Monday, November 3, 2008

ಇಂದಿನ ಇತಿಹಾಸ History Today ನವೆಂಬರ್ 03

ಇಂದಿನ ಇತಿಹಾಸ

ನವೆಂಬರ್ 3

ಬೆಂಗಳೂರಿನ ಸುತ್ತಮುತ್ತ ಇರುವ ಏಳು ನಗರಸಭೆ, ಕೆಂಗೇರಿ ಪುರಸಭೆ ಮತ್ತು 111 ಗ್ರಾಮಗಳನ್ನು ಸೇರಿಸಿಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಗ್ರೇಟರ್ ಬೆಂಗಳೂರು ಮುನಿಸಿಪಲ್ ಕಾರ್ಪೊರೇಷನ್ ರಚಿಸಲು ಅಧಿಸೂಚನೆ ಹೊರಡಿಸ ಲಾಯಿತು. ಯೋಜನೆ ಅನುಷ್ಠಾನಕ್ಕೆ ಇಸ್ರೊ ಮಾಜಿ ಅಧ್ಯಕ್ಷ ರಾಜ್ಯಸಭಾ ಸದಸ್ಯ ಡಾ. ಕಸ್ತೂರಿ ರಂಗನ್, ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಎ. ರವೀಂದ್ರ ನೇತೃತ್ವದ 12 ಸದಸ್ಯರ ಸಮಿತಿ ರಚಿಸಲಾಯಿತು.


2007: ತಮಿಳು ಉಗ್ರಗಾಮಿ ಸಂಘಟನೆ ಎಲ್ಟಿಟಿಇ ಪೊಲೀಸ್ ಮುಖ್ಯಸ್ಥ ಪಿ.ನಟೇಶನ್ ಅವರನ್ನು  ರಾಜಕೀಯ ಘಟಕದ ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ಲಂಕಾ ವಾಯುಪಡೆಯಿಂದ ಹತ್ಯೆಯಾದ ಬಂಡಾಯ ನಾಯಕ ಎಸ್. ಪಿ. ತಮಿಳ್ ಸೆಲ್ವಂ ಸ್ಥಾನಕ್ಕೆ ನಟೇಶನ್ ನೇಮಕಗೊಂಡರು.

2007: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ರೆಕ್ಕೆಯ ದುರಸ್ತಿ  ಮಾಡುವ ಸಾಹಸವನ್ನು ಇಬ್ಬರು ಗಗನಯಾತ್ರಿಗಳು ಈದಿನ ಆರಂಭಿಸಿದರು. ಡಿಸ್ಕವರಿ ಉಪಗ್ರಹ ಉಡಾವಣೆಗೆ ಸೀಳು ಬಂದಿರುವ ರೆಕ್ಕೆಯನ್ನು ಸರಿಪಡಿಸುವುದು ಅಗತ್ಯ. ದುರಸ್ತಿ ಮಾಡದಿದ್ದಲ್ಲಿ ವಿದ್ಯುತ್ ಉತ್ಪಾದಿಸುವ ಈ ರೆಕ್ಕೆಯ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಳ್ಳುವುದು ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿತು. ಬಾಹ್ಯಾಕಾಶ ನಡಿಗೆಯಲ್ಲಿ ನುರಿತ ಗಗನಯಾತ್ರಿ ಸ್ಕಾಟ್ ಪಾರಾಜಿನ್ ಸಕಿ (46) ಅವರು ಈ ಕೆಲಸಕ್ಕೆ ಮುಂದಾದರು.

