Showing posts sorted by date for query ಸ್ವಾತಂತ್ರ್ಯ. Sort by relevance Show all posts
Showing posts sorted by date for query ಸ್ವಾತಂತ್ರ್ಯ. Sort by relevance Show all posts

Friday, August 14, 2026

ನಡುರಾತ್ರಿಯಲ್ಲಿ ಏಕೆ ಸ್ವಾತಂತ್ರ್ಯ? 1947ರ ಒಂದು ಕಥೆ

 ನಡುರಾತ್ರಿಯಲ್ಲಿ ಏಕೆ ಸ್ವಾತಂತ್ರ್ಯ? 1947ರ ಒಂದು ಕಥೆ

1947ರ ಜೂನ್ 4ರ ಮಧ್ಯಾಹ್ನ. ಕಲ್ಕತ್ತಾದ (ಈಗಿನ ಕೋಲ್ಕತ್ತಾ) ಖ್ಯಾತ ಜ್ಯೋತಿಷಿ ಸ್ವಾಮಿ ಮದನಾನಂದ ಅವರು ಆಲ್ ಇಂಡಿಯಾ ರೇಡಿಯೋದಲ್ಲಿ (AIR) ಬ್ರಿಟಿಷ್ ಭಾರತದ ಕೊನೆಯ ವೈಸ್‌ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರ ಪತ್ರಿಕಾ ಗೋಷ್ಠಿಯನ್ನು ಆಲಿಸುತ್ತಿದ್ದರು. "ಆಗಸ್ಟ್ 15, 1947ರಂದು ಬ್ರಿಟಿಷರು ಭಾರತೀಯರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ" ಎಂದು ಮೌಂಟ್ ಬ್ಯಾಟನ್ ಘೋಷಿಸಿದರು.

ದೇಶವೇ ದಶಕಗಳಿಂದ ಕಾಯುತ್ತಿದ್ದ ಸ್ವಾತಂತ್ರ್ಯದ ದಿನ ನಿಗದಿಯಾಗಿತ್ತು. ಆದರೆ ಮದನಾನಂದರ ಮುಖದಲ್ಲಿ ಖುಷಿಯ ಬದಲಿಗೆ ಆತಂಕ ಕವಿಯಿತು.
"ಅಯ್ಯೋ, ಅವರು ಏನು ಮಾಡಿಬಿಟ್ಟರು? ಏನು ಮಾಡಿಬಿಟ್ಟರು?
” ಎಂದು ಮದನಾನಂದರು ದಿಗ್ಭ್ರಮೆಯಿಂದ ಕೂಗಿಕೊಂಡರು. ತಕ್ಷಣ ತಮ್ಮ ಜ್ಯೋತಿಷ್ಯದ ಖಗೋಳ ನಕ್ಷತ್ರ ನಕಾಶೆಗಳನ್ನು ತೆಗೆದು ಪರಿಶೀಲಿಸಿದರು. ರಾಷ್ಟ್ರಕ್ಕೆ ಕಾದಿರುವ ಭಯಾನಕ  ಭವಿಷ್ಯದ ಮುನ್ಸೂಚನೆ ಅವರಿಗೆ ಸಿಕ್ಕಿತು.

ನಕ್ಷತ್ರ ದೋಷದ ಆತಂಕ

ವಾರಾಣಸಿ, ಕಲ್ಕತ್ತಾ ಮತ್ತು ದಕ್ಷಿಣ ಭಾರತದಾದ್ಯಂತ ಜ್ಯೋತಿಷಿಗಳು ಈ ದಿನಾಂಕವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರು. ಆಗಸ್ಟ್ 15, 1947 ಶುಕ್ರವಾರವಾಗಿತ್ತು. ಹಿಂದೂ ಜ್ಯೋತಿಷ್ಯದ ಪ್ರಕಾರ ಶುಕ್ರವಾರ ಮತ್ತು ಭಾನುವಾರಗಳು ಯಾವುದೇ ಶುಭ ಕಾರ್ಯಗಳಿಗೆ ಅಶುಭ ದಿನಗಳು. ಭಾರತವು ಮಕರ ರಾಶಿಯಲ್ಲಿ, ಶನಿ ಮತ್ತು ರಾಹುವಿನ ಪ್ರಭಾವದೊಂದಿಗೆ ಜನಿಸಲಿದೆ ಎಂದು ಜ್ಯೋತಿಷಿಗಳು ಕಂಡುಕೊಂಡರು.

"ಪ್ರಳಯ, ಬರಗಾಲ, ಕ್ಷಾಮ ಮತ್ತು ನರಮೇಧಗಳು ಸಂಭವಿಸಿದರೆ, ಸ್ವತಂತ್ರ ಭಾರತವು ನಕ್ಷತ್ರಗಳ ಶಾಪಗ್ರಸ್ತ ದಿನದಂದು ಜನಿಸಿದ್ದೇ ಕಾರಣವಾಗುತ್ತದೆ" ಎಂದು ಸ್ವಾಮಿ ಮದನಾನಂದರು ಮೌಂಟ್ ಬ್ಯಾಟನ್ ಅವರಿಗೆ ಪತ್ರ ಬರೆದು ಎಚ್ಚರಿಸಿದರು. ದೇಶದ ನಾಯಕರಿಗೂ ಸಹ ಜ್ಯೋತಿಷಿಗಳು ಈ ಬಗ್ಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ ಮೌಂಟ್ ಬ್ಯಾಟನ್ ಅವರಿಗೆ ತಮ್ಮ ನಿರ್ಧಾರ ಮುಖ್ಯವಾಗಿತ್ತು. ಆಗಸ್ಟ್‌ 15 ಜಪಾನ್‌ ಶರಣಾಗತಿಯ ಎರಡನೇ ವಾರ್ಷಿಕೋತ್ಸವದ ದಿನ. ಈ ನೆನಪಿಗಾಗಿ ಮೌಂಟ್‌ ಬ್ಯಾಟನ್‌ ಈದಿನವನ್ನು ಆಯ್ದುಕೊಂಡಿದ್ದರು. ಹೀಗಾಗಿ ದಿನ ಬದಲಾವಣೆ ಅಸಾಧ್ಯವಾಗಿತ್ತು.

ನೆಹರೂ ಉಪಾಯ

ದಿನಾಂಕವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಾದಾಗ, ಆ ದಿನದೊಳಗೆ ಒಂದು ಶುಭ ಮುಹೂರ್ತವನ್ನು ಕಂಡುಹಿಡಿಯುವ ಜವಾಬ್ದಾರಿ ನಾಯಕರ ಮೇಲಿತ್ತು. ಜ್ಯೋತಿಷಿಗಳು ರಾತ್ರಿ 12 ಗಂಟೆಯ ಸಮಯವನ್ನು (ಅಭಿಜಿತ್ ಮುಹೂರ್ತ ಹಾಗೂ ಪುಷ್ಯ ನಕ್ಷತ್ರದ ಸಂಯೋಜನೆ) ಅತ್ಯಂತ ಅನುಕೂಲಕರವೆಂದು ಸೂಚಿಸಿದರು.

ಪಂಡಿತ್ ಜವಾಹರಲಾಲ್ ನೆಹರೂ ಅವರು ಈ ಸಂದರ್ಭದಲ್ಲಿ ಒಂದು ಅತ್ಯುತ್ತಮ ರಾಜೀ ಮಾರ್ಗವನ್ನು ಕಂಡುಕೊಂಡರು. ಪತ್ರಕರ್ತ ದುರ್ಗಾ ದಾಸ್ ಅವರ ಪುಸ್ತಕದ ಪ್ರಕಾರ, ನೆಹರೂ ಅವರು ಆಗಸ್ಟ್ 14ರ ಮಧ್ಯಾಹ್ನವೇ ಸಂವಿಧಾನ ಸಭೆಯನ್ನು ಕರೆದರು ಮತ್ತು ಅದರ ಕಲಾಪವನ್ನು ಮಧ್ಯರಾತ್ರಿಯವರೆಗೆ ಮುಂದುವರಿಸಿದರು.

