Wednesday, June 12, 2024

ಕುವೈತ್ ಅಗ್ನಿ ದುರಂತ: 40 ಭಾರತೀಯರ ಸಾವು

 ಕುವೈತ್ ಅಗ್ನಿ ದುರಂತ: 40 ಭಾರತೀಯರ ಸಾವು

ವದೆಹಲಿ: ಕುವೈತ್‌ನಲ್ಲಿ ಡಜನ್‌ಗಟ್ಟಲೆ ಕಾರ್ಮಿಕರು ವಾಸಿಸುತ್ತಿದ್ದ ಆರು ಅಂತಸ್ತಿನ ಕಟ್ಟಡಕ್ಕೆ 2024 ಜೂನ್‌ 12ರ ಬುಧವಾರ ನಸುಕಿನಲ್ಲಿ ಬೆಂಕಿ ತಗುಲಿದ ಪರಿಣಾಮವಾಗಿ ಕನಿಷ್ಠ 40 ಭಾರತೀಯರು ಸೇರಿದಂತೆ ಸುಮಾರು 49 ಮಂದಿ ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ನಸುಕಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ನಿವಾಸಿಗಳು ಮಲಗಿದ್ದ ಕಾರಣ ಹೊಗೆಯಿಂದ ಉಸಿರುಗಟ್ಟಿ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುವೈತ್‌ನ ದಕ್ಷಿಣ ಅಹ್ಮದಿ ಗವರ್ನರೇಟ್‌ನ ಮಂಗಾಫ್ ಪ್ರದೇಶದಲ್ಲಿ ಕಟ್ಟಡದ ಕೆಳ ಮಹಡಿಯಲ್ಲಿನ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅರಬ್ ಟೈಮ್ಸ್ ಪ್ರಕಾರ, ಮೃತರಲ್ಲಿ ಹೆಚ್ಚಿನವರು ಕೇರಳ, ತಮಿಳುನಾಡು ಮತ್ತು ಉತ್ತರ ಭಾರತದ ರಾಜ್ಯಗಳವರು, ಅವರ ವಯಸ್ಸು 20 ರಿಂದ 50 ವರ್ಷಗಳು.
ತಲಾ 2 ಲಕ್ಷ ರೂ ಪರಿಹಾರ: ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಲಾ 2 ಲಕ್ಷ ರೂಪಾಯಿಗಳ ಎಕ್ಸ್‌ ಗ್ರಾಷಿಯಾ ಪರಿಹಾರ ಘೋಷಿಸಿದ್ದಾರೆ. ಪ್ರಧಾನಿಯವರ ಸೂಚನೆ ಮೇರೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್‌ ಸಿಂಗ್‌ ಅವರು ತುರ್ತಾಗಿ ಕುವೈತಿಗೆ ಪಯಣಿಸಿದ್ದಾರೆ.  
ಕುವೈತ್‌ನ ಉಪ ಪ್ರಧಾನ ಮಂತ್ರಿ ಹಾಗೂ ಆಂತರಿಕ ಸಚಿವ ಶೇಖ್ ಫಹಾದ್ ಅಲ್-ಯೂಸುಫ್ ಅಲ್-ಸಬಾಹ್ ಅವರು ಅಗ್ನಿ ದುರಂತವು "ಕಂಪೆನಿ ಮತ್ತು ಕಟ್ಟಡ ಮಾಲೀಕರ ದುರಾಸೆಯ ಪರಿಣಾಮವಾಗಿದೆ" ಎಂದು ಹೇಳಿದ್ದಾರೆ.
ಕಟ್ಟಡವನ್ನು ಎನ್‌ಬಿಟಿಸಿ ಗ್ರೂಪ್ ಬಾಡಿಗೆಗೆ ಪಡೆದಿದ್ದು, ಮಲಯಾಳಿ ಉದ್ಯಮಿ ಕೆ.ಜಿ.ಅಬ್ರಹಾಂ ಒಡೆತನದಲ್ಲಿದೆ. ಗಲ್ಫ್‌ನಲ್ಲಿ ಕಡಿಮೆ ಸಂಬಳದ, ನೀಲಿ ಕಾಲರ್ ಕೆಲಸಗಾರರು ಹೆಚ್ಚಾಗಿ ಕಿಕ್ಕಿರಿದ ವಸತಿಗಳಲ್ಲಿ ವಾಸಿಸುತ್ತಾರೆ.
ಅಗ್ನಿ ದುರಂತ ಸಂಭವಿಸಿದ ಕಟ್ಟಡದ ಹೊರಗೆ ಕುವೈಟ್ ಅಗ್ನಿಶಾಮಕ ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್‌ಗಳು ಜಮಾಯಿಸಿವೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ.
ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದರು. ಸಭೆಯ ನಂತರ ಶೀಘ್ರದಲ್ಲೇ ಕುವೈತ್‌ಗೆ ತೆರಳುವುದಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ (MoS) ಕೀರ್ತಿ ವರ್ಧನ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

No comments:

Advertisement