ಭಾರೀ ದಾಳಿಗೆ ಉಗ್ರರ ಯೋಜನೆ: ಪ್ರಧಾನಿ ಮೋದಿ ಸಮಾಲೋಚನಾ ಸಭೆ
ನವದೆಹಲಿ: ನಾಲ್ಕು ಮಂದಿ ಉಗ್ರಗಾಮಿಗಳನ್ನು ಸದೆ ಬಡಿದ ನಾಗ್ರೋಟಾ ಗುಂಡಿನ ಘರ್ಷಣೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಗ್ಲಾ ಮತ್ತು ಉನ್ನತ ಗುಪ್ತಚರ ಸಂಸ್ಥೆಗಳ ಜೊತೆಗೆ ಪ್ರಧಾನಿ ನರೇಂದ್ರ ಮಓದಿ ಅವರು 2020 ನವೆಂಬರ್ 20ರ ಶುಕ್ರವಾರ ಸಮಾಲೋಚನಾ ಸಭೆ ನಡೆಸಿದರು.
ಮುಂಬೈ ಮೇಲಿನ ೨೬/೧೧ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಂದು ಭಯೋತ್ಪಾದಕರು "ಪ್ರಮುಖ ದಾಳಿಯನ್ನು" ಯೋಜಿಸುತ್ತಿದ್ದುದು ಬೆಳಕಿಗೆ ಬಂದಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
೨೦೦೮ರ ನವೆಂಬರ್ ೨೬ರಂದು ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಉಗ್ರ ಸಂಘಟನೆಗೆ ಸೇರಿದ ೧೦ ಮಂದಿ ಭಯೋತ್ಪಾದಕರು ಮುಂಬೈ ನಗರವನ್ನು ಗುರಿಯಾಗಿಸಿಕೊಂಡು ಸಂಘಟಿತ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳ ಮೂಲಕ ೧೬೬ ಜನರನ್ನು ಬಲಿ ಪಡೆದಿದ್ದರು. ಭಾರತದ ಆರ್ಥಿಕ ರಾಜಧಾನಿ ಮೇಲಿನ ಈ ದಾಳಿಯಲ್ಲಿ ೩೦೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಜಮ್ಮು ಜಿಲ್ಲೆಯ ನಾಗ್ರೋಟಾ ಪ್ರದೇಶದ ಬಾನ್ ಟೋಲ್ ಪ್ಲಾಜಾ ಬಳಿ ಗುರುವಾರ ಮುಂಜಾನೆ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಮುಖಾಮುಖಿ ಘರ್ಷಣೆ ನಡೆದಿತ್ತು. ಮೂರು ಗಂಟೆಗಳ ಕಾಲ ನಡೆದ ಈ ಗುಂಡಿನ ಘರ್ಷಣೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಸದೆ ಬಡಿಯಲಾಗಿತ್ತು.
ಮೂಲಗಳ ಪ್ರಕಾರ, ನಾಲ್ವರು ಭಯೋತ್ಪಾದಕರು ವಿಶ್ವಸಂಸ್ಥೆಯ ಭಯೋತ್ಪಾದಕ ಗುಂಪು ಎಂಬುದಾಗಿ ಘೋಷಿಸಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಗೆ ಸೇರಿದವರಾಗಿದ್ದಾರೆ. "ಈ ಭಯೋತ್ಪಾದಕರು ಹಳೆಯ ಕಾರ್ಯಾಚರಣೆ ವಿಧಾನ ಬಳಸಿದರು ಮತ್ತು ಇತ್ತೀಚೆಗೆ ಭಾರತದ ಒಳಕ್ಕೆ ನುಸುಳಿದ್ದರು ಎಂದು ಮೂಲಗಳು ಹೇಳಿವೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.
ಜಮ್ಮು ವಲಯದ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಮುಖೇಶ್ ಸಿಂಗ್ ಅವರು ಭಯೋತ್ಪಾದಕರು "ದೊಡ್ಡ ದಾಳಿ" ಯನ್ನು ಯೋಜಿಸಿದ್ದಾರೆ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಮುಂಬರುವ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದರು.
ನವೆಂಬರ್ ೨೮ ಮತ್ತು ಡಿಸೆಂಬರ್ ೧೯ ರ ನಡುವೆ ಎಂಟು ಹಂತಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಡಿಸಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ ೨೨ ರಂದು ಮvಗಳ ಎಣಿಕೆ ನಡೆಯಲಿದೆ.
ಗುಂಡಿನ ಘರ್ಷಣೆ ನಡೆದ ಸ್ಥಳದಲ್ಲಿ ವಶಪಡಿಸಿಕೊಳ್ಳಲಾಗಿರುವ ವಸ್ತುಗಳು ಈ ಹಿಂದೆ ಎಂದೂ ಲಭಿಸದೇ ಇದ್ದಂತಹವುಗಳು. ಅವರು ದೊಡ್ಡ ದಾಳಿಯನ್ನು ಯೋಜಿಸಿರುವ ಸಾಧ್ಯತೆಯನ್ನು ಇದು ತೋರಿಸಿದೆ. ಡಿಡಿಸಿ ಚುನಾವಣೆಯನ್ನು ಅವರು ಗುರಿಯಾಗಿಸಿಕೊಂಡಿದ್ದಾರೆ. ಆದಾಗ್ಯೂ ನಮ್ಮ ತನಿಖೆ ಮುಂದುವರೆದಿದೆ’ ಎಂದು ಜಮ್ಮು ವಲಯದ ಐಜಿ ಸಿಂಗ್ ನುಡಿದರು.
ವಾಡಿಕೆಯ ತಪಾಸಣೆ ವೇಳೆ ಗುರುವಾರ ಬೆಳಿಗ್ಗೆ ೫ ಗಂಟೆಗೆ ಟ್ರಕ್ ಒಂದನ್ನು ತಡೆದ ನಂತರ ಗುಂಡಿನ ಘರ್ಷಣೆ ಪ್ರಾರಂಭವಾಗಿತ್ತು.
"ಶೋಧದ ಸಮಯದಲ್ಲಿ, ಸಿಆರ್ಪಿಎಫ್ ಯೋಧರು ಮತ್ತು ಪೊಲೀಸರ ಕಡೆಗೆ ಭಾರೀ ಮದ್ದುಗುಂಡುಗಳನ್ನು ಬಳಸಿ ದಾಳಿ ನಡೆಸಲಾಯಿತು. ಗ್ರೆನೇಡುಗಳನ್ನು ಕೂಡಾ ಎಸೆಯಲಾಗಿದೆ. ಬಳಿಕ ಸ್ಥಳಕ್ಕೆ ಹೆಚ್ಚಿನ ಪಡೆಗಳನ್ನು ಕರೆಸಲಾಯಿತು. ಗುಂಡಿನ ಘರ್ಷಣೆ ಬರೋಬ್ಬರಿ ಮೂರು ಗಂಟೆಗಳ ಕಾಲ ನಡೆಯಿತು ಎಂದು ಐಜಿ ಹೇಳಿದರು.
No comments:
Post a Comment