ಕೇರಳ ವಿಮಾನ ಅಪಘಾತ: ಸಾವಿನ ಸಂಖ್ಯೆ ೧೮ಕ್ಕೆ ಏರಿಕೆ
ಕೋಯಿಕ್ಕೋಡ್ (ಕೇರಳ)/: ಕೇರಳದ ಕೋಯಿಕ್ಕೋಡ್ ಸಮೀಪದ ಕಾರಿಪುರ ವಿಮಾನ ನಿಲ್ದಾಣದಲ್ಲಿ 2020 ಆಗಸ್ಟ್ 07ರ ಶುಕ್ರವಾರ ರಾತ್ರಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಗಾಯಗೊಂಡಿದ್ದ ಒಬ್ಬ ಪ್ರಯಾಣಿಕ ಸಾವನ್ನಪ್ಪುವುದರೊಂದಿಗೆ ದುರಂತದಲ್ಲಿ ಮೃತರಾದವರ ಸಂಖ್ಯೆ 2020
ಆಗಸ್ಟ್ 08ರ ಶನಿವಾರ ೧೮ಕ್ಕೆ ಏರಿತು.
ಈ ಮಧ್ಯೆ, ಅಪಘಾತಕ್ಕೀಡಾದ ವಿಮಾನದ ಅವಶೇಷಗಳ ಜಾಗದಲ್ಲಿ ಡಿಜಿಟಲ್ ಫ್ಲೈಟ್ ಡಾಟಾ ರೆಕಾರ್ಡರ್ ಮತ್ತು ಕಾಕ್ಪಿಟ್ ವಾಯ್ಸ್ ರೆಕಾರ್ಡರ್‌ನ್ನು ನಾಗರಿಕ ವಿಮಾನಯಾನ ಸಚಿವಾಲಯದ ತನಿಖಾ ಸಂಸ್ಥೆ, ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ವಶಪಡಿಸಿಕೊಂಡಿದೆ. ವಿಮಾನದ ಕಪ್ಪು ಪೆಟ್ಟಿಗೆಯ ಭಾಗಗಳಾದ ಇವುಗಳು ದುರಂತದ ಕಾರಣ ತಿಳಿಯಲು ತನಿಖಾಧಿಕಾರಿಗಳಿಗೆ ಸಹಾಯ ಮಾಡುತ್ತದೆ. ಹೆಚ್ಚಿನ ತನಿಖೆಗಾಗಿ ಉಪಕರಣಗಳನ್ನು ದೆಹಲಿಗೆ ತರಲಾಗುವುದು ಎಂದು ವರದಿಗಳು ಹೇಳಿದವು.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ಐಎಕ್ಸ್ ೧೩೪೪ ಕೇರಳದ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ರನ್ ವೇಯಿಂದ ಆಚೆಗೆ ಕಣಿವೆಗೆ ಜಾರಿ ಬಿದ್ದು ಎರಡು ಹೋಳುಗಳಾಗಿ ಒಡೆದ ಪರಿಣಾಮವಾಗಿ ವಿಮಾನದ ಪೈಲಟ್ ಮತ್ತು ಸಹ ಪೈಲಟ್ ಸೇರಿದಂತೆ ಕನಿಷ್ಠ ೧೮ ಜನರು ಸಾವನ್ನಪ್ಪಿ, ೨೩ ಮಂದಿ ಗಾಯಗೊಂಡಿದ್ದಾರೆ, ವಿಮಾನವು ಸರ್ಕಾರದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಕೋವಿಡ್ -೧೯ ಸಾಂಕ್ರಾಮಿಕ ರೋಗದ ಮಧ್ಯೆ ದುಬೈಯಲ್ಲಿ ಸಿಕ್ಕಿಬಿದ್ದಿದ್ದ ಭಾರತೀಯರನ್ನು ವಾಪಸ್ ಕರೆತಂದಿತ್ತು.
ಆಗಸ್ಟ್ ೦೭ರ ಶುಕ್ರವಾರ ರಾತ್ರಿ ೭: ೪೧ ರ ಸುಮಾರಿಗೆ ದುಬೈಯಿಂದ ೧೯೦ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿಯೊಂದಿಗೆ ಬಂದ ಏರ್ ಇಂಡಿಯಾ ವಿಮಾನ ಕೋಯಿಕ್ಕೋಡಿನಲ್ಲಿ ಇಳಿಯುತ್ತಿದ್ದಾಗ ಈ ದುರಂತ ಸಂಭವಿಸಿತ್ತು.
