Monday, July 13, 2020

ಪದ್ಮನಾಭಸ್ವಾಮಿ ದೇಗುಲ ಆಡಳಿತ ರಾಜಮನೆತನಕ್ಕೆ: ಸುಪ್ರೀಂ

ಪದ್ಮನಾಭಸ್ವಾಮಿ ದೇಗುಲ ಆಡಳಿತ ರಾಜಮನೆತನಕ್ಕೆ: ಸುಪ್ರೀಂ

ನವದೆಹಲಿ: ಕೇರಳದ ತಿರುವನಂತಪುರದಲ್ಲಿರುವ ಪ್ರಖ್ಯಾತ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತದ ಹಕ್ಕು ತಿರುವಾಂಕೂರು ರಾಜಮನೆತನಕ್ಕೆ ಸೇರಿದ್ದು ಎಂದು ಸುಪ್ರೀಂಕೋರ್ಟ್ 2020 ಜುಲೈ 13ರ ಸೋಮವಾರ ಮಹತ್ವದ ತೀರ್ಪು ನೀಡಿತು.

ನ್ಯಾಯಮೂರ್ತಿಗಳಾದ ಮಲ್ಹೋತ್ರಾ ಮತ್ತು ಯುಯು ಲಲಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ ತೀರ್ಪನ್ನು ಪ್ರಕಟಿಸಿದ್ದು ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಆಡಳಿತಾತ್ಮಕ ಸಮಿತಿ ದೇವಸ್ಥಾನದ ಆಡಳಿತ ನಿರ್ವಹಣೆ ನೋಡಿಕೊಳ್ಳಲಿದೆ. ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಹೊಸ ಆಡಳಿತಾತ್ಮಕ ಸಮಿತಿ ರಚಿಸಲಾಗುವುದು, ಅಲ್ಲಿಯವರೆಗೆ ಈಗಿರುವ ಆಡಳಿತ ಸಮಿತಿ ಮುಂದುವರಿಯಲಿದೆ ಎಂದು ಹೇಳಿತು.

ಕೇರಳ ಹೈಕೋರ್ಟ್ ೨೦೧೧ರ ಜನವರಿ ೩೧ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ತಿರುವಾಂಕೂರು ರಾಜ ಮನೆತನದ ಕಾನೂನು ಪ್ರತಿನಿಧಿಗಳು ಸೇರಿದಂತೆ ಹಲವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವರ್ಷಗಳ ನಂತರ ತೀರ್ಪು ನೀಡಿತು.

೩೦೦ ಪುಟಗಳ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಇಷ್ಟು ದಿನ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿದ್ದ ತಿರುವಾಂಕೂರು ರಾಜಮನೆತನದ ಹಕ್ಕನ್ನು ಎತ್ತಿಹಿಡಿಯಿತು.

ತಿರುವಾಂಕೂರು ರಾಜಮನೆತನದ ಕೊನೆಯ ಆಡಳಿತಗಾರ ೧೯೯೧ರಲ್ಲಿ ತೀರಿಕೊಂಡ ನಂತರ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತ ರಾಜಮನೆತನದ ಸುಪರ್ದಿಗೆ ಕೊನೆಯಾಗುತ್ತದೆ ಎಂದು ಕೇರಳ ಹೈಕೋರ್ಟ್ ಆದೇಶ ನೀಡಿತ್ತು. ಇದೀಗ ಸುಪ್ರೀಂ ಕೇರಳ ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿತ್ತು.

