Tuesday, August 25, 2020

ಪ್ರಶಾಂತ್ ಭೂಷಣ್ ಟ್ವೀಟ್: ತೀರ್ಪು ಕಾದಿರಿಸಿದ ಸುಪ್ರೀಂ

 ಪ್ರಶಾಂತ್ ಭೂಷಣ್ ಟ್ವೀಟ್: ತೀರ್ಪು ಕಾದಿರಿಸಿದ ಸುಪ್ರೀಂ

ನವದೆಹಲಿ: ಸುಪ್ರೀಂಕೋರ್ಟ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರನ್ನು ಟೀಕಿಸಿದ ಟ್ವೀಟ್‌ಗಳಿಗಾಗಿ ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರಿಗೆ ನೀಡಬೇಕಾದ ಶಿಕ್ಷೆಯ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ 2020 ಆಗಸ್ಟ್ 25ರ ಮಂಗಳವಾರ ಕಾಯ್ದಿರಿಸಿತು.

ನ್ಯಾಯಮೂರ್ತಿ ಅರುಣ್ ಮಿಶ್ರ್ರ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ತೀರ್ಪನ್ನು ಕಾಯ್ದಿರಿಸುತ್ತಾನ್ಯಾಯಾಲಯವು ನ್ಯಾಯಯುತ ಟೀಕೆಗಳನ್ನು ಸ್ವಾಗತಿಸುತ್ತದೆ, ಆದರೆ ನ್ಯಾಯಾಲಯಗಳನ್ನು ಟೀಕಿಸುವವರು ನ್ಯಾಯಾಧೀಶರಿಗೆ ಪ್ರಚೋದನೆ ನೀಡಬಾರದು ಎಂದು ಹೇಳಿತು.

 "ನಾವು ನ್ಯಾಯಯುತ ಟೀಕೆಗಳನ್ನು ಸಹಿಸುತ್ತೇವೆ ಮತ್ತು ಅದನ್ನು ಸ್ವಾಗತಿಸುತ್ತೇವೆ. ಆದರೆ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಪತ್ರಿಕೆಗಳಿಗೆ ಹೋಗಲು ಸಾಧ್ಯವಿಲ್ಲ. ನಾನು ಎಂದಿಗೂ ಪತ್ರಿಕೆಗಳಿಗೆ ಹೋಗಿಲ್ಲ. ನಾವು ಪ್ರಮಾಣವಚನಕ್ಕೆ ಬದ್ಧರಾಗಿದ್ದೇವೆ ಎಂದು ಮಿಶ್ರ್ರ ಹೇಳಿದರು.

ವಕೀಲರು ಮತ್ತು ನ್ಯಾಯಾಧೀಶರು ಒಂದೇ ಸಂಸ್ಥೆಯ ಭಾಗವಾಗಿದ್ದಾರೆ ಮತ್ತು ಸಂಸ್ಥೆಯ ಘನತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಒಟ್ಟಾಗಿ ಕೆಲಸ ಮಾಡಬೇಕು ಎಂದು  ನ್ಯಾಯಮೂರ್ತಿ ಮಿಶ್ರ ಹೇಳಿದರು.

ನೀವು (ವಕೀಲರು) ವ್ಯವಸ್ಥೆಯ ಭಾಗ. ನಾವು ಬಾರ್‌ನಿಂದ (ವಕೀಲರ ಮಂಡಳಿ) ಪ್ರತ್ಯೇಕವಾಗಿಲ್ಲ. ನಾವು (ನ್ಯಾಯಾಧೀಶರು) ಸಹ ಬಾರ್‌ನಿಂದ ಬಂದಿದ್ದೇ ಎಂದು ಅವರು ಹೇಳಿದರು.

ಭೂಷಣ್ ಪರ ಹಾಜರಾದ ಹಿರಿಯ ವಕೀಲ ರಾಜೀವ್ ಧವನ್, ನ್ಯಾಯಾಲಯವು ಭೂಷಣ್ ಅವರನ್ನು ಶಿಕ್ಷಿಸಬಾರದು ಮತ್ತು ಅವರು ಹುತಾತ್ಮರಾಗಬಾರದು ಎಂದು ಹೇಳಿದರು.

