Friday, November 20, 2020

ಪಾಕ್ ಮಿರಾಜ್, ಜಲಾಂತರ್ಗಾಮಿ ನವೀಕರಣಕ್ಕೆ ಪ್ರಾನ್ಸ್ ನಕಾರ

 ಪಾಕ್ ಮಿರಾಜ್, ಜಲಾಂತರ್ಗಾಮಿ ನವೀಕರಣಕ್ಕೆ ಪ್ರಾನ್ಸ್ ನಕಾರ

ನವದೆಹಲಿ: ಮೊಹಮ್ಮದ್ ಪೈಗಂಬರರ ವ್ಯಂಗ್ಯಚಿತ್ರ ಪ್ರದರ್ಶಿಸಿದ್ದ ಫ್ರೆಂಚ್ ಶಾಲಾ ಶಿಕ್ಷಕನ ಹತ್ಯೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಫ್ರಾನ್ಸ್ ವಿರುದ್ಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೀಡಿದ್ದ ಹೇಳಿಕೆ ಇದೀಗ ಪಾಕಿಸ್ತಾನಕ್ಕೆ ಮುಳುವಾಗಿದ್ದು, ಮಿರಾಜ್ ಫೈಟರ್ ಜೆಟ್, ವಾಯು ರಕ್ಷಣಾ ವ್ಯವಸ್ಥೆ ಮತ್ತು ಅಗೋಸ್ಟಾ ೯೦ ಬಿ ಕ್ಲಾಸ್ ಜಲಾಂತರ್ಗಾಮಿ ನೌಕೆಗಳ ನವೀಕರಣಕ್ಕೆ ನೆರವಾಗಲು ಫ್ರಾನ್ಸ್ ನಿರಾಕರಿಸಿದೆ ಎಂದು ಸುದ್ದಿ ಮೂಲಗಳು 2020 ನವೆಂಬರ್ 20ರ ಶುಕ್ರವಾರ ತಿಳಿಸಿವೆ.

ಫ್ರಾನ್ಸ್ ಶಿಕ್ಷಕನ ಹತ್ಯೆಯ ಬಳಿಕ ಧರ್ಮವನ್ನು ಅಪಹಾಸ್ಯ ಮಾಡುವ ಹಕ್ಕನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಸಮರ್ಥಿಸಿಕೊಂಡಿದ್ದಾರೆ ಎಂದು ಇಮ್ರಾನ್ ಖಾನ್ ಟೀಕಿಸಿದ್ದರು.

ಓಮ್ನಿ-ರೋಲ್ ಜೆಟ್ ಭಾರತದ ಮುಂಚೂಣಿಯ ಸಮರ ವಿಮಾನವಾಗಿರುವ ಕಾರಣ, ರಫೇಲ್ ಯುದ್ಧ ವಿಮಾನದ ಮಾಹಿತಿ ಸಂರಕ್ಷಣೆಯ ಸಲುವಾಗಿ ಪಾಕಿಸ್ತಾನ ಮೂಲಕ ತಂತ್ರಜ್ಞರಿಗೆ ವಿಮಾನದ ಜೊತೆಗೆ ಕೆಲಸ ಮಾಡಲು ಅವಕಾಶ ನೀಡಬಾರದು ಎಂದು ರಫೇಲ್ ಜೆಟ್ ಖರೀದಿಸಿದ ದೇಶಗಳಲ್ಲಿ ಒಂದಾಗ ಕತಾರ್ಗೆ ಫ್ರಾನ್ಸ್ ಸೂಚಿಸಿದೆ.

ಪಾಕಿಸ್ತಾನವು ಪ್ರಮುಖ ರಕ್ಷಣಾ ಮಾಹಿತಿಯನ್ನು ಹಿಂದೆ ಚೀನಾದ ಜೊತೆಗೆ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ ಫ್ರಾನ್ಸ್ ಮುನ್ನೆಚ್ಚರಿಕೆ ವಹಿಸಿದೆ.

