ಸೋನಿಯಾಗೆ ನೋವಾಗಿದ್ದರೆ ವಿಷಾದಿಸುವೆ: ಮೊಯಿಲಿ
ನವದೆಹಲಿ: "ನಾವು ಅವರ (ಸೋನಿಯಾ ಗಾಂಧಿಯವರ) ಭಾವನೆಗಳನ್ನು ನೋಯಿಸಿದ್ದರೆ, ಅದಕ್ಕಾಗಿ ನಾವು ವಿಷಾದಿಸುತ್ತೇವೆ’ ಎಂದು ತುರ್ತು ಸಾಂಸ್ಥಿಕ ಸುಧಾರಣೆಗಳನ್ನು ಕೋರಿದ ೨೩ ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾದ ಎಂ ವೀರಪ್ಪ ಮೊಯಿಲಿ ಅವರು 2020 ಆಗಸ್ಟ್ 25ರ ಮಂಗಳವಾರ ಹೇಳಿದರು.
’ನಾವು ತಮ್ಮ ನಾಯಕತ್ವವನ್ನು ಪ್ರಶ್ನಿಸಿಲ್ಲ’ ಎಂಬುದಾಗಿ ಪ್ರತಿಪಾದಿಸಿದ ಮಾಜಿ ಕೇಂದ್ರ ಸಚಿವ, ಇದೇ ವೇಳೆಯಲ್ಲಿ ಹಂಗಾಮೀ ಅಧ್ಯಕ್ಷರನ್ನು ಉದ್ದೇಶಿಸಿ ಬರೆದ ಪತ್ರಕ್ಕೆ ಸಹಿ ಹಾಕಿರುವುದನ್ನು ಸಮರ್ಥಿಸಿದ್ದಾರೆ. ’ಪಕ್ಷವನ್ನು ಪುನಶ್ಚೇತನಗೊಳಿಸುವ ಮತ್ತು ಪುನರ್ರಚಿಸುವ ಅಗತ್ಯವಿರುವುದರಿಂದ ಈ ಪತ್ರ ಬರೆಯಲಾಗಿದೆ’ ಎಂದು ಮೊಯಿಲಿ ಒತ್ತಿ ಹೇಳಿದ್ದಾರೆ.
ಪತ್ರವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದು ಸರಿಯಲ್ಲ ಎಂಬುದಾಗಿ ಹೇಳಿದ ಮೊಯಿಲಿ, ಈ ಕೃತ್ಯದ ಹಿಂದಿದ್ದವರು ಯಾರು ಎಂಬುದನ್ನು ಕಂಡುಹಿಡಿಯಲು ಪಕ್ಷದ ಆಂತರಿಕ ವಿಚಾರಣೆಗೆ ಆಗ್ರಹಿಸಿದರು ಮತ್ತು ಅವರಿಗೆ ಶಿಕ್ಷೆಯಾಗಬೇಕೆಂದು ಬಯಸಿದರು.
ಪತ್ರಕ್ಕೆ ಸಹಿ ಹಾಕಿದ ೨೩ ನಾಯಕರಲ್ಲಿ ಯಾರಿಗೂ ಕಾಂಗ್ರೆಸ್ ತೊರೆಯುವ ಉದ್ದೇಶವಿಲ್ಲ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿಯೂ ಆದ ಮೊಯಿಲಿ ಪ್ರತಿಪಾದಿಸಿದರು.
ಪತ್ರ ಪ್ರಕರಣದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಕೈಗಳನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬಲಪಡಿಸಲು ಕಾಂಗ್ರೆಸ್ ಕಾರ್‍ಯಕಾರಿ ಸಮಿತಿಯು (ಸಿಡಬ್ಲ್ಯೂಸಿ) ಸರ್ವಾನುಮತದಿಂದ ತೀರ್ಮಾನ ಕೈಗೊಂಡ ಮರುದಿನ ಹೇಳಿಕೆ ನೀಡಿದ ಮೊಯಿಲಿ ’ನಾವು ಸೋನಿಯಾಜಿ ಅವರ ನಾಯಕತ್ವವನ್ನು ಎಂದಿಗೂ ಪ್ರಶ್ನಿಸಿಲ್ಲ’ ಎಂದು ಸ್ಪಷ್ಟ ಪಡಿಸಿದರು.