ಹಿಂದೂ ಕ್ಯಾಲೆಂಡರ್ ಪ್ರಕಾರ ಸೂರ್ಯೋದಯದ ಬಳಿಕವೇ 15ರ ಆರಂಭ. ಆದರೆ ಪಾಶ್ಚಿಮಾತ್ಯ ಪದ್ಧತಿಯ ಪ್ರಕಾರ ರಾತ್ರಿ 12 ಗಂಟೆಯಿಂದಲೇ ಆಗಸ್ಟ್ 15 ಆರಂಭವಾಗಿತ್ತು. ಹೀಗಾಗಿ, ಆಗಸ್ಟ್ 15ರ ಆರಂಭದ ಮೊದಲ ಕ್ಷಣದಲ್ಲೇ (ಮಧ್ಯರಾತ್ರಿ) ಭಾರತವು ಸ್ವಾತಂತ್ರ್ಯ ಪಡೆಯಿತು. ಇದು ಜ್ಯೋತಿಷಿಗಳು ಬಯಸಿದ್ದ ಶುಭ ಮುಹೂರ್ತವೂ ಆಗಿತ್ತು, ಮೌಂಟ್ ಬ್ಯಾಟನ್ ಘೋಷಿಸಿದ ಆಗಸ್ಟ್ 15ರ ದಿನವೂ ಕೂಡಾ!

ಹೀಗೆ ನಕ್ಷತ್ರಗಳ ದೋಷವನ್ನು ಪರಿಹರಿಸಲು ನೆಹರೂ ಅವರು ಕಂಡುಕೊಂಡ ಈ ʼನಡುರಾತ್ರಿʼಯ ದಾರಿಯಿಂದಾಗಿ, ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ʼನಡುರಾತ್ರಿʼ ಎಂಬ ಪದವು ಶಾಶ್ವತವಾಗಿ ಅಂಟಿಕೊಂಡಿತು. ಆಗಸ್ಟ್ 14ರ ರಾತ್ರಿ ಇಡೀ ದೇಶ ಎಚ್ಚರದಿಂದಿತ್ತು. ಗಡಿಯಾರದ ಮುಳ್ಳುಗಳು ಹನ್ನೆರಡು ಭಾರಿಸಿದಾಗ, ನೆಹರೂ ಅವರು ತಮ್ಮ ಐತಿಹಾಸಿಕ ಭಾಷಣವನ್ನು ಮೊಳಗಿಸಿದರು:

"ಇಡೀ ಜಗತ್ತು ನಿದ್ರಿಸುತ್ತಿರುವಾಗ, ಭಾರತವು ಜೀವ ಮತ್ತು ಸ್ವಾತಂತ್ರ್ಯಕ್ಕಾಗಿ ಹೊಸ ಚೈತನ್ಯದೊಂದಿಗೆ ಎಚ್ಚೆತ್ತುಕೊಳ್ಳುತ್ತದೆ."

ಮಾಹಿತಿ ಸೌಜನ್ಯ: ಇಂಡಿಯಾ ಟುಡೆ

Friday, November 7, 2025

ರಾಷ್ಟ್ರಗೀತೆ "ವಂದೇ ಮಾತರಂ"ಗೆ ೧೫೦ರ ಸಂಭ್ರಮ

 ರಾಷ್ಟ್ರಗೀತೆ "ವಂದೇ ಮಾತರಂ"ಗೆ ೧೫೦ರ ಸಂಭ್ರಮ

ಸ್ಮರಣಾರ್ಥ ಉತ್ಸವ ಕ್ಕೆ ಪ್ರಧಾನಿ ಚಾಲನೆ

ಭಾರತದ ರಾಷ್ಟ್ರಗೀತೆ ʼವಂದೇ ಮಾತರಂʼನ ೧೫೦ನೇ ವರ್ಷಾಚರಣೆ ಸ್ಮರಣಾರ್ಥ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ೨೦೨೫ ನವೆಂಬರ್‌ ೭ರ ಶುಕ್ರವಾರ ಚಾಲನೆ ನೀಡಿದರು.

ಸಂಸ್ಕೃತಿ ಸಚಿವಾಲಯವು ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪ್ರಧಾನಿ ಈ ಶುಭ ಸಮಾರಂಭವನ್ನು ಉದ್ಘಾಟಿಸಿದರು.

ಈ ಕಾರ್ಯಕ್ರಮವು ನವೆಂಬರ್ ೭, ೨೦೨೫ ರಿಂದ ನವೆಂಬರ್ ೭, ೨೦೨೬ ರವರೆಗೆ ಒಂದು ವರ್ಷದ ರಾಷ್ಟ್ರವ್ಯಾಪಿ ಸ್ಮರಣೋತ್ಸವಕ್ಕೆ ಔಪಚಾರಿಕವಾಗಿ ನಾಂದಿ ಹಾಡಿತು. ಭಾರತದ ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ನೀಡಿದ ಮತ್ತು ರಾಷ್ಟ್ರೀಯ ಹೆಮ್ಮೆ ಹಾಗೂ ಏಕತೆಯನ್ನು ಇಂದಿಗೂ ಜಾಗೃತಗೊಳಿಸುತ್ತಿರುವ ಈ ಕಾಲಾತೀತ ಸಂಯೋಜನೆಗೆ ೧೫೦ ವರ್ಷಗಳು ತುಂಬಿದ ಸಂಭ್ರಮ ಇದು.

🌟 ವಂದೇ ಮಾತರಂ ಇತಿಹಾಸ ಮತ್ತು ಮಹತ್ವ 🌟

೨೦೨೫ ವಂದೇ ಮಾತರಂ ಗೀತೆಗೆ ೧೫೦ ವರ್ಷ ತುಂಬಿದ ವರ್ಷ. ಬಂಕಿಮಚಂದ್ರ ಚಟರ್ಜಿ ಅವರು ರಚಿಸಿದ ನಮ್ಮ "ವಂದೇ ಮಾತರಂ" ರಾಷ್ಟ್ರಗೀತೆಯನ್ನು ೧೮೭೫ ರ ನವೆಂಬರ್ ೭ ರ ಅಕ್ಷಯ ನವಮಿಯ ಶುಭ ಸಂದರ್ಭದಲ್ಲಿ ಬರೆಯಲಾಯಿತು ಎಂದು ನಂಬಲಾಗಿದೆ.

ವಂದೇ ಮಾತರಂ ಮೊದಲು ಬಂಕಿಮಚಂದ್ರ ಅವರ ಕಾದಂಬರಿ ಆನಂದಮಠದ ಭಾಗವಾಗಿ 'ಬಂಗದರ್ಶನ್' ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಕಾಣಿಸಿಕೊಂಡಿತು ಮತ್ತು ನಂತರ ೧೮೮೨ ರಲ್ಲಿ ಸ್ವತಂತ್ರ ಪುಸ್ತಕವಾಗಿ ಪ್ರಕಟವಾಯಿತು.

ಆ ಅವಧಿಯಲ್ಲಿ ಭಾರತವು ಪ್ರಮುಖ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದಲಾವಣೆಗಳಿಗೆ ಒಳಗಾಗುತ್ತಿತ್ತು ಮತ್ತು ರಾಷ್ಟ್ರೀಯ ಅಸ್ಮಿತೆ ಹಾಗೂ ವಸಾಹತುಶಾಹಿ ಆಡಳಿತಕ್ಕೆ ಪ್ರತಿರೋಧದ ಪ್ರಜ್ಞೆ ಬೆಳೆಯುತ್ತಿತ್ತು. ತಾಯಿಭಾರತಿಯನ್ನು ಶಕ್ತಿ, ಸಮೃದ್ಧಿ ಮತ್ತು ದೈವತ್ವದ ಮೂರ್ತರೂಪವಾಗಿ ಆವಾಹಿಸುವ ಈ ಹಾಡು, ಭಾರತದ ಜಾಗೃತಗೊಂಡ ಏಕತೆ ಮತ್ತು ಆತ್ಮಗೌರವದ ಮನೋಭಾವಕ್ಕೆ ಕಾವ್ಯಾತ್ಮಕ ಅಭಿವ್ಯಕ್ತಿ ನೀಡಿತು. ಶೀಘ್ರದಲ್ಲೇ, ಇದು ರಾಷ್ಟ್ರಭಕ್ತಿಯ ಶಾಶ್ವತ ಸಂಕೇತವಾಯಿತು.

ಜನವರಿ ೨೪, ೧೯೫೦ ರಂದು, ಸಂವಿಧಾನ ಸಭೆಯ ಅಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್ ಅವರು, "ವಂದೇ ಮಾತರಂ" ಸ್ವಾತಂತ್ರ್ಯ ಹೋರಾಟದಲ್ಲಿ ಐತಿಹಾಸಿಕ ಪಾತ್ರವನ್ನು ವಹಿಸಿದ್ದರಿಂದ, ಅದಕ್ಕೆ ರಾಷ್ಟ್ರಗೀತೆ "ಜನ ಗಣ ಮನ" ದೊಂದಿಗೆ ಸಮಾನ ಗೌರವ ನೀಡಲಾಗುವುದು ಎಂದು ಘೋಷಿಸಿದರು.

