‘ಲವ್ ಜಿಹಾದ್’ ಕಾನೂನಿಗೆ ಮಧ್ಯಪ್ರದೇಶ ಅಸ್ತು
ಭೋಪಾಲ್: ಉತ್ತರ ಪ್ರದೇದ ಹಾದಿಯಲ್ಲಿಯೇ ಮುಂದಕ್ಕೆ ಸಾಗಿರುವ ಮಧ್ಯಪ್ರದೇಶವು 2020 ಡಿಸೆಂಬರ್ 26ರ ಶನಿವಾರ ’ಲವ್ ಜಿಹಾದ್’ ನಿಷೇಧ ಕಾಯ್ದೆಗೆ ತನ್ನ ಒಪ್ಪಿಗೆ ನೀಡಿದೆ. ಬಲವಂತದ ಧಾರ್ಮಿಕ ಮತಾಂತರವನ್ನು ನಿಷೇಧಿಸುವ ಮಸೂದೆಗೆ ಮಧ್ಯಪ್ರದೇಶ ಸಚಿವ ಸಂಪುಟವು ತನ್ನ ಸಮ್ಮತಿಯ ಮುದ್ರೆಯನ್ನು ಒತ್ತಿದೆ.
"ಹೊಸ ಮಸೂದೆಯ ಅಡಿಯಲ್ಲಿ, ಯಾರೊಬ್ಬರ ಮೇಲೆ ಧಾರ್ಮಿಕ ಮತಾಂತರವನ್ನು ಒತ್ತಾಯಿಸುವುದು ಒಂದರಿಂದ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ ೨೫ ಸಾವಿರ ರೂ.ಗಳ ದಂಡಕ್ಕೆ ಕಾರಣವಾಗುತ್ತದೆ. ಅಪ್ರಾಪ್ತ ವಯಸ್ಕ, ಮಹಿಳೆ ಅಥವಾ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ವ್ಯಕ್ತಿಯನ್ನು ಬಲವಂತವಾಗಿ ಮತಾಂತರಗೊಳಿಸುವವರಿಗೆ ದುಪ್ಪಟ್ಟು ಜೈಲು ಶಿಕ್ಷೆ ಅಂದರೆ ಕನಿಷ್ಠ ೨ರಿಂದ ೧೦ ವರ್ಷಗಳ ಸೆರೆವಾಸ ಮತ್ತು ಕನಿಷ್ಠ ೫೦,೦೦೦ ರೂಪಾಯಿಗಳ ದಂಡ ವಿಧಿಸಲಾಗುವುದು ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರ ಸಂಪುಟ ಸಭೆಯ ಬಳಿಕ ಹೇಳಿದರು.
ಸಂಪುಟದ ಅನುಮೋದನೆ ಪಡೆದಿರುವ ಮಸೂದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಹೊಸ ಕಾಯ್ದೆಯು ಮಧ್ಯಪ್ರದೇಶದಲ್ಲಿ ಈಗ ಜಾರಿಯಲ್ಲಿರುವ ಮಧ್ಯಪ್ರದೇಶ ಧರ್ಮ ಸ್ವಾತಂತ್ರ್ಯ ಅಧಿಕಾರ ೧೯೬೮ರ ಕಾನೂನನ್ನು ಬದಲಾಯಿಸಲು ಸಜ್ಜಾಗಿದೆ.
ವರದಿಗಳ ಪ್ರಕಾರ ೧೯೬೮ ರ ಕಾನೂನು ಹಳೆಯದಾಗಿದ್ದು, ಬಲವಂತದ ಮತಾಂತರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿನ ಕಳೆದ ೫೦ ವರ್ಷಗಳ ಅನುಭವದ ಬೆಳಕಿನಲ್ಲಿ ಅದನ್ನು ಪುನರ್ರಚಿಸಲಾಗುತ್ತಿದೆ ಎಂದು ಬಿಜೆಪಿ ಸರ್ಕಾರ ಪ್ರತಿಪಾದಿಸಿದೆ.
ವಿಶೇಷವಾಗಿ ವಿವಾಹದ ನೆಪದಲ್ಲಿ ಧಾರ್ಮಿಕ ಮತಾಂತರಗಳನ್ನು ಒತ್ತಾಯಿಸುವಂತ ಪ್ರಕರಣಗಳಲ್ಲಿ ಅಂತಹ ಅಪರಾಧಗಳನ್ನು ನಿಷೇಧಿಸಲು ಸುಧಾರಿತ ವ್ಯಾಖ್ಯಾನಗಳು ಮತ್ತು ಹೆಚ್ಚಿನ ದಂಡಗಳ ಅಗತ್ಯವಿದೆ.
ಆದರೆ, ಉತ್ತರ ಪ್ರದೇಶದ ಕಾನೂನುಬಾಹಿರ ಧಾರ್ಮಿಕ ಮತಾಂತರದ ಸುಗ್ರೀವಾಜ್ಞೆಗೆ ಹೋಲಿಸಿದರೆ, ಮಧ್ಯಪ್ರದೇಶದ ಕಾನೂನಿನ ಪ್ರಕಾರ, ಸ್ವ ಇಚ್ಛೆಯಿಂದ ಮತಾಂತರಗೊಳ್ಳುವ ವ್ಯಕ್ತಿ ಅದನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ವರದಿ ಮಾಡಬೇಕಾಗಿಲ್ಲ. ಅಂತಹ ಮತಾಂತರಕ್ಕಾಗಿ ಒಬ್ಬ ವ್ಯಕ್ತಿಯು ಧಾರ್ಮಿಕ ಮುಖ್ಯಸ್ಥರನ್ನು ಸಂಪರ್ಕಿಸಿದರೆ, ಸಂಬಂಧಪಟ್ಟ ಧಾರ್ಮಿಕ ಮುಖ್ಯಸ್ಥ ಜಿಲ್ಲಾಡಳಿತಕ್ಕೆ ತಿಳಿಸಬೇಕಾಗುತ್ತದೆ.
ವ್ಯಕ್ತಿಯನ್ನು ಮತಾಂತರಗೊಳಿಸುವ ಉದ್ದೇಶದಿಂದ ಮಾತ್ರ ನಡೆಯುವ ಯಾವುದೇ ವಿವಾಹವನ್ನು ಈ ಉದ್ದೇಶಿತ ಶಾಸನದ ನಿಬಂಧನೆಗಳ ಅಡಿಯಲ್ಲಿ ಶೂನ್ಯ ಮತ್ತು ಅನೂರ್ಜಿತವೆಂದು ಪರಿಗಣಿಸಲಾಗುತ್ತದೆ ಎಂದು ಮಿಶ್ರ ಹೇಳಿದರು.
ಮತಾಂತರಗೊಳ್ಳಲು ಇಚ್ಛಿಸುವವರು ಎರಡು ತಿಂಗಳ ಮೊದಲು ಜಿಲ್ಲಾಡಳಿತದ ಮುಂದೆ ಅರ್ಜಿ ಸಲ್ಲಿಸುವ ಅವಶ್ಯಕತೆಯಿದೆ ಎಂದು ಅವರು ನುಡಿದರು.
No comments:
Post a Comment