Sunday, October 18, 2020

ಚಂದ್ರನಲ್ಲಿ ೪ಜಿ ಮೊಬೈಲ್ ಜಾಲ ಸ್ಥಾಪನೆಗೆ ನಾಸಾ ಸಿದ್ಧತೆ

 ಚಂದ್ರನಲ್ಲಿ ೪ಜಿ ಮೊಬೈಲ್ ಜಾಲ ಸ್ಥಾಪನೆಗೆ ನಾಸಾ ಸಿದ್ಧತೆ

ಸ್ಯಾನ್ ಫ್ರಾನ್ಸಿಸ್ಕೋ: ಚಾಂದ್ರ ನೆಲದಲ್ಲಿ ೪ಜಿ ನೆಟ್ ವರ್ಕ್ ಸ್ಥಾಪಿಸಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸಿದ್ಧತೆ ನಡೆಸಿದೆ. ಭೂಮಿಯ ಸಹಜ ಉಪಗ್ರಹವಾಗಿರುವ ಚಂದ್ರನಲ್ಲಿ ೪ಜಿ ಎಲ್ ಟಿಇ  ಮೊಬೈಲ್ ನೆಟ್ ವರ್ಕ್  ಸಂಪರ್ಕ ಕಲ್ಪಿಸಲು ತಯಾರಿ ಆರಂಭಿಸಿರುವ ನಾಸಾ, ಖ್ಯಾತ ಟೆಲಿಕಾಂ ಕಂಪೆನಿ ನೋಕಿಯಾಕ್ಕೆ ೧೪. ಮಿಲಿಯನ್ (1.41 ಕೋಟಿ) ಡಾಲರ್ ಮೊತ್ತದ ಕಾಮಗಾರಿಯನ್ನು ಗುತ್ತಿಗೆ ನೀಡಿದೆ.

ಬಾಹ್ಯಾಕಾಶ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಉತ್ತುಂಗಕ್ಕೇರಲು ಅಮೆರಿಕಟಿಪ್ಪಿಂಗ್ ಪಾಯಿಂಟ್ ಎಂಬ ೨೭೭೫ ಕೋಟಿ ರೂ. ಮೌಲ್ಯದ ಯೋಜನೆ ರೂಪಿಸಿದೆ. ಅದರ ಭಾಗವಾಗಿ ಚಾಂದ್ರ ನೆಲದಲ್ಲಿ ಮೊಬೈಲ್ ನೆಟ್ ವರ್ಕ್ ಸಿಗುವಂತೆ ಮಾಡುವ ಮೂಲಕ ಭೂಮಿ ಹಾಗೂ ಚಂದ್ರನ ನಡುವೆ ಅತ್ಯುತ್ತಮ ಗುಣಮಟ್ಟದ ಫೋಟೋ, ವಿಡಿಯೋ ವಿನಿಮಯವನ್ನು ವೇಗವಾಗಿ ಮಾಡಿಕೊಳ್ಳುವುದು ನಾಸಾದ ಗುರಿ.

ಚಂದ್ರನ ಮೇಲೆ ೪ಜಿ ನೆಟ್ ವರ್ಕ್ ಸ್ಥಾಪನೆಯಾದ ಬಳಿಕ ರೋವರ್ ಗಳನ್ನು ಭೂಮಿಯಿಂದಲೇ ಸುಲಭವಾಗಿ ನಿಯಂತ್ರಿಸಬಹುದು. ರೋವರ್ ಗಳ ಮೂಲಕ ಉತ್ಕೃಷ್ಟ ಗುಣಮಟ್ಟದ ಲೈವ್ ವಿಡಿಯೋಗಳನ್ನು ಪಡೆಯಬಹುದಾಗಿದ್ದು, ಚಂದ್ರನ ಮೇಲ್ಮೈ ಅಧ್ಯಯನಕ್ಕೆ ಇನ್ನಷ್ಟು ನೆರವನ್ನು ೪ಜಿ ನೆಟ್ ವರ್ಕ್ ನೀಡಲಿದೆ.

ಚಂದ್ರನ ಮೇಲೇ ವಿಜ್ಞಾನಿಗಳು ಕುಳಿತು ಸಂಶೋಧನೆ ನಡೆಸುವಂತಹ ವ್ಯವಸ್ಥೆಯನ್ನು ೨೦೨೮ರೊಳಗೆ ರೂಪಿಸಲು ನಾಸಾ ನಿರ್ಧರಿಸಿದೆ. ಮಾನವರು ಚಂದ್ರನ ಮೇಲೆ ಉಳಿದುಕೊಂಡು, ಅಲ್ಲಿಂದಲೇ ಕೆಲಸ ಮಾಡಲು ಸಾಧ್ಯವಾಗುವಂತೆ ಮಾಡುವುದು ನಾಸಾದ ಉದ್ದೇಶ. ಸಂವಹನ ಸುಧಾರಣೆಯಿಂದು ಇದು ಸಾಧ್ಯ ಎಂಬುದು ನಾಸಾ ಅಂಬೋಣ. ಇದಕ್ಕಾಗಿ ಮೊಬೈಲ್ ನೆಟ್ ವರ್ಕ್ ಅಗತ್ಯವಾಗಿದೆ. ಇದರ ಜೊತೆಗೆ ಚಂದ್ರನ ಮೇಲೆ ದೀರ್ಘಕಾಲ ಬಾಳಿಕೆ ಬರುವ ವಿದ್ಯುತ್ ವ್ಯವಸ್ಥೆ ರೂಪಿಸಲು ಅಮೆರಿಕ ಬಾಹ್ಯಾಕಾಶ ಸಂಸ್ಥೆ ಯೋಜನೆ ರೂಪಿಸುತ್ತಿದೆ.

೨೦೧೮ರಲ್ಲೇ ಚಂದ್ರನ ಮೇಲೆ ಅಮೆರಿಕದ ಅಪೋಲೋ-೧೭ ಬಾಹ್ಯಾಕಾಶ ನೌಕೆ ಇಳಿಯುವ ಜಾಗದಲ್ಲಿ ಎಲ್ ಟಿಇ ನೆಟ್ ವರ್ಕ್ ಸಿಗುವಂತೆ ಮಾಡಲು ಜರ್ಮನಿಯ ಬಾಹ್ಯಾಕಾಶ ಕಂಪನಿಯಾದ ಪಿಟಿಸೈಂಟಿಸ್ಟ್ ಹಾಗೂ ಬ್ರಿಟನ್ನಿನ ವೊಡಾಫೋನ್ ಜೊತೆ ನಾಸಾ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಕಾರಣಾಂತರಗಳಿಂದ ಆ ಯೋಜನೆ ಕಾರ್ಯಗತಗೊಂಡಿರಲಿಲ್ಲ.

No comments:

Advertisement