🎤 ಸಮಾರಂಭದ ವಿಶೇಷತೆ: ಸಾಮೂಹಿಕ ಗಾಯನ 🎤

ಪ್ರಧಾನಮಂತ್ರಿಗಳ ಸಮ್ಮುಖದಲ್ಲಿ ನಡೆದ ಮುಖ್ಯ ಕಾರ್ಯಕ್ರಮದಲ್ಲಿ "ವಂದೇ ಮಾತರಂ"ನ ಸಂಪೂರ್ಣ ಆವೃತ್ತಿಯ ಸಾಮೂಹಿಕ ಗಾಯನ ನಡೆಯಿತು. ದೇಶಾದ್ಯಂತ ಇತರೆಡೆಗಳಲ್ಲೂ ವಂದೇ ಮಾತರಂನ ಸಂಪೂರ್ಣ ಆವೃತ್ತಿಯ ಸಾಮೂಹಿಕ ಗಾಯನ ನಡೆಯಿತು.

ಈ ಅಭಿಯಾನದಲ್ಲಿ ಸಾರ್ವಜನಿಕರು, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಪೊಲೀಸ್ ಸಿಬ್ಬಂದಿ, ವೈದ್ಯರು, ಶಿಕ್ಷಕರು, ಚಾಲಕರು, ಅಂಗಡಿಯವರು ಮತ್ತು ಸಮಾಜದ ಎಲ್ಲ ವರ್ಗಗಳ ಸಂಬಂಧಿತ ಪಾಲುದಾರರು ಭಾಗವಹಿಸಿದರು.

🏛️ ಕೇಂದ್ರ ಸಚಿವ ಸಂಪುಟದ ಅನುಮೋದನೆ 🏛️

ಈ ಐತಿಹಾಸಿಕ ಮತ್ತು ರಾಷ್ಟ್ರೀಯ ಮಹತ್ವವನ್ನು ಗುರುತಿಸಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಅಕ್ಟೋಬರ್ ೧, ೨೦೨೫ ರಂದು ರಾಷ್ಟ್ರಗೀತೆ ವಂದೇ ಮಾತರಂನ ೧೫೦ ವರ್ಷಗಳ ಆಚರಣೆಗಳಿಗೆ ಅನುಮೋದನೆ ನೀಡಿತ್ತು. ನಂತರ, ಅಕ್ಟೋಬರ್ ೨೪, ೨೦೨೫ ರಂದು ರಾಷ್ಟ್ರೀಯ ಅನುಷ್ಠಾನ ಸಮಿತಿಯು ನವೆಂಬರ್ ೭, ೨೦೨೫ ರಿಂದ ನವೆಂಬರ್ ೭, ೨೦೨೬ ರವರೆಗೆ ಒಂದು ವರ್ಷದ ಸ್ಮರಣೋತ್ಸವಕ್ಕೆ ಅನುಮೋದನೆ ನೀಡಿದೆ.

'ವಂದೇ ಮಾತರಂ'ಗೆ ಗೌರವ ನೀಡಿದ ಪರ್ಯಾಯದ ಪರಿ ಇಲ್ಲಿದೆ: ಚಿತ್ರಗಳನ್ನು ಕ್ಲಿಕ್‌  ಮಾಡಿ ನೋಡಿ:



Saturday, November 1, 2025

ಹೆಸರಾಂತ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಇನ್ನಿಲ್ಲ

 ಹೆಸರಾಂತ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಇನ್ನಿಲ್ಲ

ಹೆಸರಾಂತ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಅವರು ಇನ್ನಿಲ್ಲ. ೨೦೨೫ರ ನವೆಂಬರ್‌ ೧ರ ಶನಿವಾರ ಅವರು ಸ್ವರ್ಗಸ್ಥರಾದರು.
ಶಂಭು ಶರ್ಮರ ಬಗ್ಗೆ ಯಕ್ಷದೀಪ.ಕಾಮ್‌ ಐದು ವರ್ಷಗಳ ಹಿಂದೆ ಇದೇ ದಿನ ಪ್ರಕಟಿಸಿದ್ದ ಬರಹ ಇಲ್ಲಿದೆ. ಶಂಭುಶರ್ಮದ ಸಂಪೂರ್ಣ ಚಿತ್ರವನ್ನು ಇದು ನೀಡುತ್ತದೆ. ಇದರ ಜೊತೆಗೆ ಶಂಭು ಶರ್ಮರು ಉತ್ತರಕುಮಾರನಾಗಿ ಮಾಡಿದ್ದ ಅರ್ಥಗಾರಿಕೆಯ ತುಣುಕೊಂದು ಇಲ್ಲಿದೆ.
ವಿಟ್ಲ ಶಂಭು ಶರ್ಮ ಎಂಬ ಹೆಸರೇ ಒಂದು ಕಾಲದಲ್ಲಿ ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದ್ದ ಹೆಸರು. ತಾಳಮದ್ದಳೆ ಪ್ರಿಯ ಪ್ರೇಕ್ಷಕರ ದೈನಂದಿನ ಚರ್ಚೆಗಳಲ್ಲಿ ಆಗಾಗ ಪ್ರಸ್ತಾಪವಾಗುತ್ತಿದ್ದ ವ್ಯಕ್ತಿತ್ವ. ನಾನು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿಯೂ ಮನೆಯಲ್ಲಿ, ಸಮಾರಂಭಗಳಲ್ಲಿ ಶಂಭು ಶರ್ಮ ಎಂಬ ತಾಳಮದ್ದಳೆಯ ಹೊಸ ಪ್ರತಿಭೆಯ ಬಗ್ಗೆ ಮಾತನಾಡುವುದನ್ನು ಕೇಳಿದ್ದೆ. ‘ಒಳ್ಳೆ ಅರ್ಥ ಹೇಳ್ತಾರಂತೆ, ವಾದದಲ್ಲಿ ಎತ್ತಿದ ಕೈ” ಹೀಗೆ ಮಾತನಾಡುವುದು ಕೇಳಿಬರುತ್ತಿತ್ತು.
ಆಮೇಲೆ ಅವರ ಅರ್ಥಗಾರಿಕೆಯನ್ನು ಹಲವಾರು ಬಾರಿ ಕೇಳುವ ಅವಕಾಶವೂ ಬಂತು.  ವರ್ತಮಾನದ ಆಗುಹೋಗುಗಳ ಹೋಲಿಕೆ, ಹಾಸ್ಯಪ್ರವೃತ್ತಿ, ಶೃಂಗಾರ,  ಹುಡುಗಾಟಿಕೆಯ ಮನೋಭಾವ, ಇವುಗಳನ್ನೆಲ್ಲಾ ತನ್ನ ಅರ್ಥಗಾರಿಕೆಯಲ್ಲಿ ಬಳಸುವ ಶಂಭು ಶರ್ಮರ ಅರ್ಥಗಾರಿಕೆಯ ಶೈಲಿ  ಜನಪ್ರಿಯತೆಯನ್ನು ಸಾಧಿಸಿತು.  ತಾಳಮದ್ದಳೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಹೆಸರು. ಮಲ್ಪೆ ಶಂಕರನಾರಾಯಣ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್, ದೇರಾಜೆ ಸೀತಾರಾಮಯ್ಯ ಮತ್ತು  ಪ್ರಸ್ತುತ ಕೂಟಗಳಲ್ಲಿ ಸಕ್ರಿಯರಾಗಿರುವ ಹಲವಾರು ಈಗಿನ ಕಿರಿಯ ಅರ್ಥಧಾರಿಗಳ ಜೊತೆಗೂ ಈಗಲೂ ಬಹುಬೇಡಿಕೆಯ ಅರ್ಥಧಾರಿ.
ಅವರು ಅತಿ ಕಿರಿಯ ವಯಸ್ಸಿನಲ್ಲಿ ಪ್ರೇಕ್ಷಕನಾಗಿ ಹೋಗಿದ್ದ ತಾಳಮದ್ದಳೆ ಕೂಟವೊಂದರಲ್ಲಿ ಅನಿವಾರ್ಯವಾಗಿ ಅರ್ಥಧಾರಿಯಾಗಿ ಭಾಗವಹಿಸಿದಾಗ ಎದುರು ಪಾತ್ರಧಾರಿಯಿಂದ ಆದ ಮಾತಿನ ದಾಳಿಯಲ್ಲಿ ಸೋತು ಕಣ್ಣೀರಿಳಿಸಿದ ಅವರು ಮುಂದೆ ಹಠದಿಂದ ತಾಳಮದ್ದಳೆ ಅರ್ಥಧಾರಿಯಾಗಿ ಸಾಧನೆಯನ್ನು ಮಾಡಿದರು. 

