ಮೇವು ಹಗರಣ: ಲಾಲೂ ಪ್ರಸಾದ್ ಗೆ ಜಾಮೀನು
ನವದೆಹಲಿ: ೯೫೦ ಕೋಟಿ ರೂಪಾಯಿಗಳ ಮೇವು ಹಗರಣಕ್ಕೆ ಸಂಬಂಧಿಸಿದ ಚೈಬಾಸ ಖಜಾನೆ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರಿಗೆ ಜಾರ್ಖಂಡ್ ಹೈಕೋರ್ಟ್ 2020 ಅಕ್ಟೋಬರ್ 09ರ ಶುಕ್ರವಾರ ಜಾಮೀನು ನೀಡಿತು.
೧೯೯೨-೯೩ರ ಅವಧಿಯಲ್ಲಿ ಆರ್ಜೆಡಿ ನಾಯಕ ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಚೈಬಾಸ ಖಜಾನೆಯಿಂದ ೩೩.೬೭ ಕೋಟಿ ರೂ.ಹಣ ಹಿಂಪಡೆದ ಪ್ರಕರಣ ಇದಾಗಿದೆ.
ಲಾಲು ಪ್ರಸಾದ್ ಯಾದವ್ ಅವರಿಗೆ ಜಾಮೀನು ನೀಡಿದ್ದರೂ ದುಮ್ಕಾ ಖಜಾನೆ ಹಣ ನುಂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೧೪ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿರುವುದರಿಂದ ಅವರನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ.
೧೯೯೧ ಮತ್ತು ೧೯೯೬ ರ ನಡುವಣ ಅವಧಿಯಲ್ಲಿ ಲಾಲೂ ಪ್ರಸಾದ್ ಯಾದವ್ ಅವರು ಅವಿಭಜಿತ ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಧುಮ್ಕಾ ಖಜಾನೆಯಿಂದ ೩.೫ ಕೋಟಿ ರೂಪಾಯಿಗಳನ್ನು ಮೇವು ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ಹಿಂಪಡೆದಿದ್ದರು. ಈ ಪ್ರಕರಣದಲ್ಲಿ ಲಾಲೂ ಪ್ರಸಾದ್ ಅವರ ಮೇಲಿನ ಆರೋಪ ಸಾಬೀತಾಗಿ ಅವರಿಗೆ ೧೪ ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿತ್ತು.
ಮೇವು ಹಗರಣಕ್ಕೆ ಸಂಬಂಧಿಸಿದ ಮೂರು ಪ್ರಕರಣಗಳಲ್ಲಿ ಆರ್ಜೆಡಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವರನ್ನು ಶಿಕ್ಷೆಗೊಳಪಡಿಸಲಾಗಿದೆ.
ಲಾಲು ಪ್ರಸಾದ್ ಯಾದವ್ ಅವರು ‘ಟೈಪ್ ೨’ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು ದೀರ್ಘ ಕಾಲದ ಮೂತ್ರಪಿಂಡ ರೋಗಿಯಾಗಿರುವ ಹಿನ್ನೆಲೆಲಯಲ್ಲಿ ಜಾರ್ಖಂಡಿನ ಮುಂಚೂಣಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ರಿಮ್ಸ್) ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಯಾದವ್ ಅವರನ್ನು ಆರು ಪ್ರಕರಣಗಳಲ್ಲಿ ಶಿಕ್ಷೆಗೊಳಪಡಿಸಲಾಗಿದೆ ಮತ್ತು ಈ ಪ್ರಕರಣಗಳಲ್ಲಿ ವಿವಿಧ ಶಿಕ್ಷೆಗಳನ್ನು ಅವರಿಗೆ ವಿಧಿಸಲಾಗಿದೆ.
ಲಾಲೂ ಪ್ರಸಾದ್ ಅವರು ೨೦೧೭ ರಿಂದ ಜೈಲಿನಲ್ಲಿದ್ದಾರೆ. ಮೂರು ಮೇವು ಹಗರಣ ಪ್ರಕರಣಗಳಲ್ಲಿ ಲಾಲು ಪ್ರಸಾದ್ ಯಾದವ್ ಅವರನ್ನು ತಪ್ಪಿತಸ್ತ ಎಂಬುದಾಗಿ ಘೋಷಿಸಲಾಗಿದ್ದು ಕ್ರಮವಾಗಿ ೩.೫ ವರ್ಷ, ೫ ವರ್ಷ ಮತ್ತು ೧೪ ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಲಾಗಿದೆ.
ಲಾಲು ಪ್ರಸಾದ್ ಯಾದವ್ ಅವರು ಈ ಸೆರೆವಾಸದ ಶಿಕ್ಷೆಗಳನ್ನು ಏಕಕಾಲದಲ್ಲಿ ಪೂರೈಸುತ್ತಿದ್ದಾರೆ. ೨೦೧೩ ರ ಡಿಸೆಂಬರಿನಲ್ಲಿ ಜಾರ್ಖಂಡ್ ಹೈಕೋರ್ಟ್ ದೇವಗಢ ಖಜಾನೆ ಪ್ರಕರಣದಲ್ಲಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಮೇವು ಹಗರಣದ ಪ್ರಕರಣವೊಂದರಲ್ಲಿ ಜಾಮೀನು ನೀಡಲಾಯಿತು.
ಅಕ್ಟೋಬರ್ ೨೮ ರಿಂದ ಮೂರು ಹಂತಗಳಲ್ಲಿ ನಡೆಯಲಿರುವ ಬಿಹಾರ ಚುನಾವಣೆಯೊಂದಿಗೆ ಲಾಲೂ ಪ್ರಸಾದ್ ಅವರು ನೇರವಾಗಿ ಸಂಬಂಧ ಹೊಂದುವಂತಿಲ್ಲ. ಲಾಲು ಪ್ರಸಾದ್ ಯಾದವ್ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ವಿಧಿಸಲಾಗಿದೆ ಮತ್ತು ಸಂಸತ್ತಿನಿಂದ ಅನರ್ಹಗೊಳಿಸಲಾಗಿದೆ.
No comments:
Post a Comment