Monday, July 27, 2020

ಕೊರೋನಾ: ಐಶ್ವರ್ಯ ರೈ, ಆರಾಧ್ಯ ಆರಾಮ

ಕೊರೋನಾ: ಐಶ್ವರ್ಯ ರೈ, ಆರಾಧ್ಯ ಆರಾಮ

ಅಮಿತಾಭ್, ಅಭಿಷೇಕ್ ಗೆ ಇನ್ನೂ ಆಸ್ಪತ್ರೆವಾಸ

ಮುಂಬೈ: ಕೊರೋನಾ ವೈರಸ್ ಸೋಂಕಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಬಾಲಿವುಡ್ ಚಿತ್ರನಟ ಅಮಿತಾಭ್ ಬಚ್ಚನ್ ಕುಟುಂಬ ಸದಸ್ಯರ ಪೈಕಿ ಅಭಿಷೇಕ್ ಬಚ್ಚನ್ ಪತ್ನಿ, ಖ್ಯಾತ ನಟಿ ಐಶ್ವರ್ಯ ರೈ ಮತ್ತು ಪುತ್ರ ಆರಾಧ್ಯ ಸೋಂಕಿನಿಂದ ಗುಣಮುಖರಾಗಿದ್ದಾರೆ.

ತಮ್ಮ ಪತ್ನಿ ಐಶ್ವರ್ಯ ಮತ್ತು  ಪುತ್ರ ಆರಾಧ್ಯ ಅವರಿಗೆ ಕೊರೋನಾವೈರಸ್ ನೆಗೆಟಿವ್ ವರದಿ ಬಂದಿದ್ದು, ಇಬ್ಬರನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಅಭಿಷೇಕ್ ಬಚ್ಚನ್  2020 ಜುಲೈ 27ರ ಸೋಮವಾರ ಟ್ವೀಟ್ ಮಾಡಿದರು.

ತಾವು ಮತ್ತು ತಂದೆ ಅಮಿತಾಭ್ ಬಚ್ಚನ್ ಇನ್ನೂ ವೈದ್ಯರ ನಿಗಾದಲ್ಲಿ ಇರುವುದಾಗಿ ಅಭಿಷೇಕ್ ಬಚ್ಚನ್ ತಿಳಿಸಿದರು.

ನಿರಂತರ ಪ್ರಾರ್ಥನೆ ಮತ್ತು ಶುಭ ಹಾರೈಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ನಾವು ನಿಮಗೆ ಚಿರ ಋಣಿಗಳಾಗಿದ್ದೇವೆ. ಐಶ್ವರ್ಯ ಮತ್ತು ಆರಾಧ್ಯ ಅವರಿಗೆ ಕೊರೋನಾವೈರಸ್ ನೆಗೆಟಿವ್ ವರದಿ ಬಂದಿದ್ದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರು ಈಗ ಮನೆಯಲ್ಲಿದ್ದಾರೆ. ನನ್ನ ತಂದೆ ಮತ್ತು ನಾನು ಇನ್ನೂ ಆಸ್ಪತ್ರೆಯಲ್ಲಿ ಇದ್ದು ವೈದ್ಯಕೀಯ ಸಿಬ್ಬಂದಿಯ ನಿಗಾದಲ್ಲಿ ಇದ್ದೇವೆ ಎಂದು ಅಭಿಷೇಕ್ ಟ್ವೀಟಿನಲ್ಲಿ ಬರೆದರು.

ಅಮಿತಾಭ್ ಮತ್ತು ಅಭಿಷೇಕ್ ಬಚ್ಚನ್ ಅವರನ್ನು ಜುಲೈ ೧೧ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದರೆ, ಐಶ್ವರ್ಯ ಮತ್ತು ಆರಾಧ್ಯ ಅವರನ್ನು ಜುಲೈ ೧೨ರಂದು ಸಣ್ಣದಾಗಿ ಸೋಂಕಿನ ಲಕ್ಷಣಗಳು ಕಂಡು ಬಂದದ್ದನ್ನು ಅನುಸರಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಅಮಿತಾಭ್ ಬಚ್ಚನ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನಿಯಮಿತವಾಗಿ ಮಾಹಿತಿ ಪ್ರಕಟಿಸುತ್ತಿದ್ದಾರೆ. ಹಿತೈಷಿಗಳಿಗೆ ವಂದನೆಗಳನ್ನು ಸಲ್ಲಿಸುತ್ತಿತ್ತಿರುವ ಅವರು ಕಷ್ಠದ ಕಾಲದಲ್ಲಿ ನಿಮ್ಮ ಬೆಂಬಲ ನಮಗೆ ಲಭ್ಯವಾಗುತ್ತಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಅಭಿಷೇಕ್, ಐಶ್ವರ್ಯ ಮತ್ತು ಆರಾಧ್ಯ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡ  ಬಾಲಿವುಡ್ಡಿನ ಹಿರಿಯ ನಟ, ನಾವು ನಿಮ್ಮ ಪ್ರೀತಿಯನ್ನು ನೋಡುತ್ತಿದ್ದೇವೆ.. ನಾವು ನಿಮ್ಮ ಪ್ರಾರ್ಥನೆಯನ್ನು ಕೇಳುತ್ತಿದ್ದೇವೆ.. ನಾವು ಕೃತಜ್ಞತೆ ಮತ್ತು ಧನ್ಯವಾದಗಳೊಂದಿಗೆ ನಾವು ನಿಮಗೆ ಕೈ ಮುಗಿಯುತ್ತಿದೇವೆ ಎಂದು ಬರೆದಿದ್ದರು.

ಅಭಿಷೇಕ್ ಅವರು ಟ್ವಿಟ್ಟರಿನಲ್ಲಿ ತಮಗೆ ರೋಗ ಸೋಂಕಿದ್ದನ್ನು ಪ್ರಕಟಿಸುತ್ತಾ ಇಂದು ಬೆಳ್ಳಂಬೆಳಗ್ಗೆಯೇ ನನ್ನ ತಂದೆ ಮತ್ತು ನನಗೆ ಕೋವಿಡ್-೧೯ ಸೋಂಕು ತಗುಲಿರುವುದು ಪತ್ತೆಯಾಗಿದೆ. ನಮಗಿಬ್ಬರಿಗೂ ಸಣ್ಣ ಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದೇವೆ. ನಾವು ಎಲ್ಲ ಅಗತ್ಯ ಅಧಿಕಾರಿಗಳು, ಕುಟುಂಬ ಮತ್ತಿ ಸಿಬ್ಬಂದಿಗೂ ವಿಷಯ ತಿಳಿಸಿದ್ದು ಅವರೆಲ್ಲರೂ ಪರೀಕ್ಷೆ  ಮಾಡಿಸಿಕೊಳ್ಳುತ್ತಿದ್ದಾರೆ. ಎಲ್ಲರೂ ಶಾಂತರಾಗಿರಬೇಕು ಮತ್ತು ಗಾಭರಿಯಾಗಬಾರದು ಎಂದು ನಾನು ಮನವಿ ಮಾಡುತ್ತೇನೆ. ಧನ್ಯವಾದಗಳು ಎಂದು ಬರೆದಿದ್ದರು.

No comments:

Advertisement