ವಿಟ್ಲ ಶಂಭುಶರ್ಮ ಹುಟ್ಟಿದ್ದು  13-10-1951ರಲ್ಲಿ ಕುಂಬಳೆ ಸೀಮೆಯ ಎಡನಾಡು ಗ್ರಾಮದ ಶೆಡಂಪಾಡಿ ಎಂಬಲ್ಲಿ.  ತಂದೆಯವರು ದಿ| ಕೃಷ್ಣ ಭಟ್ರು, ತಾಯಿ ಹೇಮಾವತಿ ಅಮ್ಮ. ತಂದೆಯವರು ಹೆಡ್‍ಮಾಸ್ಟ್ರು. ಓದಿದ್ದು ಬೇರೆ ಬೇರೆ ಕಾಲೇಜುಗಳಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ  ಓದಿ 35 ವರ್ಷ ಬೇರೆ ಬೇರೆ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ದುಡಿದು ಎಲ್ಲಿಯೂ ಖಾಯಂ ಆಗದೆ ನಿವೃತ್ತಿ ಹೊಂದಿದರು. 
ಮೊದಲೇ ಹೇಳಿದಂತೆ ಆಕಸ್ಮಿಕ ಸನ್ನಿವೇಶವೊಂದರಲ್ಲಿ ಯಕ್ಷಗಾನ ತಾಳಮದ್ದಳೆ ಕೂಟವೊಂದರಲ್ಲಿ ಅರ್ಥ ಹೇಳಿದ ಶಂಭು ಶರ್ಮ ಮುಂದಕ್ಕೆ ಅದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಮೊದಲ ಅನಿರೀಕ್ಷಿತ ಅವಕಾಶದಲ್ಲಿ ಆದ ಮುಖಭಂಗ ಅವರನ್ನು ಮುಂದೆ ಹಠವಾದಿಯನ್ನಾಗಿ ಬೆಳೆಸಿತು. ವಿಟ್ಲಕ್ಕೆ ಬಂದಿದ್ದ ಪ್ರಸಿದ್ಧ ಅರ್ಥಧಾರಿ ದೇರಾಜೆ ಸೀತಾರಾಮಯ್ಯನವರನ್ನು ಭೇಟಿಯಾಗಿ ಅರ್ಥಗಾರಿಕೆ ಕಲಿಸಿಕೊಡುವಂತೆ ಬಿನ್ನವಿಸಿದ್ದರು. ‘‘ಅರ್ಥಗಾರಿಕೆ ಎಂಬುದು ಕಲಿಸಿಕೊಡುವಂಥದ್ದಲ್ಲ. ತಾನಾಗಿ ಕಲಿತು ಸಿದ್ಧಿಸುವಂತದ್ದು’’ ಎಂದು ದೇರಾಜೆಯವರು ಹೇಳಿದರು. ಆದರೂ ಅವರೊಡನೆ ಸಂಭಾಷಣೆಯ ಮತ್ತು ಪಾತ್ರಗಳ ಸೂಕ್ಷ ಮರ್ಮಗಳನ್ನು ಕಲಿತರು.
ಅರ್ಥಧಾರಿಯಾಗಿ ಬೆಳೆಯಲು ಕರ್ಗಲ್ಲು ಸುಬ್ಬಣ್ಣ ಭಟ್ಟರು ಶಂಭು ಶರ್ಮರಿಗೆ ತುಂಬಾ ಪ್ರೋತ್ಸಾಹವನ್ನು ಕೊಟ್ಟರು. ಅದರಂತೆ ವಿಟ್ಲದ ಹಲವಾರು ಕೂಟಗಳಲ್ಲಿ ಹಿರಿಯ ಕಲಾವಿದರಾಗಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಪೆರುವೋಡಿ ನಾರಾಯಣ ಭಟ್ಟರೇ ಮೊದಲಾದವರು ಭಾಗವಹಿಸುತ್ತಿದ್ದುದರಿಂದ ಶಂಭು ಶರ್ಮರಿಗೆ ಅರ್ಥಧಾರಿಯಾಗಿ ಬೆಳೆಯಲು ಅನುಕೂಲವಾಯಿತು. ಆದರೆ ಶಂಭು ಶರ್ಮರಿಗೆ ಉದ್ಯೋಗದ ಕಾರಣದಿಂದ ಅರ್ಥಗಾರಿಕೆಯಲ್ಲಿ ಮತ್ತು ತಾಳಮದ್ದಳೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ಆಗುತ್ತಲೇ ಇರಲಿಲ್ಲ. ಅವರು ಉಪನ್ಯಾಸಕ ವೃತ್ತಿಯನ್ನು ಕೈಗೊಂಡಿದ್ದ ಕೆಲವು ಕಾಲೇಜಿನ ಪರಿಸರಗಳಲ್ಲಿ ಯಕ್ಷಗಾನ, ತಾಳಮದ್ದಳೆಗಳು ನಡೆಯುತ್ತಿರಲಿಲ್ಲ. ಹೀಗೆ ಆಗಾಗ ತನ್ನ ವೃತ್ತಿ ಬದುಕಿನ ನಡುವೆ ಯಕ್ಷಗಾನ ಕ್ಷೇತ್ರದಿಂದ ದೂರ ಉಳಿಯಬೇಕಾಗಿ ಬರುತ್ತಿತ್ತು. 
ತುರ್ತುಪರಿಸ್ಥಿತಿಯ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಕ್ಷಗಾನದಿಂದ ದೂರವಾಗಿದ್ದರು.  ತುರ್ತುಪರಿಸ್ಥಿತಿಯ ನಂತರ ಗಣಪತಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿದ ನಂತರ ಆ ಸಂದರ್ಭದಲ್ಲಿ ಪುನಃ ಯಕ್ಷಗಾನದಲ್ಲಿ ಬೆಳೆಯುವುದಕ್ಕೆ ಅವಕಾಶ ಆಯಿತು. ಬೆಸೆಂಟ್ ಸಂಜೆ ಕಾಲೇಜು, ಬೆಸೆಂಟ್ ಡೇ ಕಾಲೇಜು- ಹೀಗೆ ಹಲವು ಕಾಲೇಜುಗಳಲ್ಲಿ ದುಡಿಯುತ್ತಾ  ರಾತ್ರಿ ಶ್ರೀಧರ ರಾಯರ ನೇತೃತ್ವದ ಯಕ್ಷಗಾನ ಬಯಲಾಟಗಳಲ್ಲಿ ಭಾಗವಹಿಸುತ್ತಿದ್ದರು. ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದರು. 
ಯೌವನದ ಪ್ರಾರಂಭದಲ್ಲಿ ಹೀಗೆ ಅವಿಶ್ರಾಂತಿಯಿಂದ ದುಡಿಯುತ್ತಿದ್ದರೂ ಮತ್ತೆ ಪುನಃ ಮೂರ್ನಾಡಿಗೆ ಉದ್ಯೋಗಕ್ಕಾಗಿ ತೆರಳಿದಾಗ ಯಕ್ಷಗಾನದ ಸಂಪರ್ಕ ಮುರಿಯಿತು. ಎರಡು ವರ್ಷದ ನಂತರ ಮೂರ್ನಾಡಿಂದ ಮಂಗಳೂರಿನ ಫಿಶರೀಸ್ ಕಾಲೇಜಿಗೆ ಬಂದಾಗ ಮತ್ತೆ ಯಕ್ಷಗಾನದ ಅವಕಾಶಗಳು ಕೈತುಂಬಾ ಬಂದು ಜನಪ್ರಿಯನಾಗಲು ಸಹಾಯಕವಾಯಿತು. ಆದರೆ ಯಾಕೋ ಮತ್ತೆ ತಡೆ ಬಂತು. ಮುಂದಿನ ಎಂಟು ವರ್ಷಗಳ ಕಾಲ ಸೋಮವಾರಪೇಟೆಯ ಕಾಲೇಜಿನಲ್ಲಿ ಕೆಲಸ ಮಾಡಬೇಕಾಗಿ ಬಂತು. ಹೀಗೆ ಯಕ್ಷಗಾನದ ಸಂಪರ್ಕ ಆಗಾಗ ಕಡಿಯುತ್ತಾ ಇದ್ದುದು ಶಂಭು ಶರ್ಮರ ಕಲಾ ಬದುಕಿನ ದುರಂತವೆಂದೇ ಹೇಳಬೇಕು. ಸೋಮವಾರಪೇಟೆಯಿಂದ ಬಂದ ನಂತರ ವಿಜಯಾ ಕಾಲೇಜು, ಮುಲ್ಕಿ, ಸುಂಕದಕಟ್ಟೆ ಕಾಲೇಜು ಇಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಥಮ ಹಂತದ ಅರ್ಥಧಾರಿಗಳ ಸಾಲಿಗೆ ಸೇರಿದ್ದರು. 
