಾಸಿಟಿವ್ ವರದಿ ಬಂತು. ನಾವು ಆತನ ಜೊತೆಗೆ ಸಂಪರ್ಕಕ್ಕೆ ಬಂದವರೆಲ್ಲರ ಪತ್ತೆ ಮಾಡಿದೆವು ಮತ್ತು ಎಲ್ಲರನ್ನೂ ನಿಗಾದಲ್ಲಿ ಇಡಲಾಯಿತು. ಆತನ ಮನೆಯಲ್ಲಿ ಆತನ ಮಗನ ಮದುವೆ ನಿಶ್ಚಿತಾರ್ಥದ ಸಮಾರಂಭವಿತ್ತು. ಹೀಗಾಗಿ ಅಷ್ಟೊಂದು ಮಂದಿ ಆತನ ಸಂಪರ್ಕಕ್ಕೆ ಬಂದಿದ್ದರು ಎಂದು ವೇನಾಡ್ ಜಿಲ್ಲಾ ವೈದ್ಯಾಧಿಕಾರಿ ಆರ್. ರೇಣುಕಾ ನುಡಿದರು.
ಕೋವಿಡ್ ಪಾಸಿಟಿವ್ ವರದಿ ಬಂದ ಚಾಲಕನ ಅಳಿಯ ವೇನಾಡ್ನಲ್ಲಿ
ಅಂಗಡಿಯೊಂದನ್ನು ಇಟ್ಟುಕೊಂಡಿದ್ದ. ಹೀಗಾಗಿ ಅಂಗಡಿ ಮೂಲಕ ಆತನ ಜೊತೆಗೆ ಸಂಪರ್ಕ ಬಂದವರನ್ನು ಪತ್ತೆ ಹಚ್ಚಲಾಯಿತು.
ಹೋಮ್ ಕ್ವಾರಂಟೈನಿನಲ್ಲಿ ಇರುವಂತೆ ಸೂಚಿಸಿದ್ದರೂ, ಚಾಲಕ ಏಪ್ರಿಲ್ ೨೬ರಂದು ಮನೆಗೆ ತಲುಪುವ ಮುನ್ನ ಹಲವಾರು ಕಡೆಗಳಲ್ಲಿ ಸಂಚರಿಸಿದ್ದ ಎಂದು ನುಡಿದ ಜಿಲ್ಲಾಧಿಕಾರಿ ಈಗ ಇತರ ರಾಜ್ಯಗಳಿಂದ ಬರುವ ಎಲ್ಲ ಟ್ರಕ್ ಚಾಲಕರಿಗೂ ನಾವು ಹೋಮ್ ಕ್ವಾರಂಟೈನನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸುತ್ತಿದ್ದೇವೆ ಎಂದು ಹೇಳಿದರು.
ಈ ಸಮೂಹದ ಜೊತೆಗೆ ಸಂಪರ್ಕಕ್ಕೆ ಬಂದ ಇಬ್ಬರು ಪೊಲೀಸರಿಗೂ ಕೊರೋನಾವೈರಸ್ ಸೋಂಕು ತಗುಲಿದೆ. ’ಒಬ್ಬ ಪೊಲೀಸ್ ಸಿಬ್ಬಂದಿ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿಯ ಗನ್ ಮ್ಯಾನ್ ಆಗಿದ್ದ ವ್ಯಕ್ತಿ. ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಡಿವೈಎಸ್ಪಿ
ಕೂಡಾ ಕ್ವಾರಂಟೈನಿಗೆ ಒಳಪಟ್ಟಿದ್ದಾರೆ ಎಂದು ರೇಣುಕಾ ಹೇಳಿದರು.
No comments:
Post a Comment