Tuesday, June 2, 2020

ರೈತರಿಗೆ ೧೪ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಶೇ. ೮೩ರವರೆಗೆ ಹೆಚ್ಚಳ

ರೈತರಿಗೆ ೧೪ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಶೇ. ೮೩ರವರೆಗೆ ಹೆಚ್ಚಳ

ನವದೆಹಲಿ: ಪ್ರಕೃತಿ ವಿಕೋಪ ಮತ್ತು ಅಸಮರ್ಪಕ ಮಾರುಕಟ್ಟೆ ವ್ಯವಸ್ಥೆಯಿಂದ ನಿಸ್ತೇಜರಾಗಿರುವ ರೈತರಿಗೆ ಕೇಂದ್ರ ಸರ್ಕಾರ ನೆರವಿನ ಹಸ್ತ ಚಾಚಿದೆ. ಮುಂಗಾರು ಬಿತ್ತನೆಯ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ನೀಡಿದ ಮಾಹಿತಿ ಪ್ರಕಾರ ೧೪ ಬೆಳೆಗಳಿಗೆ ಶೇ. ೫೦ರಿಂದ ಶೇ. ೮೩ರಷ್ಟು ಬೆಂಬಲ ಬೆಲೆ ಹೆಚ್ಚಳ ಮಾಡಲು ಕೇಂದ್ರ ಸಚಿವ ಸಂಪುಟ 2020 ಜೂನ್ 01ರ ಸೋಮವಾರ ಒಪ್ಪಿಗೆ ನೀಡಿತು.

ಪ್ರಸ್ತತ ಸರ್ಕಾರ ವರ್ಷದ ಪೂರೈಸಿದ ನಂತರ ಮೊದಲ ಬಾರಿಗೆ ಪ್ರಧಾನಿ ಕರೆದ ಸಂಪುಟ ಸಭೆಯಲ್ಲಿ ರೈತರ ಬೆಳೆಗೆ ಬೆಂಬಲ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ವಲಯಗಳಲ್ಲಿ ವಿವಿಧ ಕ್ರಮಗಳಿಗೆ ಅನುಮೋದನೆ ನೀಡಲಾಯಿತು.

ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಈಗಿರುವ ಎಪಿಎಂಸಿ ಕಾಯ್ದೆ ಬದಲು ಹೊಸ ಕಾನೂನು ಜಾರಿಗೆ ತರಲು ಇದೇ ವೇಳೆ ಕೇಂದ್ರ ಸರ್ಕಾರ ಚಿಂತಿಸಿತು. ಹಾಗೆಯೇ, ರೈತರು ತಮ್ಮ ಉತ್ಪನ್ನಗಳನ್ನು ಬೇರೆ ರಾಜ್ಯಗಳಲ್ಲಿ ಮಾರಲು  ಅವಕಾಶ ನೀಡುವ ಬಗೆಗೂ ಚಿಂತಿಸಿತು.

ಇದೇ ವೇಳೆ, ಸಂಪುಟ ಸಭೆಯಲ್ಲಿ ಎಂಎಸ್ಎಂಇ ವಲಯಗಳಿಗೆ ಬಲ ನೀಡುವ ಕ್ರಮಗಳಿಗೆ ಒಪ್ಪಿಗೆ ನೀಡಲಾಯಿತು. ಸಂಕಷ್ಟದಲ್ಲಿರುವ ಮಧ್ಯಮ ಮತ್ತು ಸಣ್ಣ ಉದ್ಯಮ (ಎಂಎಸ್ಎಂಇ)ಗಳಿಗೆ ೨೦ ಸಾವಿರ ಕೋಟಿ ರೂ ಸಬಾರ್ಡಿನೇಟ್ ಸಾಲವನ್ನು ಸಂಪುಟ ಸಭೆಯಲ್ಲಿ ಮಂಜೂರು ಮಾಡಲಾಯಿತು, ಇದರಿಂದ ದೇಶದ ಲಕ್ಷ ಸಣ್ಣ ಉದ್ಯಮಗಳಿಗೆ ಲಾಭವಾಗುವ ನಿರೀಕ್ಷೆ ಇದೆ.

ಹಾಗೆಯೇ, ಎಂಎಸ್ಎಂಇ ವಲಯದ ಮಾನದಂಡವನ್ನೂ ಸ್ವಲ್ಪ ಬದಲಿಸಲಾಯಿತು. ಮಧ್ಯಮ ಮಟ್ಟದ ಉದ್ಯಮಗಳ ವಹಿವಾಟು ಮಿತಿಯನ್ನು ೧೦೦ ಕೋಟಿ ಬದಲಿಗೆ ೨೫೦ ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ, ೨೫೦ ಕೋಟಿಗಿಂತ ಕಡಿಮೆ ವಹಿವಾಟು ಹೊಂದಿರುವ ಕಂಪನಿ ಎಂಎಸ್ಎಂಇ ವರ್ಗದಲ್ಲೇ ಉಳಿಯುತ್ತದೆ. ಅದನ್ನು ಬೃಹತ್ ಉದ್ಯಮ ವಲಯಕ್ಕೆ ಸೇರಿಸಲಾಗುವುದಿಲ್ಲ.

No comments:

Advertisement