ವಿಟ್ಲ ಶಂಭು ಶರ್ಮ ಕೇವಲ ತಾಳಮದ್ದಳೆ ಕ್ಷೇತ್ರದಲ್ಲಿ ಅರ್ಥಧಾರಿ ಎಂದು ಹಚ್ಚಿನವರು ಭಾವಿಸಿರಬಹುದು. ಆದರೆ ಅವರು ಯಕ್ಷಗಾನ ವೇಷಧಾರಿಯಾಗಿಯೂ ಕೆಲವು ವರ್ಷಗಳ ತಿರುಗಾಟ ಮಾಡಿದ್ದಾರೆ ಎಂದರೆ ಕೆಲವರಿಗೆ ಆಶ್ಚರ್ಯವಾಗಬಹುದು. ಶ್ರೀಧರ ರಾಯರ ತಂಡದಲ್ಲಿ ಹಾಗೂ ಕರ್ನೂರು ಕೊರಗಪ್ಪ ರೈಗಳ ತಂಡದಲ್ಲಿ ಖಾಯಂ ವೇಷಧಾರಿಯಾಗಿದ್ದರು.  ಮಾತ್ರವಲ್ಲ ಫೆಬ್ರವರಿ 28ಕ್ಕೆ ಕಾಲೇಜಿನ ಪಾಠವನ್ನು ಮುಗಿಸಿದ ಮೇಲೆ, ಬೇರೆ ಬೇರೆ ಮೇಳಗಳಲ್ಲಿ ಅಂದರೆ, ಸುಬ್ರಹ್ಮಣ್ಯ, ಕದ್ರಿಮೇಳ ಮೊದಲಾದುವುಗಳಲ್ಲಿ ಅತಿಥಿ ಕಲಾವಿದನಾಗಿ ಭಾಗವಹಿಸುತ್ತಿದ್ದರು.  ಒಂದು ವರ್ಷ ಉದ್ಯೋಗಕ್ಕೆ ರಜೆ ಹಾಕಿ ಪೂರ್ಣಾವಧಿ ಕಲಾವಿದನಾಗಿ ನಾರಾಯಣ ಕಮ್ತಿಯವರ ಬಪ್ಪನಾಡು ಮೇಳದಲ್ಲಿ ತಿರುಗಾಟ ಮಾಡಿದ್ದರು.
ಆಮೇಲೆ ಅನಿರೀಕ್ಷಿತ ಅಪಘಾತವಾಗಿದ್ದರಿಂದ ಚಿಟ್ಟೆಪಟ್ಟಿ ಕಟ್ಟಲಿಕ್ಕೂ ಕಷ್ಟವಾಗಿ ಯಕ್ಷಗಾನ ತಿರುಗಾಟವನ್ನು ನಿಲ್ಲಿಸಿದ್ದರು. ಆದರೆ ಕೆಲವೊಮ್ಮೆ ಅತಿಥಿ ಕಲಾವಿದನಾಗಿ ಅಪರೂಪಕ್ಕೆ ಒಂದೊಂದು ವೇಷವನ್ನು ಆಗಾಗ ಮಾಡುತ್ತಿದ್ದರು. ಶಂಭು ಶರ್ಮ ತನ್ನ 14ನೆಯ ವಯಸ್ಸಿನಲ್ಲಿ ಸೂರಂಬೈಲಿನಲ್ಲಿ ನಡೆದ ‘ಭೀಷ್ಮಪರ್ವ’ ತಾಳಮದ್ದಳೆ ಕೂಟದಲ್ಲಿ ದೊಡ್ಡ ಸಾಮಗರ (ಮಲ್ಪೆ ಶಂಕರನಾರಾಯಣ ಸಾಮಗ) ಭೀಷ್ಮನ ಪಾತ್ರಕ್ಕೆದುರಾಗಿ ಅಭಿಮನ್ಯುವಾಗಿ ಅರ್ಥ ಹೇಳಿದ್ದರು. ದೊಡ್ಡ ಸಾಮಗರು ಇವರ ಅರ್ಥವನ್ನು ಮೆಚ್ಚಿಕೊಂಡು ಪ್ರಶಂಸಿಸಿದ್ದರು. 
ಯಕ್ಷಗಾನಕ್ಕೆ ಶೈಕ್ಷಣಿಕ ಶಿಸ್ತಿನ ಗ್ರಂಥವನ್ನು ಅವಶ್ಯಕತೆಯ ಬಗ್ಗೆ ಶಂಭು ಶರ್ಮರಲ್ಲಿ ಕೇಳಿದಾಗ “ಅದು ಸಾಧ್ಯ ಇಲ್ಲ ಎಂದೇ ನನ್ನ ಅಭಿಪ್ರಾಯ. ಯಕ್ಷಗಾನ ಎಂದರೆ ಚೌಕಟ್ಟಿನೊಳಗಿರುವ ಸ್ವಾತಂತ್ರ್ಯ. ಇದಕ್ಕೆ ಚೌಕಟ್ಟೂ ಇದೆ, ಸ್ವಾತಂತ್ರ್ಯವೂ ಇದೆ ಎಂದಾಗ ಒಂದು clean syllabus ಸಾಧ್ಯವಿಲ್ಲ. ಒಂದು ರೂಪುರೇಷೆಗಳ outline ಮಾಡಬಹುದೇ ಹೊರತು ಕಡ್ಡಾಯ ಕಾನೂನಿನಲ್ಲಿ ಯಕ್ಷಗಾನವನ್ನು ಒಳಪಡಿಸಲು ಸಾಧ್ಯವೇ ಇಲ್ಲ. ಸ್ವಾತಂತ್ರ್ಯ ಸ್ವಲ್ಪ ಇದ್ದರೂ ಅದು ದುರುಪಯೋಗ ಆಗಬಾರದು ಎಂದು ನಿರ್ದೇಶನಗಳನ್ನು ಕೊಡಬಹುದೇ ಹೊರತು ಕಟ್ಟುನಿಟ್ಟು ಎಂಬುದು ಯಕ್ಷಗಾನದಲ್ಲಿ ಕಷ್ಟ” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಶಂಭು ಶರ್ಮರಿಗೆ ಸಂಕಷ್ಟದ ಕಾಲವೊಂದಿತ್ತು. ಅಪಘಾತವೊಂದರಲ್ಲಿ ದೈಹಿಕವಾಗಿ ಜರ್ಝರಿತರಾಗಿದ್ದ ಸಮಯದಲ್ಲಿ ಫ್ರಾಕ್ಚರ್ ಆಗಿ ಕೈಯೊಂದನ್ನು ರಾಡ್ ಹಾಕಿ ಕೊರಳಿಗೆ ನೇತಾಡಿಸಿದ್ದರು. ಈ ಸ್ಥಿತಿಯಲ್ಲೇ ಶಂಭು ಶರ್ಮರು ಸುಮಾರು 50 ತಾಳಮದ್ದಳೆಗಳಲ್ಲಿ ಭಾಗವಹಿಸಿದ್ದರು. ಎಲ್ಲರಿಂದಲೂ ಇದು ಸಾಧ್ಯವಾಗುವ ಕಾರ್ಯವಲ್ಲ. ಶಂಭು ಶರ್ಮ ಇವರು ಯಕ್ಷರಂಗ ಪ್ರಶಸ್ತಿ, ಪೆರ್ಲ ಕೃಷ್ಣ ಭಟ್ಟ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆಯ ಪುರಸ್ಕಾರ, ವಿಟ್ಲ ಜೋಷಿ ಪ್ರಶಸ್ತಿ, ಮುಂಬಯಿ ಅಜೆಕಾರು ಪ್ರಶಸ್ತಿಯೇ ಮೊದಲಾದ ಹಲವಾರು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿದ್ದಾರೆ. ಈಗ ಪತ್ನಿ ಲಕ್ಷ್ಮೀಶರ್ಮ, ಮಗ ಕೃಷ್ಣರಾಜ, ಸೊಸೆ ವಿದ್ಯಾ, ಮೊಮ್ಮಗ ನಿಶ್ಚಯರೊಂದಿಗೆ ಸಂತೃಪ್ತ ಜೀವನವನ್ನು ನಡೆಸಿದ್ದರು.

