ಹತ್ರಾಸ್: ದೆಹಲಿ ಪ್ರಾರ್ಥನಾ ಸಭೆಗೆ ಪ್ರಿಯಾಂಕಾ
ನವದೆಹಲಿ: ಹತ್ರಾಸ್ ಸಂತ್ರಸ್ತರಿಗಾಗಿ ದೆಹಲಿ ದೇವಸ್ಥಾನ ಒಂದರಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ವಾದ್ರಾ ಅವರು 2020 ಅಕ್ಟೋಬರ್ 02ರ ಶುಕ್ರವಾರ ಪಾಲ್ಗೊಂಡರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಸಹೋದರ ರಾಹುಲ್ ಗಾಂಧಿ ಅವರು ನೂರಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಹತ್ರಾಸ್‌ನ ದಲಿತ ಮಹಿಳೆಯ ಕುಟುಂಬವನ್ನು ಭೇಟಿ ಮಾಡಲು ಹೊರಟಿದ್ದಾಗ ಗುರುವಾರ ಉತ್ತರ ಪ್ರದೇಶ ಪೊಲೀಸರು ವಶಕ್ಕೆ ತೆಗೆದುಕೊಂಡು ಬಳಿಕ ದೆಹಲಿಗೆ ವಾಪಸ್ ಕಳುಹಿಸಿದ್ದರು.
ವಾಪಸ್ ಕಳುಹಿಸಿದ ಮರುದಿನವೇ ದೆಹಲಿಯ ವಾಲ್ಮೀಕಿ ದೇವಸ್ಥಾನಕ್ಕೆ ಶುಕ್ರವಾರ ಆಗಮಿಸಿದ ಪ್ರಿಯಾಂಕಾ ಮೃತ ಮಹಿಳೆಯ ಸಲುವಾಗಿ ನಡೆದ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡರು.ಹತ್ರಾಸ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾದ ಸಂತ್ರಸ್ತೆಯ ಸಲುವಾಗಿ ಪ್ರಾರ್ಥನಾ ಸಭೆಯನ್ನು ದೇವಾಲಯ ಟ್ರಸ್ಟ್ ಆಯೋಜಿಸಿತ್ತು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಪಿ.ಎಲ್.ಪುನಿಯಾ, ಸುಷ್ಮಿತಾ ದೇವ್ ಮತ್ತು ಅನಿಲ್ ಚೌಧರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೃತ ಮಹಿಳೆಗೆ ಹೂವಿನ ಗೌರವ ಸಲ್ಲಿಸಿದರು.
"ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರ ಆಶ್ರಯದಲ್ಲಿ ಮಹಿಳಾ ಕಾಂಗ್ರೆಸ್ ಘಟಕವು ಈ ಅನ್ಯಾಯದ ವಿರುದ್ಧ ಹೋರಾಟ ಮುನ್ನಡೆಸಬೇಕು ಮತ್ತು ಪ್ರತಿಭಟಿಸಬೇಕು" ಎಂದು ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಸುಷ್ಮಿತಾ ದೇವ್ ಹೇಳಿದರು. "ಈ ದೇಶದ ಮಹಿಳೆಯರೇ ನರೇಂದ್ರ ಮೋದಿಯವರನ್ನು ಕೆಳಗಿಳಿಸಲಿದ್ದಾರೆ’ ಎಂದು ಅವರು ನುಡಿದರು.
No comments:
Post a Comment