ಪಾಕ್ ಉಲ್ಲಂಘನೆ ವಿರುದ್ಧ ಶೂನ್ಯ ಸಹನೆ ನೀತಿ: ಭಾರತ ಪುನರುಚ್ಚಾರ
ನವದೆಹಲಿ: ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಮತ್ತು ಗಡಿಯಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನಗಳ ವಿರುದ್ಧ ಭಾರತದ "ಶೂನ್ಯ ಸಹನೆ" ನೀತಿಯನ್ನು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಾಣೆ 2020 ಜುಲೈ 07ರ ಸೋಮವಾರ ಪುನರುಚ್ಚರಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆಯನ್ನು ತೀವ್ರಗೊಳಿಸಿದೆ ಮತ್ತು ಜೂನ್ ೩೦ ರವರೆಗೆ ೨,೫೪೨ ಉಲ್ಲಂಘನೆಗಳನ್ನು ದಾಖಲಿಸಿದೆ ಎಂದು ಭಾರತೀಯ ಸೇನೆ ತಿಳಿಸಿತು.
೨೦೦೩ರ ನವೆಂಬರಿನಲ್ಲಿ ಸಹಿಹಾಕಲಾ ಪರಸ್ಪರ ಶಾಂತಿ ಒಪ್ಪಂದಕ್ಕೆ ವಿರುದ್ಧವಾಗಿ ೩,೨೮೯ ಉಲ್ಲಂಘನೆಗಳು ಕಳೆದ ವರ್ಷ ದಾಖಲಾಗಿದ್ದವು. ಇದು ಕಳೆದ ೧೬ ವರ್ಷಗಳಲ್ಲಿ ಅತಿ ಹೆಚ್ಚು.
"ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಮತ್ತು ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನಗಳ ವಿರುದ್ಧ" ಶೂನ್ಯ ಸಹನೆ ನೀತಿಯನ್ನು ಸಿಡಿಎಸ್ (ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು) ಪುನರುಚ್ಚರಿಸಿದ್ದಾರೆ’ ಎಂದು ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಹೇಳಿಕೆಯಲ್ಲಿ ತಿಳಿಸಿದರು.
"ಸೇವೆಗಳ ಎಲ್ಲಾ ಏಜೆನ್ಸಿಗಳು ಮತ್ತು ಸರ್ಕಾರವು ಪಟ್ಟುಬಿಡದೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ನಮ್ಮ ವಿರೋಧಿಗಳಿಂದ ಉತ್ತೇಜಿಸಲ್ಪಟ್ಟ ಪರೋಕ್ಷ ಯುದ್ಧ ದುಷ್ಕೃತ್ಯದ ಸಂಚನ್ನು ಸೋಲಿಸಲು ಅದೇ ರೀತಿಯ ನೀತಿ ಮುಂದುವರೆಯುತ್ತದೆ" ಎಂದು ಅವರು ಹೇಳಿದರು.
ಜಮ್ಮು-ಪಠಾಣ್ಕೋಟ್ ಪ್ರದೇಶದಲ್ಲಿ ನಿಯೋಜಿಸಲಾಗಿರುವ ಸೇನೆಯ ಭದ್ರತಾ ಸನ್ನಿವೇಶ ಮತ್ತು ಸನ್ನದ್ಧತೆಯನ್ನು ಪರಿಶೀಲಿಸಲು ಜನರಲ್ ನರವಾಣೆ ಅವರು ಪಾಕಿಸ್ತಾನ-ಭಾರತ ನಡುವಣ ೧೯೮ ಕಿಲೋಮೀಟರ್ ಉದ್ದದ ಅಂತಾರಾಷ್ಟ್ರೀಯ ಗಡಿಯ ಮುಂಚೂಣಿ ಪ್ರದೇಶಗಳಿಗೆ ಭೇಟಿ ನೀಡಿದರು.
ಅವರು ತಮ್ಮ ಭೇಟಿಯ ಸಮಯದಲ್ಲಿ ಕ್ಷೇತ್ರ ರಚನೆ ಕಮಾಂಡರ್ಗಳು ಮತ್ತು ಸೈನಿಕರೊಂದಿಗೆ ಸಂವಹನ ನಡೆಸಿದರು. ಗುರ್ಜ್ ವಿಭಾಗದ ಮುಂಚೂಣಿ ಪ್ರದೇಶಗಳಿಗೆ ಅವರು ಭೇಟಿ ನೀಡಿದರು ಮತ್ತು ಜಿಒಸಿ ಗುರ್ಜ್ ವಿಭಾಗದ ಮೇಜರ್ ಜನರಲ್ ವೈ.ಪಿ.ಖಂಡೂರಿ ಜೊತೆಗೆ ಸಂವಹನ ನಡೆಸಿದರು.
"ಸೇನಾ ಮುಖ್ಯಸ್ಥರು ಪಶ್ಚಿಮ ಕಮಾಂಡಿನ ಎಲ್ಲಾ ಶ್ರೇಣಿಯ ಅಧಿಕಾರಿಗಳ ಜೊತೆಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು ಮತ್ತು ಸೈನಿಕರ ಸ್ಥೈರ್ಯವನ್ನು ಶ್ಲಾಘಿಸಿದರು. ನಮ್ಮ ದೇಶದ ಶತ್ರುಗಳ ಯಾವುದೇ ದುಷ್ಕೃತ್ಯವನ್ನು ತಡೆಯಲು ಮತ್ತು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಭಾರತೀಯ ಸೇನೆಯ ಸಾಮರ್ಥ್ಯಗಳಲ್ಲಿ ಅವರು ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದರು’ ಎಂದು ವಕ್ತಾರರು ಹೇಳಿದರು.
ಸೇನಾ ಮುಖ್ಯಸ್ಥ ಜಮ್ಮುವಿನ ತಾಂತ್ರಿಕ ವಿಮಾನ ನಿಲ್ದಾಣಕ್ಕೆ ಆಗಮಿಸಿ ನಂತರ ಟೈಗರ್ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿಂದ ಚಾಪರ್ಗೆ ತೆರಳಿದರು.
ಜಮ್ಮು ಪ್ರದೇಶದ ಅಂತಾರಾಷ್ಟ್ರೀಯ ಗಡಿಯನ್ನು (ಐಬಿ) ಭಾರತದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಮತ್ತು ಪಾಕಿಸ್ತಾನದ ಕಡೆಯಲ್ಲಿ ಪಾಕಿಸ್ತಾನಿ ರೇಂಜರ್ಸ್ ನಿರ್ವಹಿಸುತ್ತಿದ್ದಾರೆ.
ಜನರಲ್ ನರವಾಣೆ ಅವರು ಮುಂದಿನ ದಿನಗಳಲ್ಲಿ ಪಠಾಣ್ಕೋಟ್ಗೆ ಭೇಟಿ ನೀಡಲಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
"ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಯಾವುದೇ ಉನ್ನತ ಚಟುವಟಿಕೆಯಿಲ್ಲದಿದ್ದರೂ, ಸೇನಾ ಮುಖ್ಯಸ್ಥರು ಚಾಲ್ತಿಯಲ್ಲಿರುವ ಭದ್ರತಾ ಸನ್ನಿವೇಶವನ್ನು ನೋಡುವ ಸಲುವಾಗಿ ಆಗಮಿಸಿದ್ದರು’ ಎಂದು ಅಧಿಕಾರಿ ಹೇಳಿದರು.
No comments:
Post a Comment