ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸ್ಥಿತಿ ಗಂಭೀರ
ಚೆನ್ನೈ: ಕೊರೋನಾವೈರಸ್ ಸೋಂಕಿನ ಬಾಧೆಗೆ ಒಳಗಾಗಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದ ವರದಿಗಳು 2020 ಆಗಸ್ಟ್ 14ರ ಶುಕ್ರವಾರ ತಿಳಿಸಿವೆ.
ಬಾಲಸುಬ್ರಹ್ಮಣ್ಯಂ ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದ್ದು, ಜೀವ ರಕ್ಷಕ ಉಪಕರಣಗಳ ನೆರವಿನಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ಹೇಳಿವೆ.
ತಜ್ಞ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಚೆನ್ನೈ ಎಂಜಿಎಂ ಆಸ್ಪತ್ರೆಯು ತನ್ನ ಬುಲೆಟಿನ್ನಲ್ಲಿ
ತಿಳಿಸಿದೆ.
’ಆಗಸ್ಟ್ ೧೩ರ ತಡರಾತ್ರಿ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ತಜ್ಞ ವೈದ್ಯರ ತಂಡದ ಸಲಹೆ ಮೇರೆಗೆ ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿದೆ. ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ’ ಎಂದು ಎಂಜಿಎಂ ಬುಲೆಟಿನ್ ಹೇಳಿದೆ.
ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಗುರುವಾರ ಆಸ್ಪತ್ರೆ ತಿಳಿಸಿತ್ತು. ಅವರಿಗೆ ಚಿಕಿತ್ಸೆ ನೀಡುತ್ತಿರುವ ತಜ್ಞ ವೈದ್ಯರ ಸಲಹೆ ಮೇರೆಗೆ ಐಸಿಯುಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಸೇವೆಯ ಸಹಾಯಕ ನಿರ್ದೇಶಕಿ ಡಾ.ಅನುರಾಧ ಭಾಸ್ಕರನ್ ತಿಳಿಸಿದರು.
ಕಳೆದ ಆಗಸ್ಟ್ ೫ರಂದು ಶೀತ ಮತ್ತು ಜ್ವರ ಕಾಣಿಸಿಕೊಂಡು ಉಸಿರಾಟಕ್ಕೆ ತೊಂದರೆಯಾಗಿದ್ದರಿಂದ ಬಾಲಸುಬ್ರಹ್ಮಣ್ಯಂ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆಯಿಂದ ಅವರಿಗೆ ಕೋವಿಡ್-೧೯ ಲಕ್ಷಣಗಳಿರುವುದು ದೃಢಪಟ್ಟಿತ್ತು. ಮನೆಯಲ್ಲಿಯೇ ಕ್ವಾರಂಟೈನಿನಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದರು. ಆದರೆ, ಕುಟುಂಬದ ಸದಸ್ಯರ ಸಲಹೆ ಮೇರೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂಬಂಧ ಅವರು ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದರು.
‘ಕಳೆದ ಎರಡು- ಮೂರು ದಿನಗಳಿಂದ ನನ್ನ ಆರೋಗ್ಯ ಸರಿ ಇರಲಿಲ್ಲ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಶೀತ ಮತ್ತು ಜ್ವರ ಕೂಡ ಕಾಣಿಸಿಕೊಂಡಿತು. ಇದರ ಬಗ್ಗೆ ನಾನು ನಿರ್ಲಕ್ಷ್ಯ ವಹಿಸದೆ ವೈದ್ಯರ ಬಳಿಗೆ ಚಿಕಿತ್ಸೆ ಪಡೆಯಲು ಮುಂದಾದೆ. ಪರೀಕ್ಷೆಯ ಬಳಿಕ ಕೊರೊನಾ ಸೋಂಕು ಸಣ್ಣ ಪ್ರಮಾಣದಲ್ಲಿದೆ. ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಿರಿ ಎಂದು ವೈದ್ಯರು ಸೂಚಿಸಿದರು. ಇದಕ್ಕೆ ನನ್ನ ಕುಟುಂಬದ ಸದಸ್ಯರು ಒಪ್ಪಲಿಲ್ಲ. ಹಾಗಾಗಿ, ಆಸ್ಪತ್ರೆಗೆ ದಾಖಲಾದೆ. ನನ್ನ ಆರೋಗ್ಯದ ಬಗ್ಗೆ ಯಾರೊಬ್ಬರು ಚಿಂತಿಸಬೇಕಿಲ್ಲ. ನನ್ನ ಆರೋಗ್ಯ ವಿಚಾರಿಸಲು ಮೊಬೈಲ್ ಕರೆ ಮಾಡಬೇಡಿ. ಕರೆ ಸ್ವೀಕರಿಸುವ ಸ್ಥಿತಿಯಲ್ಲಿ ನಾನಿಲ್ಲ. ಶೀತದ ಹೊರತಾಗಿ ನಾನೀಗ ಚೆನ್ನಾಗಿದ್ದೇನೆ. ಜ್ವರವೂ ಕಡಿಮೆಯಾಗಿದೆ. ಇನ್ನೆರಡು ದಿನಗಳಲ್ಲಿ ಸಂಪೂರ್ಣ ಗುಣಮುಖನಾಗುತ್ತೇನೆ’ ಎಂದು ಅವರು ಈ ವಿಡಿಯೊದಲ್ಲಿ ತಿಳಿಸಿದ್ದರು.
ಕಳೆದ ತಿಂಗಳು ಬಾಲಸುಬ್ರಹ್ಮಣ್ಯಂ ಅವರು ಕೋವಿಡ್ ವಿರುದ್ಧ ಜಾಗೃತಿ ಮೂಡಿಸಲು ಸಾಹಿತಿ ವೈರಮುತ್ತು ರಚಿಸಿದ್ದ ಹಾಡಿಗೆ ಧ್ವನಿಯಾಗಿದ್ದರು. ಈ ಹಾಡು ಸಾರ್ವಜನಿಕರಲ್ಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ನೆರವಾಗಿತ್ತು.
No comments:
Post a Comment