Thursday, November 6, 2008

ಸಮುದ್ರ ಮಥನ 9: ಸಂತೋಷ, ಆಶ್ಚರ್ಯದಲ್ಲಿ ನಿಮ್ಮ ಆಯ್ಕೆ ಯಾವುದು?

ಸಮುದ್ರ ಮಥನ 9: ಸಂತೋಷ,

ಆಶ್ಚರ್ಯದಲ್ಲಿ ನಿಮ್ಮ ಆಯ್ಕೆ ಯಾವುದು?

ಗುರುವಾದವನು ಯಾವತ್ತೂ ಯೋಗ್ಯ ಶಿಷ್ಯನ ಬರುವಿಕೆಯನ್ನೇ ಕಾಯುತ್ತಿರುತ್ತಾನೆ. ಪರಮಹಂಸರು ವಿವೇಕಾನಂದರನ್ನು ಕಾದ ಹಾಗೆ. ಆ ಜ್ಞಾನ ಪರಂಪರೆ ಎಲ್ಲೂ ತುಂಡಾಗಬಾರದು ಎಂಬ ಕಳಕಳಿ ಗುರುವಾದವನಿಗೆ ಸಹಜವಾಗಿ ಸಿದ್ಧಿಸಿರುತ್ತದೆ. 

ವಾಲ್ಮೀಕಿಗಳು ತಪೋನಿರರಾಗಿದ್ದಾಗ ಅಂತರಂಗದಲ್ಲಿ ಕಂಡ ಜ್ಯೋತಿಯ ಮಧ್ಯದಲ್ಲಿ ಅದ್ಭುತ ಪುರುಷನೊಬ್ಬ ಗೋಚರಿಸಿದ್ದ. ವಾಲ್ಮೀಕಿಗಳಿಗೆ ಅದು ಆಶ್ಚರ್ಯ, ಸಂತೋಷ ಹೀಗೆ ಹಲವು ಭಾವಗಳನ್ನು ಒಟ್ಟೊಟ್ಟಿಗೇ ಹುಟ್ಟುಹಾಕಿತ್ತು. ಇಂಥದ್ದೊಂದು ಉಂಟಾ?
ಹೀಗೆ ಯಾರಾದರೂ ಇರುವುದಕ್ಕೆ ಸಾಧ್ಯವಾ? ಈಗಲೂ ಇಂಥ ಗುಣವಂತ, ವೀರ, ಧರ್ಮಜ್ಞ, ಕೃತಜ್ಞ, ಸತ್ಯವಾಕ್, ದೃಢವ್ರತ, ಚಾರಿತ್ರ್ಯಶಾಲಿ, ಸರ್ವಭೂತಹಿತೈಷಿ, ಜ್ಞಾನಿ, ಸಮರ್ಥ, ಪ್ರಿಯದರ್ಶನ, ಆತ್ಮವಂತ, ಜಿತಕ್ರೋಧ ಇರಲು ಸಾಧ್ಯವಾ? ಅಂತ ಜಪಿಸುತ್ತ, ಉತ್ತರ ಕಂಡುಕೊಳ್ಳಲು ಭಾವ-ಬುದ್ಧಿಗಳನ್ನು ಧೇನಿಸುತ್ತಲೇ ಇದ್ದರು. 

ನಂತರ ಒಂದು ಸಂದರ್ಭದಲ್ಲಿ ನಾರದರ ಭೇಟಿಯಾಯಿತು. ಅವೇ ಪ್ರಶ್ನೆಗಳನ್ನು ವಾಲ್ಮೀಕಿಗಳು ನಾರದರ ಮುಂದಿಟ್ಟರು. ಸುಮ್ಮನೆ ಹೀಗೇ ಕುತೂಹಲವನ್ನು ತಣಿಸಿಕೊಳ್ಳಲು ಇವುಗಳ ಪ್ರಸ್ತಾಪವಾಗಿರಲಿಲ್ಲ. ಉತ್ತರಕ್ಕಾಗಿನ ವಾಲ್ಮೀಕಿಗಳ ಕಾತರ ತನ್ನ ಚರಮ ಸೀಮೆಯನ್ನು ಮುಟ್ಟಿತ್ತು. ಹಾಗೇ ಮುಂದುವರೆದು ವಾಲ್ಮೀಕಿಗಳು ನಾರದರಿಗೆ 'ಮಹರ್ಷೇ ತ್ವಂ ಸಮರ್ಥೋಸಿ'- ಮಹರ್ಷಿಯೇ ನೀನು ಸಮರ್ಥನಿದ್ದಿ. ಯಾವುದಕ್ಕೆ? 'ಜ್ಞಾತುಂ ಏವಂ ವಿಧಂ ನರಮ್'-ಇಂಥ ಒಬ್ಬ ಮನುಷ್ಯನನ್ನು ಪತ್ತೆಹಚ್ಚಿ ನನಗೆ ಅದನ್ನು ಪ್ರಕಾಶಪಡಿಸಲಿಕ್ಕೆ. ದಯವಿಟ್ಟು ಹೇಳುವಿರಾ? ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾರೆ. 