ವಿವಾದಾತ್ಮಕ ಚಾರ್ಲಿ ಹೆಬ್ಡೊ ನಿಯತಕಾಲಿಕದ ಹಿಂದಿನ ಪ್ಯಾರಿಸ್ ಕಚೇರಿಯಲ್ಲಿ ಸಂಭವಿಸಿದ ಇರಿತದ ಘಟನೆಯ ಹಿನ್ನೆಲೆಯಲ್ಲಿ ಉಭಯ ದೇಶಗಳ ಬಾಂಧವ್ಯ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ, ಪ್ಯಾರಿಸ್ ಈಗಾಗಲೇ ಪಾಕಿಸ್ತಾನಿಗಳು ಸಲ್ಲಿಸಿರುವ ಆಶ್ರಯ ಕೋರಿಕೆಗಳನ್ನು ವಿವರವಾದ ಪರಿಶೀಲನೆಗೆ ಒಳಪಡಿಸಿದೆ. ಸೆಪ್ಟೆಂಬರಿನಲ್ಲಿ  ಪಾಕಿಸ್ತಾನ ಮೂಲದ ೧೮ ವರ್ಷದ ಅಲಿ ಹಸನ್, ನಿಯತಕಾಲಿಕದ ಕಚೇರಿ ಸ್ಥಳಾಂತರ ವಿಷಯ ತಿಳಿಯದೆ ಪತ್ರಿಕೆಯ ಹಿಂದಿನ ಕಚೇರಿಯ ಹೊರಗೆ ಮಾಂಸದ ಅಂಗಡಿಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಇರಿದಿದ್ದ. ಘಟನೆಯ ಬಳಿಕ ಪಾಕಿಸ್ತಾನದಲ್ಲಿ ವಾಸಿಸುವ ಅಲಿ ಹಸನ್ ತಂದೆ ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ತನ್ನ ಮಗ "ಒಂದು ಮಹಾನ್ ಕೆಲಸ ಮಾಡಿದ್ದು, ತನಗೆ ತುಂಬಾ ಸಂತಸವಾಗಿದೆ ಎಂದು ಹೇಳಿದ್ದ.

ಘಟನೆಯ ಹಿನ್ನೆಲೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಮೇಲಿನ ವೈಯಕ್ತಿಕ ದಾಳಿಯನ್ನು ಭಾರತ ಟೀಕಿಸಿತ್ತು. ಬಳಿಕ ಅಕ್ಟೋಬರ್ ೨೯ ರಂದು ಪ್ಯಾರಿಸ್ಸಿಗೆ ಭೇಟಿ ನೀಡಿದ್ದ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶಿಂಗ್ಲಾ ಅವರಿಗೆ ಫ್ರೆಂಚ್ ಸರ್ಕಾರದ ನಿರ್ಧಾರಗಳ ಬಗ್ಗೆ ತಿಳಿಸಲಾಗಿತ್ತು.

ಫ್ರಾನ್ಸ್ ತನ್ನ ಕಾರ್ಯತಂತ್ರದ ಮಿತ್ರನ ಭದ್ರತಾ ಕಾಳಜಿಗಳ ಬಗ್ಗೆ ಬಹಳ ಸೂಕ್ಷ್ಮವಾಗಿದೆ ಮತ್ತು ಪಾಕಿಸ್ತಾನ ಮೂಲದ ತಂತ್ರಜ್ಞರನ್ನು ರಫೇಲ್ ಫೈಟರ್ ಜೆಟ್ನಿಂದ ರಫ್ತು ನಿಯಂತ್ರಣ ಆಡಳಿತದ ಅಡಿಯಲ್ಲಿ ದೂರವಿಡುವ ಬಗ್ಗೆ ನಿರ್ದೇಶನಗಳನ್ನು ನೀಡಿದೆ ಮತ್ತು ಭಾರತದ ಭದ್ರತಾ ಕಾಳಜಿಯ ಬೆಳಕಿನಲ್ಲಿ ರಫೇಲ್ ಯುದ್ಧ ವಿಮಾನಕ್ಕೆ ಸಂಬಂಧಿಸಿದ ಮಾಹಿತಿ ಹೊರಹೋಗದಂತೆ ನೋಡಿಕೊಳ್ಳುತ್ತದೆ ಎಂದು ಫ್ರಾನ್ಸ್ ಭರವಸೆ ನೀಡಿತ್ತು.

ಮಿರಾಜ್ ಮತ್ತು ಮಿರಾಜ್ ಫೈಟರ್ ಜೆಟ್ಗಳನ್ನು ಮೇಲ್ದರ್ಜೆಗೆ ಏರಿಸದೇ ಇರಲು ಫ್ರೆಂಚ್ ಸರ್ಕಾರ ಕೈಗೊಂಡಿರುವ ನಿರ್ಧಾರವು ಪಾಕಿಸ್ತಾನದ ವಾಯುಸೇನೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಫ್ರಾನ್ಸಿನ ಡಲಾಲ್ಟ್ ಏವಿಯೇಷನ್ ತಯಾರಿಸಿದ ಸುಮಾರು ೧೫೦ ಮಿರಾಜ್ ಫೈಟರ್ ಜೆಟ್ಗಳು ಪಾಕಿಸ್ತಾನದ ಬಳಿ ಇವೆ. ಇವುಗಳ ಪೈಕಿ ಅರ್ಧದಷ್ಟು ಮಾತ್ರ ಬಳಕೆಗೆ ಯೋಗ್ಯವಾಗಿವೆ.