ಗಾಯಗೊಂಡಿದ್ದ ಮತ್ತೊಬ್ಬ ಪ್ರಯಾಣಿಕ ಮೃತನಾಗಿರುವುದಾಗಿ ಮಲಪ್ಪುರಂ ಜಿಲ್ಲಾಧಿಕಾರಿ ಕೆ ಗೋಪಾಲಕೃಷ್ಣನ್ ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಒಬ್ಬರನ್ನು ಹೊರತುಪಡಿಸಿ, ಅಪಘಾತದಲ್ಲಿ ಮೃತಪಟ್ಟ ಎಲ್ಲರನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು.
ಭಾರೀ ಮಳೆಯ ಮಧ್ಯೆ, ಟೇಬಲ್ ಟಾಪ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ವಿಮಾ ರನ್‌ವೇಯಿಂದ ಜಾರಿ ೩೫ ಅಡಿ ಕೆಳಗೆ ಕಣಿವೆಗೆ ಬಿದ್ದಿತ್ತು. ದುರಂತದಲ್ಲಿ ೧೭ ಮಂದಿ ಮೃತರಾಗಿ ೨೩ ಮಂದಿ ಗಾಯಗೊಂಡಿದ್ದರು.
ವಿಮಾನದುರಂತದಲ್ಲಿ ಅಸು ನೀಗಿದವರಲ್ಲಿ ಪೈಲಟ್-ಇನ್-ಕಮಾಂಡ್ ಕ್ಯಾಪ್ಟನ್ ದೀಪಕ್ ಸಾಥೆ ಮತ್ತು ಅವರ ಸಹ ಪೈಲಟ್ ಅಖಿಲೇಶ್ ಕುಮಾರ್ ಸೇರಿದ್ದಾರೆ.
ಕೇಂದ್ರ ಸಚಿವ ವಿ.ಮುರಲೀಧರನ್ ದೆಹಲಿಯಿಂದ ನಗರವನ್ನು ತಲುಪಿದ್ದು, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಮುಖ್ಯ ಅಧಿಕಾರಿ, ಕಾರ್ಯಾಚರಣೆಯ ಮುಖ್ಯಸ್ಥರು ಮತ್ತು ಎಐಎಕ್ಸ್‌ನ ವಿಮಾನ ಸುರಕ್ಷತೆಯ ಮುಖ್ಯಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ.
ಎಲ್ಲ ಪ್ರಯಾಣಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಮಾನವೀಯ ನೆರವು ಒದಗಿಸಲು ದೆಹಲಿ ಮತ್ತು ಮುಂಬಯಿಯಿಂದ ವಿಶೇಷ ಪರಿಹಾರ ವಿಮಾನಗಳನ್ನು ವ್ಯವಸ್ಥೆ ಮಾಡಲಾಗಿದೆ. ಪರಿಣಾಮಕಾರಿ ತುರ್ತು ನೆರವಿಗಾಗಿ ನಿರ್ದೇಶಕರು ಕೋಯಿಕ್ಕೋಡ್, ಮುಂಬೈ ಮತ್ತು ದೆಹಲಿಯ ಎಲ್ಲ ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ.
ಅಪಘಾತದ ಬಗ್ಗೆ ತನಿಖೆ ನಡೆಸಲು ಎಎಐಬಿ (ವಿಮಾನ ಅಪಘಾತ ತನಿಖಾ ಬ್ಯೂರೋ), ಡಿಜಿಸಿಎ ಮತ್ತು ವಿಮಾನ ಸುರಕ್ಷತಾ ವಿಭಾಗ ನಗರವನ್ನು ತಲುಪಿದೆ ಎಂದು ಹೇಳಿಕೆ ತಿಳಿಸಿದೆ.
