ನೇಪಾಳೀ ಪ್ರಧಾನಿ ಒಲಿ ರಕ್ಷಣೆಗಾಗಿ ಮತ್ತೆ ಕಣಕ್ಕೆ ಇಳಿದ ಚೀನಾ
ನವದೆಹಲಿ: ನೇಪಾಳದ ಪ್ರಧಾನಿ ಕೆಪಿ ಶರ್ಮ ಒಲಿ ಅವರ ಸಂರಕ್ಷಣೆಗಾಗಿ ಚೀನಾ ಮತ್ತೆ ಆಖಾಡಕ್ಕೆ ಇಳಿದಿದ್ದು, ಚೀನೀ ರಾಯಭಾರಿ ಹೂ ಯಾಂಕಿ ಅವರು 2020 ಜುಲೈ 07ರ ಮಂಗಳವಾರ ನೇಪಾಳ ಕಮ್ಯೂನಿಸ್ಟ್ ಪಕ್ಷದ ನಾಯಕ ಝಲಾ ನಾಥ್ ಖಾನಲ್ ಅವರನ್ನು ಭೇಟಿ ಮಾಡಿದರು.
ಕೆಪಿ ಶರ್ಮ ಒಲಿ ಪದಚ್ಯುತಿಗಾಗಿ ಇತರ ನಾಯಕರ ಜೊತೆಗೆ ಝಲಾ ನಾಥ್ ಖಾನಲ್ ಅವರೂ ಕೈಜೋಡಿಸಿದ್ದಾರೆ ಎಂದು ಪಕ್ಷ ಮೂಲಗಳು ತಿಳಿಸಿವೆ.
ಹೂ ಅವರು ಕಳೆದ ಕೆಲವು ದಿನಗಳಿಂದ ಅಧ್ಯಕ್ಷರಾದ ಬಿದ್ಯಾ ದೇವಿ ಭಂಡಾರಿ ಮತ್ತು ನೇಪಾಳ ಕಮ್ಯೂನಿಸ್ಟ್ ಪಕ್ಷದ (ಎನ್ಸಿಪಿ) ನಾಯಕ ಮಾಧವ ಕುಮಾರ್ ನೇಪಾಳ ಅವರನ್ನೂ ಭೇಟಿ ಮಾಡಿದ್ದಾರೆ. ಇದು ನೇಪಾಳದ ಆಂತರಿಕ ರಾಜಕಾರಣದಲ್ಲಿ ರಾಜತಾಂತ್ರಿಕರ ಪಾತ್ರದ ಬಗ್ಗೆ ಟೀಕೆಗಳನ್ನು ಹುಟ್ಟು ಹಾಕಿದೆ.
ಮಾಜಿ ಪ್ರಧಾನಿಗಳಾದ ನೇಪಾಳ ಮತ್ತು ಖಾನಲ್ ಅವರು ಪುಷ್ಪ ಕಮಲ್ ದಹಲ್ ನೇತೃತ್ವದ ಪ್ರತಿಸ್ಪರ್ಧಿ ಬಣದ ಜೊತೆಗೆ ಗುರುತಿಸಿಕೊಂಡಿದ್ದಾರೆ.
ಹೂ ಮತ್ತು ಪ್ರಚಂಡ ನಡುವಣ ಸಭೆ ಇನ್ನೂ ಸಾಧ್ಯವಾಗಿಲ್ಲ. ಪ್ರಧಾನಿ ಒಲಿ ಪದಚ್ಯುತಿ ಅಭಿಯಾನದ ನೇತೃತ್ವ ವಹಿಸಿರುವ ಪ್ರಚಂಡ ಅವರು ಹೂ ಯಾಂಕಿ ಅವರ ಭೇಟಿಗೆ ನಿರಾಸಕ್ತಿ ವ್ಯಕ್ತ ಪಡಿಸಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಆದರೆ ಅವರು ಈ ರೀತಿ ಎಷ್ಟು ಸಮಯ ಪ್ರತಿರೋಧ ವ್ಯಕ್ತ ಪಡಿಸಬಹುದು ಎಂಬುದು ಸ್ಪಷ್ಟವಿಲ್ಲ ಎಂದು ಮೂಲಗಳು ಹೇಳಿವೆ.