ಪಾಕಿಸ್ತಾನವು ದಶಕಗಳಿಂದ ಮಿರಾಜ್ ಜೆಟ್ಗಳನ್ನು ಖರೀದಿಸುತ್ತಿತ್ತು, ಅವುಗಳಲ್ಲಿ ಕೆಲವು ಇತರ ದೇಶಗಳಿಂದ ತಿರಸ್ಕರಿಸಲ್ಪಟ್ಟವು ಎಂದು ೨೦೧೮ ಎಎಫ್ಪಿ ವರದಿ ಹೇಳಿತ್ತು. ಪಾಕಿಸ್ತಾನದ ಹೊರಗೆ ಮಾತ್ರ ವಯಸ್ಸಾದ ಫೈಟರ್ ಜೆಟ್ಗಳನ್ನು ಹಾರಾಡಲು ಸಾಧ್ಯವಾಗುವಂತೆ ನವೀಕರಿಸುವ ಸೌಲಭ್ಯವಿದೆ. ಫೈಟರ್ ಜೆಟ್ಗಳನ್ನು ಹಾರಿಸಲು ಸಾಧ್ಯವಾಗುವಂತೆ ನವೀಕರಿಸಿಕೊಡುವಂತೆ ಪಾಕಿಸ್ತಾನ ಇತ್ತೀಚೆಗೆ ಫ್ರಾನ್ಸಿಗೆ ವಿನಂತಿ ಮಾಡಿತ್ತು.

ಆದರೆ ಈಗ ವಿನಂತಿಯನ್ನು ನಿರಾಕರಿಸಲಾಗಿದೆ" ಎಂದು ಪ್ಯಾರಿಸ್ಸಿನ ರಾಜತಾಂತ್ರಿಕರೊಬ್ಬರು ಹೇಳಿದರು.

ಫ್ರೆಂಚ್-ಇಟಾಲಿಯನ್ ವಾಯು ರಕ್ಷಣಾ ವ್ಯವಸ್ಥೆಯನ್ನು ನವೀಕರಿಸುವಂತೆ ಮಾಡಿರುವ ಇದೇ ರೀತಿಯ ವಿನಂತಿಯನ್ನು ಸಹಾ ಫ್ರಾನ್ಸ್ ನಿರಾಕರಿಸಿದೆ.

ತನ್ನ ಅಗೋಸ್ಟಾ ೯೦ ಬಿ ದರ್ಜೆಯ ಜಲಾಂತರ್ಗಾಮಿ ನೌಕೆಗಳನ್ನು ವಾಯು-ಸ್ವತಂತ್ರ ಪ್ರೊಪಲ್ಷನ್ (ಎಐಪಿ) ವ್ಯವಸ್ಥೆಗಳೊಂದಿಗೆ ನವೀಕರಿಸಬೇಕೆಂದು ಪಾಕಿಸ್ತಾನ ಮಾಡಿದ ಮೂರನೇ ವಿನಂತಿಯನ್ನು ಕೂಡಾ ಫ್ರಾನ್ಸ್ ತಿರಸ್ಕರಿಸಿದೆ ಎಂದು ರಾಜತಾಂತ್ರಿಕರು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಮೂರು ಅಗೋಸ್ಟಾ ೯೦ ಬಿ ಜಲಾಂತರ್ಗಾಮಿ ನೌಕೆಗಳಿವೆ: ಖಾಲಿದ್, ಸಾಡ್ ಮತ್ತು ಹಮ್ಜಾ.

ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರು ಭಯೋತ್ಪಾದನೆಯನ್ನು ಉತ್ತೇಜಿಸುವಲ್ಲಿನ ಪಾಕ್ ಪಾತ್ರದಿಂದಾಗಿ ಸಿಟ್ಟಿಗೆದ್ದು, ಪಾಕಿಸ್ತಾನದ ದಾಸ್ತಾನುಗಳಲ್ಲಿನ ಜಲಾಂತರ್ಗಾಮಿ ನೌಕೆಗಳನ್ನು ನವೀಕರಿಸಲು ಎಐಪಿ ವ್ಯವಸ್ಥೆಗಳ ಪೂರೈಕೆಗಾಗಿ ಮಾಡಿದ್ದ ಇದೇ ರೀತಿಯ ವಿನಂತಿಯನ್ನು ತಿರಸ್ಕರಿಸಿದ್ದರು.

ವಿಶೇಷವಾಗಿ ೨೦೧೭ರ ಮೇ ತಿಂಗಳಲ್ಲಿ ಕಾಬೂಲಿನ ಜರ್ಮನಿ ರಾಯಭಾರ ಕಚೇರಿಯ ಮೇಲೆ ನಡೆದ ಟ್ರಕ್ ಬಾಂಬ್ ದಾಳಿಯ ದುಷ್ಕರ್ಮಿಗಳನ್ನು ಗುರುತಿಸುವಲ್ಲಿ ಇಸ್ಲಾಮಾಬಾದ್ ಸಹಕರಿಸಲಿಲ್ಲ ಎಂದು ಜರ್ಮನಿ ಅಸಮಾಧಾನಗೊಂಡಿತ್ತು.

ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿದ ಶಾಲೆಯ ಶಿಕ್ಷಕನ ಶಿರಚ್ಛೇದದ ಬಗ್ಗೆ ಪ್ರಧಾನಿ ಇಮ್ರಾನ್  ಖಾನ್ ತಮ್ಮ ಆಪ್ತ ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಅವರೊಂದಿಗೆ ಫ್ರಾನ್ಸ ಅಧ್ಯಕ್ಷ ಮ್ಯಾಕ್ರೋನ್ ವಿರುದ್ಧ ಟೀಕಿಸಿದ ಬಳಿಕ ಫ್ರೆಂಚ್ ಸರ್ಕಾರದ ನಿರ್ಧಾರಗಳು ಬಂದಿವೆ. ಮ್ಯಾಕ್ರೋನ್ ಹೇಳಿಕೆಯು ಧರ್ಮ ನಿಂದೆಯಾಗಿದೆ ಂದು ಮುಸ್ಲಿಮರು ಪರಿಗಣಿಸಿದ್ದಾರೆ.

ಪ್ರಧಾನಿ ಖಾನ್ ತಮ್ಮ ತೀಕ್ಷ್ಣವಾದ ಟೀಕೆಗಳನ್ನು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಮುಖಂಡರಿಗೆ ಬರೆ ಬಹಿರಂಗ ಪತ್ರದಲ್ಲಿ ವ್ಯಕ್ತ ಪಡಿಸಿದ್ದರು. "ಮುಸ್ಲಿಮೇತರ ರಾಜ್ಯಗಳಲ್ಲಿ ಬೆಳೆಯುತ್ತಿರುವ ಇಸ್ಲಾಮೋಫೋಬಿಯಾ" ವಿರುದ್ಧ ಇಸ್ಲಾಮೀ ರಾಷ್ಟ್ರಗಳನ್ನು ಒಗ್ಗೂಡಿಸುವಂತೆ ಅವರು ಮನವಿ ಮಾಡಿದ್ದರು.

ಪ್ಯಾರಿಸ್ಸಿನಿಂದ ಪಾಕಿಸ್ತಾನದ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂಬುದಾಗಿ ಒತ್ತಾಯಿಸುವ ಸರ್ಕಾರೀ ಬೆಂಬಲಿತ ನಿರ್ಣಯವನ್ನು ಅಂಗೀಕರಿಸುವ ಮೂಲಕ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿತ್ತು. ಆದರೆ, ಪಾಕಿಸ್ತಾನವು ಪ್ಯಾರಿಸ್ಸಿನಲ್ಲಿ ಮೂರು ತಿಂಗಳು ರಾಯಭಾರಿಯನ್ನೇ ಹೊಂದಿಲ್ಲ ಎಂಬುದು ನಂತರ ಪಾಕಿಸ್ತಾನದ ಅರವಿಗೆ ಬಂದಿತ್ತು.

ಬಳಿಕ ಪಾಕಿಸ್ತಾನದ ಬೀದಿಗಳಲ್ಲಿ, ಫ್ರೆಂಚ್ ಸರಕುಗಳನ್ನು ಬಹಿಷ್ಕರಿಸುವ ಕರೆಗಳು ಬಂದಿದ್ದವು. ಫ್ರಾನ್ಸಿನಲ್ಲಿ  ವ್ಯಂಗ್ಯಚಿತ್ರಗಳನ್ನು ಮರುಪ್ರಕಟಿಸುವುದನ್ನು ವಿರೋಧಿಸಿ ಇಸ್ಲಾಮಾಬಾದ್ನಲ್ಲಿ ಧರಣಿ ನಡೆಸಿದ ಉಗ್ರಗಾಮೀ ಇಸ್ಲಾಮಿಸ್ಟ್ ಗುಂಪು ತೆಹ್ರೀಕ್--ಲಬೈಕ್ಪಾಕಿಸ್ತಾನವು ಹಿಂದಿನ ವಾರ ಫ್ರೆಂಚ್ ಸರಕುಗಳನ್ನು ಬಹಿಷ್ಕರಿಸಲು ಸರ್ಕಾರ ಒಪ್ಪಿಕೊಂಡಿದೆ ಎಂಬುದನ್ನು ಬಹಿರಂಗ ಪಡಿಸಿತ್ತು. ಧಾರ್ಮಿಕ ವ್ಯವಹಾರಗಳ ಸಚಿವರು ಮತ್ತು ಆಂತರಿಕ ಸಚಿವರು ಬಹಿಷ್ಕಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಗುಂಪು ಸಾರ್ವಜನಿಕವಾಗಿ ಹೇಳಿತ್ತು.

No comments:

Advertisement