ಘರ್ಷಣೆ ಪರೀಕ್ಷೆ ನಡೆದಿಲ್ಲ
ಈ ಮಧ್ಯೆ, ಭಾರೀ ಮಳೆಯಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಡುವ ಮುನ್ನ ಕೇರಳ ವಿಮಾನ ನಿಲ್ದಾಣದಲ್ಲಿ ರನ್‌ವೇ ಘರ್ಷಣೆಯನ್ನು ಪರೀಕ್ಷಿಸಲಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಚೆನ್ನೈನಿಂದ ಘರ್ಷಣೆ ಪರೀಕ್ಷಿಸುವ ವಾಹನವನ್ನು ತರಲಾಗಿತ್ತು. ಆದರೆ ಅಪಘಾತಕ್ಕೆ ಮುನ್ನ ಅದರ ಮೂಲಕ ಘರ್ಷಣೆ ಪರೀಕ್ಷೆ ಮಾಡಿರಲಿಲ್ಲ. ಘರ್ಷಣೆ ಪರೀಕ್ಷಿಸುವ ವಾಹನವು ವಿಮಾನ ನಿಲ್ದಾಣಗಳ ರನ್‌ವೇಗಳು, ಟ್ಯಾಕ್ಸಿ ಮಾರ್ಗಗಳು ಮತ್ತು ಹೆದ್ದಾರಿಗಳಲ್ಲಿ ಘರ್ಷಣೆಯನ್ನು ಅಳೆಯುತ್ತದೆ. ಯಾಂತ್ರಿಕವಾಗಿ ಬೇಸ್ ಕಾರಿನ ಹಿಂದಿನ ಮುಖ್ಯ ಚಕ್ರಗಳಲ್ಲಿ ಒಂದಕ್ಕೆ ಅಳವಡಿಸಲಾದ ಅಳತೆ ಚಕ್ರದ ಮೂಲಕ ಈ ವ್ಯವಸ್ಥೆಯು ಕೆಲಸ ಮಾಡುತ್ತದೆ.
ಈ ಸಾಧನವು ಟೇಬಲ್ ಟಾಪ್ ವಿಮಾನ ನಿಲ್ದಾಣಗಳಲ್ಲಿ ಅತ್ಯಂತ ನಿರ್ಣಾಯಕವೆಂದು ಪರಿಗಣಿಸಲಾಗುತ್ತದೆ, ವಿಶೇಷವಾಗಿ ಕಲ್ಲಿಕೋಟೆ ಮತ್ತು ಮಂಗಳೂರಿನಂತಹ ಟೇಬಲ್ ಟಾಪ್ ವಿಮಾನ ನಿಲ್ದಾಣದ ರನ್ ವೇಗಳಲ್ಲಿ ಈ ಸಾಧನವನ್ನು ಬಳಸಲಾಗುತ್ತದೆ.
೧೦೦೦ ಮೀಟರ್ ದೂರದಲ್ಲೇ ವಿಮಾನ ಭೂ ಸ್ಪರ್ಶ
ದುಬೈಯಿಂದ ಕೊಯಿಕ್ಕೋಡಿಗೆ ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಪಘಾತಕ್ಕೀಡಾಗುವ ಮುನ್ನ ರನ್ ವೇಯಿಂದ ಸಾವಿರ ಮೀಟರ್ ದೂರದಲ್ಲಿರುವ ‘ಟಾಕ್ಸಿವೇ’ ಬಳಿಯೇ ಭೂ ಸ್ಪರ್ಶ ಮಾಡಿದೆ ಎಂದು ವರದಿಗಳು ಹೇಳಿವೆ.
’ಕೊಯಿಕ್ಕೋಡಿನಲ್ಲಿ ವಿಮಾನವನ್ನು ಭೂ ಸ್ಪರ್ಶ ಮಾಡಿಸುವಾಗ ಭಾರಿ ಮಳೆಯ ಕಾರಣದಿಂದಾಗಿ ಮೊದಲ ಪ್ರಯತ್ನದಲ್ಲಿ ಪೈಲಟ್ಗೆ ರನ್ ವೇ ಸರಿಯಾಗಿ ಕಂಡಿಲ್ಲ. ಏರ್ ಟ್ರಾಫಿಕ್ ಕಂಟ್ರೋಲರ್ ಮಾಹಿತಿ ಪ್ರಕಾರ, ಪೈಲಟ್ ಬದಲಿ gನ್ವೇ ಕೋರಿದ್ದರು. ಆದರೂ ರನ್ ವೇರ ಸರಿಯಾಗಿ ಕಂಡಿಲ್ಲ. ಹೀಗಾಗಿ ರನ್ ವೇ ಆರಂಭವಾಗುವ ೧೦೦೦ ಮೀಟರ್ ದೂರದಲ್ಲಿರುವ ‘ಟಾಕ್ಸಿವೇ’ ಸಮೀಪದಲ್ಲೇ ವಿಮಾನ ಭೂ ಸ್ಪರ್ಶ ಮಾಡಿದೆ’ ಎಂದು ಎಎಐ ವಕ್ತಾರರು ತಿಳಿಸಿದರು.