ಆಗ ನಾರದರಿಗೆ ಬಹಳ ಸಂತೋಷವಾಯಿತು. ಉಪನಿಷತ್ತು ಹೇಳುತ್ತದೆ. 'ವಕ್ತಾ ಶ್ರೋತಾ ಚ ದುರ್ಲಭಃ'-ಹೇಳುವವರು ಮತ್ತು ಕೇಳುವವರು ಬಹಳ ದುರ್ಲಭ. 'ಆಶ್ಚರ್ಯೋ ವಕ್ತಾ ಕುಶಲಃ ಆಶ್ವರ್ಯೋ ಶ್ರೋತಾ'-ಕುಶಲಿಯಾದ ಹೇಳಿ-ಕೇಳಿಸಿಕೊಳ್ಳುವವರಿದ್ದರೆ ಆಶ್ಚರ್ಯಪಡುವಂಥದ್ದು. ದುರ್ಲಭವಾಗಿದ್ದು, ಆಶ್ಚರ್ಯಕರವಾಗಿದ್ದು ಸಂಭವಿಸಿದ್ದಕ್ಕೆ ನಾರದರಿಗೆ ಆನಂದವಾಯಿತು.

ಆಗ ನಾರದರು ವಾಲ್ಮೀಕಿಗಳಿಗೆ ಉತ್ತರವಾಗಿ ಮರ್ಯಾದಾ ಪುರುಷೋತ್ತಮ ಶ್ರೀರಾಮನನ್ನು ನಿರೂಪಿಸಲು ತೊಡಗುತ್ತಾರೆ. ರಾಮನಂಥ ಒಂದು ವ್ಯಕ್ತಿತ್ವ ಕೇಳಲಿಕ್ಕೂ ಸಿಗುವುದಿಲ್ಲ. ಕೇಳಿದ ಎಷ್ಟೋ ಮಂದಿ ಅವನನ್ನು ನೋಡಿಲ್ಲ. ನೋಡಿದ ಹಲವು ಮಂದಿಯಲ್ಲಿ ಅವನನ್ನು ತಿಳಿದದ್ದು ಕೆಲವೇ ಕೆಲವು ಮಂದಿ. ಅಂಥ ಗಹನತೆ ಶ್ರೀರಾಮನ ವ್ಯಕ್ತಿತ್ವದಲ್ಲಿದೆ.

ಆದ್ದರಿಂದ ಗುರುವಾದವನು ಯಾವತ್ತೂ ಯೋಗ್ಯ ಶಿಷ್ಯನ ಬರುವಿಕೆಯನ್ನೇ ಕಾಯುತ್ತಿರುತ್ತಾನೆ. ಪರಮಹಂಸರು ವಿವೇಕಾನಂದರನ್ನು ಕಾದ ಹಾಗೆ. ಆ ಜ್ಞಾನ ಪರಂಪರೆ ಎಲ್ಲೂ ತುಂಡಾಗಬಾರದು ಎಂಬ ಕಳಕಳಿ ಗುರುವಾದವನಿಗೆ ಸಹಜವಾಗಿ ಸಿದ್ಧಿಸಿರುತ್ತದೆ. 

ಸಾಮಾನ್ಯವಾಗಿ ಹೀಗಿರುವುದಿಲ್ಲ. ಹೇಳುವವರಿಗೆ ಒಂದು ದಾರಿಯಾದರೆ, ಕೇಳುವವರಿಗೆ ಅವರದ್ದೇ ಆದ ಮತ್ತೊಂದು. ಹೀಗೇ ಭಿನ್ನಭಿನ್ನವಾಗಿ ಸಾಗುತ್ತವೆ ಆ ದಾರಿಗಳು. ಚಿಂತನೆಗಳು ಒಂದು ನಿರ್ದಿಷ್ಟ ವ್ಯಾಪ್ತಿಯಲ್ಲಿಯೇ ಗಿರಕಿ ಹೊಡೆಯುತ್ತಾ, ಅದರಿಂದ ಹೊರಬಂದು ವಾಸ್ತವ ತಿಳಿವಳಿಕೆಯನ್ನು ಹೊಂದಲು ಅಂಜುತ್ತಾ, ವಿಚಾರಶಕ್ತಿ ಕುಸಿಯುತ್ತದೆ. ಆಗ ಹೇಳಿದ್ದನ್ನು ಹೇಳಿದ ಧ್ವನಿಯಲ್ಲಿ ಧರಿಸುವ ಮತ್ತು ಧರಿಸಿದ್ದನ್ನು ಅಂತೆಯೇ ಹರಿಸುವ ಕೌಶಲ ಕಳೆದುಹೋಗುತ್ತದೆ. ಹಾಗಾಗಿ ಅದು ದುರ್ಲಭ. ಒಂದು ವೇಳೆ ಅದು ಸಂಭವಿಸಿದರೆ ಸಂತೋಷ ಪಾಲ್ಗೊಂಡವರಿಗೆ, ಆಶ್ಚರ್ಯ ಬೇರೆಯವರಿಗೆ ಆಗುವುದು ನಿಶ್ಚಿತ.
ಆಯ್ಕೆಗಳು ಎರಡಿವೆ ಒಂದು ಸಂತೋಷ, ಮತ್ತೊಂದು ಆಶ್ಚರ್ಯ. ಯಾವುದು ನಿಮ್ಮದಾಗಬೇಕೋ ಅದರ ಆಶ್ರಯಕ್ಕಾಗಿ ತೀವ್ರವಾಗಿ ಹಂಬಲಿಸಿ.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ

ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ

ಶ್ರೀರಾಮಚಂದ್ರಾಪುರಮಠ  
 

No comments:

Advertisement