ಕೊನೆಗೂ ರಜನಿಕಾಂತ್ ರಾಜಕೀಯಕ್ಕೆ
ಚೆನ್ನೈ: ನಟ-ರಾಜಕಾರಣಿ ರಜನಿಕಾಂತ್ ಅವರು ತಮಿಳುನಾಡು ವಿಧಾನಸಭಾ ಚುನಾವಣೆಗೆ ತಿಂಗಳುಗಳ ಮುಂಚಿತವಾಗಿ ೨೦೨೧ ರ ಜನವರಿಯಲ್ಲಿ ತಮ್ಮ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ 2020ರ ಡಿಸೆಂಬರ್ 3ರ ಗುರುವಾರ ಘೋಷಿಸುವ ಮೂಲಕ ಹಲವಾರು ವರ್ಷಗಳ ಊಹಾಪೋಹಗಳಿಗೆ ತೆರೆ ಎಳೆದರು.
ರಜನಿ ರಾಜಕೀಯ ಪ್ರವೇಶದ ಬಗ್ಗೆ ೧೯೯೬ ರಿಂದ ಊಹಾಪೋಹಗಳಿದ್ದು ಅಧಿಕೃತ ಪ್ರಕಟಣೆಯಲ್ಲಿ ಕನಿಷ್ಠ ಎರಡು ದಶಕಗಳ ವಿಳಂಬವಾಗಿದೆ.
ರಜನಿಕಾಂತ್ ಅವರು ತಮ್ಮ ಪಕ್ಷದ ವಿವರಗಳನ್ನು ೨೦೨೦ ರ ಡಿಸೆಂಬರ್ ೩೧ ರಂದು ಪ್ರಕಟಿಸುವುದಾಗಿ ಹೇಳಿದರು. ರಾಜ್ಯ ಚುನಾವಣೆಗಳು ಬೇಸಿಗೆಯಲ್ಲಿ ನಡೆಯಲಿವೆ.
ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಲಾದ ಸಂಕ್ಷಿಪ್ತ ಹೇಳಿಕೆಯಲ್ಲಿ, ರಜನಿಕಾಂತ್ "ಭ್ರಷ್ಟಾಚಾರ ರಹಿತ, ಪ್ರಾಮಾಣಿಕ, ಪಾರದರ್ಶಕ ಮತ್ತು ಆಧ್ಯಾತ್ಮಿಕ ರಾಜಕೀಯವನ್ನು ಹೊಂದಿರುವ ಜಾತ್ಯತೀತ ಪಕ್ಷವು ಮುಂದಿನ ಚುನಾವಣೆಗಳಲ್ಲಿ ಖಂಡಿತವಾಗಿಯೂ ಗೆಲ್ಲುತ್ತದೆ’ ಎಂದು ಹೇಳಿದರು. ಈ ಹಿಂದೆ ಅವರು ಸ್ಪಷ್ಟಪಡಿಸಿದ ಆಧ್ಯಾತ್ಮಿಕ ರಾಜಕಾರಣ ಎಂದರೆ ‘ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ಮುಕ್ತ’ ರಾಜಕಾರಣವಾಗಿದೆ.
ಆದರೆ, ೨೦೨೧ ರ ರಾಜ್ಯ ಚುನಾವಣೆಯಲ್ಲಿ ಪಕ್ಷವು ಸ್ಪರ್ಧಿಸುವುದೇ ಎಂದು ಚಿತ್ರನಟ ಸ್ಪಷ್ಟಪಡಿಸಿಲ್ಲ.
೨೦೨೦ರ ಮಾರ್ಚ್ ತಿಂಗಳಲ್ಲಿ, ರಜನಿಕಾಂತ್ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗುವುದಿಲ್ಲ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು.
ಈ ಒಂದು ನಿರ್ಧಾರ ಬದಲಾಗದಿದ್ದಲ್ಲಿ ಅದು ಅವರ ರಾಜಕೀಯ ಪ್ರವೇಶವನ್ನು ಕುಂಠಿತಗೊಳಿಸಬಹುದು, ಏಕೆಂದರೆ ಅವರ ಬಹುಪಾಲು ಅಭಿಮಾನಿಗಳು ಅವರನ್ನು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಕಾಣಲು ಬಯಸುತ್ತಿದ್ದಾರೆ.
ಆರೋಗ್ಯದ ಹಿನ್ನೆಲೆಯಲ್ಲಿ ಅವರು ಪಕ್ಷವನ್ನು ಪ್ರಾರಂಭಿಸದಿರಬಹುದು ಎಂಬ ವರದಿಗಳ ಮಧ್ಯೆ, ರಜನಿಕಾಂತ್ ಸೋಮವಾರ ಚೆನ್ನೈಯಲ್ಲಿ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ್ದರು ಮತ್ತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು.
ತಮ್ಮ ಟ್ವಿಟ್ಟರ್ ಪ್ರಕಟಣೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಜನಿಕಾಂತ್, ತಮಿಳುನಾಡಿನಲ್ಲಿ ಬದಲಾವಣೆ ತರಲು ರಾಜಕೀಯ ಪ್ರವೇಶಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
‘ನಾನು ಕೇವಲ ಒಂದು ಸಾಧನ. ಜನರು ಮಾತ್ರ ಬದಲಾವಣೆಯನ್ನು ತರಬಹುದು. ನಾನು ಗೆದ್ದರೆ, ಅದು ಜನರ ಗೆಲುವು. ನಾನು ಸೋತರೆ ಅದು ಅವರ ಸೋಲು. ನಾವು ಎಲ್ಲವನ್ನೂ ಬದಲಾಯಿಸಬೇಕಾಗಿದೆ. ಈಗ ಇಲ್ಲದಿದ್ದರೆ, ಎಂದಿಗೂ ಅದು ಇಲ್ಲ’ ಎಂದು ರಜನಿ ಹೇಳಿದರು.
‘ಇದು ತಮಿಳುನಾಡಿನ ಹಣೆಬರಹವನ್ನು ಬದಲಾಯಿಸುವ ಸಮಯ. ರಾಜಕೀಯ ಪಕ್ಷವನ್ನು ಪ್ರಾರಂಭಿಸಲು ಸಾಕಷ್ಟು ಕೆಲಸಗಳಿವೆ, ನಾವು ಈಗಾಗಲೇ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ಈ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಲು ನನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೇನೆ’ ಎಂದು ಅವರು ಹೇಳಿದರು.
ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ ರಜನಿಕಾಂತ್, ‘ನಾನು ಮೂತ್ರಪಿಂಡ ಕಸಿಗೆ ಒಳಗಾಗಿದ್ದೇನೆ ಎಂದು ನಿಮಗೆ ತಿಳಿದಿದೆ. ರಾಜಕೀಯ ಪ್ರವೇಶಿಸದಂತೆ ವೈದ್ಯರು ನನಗೆ ಸಲಹೆ ನೀಡಿದ್ದಾರೆ. ಆದರೆ. ನಾನು ಸಿಂಗಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚೇತರಿಸಿಕೊಳ್ಳಲು ಸಹಾಯ ಮಾಡಿದ ತಮಿಳುನಾಡು ಜನರಿಗೆ, ನನ್ನ ಪ್ರಾಣವನ್ನು ತ್ಯಾಗಮಾಡಲು ನಾನು ಸಿದ್ಧನಿದ್ದೇನೆ’ ಎಂದು ಹೇಳಿದರು.
No comments:
Post a Comment