ನ್ಯಾಯಾಲಯವನ್ನು ಟೀಕಿಸುವಾಗ ವಕೀಲರು ಸಂಯಮ ವಹಿಸಬೇಕು ಎಂಬ ಸಾಮಾನ್ಯ ನಿರ್ದೇಶನ ನೀಡಿ,  ನ್ಯಾಯಾಲಯವು ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.

"ಶಿಕ್ಷೆಯ ಪರಿಣಾಮವೆಂದರೆ ಅದು ಪ್ರಶಾಂತ್ ಭೂಷಣ್ ಅವರನ್ನು ಹುತಾತ್ಮರನ್ನಾಗಿ ಮಾಡುತ್ತದೆ. ಪ್ರಶಾಂತ್ ಭೂಷಣ್ ಅವರನ್ನು ಹುತಾತ್ಮರನ್ನಾಗಿ ಮಾಡಬೇಡಿ. ವಿವಾದ ಮುಂದುವರೆಯಲು ನಾವು ಬಯಸುವುದಿಲ್ಲ. ನೀವು ಭೂಷಣ್‌ಗೆ ನೀಡುವ ಶಿಕ್ಷೆಯನ್ನು ಅವಲಂಬಿಸಿ ವಿವಾದ ಮುಂದುವರಿಯುತ್ತದೆ ಎಂದು ಧವನ್ ಹೇಳಿದರು.

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ವಕೀಲರು ಪತ್ರಿಕೆಗಳಿಗೆ ಹೋಗುವುದರ ಬಗ್ಗೆ ನ್ಯಾಯಮೂರ್ತಿ ಮಿಶ್ರ ಅಸಮಾಧಾನ ವ್ಯಕ್ತಪಡಿಸಿದರು ಮತ್ತು ನಿವೃತ್ತ ನ್ಯಾಯಮೂರ್ತಿಗಳ ಬಗ್ಗೆ ಆರೋಪಗಳನ್ನು ಮಾಡುವ ಹವ್ಯಾಸದ ಬಗ್ಗೆ ಕೂಡಾ ಅಸಮ್ಮತಿ ವ್ಯಕ್ತ ಪಡಿಸಿದರು.

ವಕೀಲರು ಪತ್ರಿಕಾಗೋಷ್ಠಿಗೆ ಹೋದಾಗ ಅಥವಾ ಹೇಳಿಕೆಗಳನ್ನು ನೀಡಿದಾಗ (ನ್ಯಾಯಾಧೀಶರ ವಿರುದ್ಧ) ಅದು ಸಮಸ್ಯೆಯಾಗುತ್ತದೆ. ನಾವು ಪತ್ರಿಕೆಗಳಿಗೆ ಹೋಗಲು ಸಾಧ್ಯವಿಲ್ಲ. ವ್ಯವಸ್ಥೆಯು ಎಷ್ಟು ಕಾಲ ಬಲಬೇಕು? ನಿವೃತ್ತ ನ್ಯಾಯಾಧೀಶರ ವಿರುದ್ಧ ನೀವು ಏನನ್ನೂ ಹೇಳಬಹುದು ಎಂಬ ವಾದವೇಕೆ?’ ಎಂದು ನ್ಯಾಯಮೂರ್ತಿ ಮಿಶ್ರಾ ಪ್ರಶ್ನಿಸಿದರು.

ಪತ್ರಿಕೆಗಳಿಗೆ ಹೋಗುವುದು, ಟ್ವೀಟ್ ಮಾಡುವುದಕ್ಕೆ ಹೆಚ್ಚಿನ ತೂಕ ಇರುತ್ತದೆ. ಇದು ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಮೂರ್ತಿ ಮಿಶ್ರ ಹೇಳಿದರು.