ಪಕ್ಷ ಮತ್ತು ಅದರ ನಾಯಕತ್ವವನ್ನು ದುರ್ಬಲಗೊಳಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಪಕ್ಷದ ಉನ್ನತ ನೀತಿ ನಿರ್ಧಾರ ಸಮಿತಿಯಾದ ಕಾಂಗ್ರೆಸ್ ಕಾರ್‍ಯಕಾರಿ ಸಮಿತಿ ಹೇಳಿದೆ.
"ಸೋನಿಯಾಜಿ ಅವರು ಪಕ್ಷಕ್ಕೆ ಮಾತೆಯಂತೆ ಇದ್ದಾರೆ. ನಾವು ಈಗಲೂ ಅವರನ್ನು ಗೌರವಿಸುತ್ತೇವೆ. ಅವರ ಭಾವನೆಗಳನ್ನು ನೋಯಿಸುವ ಯಾವುದೇ ಉದ್ದೇಶವಿಲ್ಲ. ನಾವು ಅವರ ಭಾವನೆಗಳನ್ನು ನೋಯಿಸಿದ್ದರೆ, ಅದಕ್ಕಾಗಿ ನಾವು ವಿಷಾದಿಸುತ್ತೇವೆ’ ಎಂದು ಮೊಯಿಲಿ ಹೇಳಿದರು.
ಕಾಂಗ್ರೆಸ್ ಕಾರ್‍ಯಕಾರಿ ಸಮಿತಿ ಸಭೆಯಲ್ಲಿ ತನ್ನ ಸಮಾರೋಪ ಹೇಳಿಕೆಯಲ್ಲಿ, ಸೋನಿಯಾಗಾಂಧಿಯವರು ಹಂಗಾಮೀ ಅಧ್ಯಕ್ಷರಾಗಿ ಮುಂದುವರಿಯಲು ಒಪ್ಪಿಕೊಂಡರು ಆದರೆ ಪಕ್ಷದ ಹೊಸ ಮುಖ್ಯಸ್ಥರನ್ನು ಶೀಘ್ರದಲ್ಲೇ ಆಯ್ಕೆ ಮಾಡಬೇಕಾಗಿರುವುದರಿಂದ ಈ ವ್ಯವಸ್ಥೆಯು "ಮುಕ್ತ ಅಂತ್ಯ’ವಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದರು. ತಮ್ಮ ಸಹೋದ್ಯೋಗಿಗಳಲ್ಲಿ ಯಾರೇ ನೀಡಿದ ಹೇಳಿಕೆಗಳು ಎಷ್ಟೇ ನೋವನ್ನು ಉಂಟು ಮಾಡಿದ್ದರೂ, ತಮಗೆ ಅವರ ಬಗ್ಗೆ ಯಾವುದೇ ರೀತಿಯ ಕೆಟ್ಟ ಅಭಿಪ್ರಾಯವಿಲ್ಲ ಎಂದೂ ಸೋನಿಯಾ ಹೇಳಿದ್ದರು.