ಲೇಖನ: ಮನಮೋಹನ್ ವಿ.ಎಸ್. 

ಕೃಪೆ: ಯಕ್ಷದೀಪ.ಕಾಮ್‌ (https://yakshadeepa.com/)

Thursday, September 11, 2025

ಇಂದಿನ ಇತಿಹಾಸ History Today ಸೆಪ್ಟೆಂಬರ್‌ 11

 ಇಂದಿನ ಇತಿಹಾಸ History Today ಸೆಪ್ಟೆಂಬರ್‌ 11

2025: ವಾಷಿಂಗ್ಟನ್:‌ ಸಂಪ್ರದಾಯವಾದಿ ಕಾರ್ಯಕರ್ತ ಮತ್ತು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಮಿತ್ರ ಚಾರ್ಲಿ ಕಿರ್ಕ್ ಅವರು ಯೂಟಾಹ್ ಕಾಲೇಜು ಕಾರ್ಯಕ್ರಮವೊಂದರಲ್ಲಿ 2025 ಸೆಪ್ಟೆಂಬರ್‌ ೧೧ರ ಗುರುವಾರ ಗುಂಡೇಟಿಗೆ ಬಲಿಯಾದರು. ಅಧ್ಯಕ್ಷ ಟ್ರಂಪ್ ಅವರು "ಶ್ರೇಷ್ಠ ಮತ್ತು ದಂತಕಥೆಯಾದ" ಕಿರ್ಕ್ ಅವರ ಸಾವಿನ ಸುದ್ದಿಯನ್ನು ಖಚಿತಪಡಿಸಿದರು. ತಮ್ಮ ಭಾಷಣದಲ್ಲಿ, ರಾಜಕೀಯ ಹಿಂಸಾಚಾರವನ್ನು ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಭರವಸೆ ನೀಡಿದರು. "ನನ್ನ ಆಡಳಿತವು ಈ ದುಷ್ಕೃತ್ಯ ಮತ್ತು ಇತರ ರಾಜಕೀಯ ಹಿಂಸಾಚಾರಕ್ಕೆ ಕೊಡುಗೆ ನೀಡಿದ ಪ್ರತಿಯೊಬ್ಬರನ್ನು, ಅದಕ್ಕೆ ಹಣಕಾಸು ಒದಗಿಸುವ ಮತ್ತು ಬೆಂಬಲಿಸುವ ಸಂಸ್ಥೆಗಳು ಸೇರಿದಂತೆ, ಮತ್ತು ನಮ್ಮ ನ್ಯಾಯಾಧೀಶರು, ಕಾನೂನು ಜಾರಿ ಅಧಿಕಾರಿಗಳು ಮತ್ತು ನಮ್ಮ ದೇಶಕ್ಕೆ ಸುವ್ಯವಸ್ಥೆಯನ್ನು ತರುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಿದೆ" ಎಂದು ಅಧ್ಯಕ್ಷ ಟ್ರಂಪ್ ಹೇಳಿದರು.


2025
:: ನವದೆಹಲಿ: ನೇಪಾಳದಲ್ಲಿ ನಾಟಕೀಯ ದೃಶ್ಯಗಳು ಅನಾವರಣಗೊಂಡವು. ಪ್ರತಿಭಟನಾಕಾರರ ಸಿಟ್ಟಿಗೆ ಗುರಿಯಾದ 'ಭ್ರಷ್ಟ' ಮಂತ್ರಿಗಳು ಮತ್ತು ಅವರ ಕುಟುಂಬಗಳನ್ನು ಸೇನಾ  ಹೆಲಿಕಾಪ್ಟರ್‌ಗಳ ರಕ್ಷಣಾ ಸ್ಲಿಂಗ್‌ಗಳ ಮೂಲಕ ಸ್ಥಳಾಂತರಿಸಲಾಯಿತು. ಸರ್ಕಾರದ ಅಧಿಕಾರಿಗಳು ಮತ್ತು ಅವರ ಸಂಬಂಧಿಕರನ್ನು ಸೇನಾ ಹೆಲಿಕಾಪ್ಟರ್ ರಕ್ಷಣಾ ಸ್ಲಿಂಗ್‌ಗಳನ್ನು ಬಳಸಿ ಸುರಕ್ಷಿತವಾಗಿ ಸ್ಥಳಾಂತರಿಸುತ್ತಿರುವ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದ ದೃಶ್ಯಾವಳಿಗಳು ತೋರಿಸಿದವು. ಈ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದವು.

2022: ನವದೆಹಲಿ: ಸೆಮಿ ಹೈಸ್ಪೀಡ್‌ ರೈಲು ‘ವಂದೆ ಭಾರತ’ ಎಕ್ಸ್‌ಪ್ರೆಸ್ 52 ಸೆಕೆಂಡ್‌ಗಳಲ್ಲಿ ಗಂಟೆಗೆ 100 ಕಿ.ಮೀ.ನಷ್ಟು ವೇಗ ಸಾಧಿಸುವ ಮೂಲಕ ಬುಲೆಟ್‌ ಟ್ರೇನ್‌ನ ದಾಖಲೆಯನ್ನು ಮುರಿದಿದೆ. ಅಹಮದಾಬಾದ್‌–ಮುಂಬೈ ನಡುವೆ 2022 ಸೆಪ್ಟೆಂಬರ್‌ 09ರ ಶುಕ್ರವಾರ ಈ ರೈಲಿನ ಪರೀಕ್ಷಾರ್ಥ ಸಂಚಾರ ನಡೆಯಿತು. ಗಂಟೆಗೆ 130 ಕಿ.ಮೀ ವೇಗದೊಂದಿಗೆ ತಡೆರಹಿತವಾಗಿ ಚಲಿಸಿದ ರೈಲು, ಈ ನಗರಗಳ ನಡುವಿನ 491 ಕಿ.ಮೀ. ದೂರವನ್ನು 5 ಗಂಟೆ 14 ನಿಮಿಷಗಳಲ್ಲಿ ಕ್ರಮಿಸಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ಈದಿನ ತಿಳಿಸಿದರು. ನಿಗದಿತ ವೇಳಾಪಟ್ಟಿ ಹಾಗೂ ನಿಲುಗಡೆಗಳೊಂದಿಗೆ ಸಂಚರಿಸಿದ ಸಂದರ್ಭದಲ್ಲಿ ಇಷ್ಟೇ ದೂರವನ್ನು ಈ ರೈಲು 6 ಗಂಟೆಗಿಂತ ಕಡಿಮೆ ಅವಧಿಯಲ್ಲಿ ಕ್ರಮಿಸಲಿದೆ ಎಂದೂ ಅವರು ತಿಳಿಸಿದರು.

2022: ನವದೆಹಲಿ: ಗುಜರಾತಿನ ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು 2022 ಸೆಪ್ಟೆಂಬರ್‌ 11ರ ಭಾನುವಾರ ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯಲ್ಲಿ ತಮ್ಮ 99 ನೇ ವಯಸ್ಸಿನಲ್ಲಿ ದೈವಾಧೀನರಾದರು. ಹಿಂದೂ ಧಾರ್ಮಿಕ ಮುಖಂಡ ಶ್ರೀಧಾಮ ಜೋತೇಶ್ವರ ಆಶ್ರಮದಲ್ಲಿ ಮಧ್ಯಾಹ್ನ 3:30 ರ ಸುಮಾರಿಗೆ ಅವರು ಕೊನೆಯುಸಿರೆಳೆದರು ಎಂದು ದ್ವಾರಕಾ ಪೀಠದ ಎರಡನೇ ಸ್ಥಾನದಲ್ಲಿ ಇರುವ (ದಂಡಿ ಸ್ವಾಮಿ ಎಂದು ಕರೆಯಲಾಗುತ್ತವ) ಸ್ವಾಮಿ ಸದಾನಂದ ಮಹಾರಾಜ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು. (ವಿವರಗಳಿಗೆಇಲ್ಲಿ ಕ್ಲಿಕ್‌ ಮಾಡಿ)

2022: ನ್ಯೂಯಾರ್ಕ್: ಪೋಲಂಡಿನ ಇಗಾ ಸ್ವಟೆಕ್‌ ಅವರು ಅಮೆರಿಕ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡರು. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಎರಡನೇ ಮತ್ತು ಒಟ್ಟಾರೆಯಾಗಿ ಮೂರನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದರು. ಇಗಾ ಸ್ವಟೆಕ್ 2020 ಹಾಗೂ 2022ನೇ ಸಾಲಿನಲ್ಲಿ ಫ್ರೆಂಚ್ ಓಪನ್ ಗೆದ್ದ ಸಾಧನೆ ಮಾಡಿದ್ದಾರೆ.