ಹೂ ಯಾಂಕಿ ಅವರು ನೇಪಾಳ ರಾಜಕಾರಣದಲ್ಲಿ ತೀವ್ರ ಆಸಕ್ತಿ ತಾಳಿರುವುದು ಮತ್ತು ಪ್ರಧಾನಿ ಒಲಿ ಅವರ ಮುಂದುವರಿಕೆಯು ಕಠ್ಮಂಡುವಿನಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಚೀನಾ ರಾಯಭಾರಿ ಕಚೇರಿಯು ಹೂ ಅವರ ಸಭೆಗಳನ್ನು ಸಮರ್ಥಿಸಿದೆ. ರಾಜತಾಂತ್ರಿಕ ಕಚೇರಿಯ ವಕ್ತಾರ ಝಾಂಗ್ ಸಿ ಅವರು ಕಠ್ಮಂಡು ಪೋಸ್ಟ್ ಜೊತೆಗೆ ಮಾತನಾಡುತ್ತಾ ನೇಪಾಳ ಕಮ್ಯೂನಿಸ್ಟ್ ಪಕ್ಷವು ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ಚೀನಾ ಬಯಸುವುದಿಲ್ಲ ಮತ್ತು ನಾಯಕರು ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಂಡು ಒಗ್ಗಟ್ಟಿನಿಂದ ಇರಬೇಕು ಎಂಬುದಾಗಿ ಚೀನಾ ಬಯಸುತ್ತದೆ ಎಂದು ಹೇಳಿದರು.
ರಾಜತಾಂತ್ರಿಕ ಕಚೇರಿಯು ನೇಪಾಳಿ ನಾಯಕರ ಜೊತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದೆ ಮತ್ತು ಯಾವುದೇ ಸೂಕ್ತ ಸಮಯದಲ್ಲಿ ಸಮಾನ ಹಿತಾಸಕ್ತಿಯ ವಿಷಯಗಳ ಬಗ್ಗೆ ಅಭಿಪ್ರಾಯ ವಿನಿಮಯಕ್ಕೆ ಸಿದ್ಧವಿದೆ ಎಂದು ಝಾಂಗ್ ಹೇಳಿರುವುದಾಗಿ ಕಠ್ಮಂಡು ಪೋಸ್ಟ್ ವರದಿ ಹೇಳಿದೆ.
ರಾಯಭಾರಿ ಮತ್ತು ರಾಜತಾಂತ್ರಿಕ ಕಚೇರಿಯು ಸರ್ಕಾg, ರಾಜಕೀಯ ಪಕ್ಷಗಳು, ಚಿಂತನಕೊಳಗಳು ಮತ್ತು ನೇಪಾಳದ ಜನಜೀವನದ ಎಲ್ಲ ರಂಗಗಳ ಜೊತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದೆ ಮತ್ತು ಸಾಮಾನ್ಯ ಕಾಳಜಿಯ ವಿಷಯಗಳ ಬಗ್ಗೆ ಯಾವಾಗಲೂ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತದೆ ಎಂದು ಝಾಂಗ್ ನುಡಿದರು.