ತೀರ್ಪು ಸ್ವಾಗತಿಸಿದ ಸರ್ಕಾರ: ಸುಪ್ರೀಂ ನೀಡಿರುವ ತೀರ್ಪನ್ನು ಸ್ವಾಗತಿಸಿದ ಕೇರಳ ಸರ್ಕಾರ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಿಲ್ಲ. ನ್ಯಾಯಾಲಯದ ತೀರ್ಪಿಗೆ ಶರಣಾಗುವುದು ಸರ್ಕಾರದ ಕರ್ತವ್ಯ ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ತಿಳಿಸಿದರು.
ತೀರ್ಪಿಗೆ ಹರ್ಷ: ಸುಪ್ರೀಂ ಕೋರ್ಟ್ ತೀರ್ಪನ್ನು ಖುಷಿಯಿಂದ ಸ್ವೀಕರಿಸಿದ ತಿರುವಾಂಕೂರು ರಾಜಮನೆತನ ದೇವಸ್ಥಾನದ ಸಂಪತ್ತು ದೇವರಿಗೆ ಸೇರಿದ್ದು, ಮನೆತನಕ್ಕಲ್ಲ, ಸುಪ್ರೀಂ ಕೋರ್ಟ್ ತೀರ್ಪಿನ ಮೂಲಕ ಪದ್ಮನಾಭ ಸ್ವಾಮಿ ದೇವಸ್ಥಾನದ ಜೊತೆಗಿನ ಸಂಬಂಧ ಇನ್ನಷ್ಟು ಗಟ್ಟಿಯಾಗಿ ಮುಂದುವರಿಯಲಿದೆ ಎಂದು ತಿರುವಾಂಕೂರು ರಾಜಮನೆತನದ ಸದಸ್ಯ ಆದಿತ್ಯ ವರ್ಮ ಪ್ರತಿಕ್ರಿಯಿಸಿದರು.

೨೦೧೧ರಲ್ಲಿ ತೀರ್ಪು ನೀಡಿದ್ದ ಕೇರಳ ಹೈಕೋರ್ಟ್ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ ಮತ್ತು ಅದರ ಅಪಾರವಾದ ಸಂಪತ್ತನ್ನು ರಾಜ್ಯ ಸರ್ಕಾರ ಸ್ವಾಧೀನ ಮಾಡಿಕೊಳ್ಳಬೇಕು. ಲಕ್ಷ ಕೋಟಿ ಬೆಲೆಯ ಖಜಾನೆ ರಹಸ್ಯವಾಗಿದ್ದು ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಹೇಳಿತ್ತು. ದೇವಸ್ಥಾನಕ್ಕೆ ಸೇರಿದ್ದ ಮೂರು ಖಜಾನೆಗಳನ್ನು ತೆರೆದು ಅದರ ಲೆಕ್ಕಹಾಕಲಾಗಿತ್ತಾದರೂ ವಾಲ್ಟ್ ಬಿ ತೆರೆಯುವಿಕೆಗೆ ರಾಜಮನೆತನ ಅಡ್ಡಿಪಡಿಸಿತ್ತು. ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ವಾಲ್ಟ್ ಬಿಯನ್ನು ತೆರೆಯಬಾರದು ಎಂದು ರಾಜಮನೆತನ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳಲು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸುವಂತೆ ರಾಜಮನೆತನ ಸಲಹೆ ನೀಡಿತ್ತು. ಅಧ್ಯಕ್ಷರನ್ನು ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಸೂಚಿಸಬೇಕೆಂದು ಹೇಳಿತ್ತು.
ನಿಧಿ ಕತೆ: ದೇವಸ್ಥಾನದಲ್ಲಿ ರಹಸ್ಯ ನಿಧಿ ನಿಕ್ಷೇಪ ಇದೆ ಎಂದು ನಂಬಿರುವ ನೆಲಮಾಳಿಗೆಯ ಪ್ರಮುಖ ಕೋಣೆಯ ಬಾಗಿಲನ್ನು ತೆರೆಯಬೇಕೆ ಅಥವಾ ಬೇಡವೇ ಎಂಬ ಬಗ್ಗೆ ರಾಜಮನೆತನದ ಸಂಪ್ರದಾಯದ ಪ್ರಕಾರ ಅಂತಿಮ ಸಮಿತಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತು. ಹಾಗಂತ ಇದು ರಾಜಮನೆತನಕ್ಕೆ ಕಾನೂನು ಹೋರಾಟದಲ್ಲಿ ದೊರೆತ ಜಯ ಎಂಬುದಾಗಿ ಪರಿಗಣಿಸಬಾರದು. ಯಾಕೆಂದರೆ ಪದ್ಮನಾಭ ಸ್ವಾಮಿಯ ಎಲ್ಲಾ ಭಕ್ತರ ಆಶೀರ್ವಾದ ಎಂದು ನಾವು ಗ್ರಹಿಸಿದ್ದೇವೆ ಎಂದು ರಾಜಮನೆತನದ ಪ್ರತಿನಿಧಿಗಳು ಹೇಳಿದರು.

No comments:

Advertisement