ಟೇಬಲ್ ಟಾಪ್ ರೀತಿ ಇರುವ ಕೊಯಿಕ್ಕೋಡಿನ ವಿಮಾನ ನಿಲ್ದಾನವನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ನಿರ್ವಹಣೆ ಮಾಡುತ್ತದೆ. ಸಾಮಾನ್ಯವಾಗಿ ಟೇಬಲ್ ಟಾಪ್ ವಿಮಾನ ನಿಲ್ದಾಣಗಳನ್ನು ಬೆಟ್ಟದ ಮೇಲೆ ನಿರ್ಮಾಣ ಮಾಡಲಾಗಿರುತ್ತದೆ.
’ಏರ್ ಟ್ರಾಫಿಕ್ ನಿಯಂತ್ರಣಾಧಿಕಾರಿ ಅವರ ಮಾಹಿತಿ ಪ್ರಕಾರ ಟೇಬಲ್ ಟಾಪ್ ವಿಮಾನ ನಿಲ್ದಾಣದಲ್ಲಿನ ರನ್ ವೇ ೨೭೦೦ ಮೀಟರ್ ಉದ್ದವಿದೆ. ಭಾರಿ ಮಳೆಯ ಕಾರಣದಿಂದಾಗಿ ಶುಕ್ರವಾರ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಭೂ ಸ್ಪರ್ಶ ಮಾಡುವ ಸಮಯದಲ್ಲಿ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ೨೦೦೦ ಮೀಟರ್ವರೆಗೆ ಮಾತ್ರ ರನ್ವೇ ಕಾಣುತ್ತಿತ್ತು’ ಎಂದು ವಕ್ತಾರರು ವಿವರಿಸಿದರು.
೧೦ ಲಕ್ಷ ಪರಿಹಾರ: ಸಚಿವ ಹರದೀಪ್ ಸಿಂಗ್
ವಿಮಾನ ಅಪಘಾತದಲ್ಲಿ ಮೃತರಾದ ಕುಟುಂಬದವರಿಗೆ ತಲಾ ೧೦ ಲಕ್ಷ ರೂಪಾಯಿ ಮತ್ತು ತೀವ್ರವಾಗಿ ಗಾಯಗೊಂಡವರಿಗೆ ತಲಾ ೨ ಲಕ್ಷ ರೂಪಾಯಿ ಹಾಗೂ ಸಣ್ಣಪುಟ್ಟ ಗಾಯಗಳಾಗಿರುವವರಿಗೆ ತಲಾ ೫೦ ಸಾವಿg ರೂಪಾಯಿಗಳ ಮಧ್ಯಂತರ ಪರಿಹಾರ ನೀಡುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿದರು.
ಅವರು ಕೋಯಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ’ವಿಮಾನ ಅಪಘಾತಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದರು.
’ಅಪಘಾತಕ್ಕೆ ಈಡಾಗಿರುವ ವಿಮಾನದ ಡಿಜಿಟಲ್ ಫ್ಲೈಟ್ ಡಾಟಾ ರೆಕಾರ್ಡರ್ ಮತ್ತು ಕಾಕ್ಪಿಟ್ ವಾಯ್ಸ್ ರೆಕಾರ್ಡರ್ಗಳನ್ನು ಪತ್ತೆಹಚ್ಚಿ ವಶ ಪಡೆಯಲಾಗಿದೆ. ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ತನಿಖೆ ನಡೆಸುತ್ತಿದೆ’ ಎಂದು ಸಚಿವರು ತಿಳಿಸಿದ್ದಾರೆ.
ವಿಮಾನ ದುರಂತ ನಂತರದ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳಲು ಮತ್ತು ಮುಂದಿನ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಕೋಯಿಕ್ಕೋಡಿಗೆ ಬಂದಿದ್ದೇನೆ. ಹಿರಿಯ ನಾಗರಿಕ ವಿಮಾನಯಾನ ಅಧಿಕಾರಿಗಳು ಮತ್ತು ವೃತ್ತಿಪರರೊಂದಿಗೆ ಸಮಾಲೋಚನೆ ನಡೆಸಲಿದ್ದೇನೆ ಎಂದು ರದೀಪ್ ಸಿಂಗ್ ಹೇಳಿದರು.
No comments:
Post a Comment