’ಪಕ್ಷವು ಸಂಕಷ್ಟದ ಮಾರ್ಗದಲ್ಲಿ ಕ್ರಮಿಸುತ್ತಿದೆ. ನಮ್ಮ ಬೆವರು, ಸಮರ್ಪಣೆ ಮತ್ತು ತ್ಯಾಗದಿಂದ ನಾವು ಪೋಷಿಸಿದ ಕಾಂಗ್ರೆಸ್ ಪಕ್ಷವನ್ನು ಕಳೆದುಕೊಳ್ಳಲು ನಮಗೆ ಸಾಧ್ಯವಿಲ್ಲ. ಸೋನಿಯಾಜಿ ಮಾಡಿದ ತ್ಯಾಗವನ್ನು ನಾವು ಗುರುತಿಸುತ್ತೇವೆ, ಅವರಿಗೆ ಇಷ್ಟವಿರದಿದ್ದರೂ (ಮೊದಲಿಗೆ ಹುದ್ದೆಯನ್ನು ವಹಿಸಿಕೊಳ್ಳಲು), ಅದನ್ನು ವಹಿಸಿಕೊಳ್ಳುವ ಮೂಲಕ ಅವರು ಕಾಂಗ್ರೆಸ್ ಪಕ್ಷಕ್ಕೆ ಜೀವ ನೀಡಿದರು. ಯಾರೂ ಸೋನಿಯಾಜಿಗೆ ಕೃತಜ್ಞರಾಗಿರದೇ ಇರಲು ಸಾಧ್ಯವಿಲ್ಲ. ನಾವು ಇನ್ನೂ ಅರನ್ನು ನಮ್ಮ ತಾಯಿಯಂತೆ ನೋಡಿಕೊಳ್ಳುತ್ತೇವೆ ಮತ್ತು ಪಕ್ಷ ಹಾಗೂ ರಾಷ್ಟ್ರದ ಹಣೆಬರಹ ಬದಲಾವಣೆಗೆ ಮಾರ್ಗದರ್ಶನ ಪಡೆಯುತ್ತೇವೆ’ ಎಂದು ಮೊಯಿಲಿ ಹೇಳಿದರು.
"ಆ ಗೌರವವು ಮುಂದುವರಿಯುತ್ತದೆ. ಆದರೆ ಅದೇ ಸಮಯದಲ್ಲಿ, ಪಕ್ಷವನ್ನು ಪುನರುಜ್ಜೀವನ ಗೊಳಿಸಬೇಕಾಗಿದೆ. ಪತ್ರದಲ್ಲಿನ ನಮ್ಮ ಮುಖ್ಯ ವಿಷಯವೆಂದರೆ ಕಾಂಗ್ರೆಸ್ ಅನ್ನು ಎಲ್ಲಾ ಹಂತಗಳಲ್ಲಿಯೂ ಪುನರುಜ್ಜೀವನಗೊಳಿಸುವುದು. ಇದರರ್ಥ ಅವರು ಅಧ್ಯಕ್ಷರಾಗಬಾರದು ಎಂದಲ್ಲ. ಮಧ್ಯಂತರ ಅಧ್ಯಕ್ಷರಿಗೆ ಮತ್ತೆ ಸ್ವಾಗತವಿದೆ, ನಾವೆಲ್ಲರೂ ಅವರನ್ನು ಪ್ರೀತಿಸುತ್ತೇವೆ’ ಎಂದು ಮೊಯಿಲಿ ನುಡಿದರು.
ಪಕ್ಷವನ್ನು ಪುನಶ್ಚೇತನಗೊಳಿಸಲು ಹೃತ್ಪೂರ್ವಕ ಪ್ರಯತ್ನಗಳನ್ನು ಮಾಡಬೇಕು ಮತ್ತು ಸಂಘಟನೆಯನ್ನು ಸರಿಯಾಗಿ ಪುನರ್ರಚಿಸಬೇಕಾಗಿದೆ ಎಂದು ಅವರು ಹೇಳಿದರು.
ನಾಯಕರು ಬರೆದ ಪತ್ರವನ್ನು ಕೆಲವು ಕುಚೇಷ್ಟಿಗಳು ಸೋರಿಕೆ ಮಾಡಿದ್ದಾರೆ. ಇದು ಎಲ್ಲಿಂದ ಬಿಡುಗಡೆಯಾಯಿತು ಎಂಬುದು ನನಗೆ ತಿಳಿದಿಲ್ಲ. ಆದರೆ ಇದು ಸರಿಯಲ್ಲ. ನಾವು ಇದನ್ನು ಒಪ್ಪುವುದಿಲ್ಲ, ನಮ್ಮಲ್ಲಿ ಯಾರೂ ಅದನ್ನು ಒಪ್ಪುವುದಿಲ್ಲ’ ಎಂದು ಮೊಯಿಲಿ ಹೇಳಿದರು.