ಏಪ್ರಿಲ್ ತಿಂಗಳ ಅನುಭವದ ಹಿನ್ನೆಲೆಯಲ್ಲಿ ಪ್ರಚಂಡ ಅವರು ಚೀನೀ ರಾಯಭಾರಿಯನ್ನು ಭೇಟಿ ಮಾಡಲು ನಿರಾಸಕ್ತಿ ಹೊಂದಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಹೂ ಯಾಂಕಿ ಅವರು ಎನ್ಸಿಪಿಯ ಮೂವರು ಪ್ರಮುಖ ಆಟಗಾರರಾದ ಪ್ರಚಂಡ, ಮಾಧವ ನೇಪಾಳ ಮತ್ತು ಒಲಿ ಅವರನ್ನು ರಾಜಿಗೆ ಒಪ್ಪಿಸಿದ್ದರು. ಈ ಹಸ್ತಕ್ಷೇಪವು ಪ್ರಧಾನಿ ಒಲಿ ಅವರಿಗೆ ನಿರಾಳತೆಯನ್ನು ಒದಗಿಸಿದ್ದಲ್ಲದೆ, ಭಾರತವು ನಿರ್ಮಿಸಿದ ೮೦ ಕಿಮೀ ರಸ್ತೆಯ ಬಗ್ಗೆ ವಿವಾದ ಎಬ್ಬಿಸಲು ಒಲಿ ಅವರಿಗೆ ಅವಕಾಶ ಮಾಡಿಕೊಟ್ಟಿತ್ತು. ಈ ಅವಕಾಶ ಬಳಸಿಕೊಂಡ ಒಲಿ ಅವರು ಪಕ್ಷ ಮತ್ತು ಸರ್ಕಾರದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಸಲುವಾಗಿ ಭಾರತ ವಿರೋಧಿ ನಕ್ಷೆಯನ್ನು ಪ್ರಕಟಿಸಿದ್ದರು.
ಬಂಡುಕೋರ ನಾಯಕರು ಒಲಿ ಅವರು ಎನ್ಸಿಪಿಯ ಸಹ ಅಧ್ಯಕ್ಷ ಸ್ಥಾನ ಅಥವಾ ಪ್ರಧಾನಿ ಪದ ಎರಡರಲ್ಲಿ ಯಾವುದಾದರೂ ಒಂದನ್ನು ಬಿಟ್ಟುಬಿಡಬೇಕು ಎಂಬ ಅಭಿಯಾನಕ್ಕೆ ಮರುಜೀವ ನೀಡಿದಾಗ, ಒಲಿ ಅವರು ತಮ್ಮ ಪದಚ್ಯುತಿ ಯತ್ನಕ್ಕೆ ಪರಿಷ್ಕೃತ ನಕ್ಷೆಯಿಂದ ಭ್ರಮನಿರಸನಗೊಂಡಿರುವ ನೆರೆಯ ದೈತ್ಯರಾಷ್ಟ್ರ ಭಾರತ ಕಾರಣ ಎಂದು ಆಪಾದಿಸಿದರು
ಪ್ರಚಂಡ ಅವರಿಗೆ ಹಿನ್ನಡೆ ಉಂಟು ಮಾಡುವ ಉದ್ದೇಶದ ಪ್ರಧಾನಿ ಒಲಿ ಆಪಾದನೆಯು ಅವರಿಗೇ ತಿರುಗುಬಾಣವಾಗಿ, ಇತರ ನಾಯಕರು ಈಗ ಒಲಿ ಅವರು ಪ್ರಧಾನಿ ಹುದ್ದೆಯನ್ನೇ ತ್ಯಜಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಒಲಿ ಅವರು ಗಾಯಗೊಂಡು ಮೂಲೆಯಲ್ಲಿ ಕೂರುವ ಸಾಧ್ಯತೆಗಳಿಲ್ಲ, ಬದಲಿಗೆ ಪಕ್ಷವನ್ನೇ ಒಡೆಯುವ ಮತ್ತು ಶೇರ್ ಬಹಾದುರ್ ದೇವುಬಾ ನೇತೃತ್ವದ ನೇಪಾಳಿ ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರ ರಚಿಸುವ ಹುನ್ನಾರ ರಚಿಸಿದ್ದಾರೆ ಎಂದು ನೇಪಾಳ ಮಾಧ್ಯಮ ವರದಿಗಳು ಹೇಳಿವೆ.
No comments:
Post a Comment