2007: ಅಕ್ರಮ ಆಸ್ತಿ ಸಂಪಾದನೆಯ ಆರೋಪದ ಮೇರೆಗೆ ಬೆಂಗಳೂರು, ಬಳ್ಳಾರಿ ಮತ್ತು ಬೀದರಿನಲ್ಲಿ ಪೊಲೀಸ್, ಸಾರಿಗೆ ಮತ್ತು ನೀರಾವರಿ ಇಲಾಖೆಯ 13 ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 50 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿದರು. ಇದು ಕರ್ನಾಟಕ ಲೋಕಾಯುಕ್ತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ದಾಳಿ. ಇಬ್ಬರು ಸಹಾಯಕ ಪೊಲೀಸ್ ಆಯುಕ್ತರು, ಒಬ್ಬ ಎಸ್ ಪಿ, ಒಬ್ಬ ಡಿ ವೈ ಎಸ್ ಪಿ, ಮೂವರು ಪೊಲೀಸ್ ಇನ್ ಸ್ಪೆಕ್ಟರುಗಳು, ಐದು ಮೋಟಾರು ವಾಹನ ನಿರೀಕ್ಷಕರು ಮತ್ತು ಒಬ್ಬ ಸಹಾಯಕ ಕಾರ್ಯಪಾಲಕ ಎಂಜಿನಿಯರುಗಳ ಮನೆ-ಕಚೇರಿ ಮೇಲೆ ದಾಳಿ ನಡೆಯಿತು. ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ವರ್ಷವೊಂದರಲ್ಲಿ ಎಂಟರಿಂದ ಹತ್ತು ಮಂದಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದು ಈವರೆಗಿನ ಇತಿಹಾಸ. ಆದರೆ ಈದಿನ ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾದ ದಾಳಿಯಲ್ಲಿ 13 ಮಂದಿ ಅಧಿಕಾರಿಗಳ ಮೇಲೆ ದಾಳಿ ನಡೆಸಿ, ಭಾರಿ ಪ್ರಮಾಣದ ಅಕ್ರಮ ಆಸ್ತಿಯನ್ನು ಬಯಲಿಗೆ ತರುವ ಮೂಲಕ ಲೋಕಾಯುಕ್ತ ಪೊಲೀಸರು ನೂತನ ದಾಖಲೆ ಸೃಷ್ಟಿಸಿದರು. ಬೆಂಗಳೂರಿನ ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಅಜ್ಜಪ್ಪ, ವಿಧಾನಸೌಧ ಭದ್ರತಾ ವಿಭಾಗದ ಎಸಿಪಿ ವಿಶ್ವನಾಥ್ ಸಿಂಗ್, ಯಲಹಂಕ ಪೊಲೀಸ್ ತರಬೇತಿ ಕೇಂದ್ರದ ಅಧೀಕ್ಷಕ ಶ್ರೀನಿವಾಸ ಅಯ್ಯರ್, ಪೊಲೀಸ್ ಇನ್ಸ್ಪೆಕ್ಟರುಗಳಾದ ರಾಮಮೂರ್ತಿನಗರ ಠಾಣೆಯ ಸಿದ್ದಪ್ಪ, ವಿಶೇಷ ಘಟಕದ ಮರಿಸ್ವಾಮಿಗೌಡ, ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯ ಎಸ್.ಪಿ. ಮಲ್ಲಿಕಾರ್ಜುನ, ಕಾಡುಗೋಡಿ ಠಾಣೆಯ ಪುರುಷೋತ್ತಮ್, ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರಾದ ಬಾಲಚಂದ್ರರಾವ್ (ಯಶವಂತಪುರ ಪ್ರಾದೇಶಕ ಸಾರಿಗೆ ಅಧಿಕಾರಿಗಳ ಕಚೇರಿ), ಈಶ್ವರ ನಾಯಕ್ (ರಾಜಾಜಿನಗರ) ಮತ್ತು ಎಂ. ಲಕ್ಷ್ಮಣ್ (ದೇವನಹಳ್ಳಿ) ಅವರ ಮನೆ, ಕಚೇರಿ ಮೇಲೆ ದಾಳಿ ನಡೆಯಿತು.

2007: `ರಾಜಕೀಯ ಅಸ್ಥಿರತೆ, ನ್ಯಾಯಾಂಗದ ಮಿತಿಮೀರಿದ ಹಸ್ತಕ್ಷೇಪ ಹಾಗೂ ಭಯೋತ್ಪಾದಕ ಕೃತ್ಯಗಳು ಹೆಚ್ಚುತ್ತಿರುವ' ನೆಪವೊಡ್ಡಿ ಪಾಕಿಸ್ಥಾನದಲ್ಲಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ತುರ್ತು ಪರಿಸ್ಥಿತಿ ಘೋಷಿಸಿದರು. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಇಫ್ತಿಕರ್ ಮೊಹಮ್ಮದ್ ಚೌಧರಿ ಅವರನ್ನೂ ವಜಾ ಮಾಡಲಾಯಿತು. ಆದರೆ  ಸುಪ್ರೀಂಕೋರ್ಟ್ ಈ ಆದೇಶವನ್ನು ಸಂವಿಧಾನಬಾಹಿರ ಎಂದು ಹೇಳಿತು.