’ಸಹಿ ಮಾಡಿದವರು ಯಾರೂ ಅದನ್ನು ಸೋರಿಕೆ ಮಾಡಿಲ್ಲ. ನೀಡಿದ ನಂತರ ಎಲ್ಲೋ ಸೋರಿಕೆ ಸಂಭವಿಸಿದೆ. ಅದರ ವಿವರಕ್ಕೆ ಹೋಗಲು ನಾನು ಬಯಸುವುದಿಲ್ಲ. ಪಕ್ಷವು ಈ ಬಗ್ಗೆ ಆಂತರಿಕ ವಿಚಾರಣೆಯನ್ನು ಮಾಡಬೇಕಾಗುತ್ತದೆ ಮತ್ತು ಅದನ್ನು ಸೋರಿಕೆ ಮಾಡಿದವರಿಗೆ ಶಿಕ್ಷೆ ನೀಡಬೇಕಾಗುತ್ತದೆ’ ಎಂದು ಮೊಯಿಲಿ ಹೇಳಿದರು.
ಸಿಡಬ್ಲ್ಯುಸಿ ಸಭೆಯ ನಂತರ ಸೋಮವಾರ ಸಂಜೆ ದೆಹಲಿಯ ತಮ್ಮ ಹಿರಿಯ ಸಹೋದ್ಯೋಗಿ ಗುಲಾಮ್ ನಬಿ ಆಜಾದ್ ಅವರ ಮನೆಯಲ್ಲಿ ಕಪಿಲ್ ಸಿಬಲ್ ಮತ್ತು ಶಶಿ ತರೂರ್ ಸೇರಿದಂತೆ ಕೆಲವು ಹಿರಿಯ ಕಾಂಗ್ರೆಸ್ ನಾಯPರು ಸಭೆ ನಡೆಸಿದ ಕುರಿತ ಪ್ರಶ್ನೆಗೆ ’ರಾಷ್ಟ್ರ ರಾಜಧಾನಿಯಲ್ಲಿ ಇಲ್ಲದ ಕಾರಣ ಈ ಬಗ್ಗೆ ನನಗೆ ತಿಳಿದಿಲ್ಲ’ ಎಂದು ಮೊಯಿಲಿ ಹೇಳಿದರು.
"ನಮ್ಮಲ್ಲಿ ಯಾರೊಬ್ಬರೂ ಪಕ್ಷವನ್ನು ಖಂಡಿಸಲು ಅಥವಾ ಪಕ್ಷದಿಂದ ದೂರವಿರಲು ಯೋಚಿಸುವ ಪ್ರಶ್ನೆಯೇ ಇಲ್ಲ. ಬಿಜೆಪಿಯೊಂದಿಗೆ ಕೈಜೋಡಿಸುವ ಪ್ರಶ್ನೆ ಎಲ್ಲೂ ಉದ್ಭವಿಸುವುದಿಲ್ಲ. ನಾವು ಬಿಜೆಪಿಯನ್ನು ದ್ವೇಷಿಸುತ್ತೇವೆ, (ಪ್ರಧಾನಿ ನರೇಂದ್ರ ಮೋದಿ ಅವರ) ನೀತಿಗಳನ್ನು ದ್ವೇಷಿಸುತ್ತಲೇ ಇದ್ದೇವೆ’ ಎಂದು ಅವರು ನುಡಿದರು.
ಯಾರನ್ನೂ ಹೆಸರಿಸದೆಯೇ, ಕಾಂಗ್ರೆಸ್ಸಿನ "ದ್ರೋಹಗಾರರ" ಮೇಲೆ ದಾಳಿ ಮೊಯಿಲಿ ದಾಳಿ ಮಾಡಿದರು. "ಕಾಂಗೆಸ್ಸಿಗೆ ಅನೇಕ ಬಾರಿ ದ್ರೋಹ ಮಾಡಿದ ಅನೇಕ ಜನರಿದ್ದಾರೆ, ಅವರು ನಮಗಿಂತ ಹೆಚ್ಚು ನಿಷ್ಠಾವಂತರು ಎಂದು ಭಾವಿಸಿಕೊಳ್ಳುತ್ತಾರೆ’ ಎಂದು ಅವರು ಟೀಕಿಸಿದರು.
No comments:
Post a Comment