2019: ಜಿನೇವಾ: ಕಾಶ್ಚೀರ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ಪಾಕಿಸ್ತಾನ ಮಾಡಿರುವ ಮನವಿಯನ್ನು ವಿಶ್ವಸಂಸ್ಥೆ ಸಾರಾಸಗಟು ತಿರಸ್ಕರಿಸಿ, ಭಾರತ ಮತ್ತು ಪಾಕಿಸ್ತಾನ ಮಾತುಕತೆಯ ಮೂಲಕವೇ ವಿವಾದ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದು 2019 ಸೆಪ್ಟೆಂಬರ್ 11ರ ಬುಧವಾರ ಸೂಚಿಸಿತು. ಜಮ್ಮು-ಕಾಶ್ಮೀರದ ವಿಚಾರದಲ್ಲಿ ಉಭಯ ದೇಶಗಳು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (ಯುಎನ್‌ಎಚ್ ಆರ್‌ಸಿ) ಪರಸ್ಪರ ಘರ್ಷಿಸಿದ ಒಂದು  ದಿನದ ಬಳಿಕ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗ್ಯುಟೆರಸ್ ಅವರು ’ಕಾಶ್ಮೀರ ವಿಚಾರದಲ್ಲಿ ಯಾವುದೇ ರಾಜಕೀಯ ಬಿಕ್ಕಟ್ಟಿಗೆ ಅವಕಾಶ ನೀಡಬಾರದು’ ಎಂದು ಕಳಕಳಿ ವ್ಯಕ್ತಪಡಿಸಿ, ಕಾಶ್ಮೀರದ ವಿಚಾರವನ್ನು ಭಾರತ ಮತ್ತು ಪಾಕಿಸ್ತಾನ ಮಾತುಕತೆಯ ಮೂಲಕವೇ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಸ್ವಿಜರ್ಲೆಂಡಿನ ರಾಜಧಾನಿ ಜಿನೇವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ೪೨ನೇ ಸಮ್ಮೇಳನದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗ್ಯುಟೆರಸ್  ಅವರು ಈ ಹೇಳಿಕೆ ನೀಡಿದ್ದಾರೆ ಎಂದು ವರದಿಯೊಂದು ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಮಥುರಾ (ಉತ್ತರಪ್ರದೇಶ): ’ಗೋವು’ ಮತ್ತು ’ಓಂ’ ಪದ ಕೇಳಿದರೆ, ಕೆಲವು ಜನರಿಗೆ ’ಆಘಾತವಾಗುತ್ತದೆ’ ಇದು ದುರದೃಷ್ಟಕರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019 ಸೆಪ್ಟೆಂಬರ್ 11ರ  ಬುಧವಾರ ಇಲ್ಲಿ ಹೇಳಿದರು. ಉತ್ತರ ಪ್ರದೇಶದ ಮಥುರಾದಲ್ಲಿ ರಾಷ್ಟ್ರೀಯ ಜಾನುವಾರುಗಳ ರೋಗ ನಿಯಂತ್ರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಧಾನಿ ಮಾತನಾಡಿದರು. ‘ಕೆಲವು ವ್ಯಕ್ತಿಗಳ ಕೂದಲುಗಳು ’ಗೋವು’ ಮತ್ತು ’ಓಂ’ ಪದ ಕೇಳುತ್ತಿದ್ದಂತೆಯೇ ವಿದ್ಯುತ್ ಆಘಾತಕ್ಕೆ ಒಳಗಾದಂತೆ ನಿಮಿರುತ್ತವೆ. ರಾಷ್ಟ್ರವು ೧೬ ನೇ ಶತಮಾನದಷ್ಟು ಹಿಂದಕ್ಕೆ ಹೋಗಿದೆ ಎಂದು ಅವರು ಭಾವಿಸುತ್ತಾರೆ, ಇದು ದುರದೃಷ್ಟಕರ. ಪ್ರಾಣಿಗಳು ಇಲ್ಲದ ಗ್ರಾಮೀಣ ಆರ್ಥಿಕ ವ್ಯವಸ್ಥೆ ಬಗ್ಗೆ ಯಾರಾದರೂ ಮಾತನಾಡಲು ಸಾಧ್ಯವಿದೆಯೇ? ಎಂದು ಪ್ರದಾನಿ ಮೋದಿ ಪ್ರಶ್ನಿಸಿದರು. ರೈತರಿಗಾಗಿ ಇತರ ಹಲವು ಯೋಜನೆಗಳ ಜೊತೆಗೆ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮವನ್ನು  (ಎನ್‌ಎಡಿಸಿಪಿ) ಅವರು ಉದ್ಘಾಟಿಸಿದರು. ‘ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಪರಿಸರ ಮತ್ತು ಪ್ರಾಣಿಗಳು ಯಾವಾಗಲೂ ಮಹತ್ವ ಪಡೆದಿವೆ. ಪ್ರಕೃತಿ ಮತ್ತು ಆರ್ಥಿಕ ಪ್ರಗತಿಯ ಮಧ್ಯೆ ಸಮತೋಲನ ಕಾಪಾಡುತ್ತಾ ನಾವು ಹೊಸ ಸಶಕ್ತ ಭಾರತದತ್ತ ಸಾಗಲು ಸಾಧ್ಯವಿದೆ’ ಎಂದು ಪ್ರಧಾನಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಮುಖ್ಯ ಕಾರ್ಯದರ್ಶಿ (ಪ್ರಿನ್ಸಿಪಲ್ ಸೆಕ್ರೆಟರಿ) ಆಗಿ ಪ್ರಮೋದ್ ಕುಮಾರ್ ಮಿಶ್ರ  ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಸಚಿವಾಲಯದ ಪ್ರಕಟಣೆ 2019 ಸೆಪ್ಟೆಂಬರ್ 11 ಬುಧವಾರ  ತಿಳಿಸಿತು. ಕೇಂದ್ರ ಸರ್ಕಾರದಲ್ಲಿ ಕಳೆದ ಐದು ವರ್ಷಗಳ ಕಾಲ ಪ್ರಧಾನಿ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿದ್ದ ನೃಪೇಂದ್ರ ಮಿಶ್ರ ಅವರು ಕಳೆದ ತಿಂಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಮಿಶ್ರ ಅವರು ಗುಜರಾತ್ ಕೇಡರ್ ನ 1972ರ ತಂಡದ ಐಎಎಸ್ ಅಧಿಕಾರಿ. ಇವರು ಮೊದಲು ಪ್ರಧಾನ ಮಂತ್ರಿಯ ಅಡಿಷನಲ್ ಪ್ರಿನ್ಸಿಪಲ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಆ್ಯಗ್ರಿಕಲ್ಚರ್ ಅಂಡ್ ಕಾರ್ಪೋರೇಶನ್ ಸೆಕ್ರೆಟರಿ, ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಮಿಶ್ರ ಅವರು ಮೇ ತಿಂಗಳಿನಲ್ಲಿ ಎಕಾನಾಮಿಕ್ಸ್ ಅಂಡ್ ಡೆವಲಪ್ ಮೆಂಟ್ ಸ್ಟಡೀಸ್ ನಲ್ಲಿ ಇಂಗ್ಲೆಂಡ್ ನ ಸುಸ್ಸೆಕ್ಸ್ ಯೂನಿರ್ವಸಿಟಿಯಿಂದ ಪಿಎಚ್ ಡಿ ಪದವಿ ಪಡೆದಿದ್ದರು. ಅಲ್ಲದೇ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತಿಷ್ಠಿತ ವಿಶ್ವಸಂಸ್ಥೆಯ ಪ್ರಶಸ್ತಿಗೆ ಭಾಜನರಾಗಿದ್ದರು. ಏತನ್ಮಧ್ಯೆ ಪ್ರಧಾನ ಮಂತ್ರಿ ಕಚೇರಿಯ ವಿಶೇಷ ಕರ್ತವ್ಯ ನಿರ್ವಹಣೆ ಅಧಿಕಾರಿಯಾದ ಪಿಕೆ ಸಿನ್ನಾ ಅವರನ್ನು ಪ್ರಧಾನಮಂತ್ರಿಯ ಪ್ರಧಾನ ಸಲಹೆಗಾರ (ಪ್ರಿನ್ಸಿಪಲ್ ಅಡ್ವೈಸರ್) ಆಗಿ ನೇಮಕ ಮಾಡಲಾಗಿದೆ ಎಂದು ವರದಿ ತಿಳಿಸಿತು.