2007: ಕರ್ನಾಟಕದಲ್ಲಿ ಸರ್ಕಾರ ರಚನೆಗೆ ಆಹ್ವಾನ ನೀಡಬೇಕೆಂದು ಆಗ್ರಹಿಸಿ ಬಿಜೆಪಿಯು ಬೆಂಗಳೂರು ಮಹಾತ್ಮ ಗಾಂಧಿ ರಸ್ತೆಯಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯ ಬಳಿ ಅನಿರ್ದಿಷ್ಟಾವಧಿಯ ಧರಣಿಯನ್ನು ಆರಂಭಿಸಿತು.

2006: ಹೈದರಾಬಾದಿನ ವಿಶ್ವ ಪ್ರಸಿದ್ಧ ಸಾಲಾರ್ ಜಂಗ್ ವಸ್ತುಸಂಗ್ರಹಾಲಯದಲ್ಲಿ ಅಗ್ನಿ ಅನಾಹುತ ಸಂಭವಿಸಿತು. ಆದರೆ ಆದರೆ ಯಾವುದೇ ಪ್ರಾಚೀನ ವಸ್ತುಗಳಿಗೂ ಹಾನಿ ಉಂಟಾಗಲಿಲ್ಲ. ವಸ್ತುಸಂಗ್ರಹಾಲಯದ ದಾಸ್ತಾನುಕೋಣೆಯ ಒಳಗೆ ಮೊದಲಿಗೆ ಬೆಂಕಿ ಕಾಣಿಸಿಕೊಂಡಿತು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತತ್ ಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. ಕ್ಷಿಪ್ರವಾಗಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಆರಿಸಿದರು.

2006: ಬೆಂಗಳೂರಿನ ಸುತ್ತಮುತ್ತ ಇರುವ ಏಳು ನಗರಸಭೆ, ಕೆಂಗೇರಿ ಪುರಸಭೆ ಮತ್ತು 111 ಗ್ರಾಮಗಳನ್ನು ಸೇರಿಸಿಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಗ್ರೇಟರ್ ಬೆಂಗಳೂರು ಮುನಿಸಿಪಲ್ ಕಾರ್ಪೊರೇಷನ್ ರಚಿಸಲು ಅಧಿಸೂಚನೆ ಹೊರಡಿಸಲಾಯಿತು. ಯೋಜನೆ ಅನುಷ್ಠಾನಕ್ಕೆ ಇಸ್ರೊ ಮಾಜಿ ಅಧ್ಯಕ್ಷ ರಾಜ್ಯಸಭಾ ಸದಸ್ಯ ಡಾ. ಕಸ್ತೂರಿ ರಂಗನ್, ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಎ. ರವೀಂದ್ರ ನೇತೃತ್ವದ 12 ಸದಸ್ಯರ ಸಮಿತಿ ರಚಿಸಲಾಯಿತು.

2006: ಭಾರತೀಯ ಕ್ರಿಕೆಟ್ ರಂಗದ ಪ್ರತಿಭಾನ್ವಿತ ಆಟಗಾರರರಲ್ಲಿ ಒಬ್ಬರಾದ ವಿಜಯ್ ರಾಘವೇಂದ್ರ ಭಾರಧ್ವಾಜ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದರು. ಉತ್ತಮ ಬ್ಯಾಟ್ ಮನ್ ಹಾಗೂ ಆಫ್ ಸ್ಪಿನ್ನರ್ ಆಗಿದ್ದ ಭಾರಧ್ವಾಜ್ ಸುದ್ದಿಗೋಷ್ಠಿಯಲ್ಲಿ ನಿವೃತ್ತಿ ನಿರ್ಧಾರ ಪ್ರಕಟಿಸಿದರು. (ಜನನ: 15 ಆಗಸ್ಟ್ 1975).