ಭೂಷಣ್ ಅವರ ಎಲ್ಲ ಹೇಳಿಕೆಗಳನ್ನು ಮತ್ತು ಅವರ ಸಮರ್ಥನೆಗಳನ್ನು ಓದುವುದು ನೋವಿನ ಸಂಗತಿಯಾಗಿದೆ. ಮೂವತ್ತು ವರ್ಷಗಳ ಅನುಭವ ಹೊಂದಿರು ಪ್ರಶಾಂತ ಭೂಷಣ್ ಅವರಂತಹ ಹಿರಿಯ ವಕೀಲರು ವರ್ತಿಸಬೇಕಾದ ರೀತಿ ಇದಲ್ಲ ಎಂದ ನ್ಯಾಯಮೂರ್ತಿ ಮಿಶ್ರ ಹೇಳಿದರು.

ಇದಕ್ಕೂ ಮುನ್ನ, ಭೂಷಣ್ ಅವರನ್ನು ವಾಗ್ದಂಡನೆಗೆ ಗುರಿಪಡಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರೂ ಪೀಠಕ್ಕೆ ಮನವಿ ಮಾಡಿದರು.

ಅರಿಗೆ ಎಚ್ಚರಿಕೆ ನೀಡಬೇಕು ಮತ್ತು ಭವಿಷ್ಯದಲ್ಲಿ ಅದನ್ನು ಪುನರಾವರ್ತಿಸದಂತೆ ಹೇಳಬೇಕು. ಆದರೆ ಅವರನ್ನು  ಶಿಕ್ಷಿಸಬೇಡಿ ಎಂದು ವೇಣುಗೋಪಾಲ್ ಹೇಳಿದರು.

ಇದಕ್ಕೂ ಮುನ್ನ ನ್ಯಾಯಾಂಗದ ವಿರುದ್ಧ ಮಾಡಿದ ಟ್ವೀಟ್‌ಗಳ ಬಗ್ಗೆ ವಿಷಾದ ವ್ಯಕ್ತಪಡಿಸದಿರುವ ಪ್ರಶಾಂತ ಭೂಷಣ್ ಅವರಿಗೆ ತಮ್ಮ ನಿಲುವಿನ ಬಗ್ಗೆ  ಯೋಚಿಸಲು ನ್ಯಾಯಾಲಯವು ೩೦ ನಿಮಿಷ ಕಾಲಾವಕಾಶ ನೀಡಿತ್ತು.

ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಕಾರ್ಯಕರ್ತ-ವಕೀಲರಿಗೆ ಕ್ಷಮೆ ನೀಡುವಂತೆ ಕೋರಿದ ನಂತರ ಸುಪ್ರೀಂಕೋರ್ಟ್ ಭೂಣ್ ಅವರಿಗೆ ಅವಕಾಶವನ್ನು ನೀಡಿತು.

ಭೂಷಣ್ ಅವರಉದ್ಧಟ ಹೇಳಿಕೆಯ ಬಗ್ಗೆ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು ಅಟಾರ್ನಿ ಜನರಲ್ ಅವರ ಅಭಿಪ್ರಾಯಗಳನ್ನು ಕೋರಿದಾಗ "ಅವರು (ಭೂಷಣ್) ಎಲ್ಲಾ ಹೇಳಿಕೆಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ವಿಷಾದ ವ್ಯಕ್ತಪಡಿಸಬೇಕು ಎಂದು ಉನ್ನತ ಕಾನೂನು ಅಧಿಕಾರಿ ಹೇಳಿದ್ದರು.

ನ್ಯಾಯಾಂಗದ ವಿರುದ್ಧ ಮಾಡಿದ ಎರಡು ಟ್ವೀಟ್‌ಗಳಿಗಾಗಿ ಅವರು ಸುಪ್ರೀಂ ಕೋರ್ಟಿನ ಕ್ಷಮೆಯಾಚಿಸಲು ನಿರಾಕರಿಸಿರುವ ಪ್ರಶಾಂತ ಭೂಷಣ್ ಟ್ವೀಟ್‌ಗಳು ನನ್ನ ನಂಬಿಕೆಯನ್ನು ಪ್ರತಿನಿಧಿಸುತ್ತದೆ ಎಂದು ಪ್ರತಿಪಾದಿಸಿದ್ದರು.

No comments:

Advertisement