2019: ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡ ಇಳಿಸಲು ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ 2019 ಸೆಪ್ಟೆಂಬರ್ 11ರ ಬುಧವಾರ ಹೇಳಿದರು. ಸಂಚಾರ ನಿಯಮ ಉಲ್ಲಂಘನೆ ದಂಡ ದುಪ್ಪಟ್ಟುಗೊಳಿಸಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದಂಡ ಕಡಿತಗೊಳಿಸಲು ನಿರ್ಧಾರ ಮಾಡಲಾಗಿದೆ ಎಂದು ಯಡಿಯೂರಪ್ಪ ಹೇಳಿದರು. ದಂಡ ಕಡಿತಗೊಳಿಸಲು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ಮಾಹಿತಿ ನೀಡಿದರು. ಈಗಾಗಲೇ ಗುಜರಾತ್ ರಾಜ್ಯದಲ್ಲೂ ಇಳಿಕೆ ಮಾಡಲಾಗಿದೆ. ಗುಜರಾತ್ ಮಾದರಿಯ ದಂಡ ಇಳಿಕೆಯ ಮಾಹಿತಿ ಪಡೆದು ರಾಜ್ಯದಲ್ಲೂ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.ಈ ಮಧ್ಯೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ದಂಡ ದುಪ್ಪಟ್ಟುಗೊಳಿಸಿರುವುದು ಹಣ ಮಾಡುವ ಉದ್ದೇಶಕ್ಕಾಗಿ ಅಲ್ಲ, ಅಪಘಾತಗಳಲ್ಲಿ ಜನರ ಪ್ರಾಣ ರಕ್ಷಣೆಗಾಗಿ ಎಂದು ಸ್ಪಷ್ಟ ಪಡಿಸಿದರು.‌

1950: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ (ಸರಸಂಘ ಚಾಲಕ) ಮೋಹನ್‌ ಭಾಗವತ್‌ ಈದಿನ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಜನಿಸಿದರು. 2009ರಲ್ಲಿ ಅವರು ಆರೆಸ್ಸೆಸ್‌ ಸರಸಂಘ ಚಾಲಕರಾಗಿ ಅಧಿಕಾರ ವಹಿಸಿಕೊಂಡರು. ಅವರ ತಂದೆ ಕೂಡಾ ಆರೆಸ್ಸೆಸ್ಸಿನಲ್ಲಿ ಉನ್ನತ ಹುದ್ದೆ ನಿಭಾಯಿಸಿದ್ದರು. ಪ್ರಚಾರಕರಾಗಿ ಆರೆಸ್ಸೆಸ್‌ ನಂಟು ಬೆಳೆಸಿಕೊಂಡ ಭಾಗವತ್‌, ಕೇಶವ ಬಲಿರಾಮ್‌ ಹೆಡ್ಗೇವಾರ್‌ ಮತ್ತು ಎಂ.ಎಸ್.‌ ಗೋಲ್ವಲ್ಕರ್‌ ನಂತರ ಸರಸಂಘ ಚಾಲಕ ಹುದ್ದೆಗೆ ಏರಿದ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಭಾಜನರಾದರು.

1895: ಭೂದಾನ ಚಳವಳಿಯ ಮೂಲಕ  ದೇಶದಲ್ಲಿ ಕ್ರಾಂತಿಯ ಅಲೆ ಸೃಷ್ಟಿಸಿದ ಸ್ವಾತಂತ್ರ್ಯ ಹೋರಾಟಗಾರ, ಮಾನವ ಹಕ್ಕುಗಳ ಪ್ರತಿಪಾದಕ, ತತ್ವಜ್ಞಾನಿ, ಗಾಂಧಿವಾದಿ ವಿನೋಬಾ ಭಾವೆ ಅವರು ಈದಿನ ಮಹಾರಾಷ್ಟ್ರದ ಪೆನ್‌ ಎಂಬಲ್ಲಿ ಜನಿಸಿದರು. ವಿನಾಯಕ ನರಹರಿ ಭಾವೆ ಎಂಬುದು ಅವರ ಪೂರ್ಣ ಹೆಸರು. ದೇಶದ ಜನ ಆಚಾರ್ಯ ಎಂಬುದಾಗಿ ಕರೆಯುವ ಮೂಲಕ ಅವರನ್ನು ಗೌರವಿಸಿದರು.

1893: ಶಿಕಾಗೋದ ಧಾರ್ಮಿಕ ಸಂಸತ್ತಿನಲ್ಲಿ ಸ್ವಾಮೀ ವಿವೇಕಾನಂದರು ತಮ್ಮ ಪ್ರಥಮ ಭಾಷಣವನ್ನು ಮಾಡಿದರು. 'ಸಹೋದರ ಸಹೋದರಿಯರೇ' ಎಂಬ ಶಬ್ಧಗಳೊಂದಿಗೆ ಅವರು ಆರಂಭಿಸಿದ ಈ ಭಾಷಣ ಇಡೀ ಪ್ರಪಂಚದ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸಿತು. ಅವರ ಈ ಭಾಷಣದಿಂದ ಹಿಂದೂ ಧರ್ಮದ ಮಹತ್ವ ಮತ್ತೊಮ್ಮೆ ವಿಶ್ವ ವ್ಯಾಪಕತೆ ಪಡೆದುಕೊಂಡಿತು. ಸರ್ವಧರ್ಮ ಸಮ್ಮೇಳನದ ಈ ಭಾಷಣವು ಅವರಿಗೆ ಜಗದ್ವಿಖ್ಯಾತಿ ತಂದುಕೊಟ್ಟಿತು. ಇದರ ಸ್ಮರಣಾರ್ಥ ಈ ದಿನವನ್ನು ದಿಗ್ವಿಜಯ ದಿನವಾಗಿ ಆಚರಿಸಲಾಗುತ್ತದೆ. ವಿವೇಕಾನಂದರು ತಮ್ಮ ಭಾಷಣದಲ್ಲಿ ಹಿಂದೂ ಧರ್ಮದ ಉದಾತ್ತತೆ ಮತ್ತು ಸವಿಸ್ತಾರದ ಪರಿಚಯ, ಸಾಮರಸ್ಯದ ಸಂದೇಶವನ್ನು ಸಾರಿದರು. ಅದರ ವಿಡಿಯೋ ಇಲ್ಲಿದೆ.

1730: ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ. ಅರಣ್ಯ ರಕ್ಷಣೆಗಾಗಿ ರಾಜಸ್ಥಾನದ ಕೆಜಾರ್ಲಿ ಎಂಬಲ್ಲಿ ರಾಜನ ವಿರುದ್ಧ ಈ ದಿನ ಪ್ರತಿಭಟನೆ ನಡೆಸಿದ ಬಿಷ್ಣೋಯಿ ಸಮುದಾಯಕ್ಕೆ ಸೇರಿದ 363 ಮಂದಿಯನ್ನು ಹತ್ಯೆಗೈಯಲಾಯಿತು. ಅವರ ತ್ಯಾಗದ ಸ್ಮರಣಾರ್ಥ ಈ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ. ದೇಶದ ಅರಣ್ಯ ಮತ್ತು ವನ್ಯಜೀವಿ ಸಂಪತ್ತಿನ ರಕ್ಷಣೆಗಾಗಿ ಜೀವ ತೆತ್ತ ಮಹನೀಯರಿಗೆ ಗೌರವ ಸಲ್ಲಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ.

Advertisement