2006: ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್ ವರ್ಷದ ಐಸಿಸಿ ವಿಶ್ವ ಇಲೆವೆನ್ ತಂಡದ ಅತ್ಯುತ್ತಮ ನಾಯಕ ಗೌರವಕ್ಕೆ ಪಾತ್ರರಾದರು. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ವಿವಿಧ ಪ್ರಶಸ್ತಿಗಳಿಗೆ ಕ್ರಿಕೆಟಿಗರನ್ನು ಆಯ್ಕೆ ಮಾಡಿತು.

1998: `ಬ್ಯಾಟ್ ಮ್ಯಾನ್' ಸೃಷ್ಟಿಕರ್ತ ಬಾಬ್ ಕೇನ್ ತಮ್ಮ 83ನೇ ವಯಸ್ಸಿನಲ್ಲಿ ಮೃತರಾದರು. ಲಿಯೋನಾರ್ಡೊ ಡ ವಿಂಚಿ ಅವರ  `ಹಾರುವ ಯಂತ್ರ'ಗಳ ಚಿತ್ರಗಳಿಂದ ಸ್ಫೂರ್ತಿ ಪಡೆದು `ಬ್ಯಾಟ್ ಮ್ಯಾನ್' ಸೃಷ್ಟಿಸಿದರು ಎನ್ನಲಾಗಿದೆ.

1992: ಬಾಲಿವುಡ್ ನಟ ಪ್ರೇಮನಾಥ್ ನಿಧನ.

1986: ಸಿರಿಯನ್ ಪರ ಮ್ಯಾಗಜಿನ್ `ಆಶ್- ಶಿರಾ' ಮೊತ್ತ ಮೊದಲ ಬಾರಿಗೆ ಅಮೆರಿಕವು ಇರಾನಿಗೆ ಶಸ್ತ್ರಾಸ್ತ್ರ ಮಾರಾಟ ಮಾಡಿದ್ದನ್ನು ಪ್ರಕಟಿಸಿತು. ಈ ಶಸ್ತ್ರಾಸ್ತ್ರಗಳ ರಹಸ್ಯ ಮಾರಾಟದಿಂದ ಬಂದ ಲಾಭವನ್ನು ನಿಕರಾಗುವಾದ ಬಂಡುಕೋರರಿಗೆ ನೀಡಲಾಗಿದೆ ಎಂಬುದಾಗಿ ಅಮೆರಿಕಾದ ಅಧ್ಯಕ್ಷ ರೀಗನ್ ಹಾಗೂ ಅಟಾರ್ನಿ ಜನರಲ್ ಎಡ್ವಿನ್ ಮೀಸ್ ಪ್ರಕಟಿಸಿದಾಗ ಈ ಪ್ರಕರಣ ಪ್ರಮುಖ ಹಗರಣಯಿತು.

1984: ಓಂ ಅಗರ್ವಾಲ್ ಅವರು ಡರ್ಬಿನ್ನಿನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ವಿಜಯ ಗಳಿಸುವ ಮೂಲಕ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ಗೆದ್ದ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1984: ಹತ್ಯೆಗೊಳಗಾದ ಭಾರತದ ಪ್ರಧಾನಿ ಇಂದಿರಾಗಾಂಧಿ ಅವರ ಅಂತ್ಯಕ್ರಿಯೆ.

1978: ಸರ್ ಫ್ರಾಜ್ ನವಾಜ್ `ಶಾರ್ಟ್ ಪಿಚ್ಡ್ ಬೌಲಿಂಗ್' ಮಾಡಿದ್ದನ್ನು ಪ್ರತಿಭಟಿಸಿ ಭಾರತೀಯ ಕ್ಯಾಪ್ಟನ್ ಬಿಷನ್ ಸಿಂಗ್ ಬೇಡಿ ಅವರು ಪಾಕಿಸ್ಥಾನದ ಸಹಿವಾಲ್ ನ ಝಾಫರ್ ಸ್ಟೇಡಿಯಂನಿಂದ ತಮ್ಮ ಆಟಗಾರರನ್ನು ವಾಪಸ್ ಕರೆಸಿಕೊಂಡರು. ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯವೊಂದು ಹೀಗೆ ಮುಕ್ತಾಯಗೊಂಡದ್ದು ಇದೇ ಪ್ರಥಮ.

