Saturday, July 11, 2020

ಬೀಜಿಂಗ್ ಕೋವಿಡ್ ಮಾಹಿತಿ ಮುಚ್ಚಿಟ್ಟಿತು: ಚೀನಾ ವೈರಾಣು ತಜ್ಞೆ

ಬೀಜಿಂಗ್ ಕೋವಿಡ್ ಮಾಹಿತಿ ಮುಚ್ಚಿಟ್ಟಿತು:
ಚೀನಾ ವೈರಾಣು ತಜ್ಞೆ

ನವದೆಹಲಿ: ಹಾಂಕಾಂಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ವೈರಾಣು ಮತ್ತು ರೋಗ ನಿರೋಧಕ ಶಾಸ್ತ್ರದಲ್ಲಿ ( ವೈರಾಲಜಿ ಮತ್ತು ಇಮ್ಯುನೊಲಾಜಿ) ತಜ್ಞೆಯಾಗಿರುವ ಡಾ. ಲಿ-ಮೆಂಗ್ ಯಾನ್, ಚೀನಾಕ್ಕೆ ಮಾರಕ ಕೊರೋನಾವೈರಸ್ ಬಗ್ಗೆ ತಿಳಿದಿತ್ತು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಪ್ರೊಫೆಸರ್ ಮಲಿಕ್ ಪೀರಿಸ್ ಅದನ್ನು ಮುಚ್ಚಿಹಾಕಿದರು ಎಂದು ಆರೋಪಿಸಿದ್ದಾರೆ.

ಪೀರಿಸ್ ಅವರು ವಿಶ್ವ ಆರೋಗ್ಯ ಸಂಸ್ಥೆಗೆ ಸಂಯೋಜಿತರಾಗಿರುವ ಪ್ರಯೋಗಾಲಯದ ಸಹ ನಿರ್ದೇಶಕರಾಗಿದ್ದಾರೆ.

ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಯಾನ್ ಅವರು "ಕೊರೋನವೈರಸ್ ಸಾಂಕ್ರಾಮಿಕದ  ಬಗ್ಗೆ ಚೀನಾ ಸರ್ಕಾರಕ್ಕೆ ತಿಳಿದಿತ್ತು ಎಂದು ನಾನು ನಂಬುತ್ತೇನೆ ಎಂದು ಹೇಳಿದರು. ಯಾನ್ ಅವರು ಹಾಂಕಾಂಗ್ ನಿಂದ ಪರಾರಿಯಾಗಿದ್ದಾರೆ.

ಅವರು ಶಿಳ್ಳೆಗಾರರನ್ನು ಹೇಗೆ ಪರಿಗಣಿಸುತ್ತಾರೆಂದು ನನಗೆ ತಿಳಿದಿದೆ ಎಂದು ಯಾನ್ ನುಡಿದರು.

ಕ್ಷೇತ್ರದ ಕೆಲವು ಉನ್ನತ ತಜ್ಞರಾದ ನನ್ನ ಮೇಲ್ವಿಚಾರಕರು ಸಾಂಕ್ರಾಮಿಕ ರೋಗದ ಪ್ರಾರಂಭದಲ್ಲಿ ನಾನು ಮಾಡುತ್ತಿರುವ ಸಂಶೋಧನೆಗಳನ್ನು ಸಹ ನಿರ್ಲಕ್ಷಿಸಿದ್ದಾರೆ, ಅದು ಅನೇಕ ಜೀವಗಳನ್ನು ಉಳಿಸಬಹುದಿತ್ತು ಎಂದು ಯಾನ್ ಹೇಳಿದರು.

ನನ್ನ ಜೀವಕ್ಕೆ ಅಪಾಯವಿದೆ ಎಂಬುದಾಗಿ ಅಪಪ್ರಚಾರ ಮಾಡುವ ಮೂಲಕ ಚೀನಾವು ನನ್ನ ಪ್ರತಿಷ್ಠೆಯನ್ನು ಹಾಳು ಮಾಡಲು ಯತ್ನಿಸುತ್ತಿದೆ ಎಂದು ಪ್ರಸ್ತುತ ತಲೆಮರೆಸಿಕೊಂಡಿರುವ ಯಾನ್ ಆಪಾದಿಸಿದರು.

ತಾನು ಮಾರಕ ಕೊರೋನಾವೈರಸ್ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯಕ್ಕೆ  ಸಕಾಲದಲ್ಲಿ ಮಾಹಿತಿ ಒದಗಿಸಿರುವುದಾಗಿ ಪ್ರತಿಪಾದಿಸಿರುವ ಚೀನಾದ ಹಲವಾರು ಪ್ರತಿಪಾದನೆಗಳ ಸಾಚಾತನ ಎಷ್ಟು ಎಂಬುದು ಯಾನ್ ಅವರ ಸಂದರ್ಶನದಿಂದ ಬಯಲಿಗೆ ಬಂದಿದೆ.

ವೈರಸ್ ಬಗ್ಗೆ ಅರಿತುಕೊಳ್ಳಲು ಸಮಯಾವಕಾಶ ಮಾಡಿಕೊಂಡಿದ್ದ ಚೀನಾ, ಅದು ಮಾರಕ ಸ್ವರೂಪದ್ದು ಎಂಬುದಾಗಿ ಗೊತ್ತಿದ್ದೂ ಅದು ಎಷ್ಟು ಅಪಾಯಕಾರಿ ಎಂಬ ಮಾಹಿತಿಯನ್ನು ಜಗತ್ತಿಗೆ ನೀಡದೆ ವಿಶ್ವವನ್ನು ಕತ್ತಲಲ್ಲಿ ಇಟ್ಟಿತು ಎಂಬುದನ್ನೂ ಯಾನ್ ಸಂದರ್ಶನ ಬಯಲಿಗೆ ಎಳೆದಿದೆ.

No comments:

Advertisement