Sunday, September 11, 2022

ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ದೈವಾಧೀನ

 ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ದೈವಾಧೀನ

ನವದೆಹಲಿ: ಗುಜರಾತಿನ ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು 2022 ಸೆಪ್ಟೆಂಬರ್‌ 11ರ ಭಾನುವಾರ ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯಲ್ಲಿ ತಮ್ಮ 99 ನೇ ವಯಸ್ಸಿನಲ್ಲಿ ದೈವಾಧೀನರಾದರು.

ಹಿಂದೂ ಧಾರ್ಮಿಕ ಮುಖಂಡ ಶ್ರೀಧಾಮ ಜೋತೇಶ್ವರ ಆಶ್ರಮದಲ್ಲಿ ಮಧ್ಯಾಹ್ನ 3:30 ರ ಸುಮಾರಿಗೆ ಅವರು ಕೊನೆಯುಸಿರೆಳೆದರು ಎಂದು ದ್ವಾರಕಾ ಪೀಠದ ಎರಡನೇ ಸ್ಥಾನದಲ್ಲಿ ಇರುವ (ದಂಡಿ ಸ್ವಾಮಿ ಎಂದು ಕರೆಯಲಾಗುತ್ತವ) ಸ್ವಾಮಿ ಸದಾನಂದ ಮಹಾರಾಜ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.

ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ನಿಧನದಿಂದ ನನಗೆ ಅತೀವ ದುಃಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶೋಖ ವ್ಯಕ್ತ ಪಡಿಸಿದರು. "ಈ ದುಃಖದ ಸಮಯದಲ್ಲಿ ಅವರ ಅನುಯಾಯಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ!" ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದರು.

ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಗುಜರಾತಿನ ದ್ವಾರಕಾ ಶಾರದಾ ಪೀಠ ಮತ್ತು ಬದರಿನಾಥದ ಜ್ಯೋತಿರ್ ಮಠದ ಶಂಕರಾಚಾರ್ಯರು.

ಶಂಕರಾಚಾರ್ಯರು 1924 ರಲ್ಲಿ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ದಿಘೋರಿ ಗ್ರಾಮದಲ್ಲಿ ಪೋತಿರಾಮ್ ಉಪಾಧ್ಯಾಯರಾಗಿ ಜನಿಸಿದ್ದರು. ಅವರು ತಮ್ಮ 9 ನೇ ವಯಸ್ಸಿನಲ್ಲಿ ದೇವರ ಅನ್ವೇಷಣೆಯಲ್ಲಿ  ತೊಡಗಿ ತಮ್ಮ ಮನೆಯನ್ನು ತೊರೆದಿದ್ದರು.

ಸ್ವರೂಪಾನಂದ ಸರಸ್ವತಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜೈಲಿಗೆ ಕೂಡಾ ಹೋಗಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೀಡಿದ ಕೊಡುಗೆಗಳಿಗೂ ಅವರು ಹೆಸರುವಾಸಿಯಾಗಿದ್ದಾರೆ.

ಸರಸ್ವತಿ ಅವರು 1981 ರಲ್ಲಿ ಶಂಕ್ರಾಚಾರ್ಯರಾದರು . ಶಂಕರಾಚಾರ್ಯರ 99 ನೇ ಜನ್ಮದಿನವನ್ನು ಇತ್ತೀಚೆಗೆ ಆಚರಿಸಲಾಗಿತ್ತು.

No comments:

Advertisement