1968: ಸಾಹಿತಿ ಚಂದ್ರಿಕಾ ಕಾಕೋಳ ಜನನ.

1957: ಸೋವಿಯತ್ ಒಕ್ಕೂಟ ನಿರ್ಮಿಸಿದ ಕೃತಕ ಉಪಗ್ರಹ ಸ್ಪುಟ್ನಿಕ್-2ನ್ನು ಈದಿನ ಉಡಾವಣೆ ಮಾಡಿ ಕಕ್ಷೆಗೆ ಸೇರಿಸಲಾಯಿತು. ಇದು ಮಾನವ ನಿರ್ಮಿತ ಎರಡನೆ ಉಪಗ್ರಹ. ಲೈಕಾ ಎಂಬ ನಾಯಿಯನ್ನು ಈ ಉಪಗ್ರಹದೊಂದಿಗೆ ಕಳುಹಿಸಿ ಪ್ರಾಣಿಯೊಂದನ್ನು ಮೊದಲ ಬಾರಿಗೆ ಅಂತರಿಕ್ಷಯಾನ ಮಾಡಿಸಿದ ಕೀರ್ತಿಗೆ ಸೋವಿಯತ್ ಒಕ್ಕೂಟ ಭಾಜನವಾಯಿತು.

1939: ಕನ್ನಡ ಮತ್ತು ಹಿಂದಿ ಭಾಷೆಗಳೆರಡರಲ್ಲಿ ವಿಶಿಷ್ಟ ಸ್ಥಾನ ಗಳಿಸಿರುವ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಬಸೆಟ್ಟು- ಗಿರಿಜವ್ವ ದಂಪತಿಯ ಮಗನಾಗಿ ಯಾದವಾಡ ಗ್ರಾಮದಲ್ಲಿ ಜನಿಸಿದರು.

1933: ಭಾರತದ ನೊಬೆಲ್ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಜನ್ಮದಿನ.

1933: ಸಾಹಿತಿ ಪದ್ಮಾ ಶೆಣೈ ಜನನ.

1929: ಸಾಹಿತಿ ಬಿ.ಎನ್. ನಾಣಿ ಜನನ.

1910: ಸಾಹಿತಿ ಬಾಲಚಂದ್ರ ಘಾಣೇಕರ್ ಜನನ.

1906: ಭಾರತೀಯ ಚಿತ್ರನಟ, ನಿರ್ದೇಶಕ ಪೃಥ್ವಿರಾಜ್ ಕಪೂರ್ ಹುಟ್ಟಿದ ದಿನ.

1838: `ದಿ ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯು ಬಾಂಬೆಯಿಂದ (ಈಗಿನ ಮುಂಬೈ) ಮೊದಲ ಬಾರಿಗೆ ಪ್ರಕಟಗೊಂಡಿತು. `ದಿ ಬಾಂಬೆ ಟೈಮ್ಸ್ ಅಂಡ್ ಜರ್ನಲ್ ಆಫ್ ಕಾಮರ್ಸ್' ಎಂಬ ಹೆಸರಿನಿಂದ ವಾರಕ್ಕೆ ಎರಡು ಬಾರಿ ಪ್ರಕಟಗೊಳ್ಳುತ್ತಿದ್ದ ಅದನ್ನು ಬೆನ್ನೆಟ್, ಕೋಲ್ಮನ್ ಅಂಡ್ ಕಂಪೆನಿ ಲಿಮಿಟೆಡ್ ಪ್ರಕಟಿಸಿತು. 1850ರಲ್ಲಿ ಅದಕ್ಕೆ `ದಿ ಟೈಮ್ಸ್ ಆಫ್ ಇಂಡಿಯಾ' ಎಂಬುದಾಗಿ ಮರುನಾಮಕರಣ ಮಾಡಲಾಯಿತು. ಜೆ.ಇ. ಬ್ರೆನ್ನನ್ ಆಗ ಅದರ ಸಂಪಾದಕರಾಗಿದ್ದರು.

1618: ಭಾರತದ ಮೊಘಲ್ ಚಕ್ರವರ್ತಿ ಔರಂಗಜೇಬ್ ಹುಟ್ಟಿದ ದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement