Monday, November 17, 2008

ಇಂದಿನ ಇತಿಹಾಸ History Today ನವೆಂಬರ್ 17

ಇಂದಿನ ಇತಿಹಾಸ

ನವೆಂಬರ್ 17

ಬೆನಜೀರ್ ಭುಟ್ಟೋ ಅವರು ಇಸ್ಲಾಮಿಕ್ ರಾಷ್ಟ್ರವೊಂದರ ಮೊತ್ತ ಮೊದಲ ನಾಯಕಿಯಾದರು. ಪಾಕಿಸ್ಥಾನದಲ್ಲಿ 11 ವರ್ಷಗಳ ಬಳಿಕ ನಡೆದ ಮೊದಲ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಅವರ ಪಕ್ಷ ಜಯಗಳಿಸಿ ಅವರು ನಾಯಕಿಯಾಗಿ ಆಯ್ಕೆಯಾದರು.

2007: ಶತಮಾನದಲ್ಲೇ ಅತ್ಯಂತ ಭೀಕರವೆನ್ನಲಾದ 'ಸಿದ್ರ್' ಚಂಡಮಾರುತಕ್ಕೆ ಸಿಲುಕಿ ಬಾಂಗ್ಲಾದೇಶದಲ್ಲಿ ಮೃತರಾದವರ ಸಂಖ್ಯೆ 2,000 ತಲುಪಿತು. ನಾಪತ್ತೆಯಾದವರ ಸಂಖ್ಯೆ ಹಲವು ಸಾವಿರಕ್ಕೆ ಏರಿತು. ಗಂಟೆಗೆ ಸುಮಾರು 223 ಕಿ.ಮೀ. ವೇಗದಲ್ಲಿ ಸತತ ಐದು ಗಂಟೆಗಳ ಕಾಲ ಬೀಸಿದ ಬಿರುಗಾಳಿ 1876ರಿಂದ ಈಚೆಗೆ ಅತ್ಯಂತ ಭೀಕರವಾದದ್ದು. 
ಇದರಿಂದಾಗಿ ಸುಮಾರು 15 ಅಡಿ ಎತ್ತರದ ಸಮುದ್ರದಲೆಗಳು ಕಾಣಿಸಿಕೊಂಡಿದ್ದವು.

2007: `ತಿರಂಗಾ ಕೇಕ್' ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೋರ್ ನ್ಯಾಯಾಲಯವು ಭಾರತ ಕ್ರಿಕೆಟ್ ತಂಡದ ಅನುಭವಿ ಬ್ಯಾಟ್ಸ್ ಮನ್ ಸಚಿನ್ ತೆಂಡೂಲ್ಕರ್ ಅವರಿಗೆ ನೋಟಿಸ್ ಜಾರಿಮಾಡಿತು. ತ್ರಿವರ್ಣ ಧ್ವಜವನ್ನು ಹೋಲುವ ಕೇಕನ್ನು ಸಚಿನ್ ಅವರು ವೆಸ್ಟ್ ಇಂಡೀಸಿನಲ್ಲಿ ವಿಶ್ವಕಪ್ ಕ್ರಿಕೆಟ್ ನಡೆದ ಸಂದರ್ಭದಲ್ಲಿ ಕತ್ತರಿಸಿದ್ದರು. ಜಮೈಕಾದಲ್ಲಿ ಇದೇ ವರ್ಷದ ಆದಿಯಲ್ಲಿ ಈ ಘಟನೆ ನಡೆದಿತ್ತು. ಸಚಿನ್ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಇಂದೋರಿನ ನಾಗರಿಕ ರಾಜೇಶ್ ಬಿಡ್ಕರ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಅದನ್ನು ವಿಚಾರಣೆಗೆ ಎತ್ತಿಕೊಂಡ ವಿಶೇಷ ನ್ಯಾಯಾಧೀಶ ಮೊಹಮ್ಮದ್ ಶಮೀಮ್ ಅವರು `ಮಾಸ್ಟರ್ ಬ್ಲಾಸ್ಟರ್' ಗೆ ನೋಟಿಸ್ ನೀಡಿದರು.

2007: ತುರ್ತುಸ್ಥಿತಿಯನ್ನು ಕೊನೆಗೊಳಿಸಿ ಸೇನಾ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕು ಎಂಬ ಸ್ಪಷ್ಟ ಸಂದೇಶವನ್ನು ಬುಷ್ ಆಡಳಿತ ಮುಷರಫ್ ಅವರಿಗೆ ನೀಡಿತು.ಪಾಕಿಸ್ಥಾನಕ್ಕೆ ಭೇಟಿ ನೀಡಿದ ಅಮೆರಿಕದ ರಾಜತಾಂತ್ರಿಕ ಅಧಿಕಾರಿ ನೆಗ್ರೊಪೊಂಟೆ ಅವರು ಇಸ್ಲಾಮಾಬಾದಿನಲ್ಲಿ ಮುಷರಫ್ ಮತ್ತು ಜನರಲ್ ಅಷ್ಫಕ್ ಪರ್ವೇಜ್ ಕಿಯಾನಿ ಅವರನ್ನು ಭೇಟಿ ಮಾಡಿ ತುರ್ತುಸ್ಥಿತಿಯನ್ನು ವಾಪಸ್ ಪಡೆಯಬೇಕು ಮತ್ತು ಸೇನಾ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕು ಎಂಬ ಅಮೆರಿಕದ ಅಧ್ಯಕ್ಷ ಬುಷ್ ಅವರ ಸಂದೇಶವನ್ನು ತಿಳಿಸಿದರು.

2006: ಭಾರತ ಜೊತೆಗಿನ ನಾಗರಿಕ ಪರಮಾಣು ಒಪ್ಪಂದಕ್ಕೆ ಅಮೆರಿಕ ಸಂಸತ್ತಿನ ಮೇಲ್ಮನೆ ಸೆನೆಟಿನಲ್ಲಿ ಅಪೂರ್ವ ಬೆಂಬಲ ವ್ಯಕ್ತಗೊಂಡಿತು. ಒಪ್ಪಂದ ಅನುಷ್ಠಾನಕ್ಕೆ ಮಂಡಿಸಲಾಗಿದ್ದ ಮಸೂದೆಯನ್ನು ಭಾರಿ ಬಹುಮತದೊಂದಿಗೆ ಸದನ ಅಂಗೀಕರಿಸಿತು. ಇಡೀ ದಿನ ನಡೆದ ಸುದೀರ್ಘ ಕಾವೇರಿದ ಚರ್ಚೆಯ ಬಳಿಕ 18 ತಿದ್ದುಪಡಿಗಳ ಪೈಕಿ ಐದು ತಿದ್ದುಪಡಿಗಳನ್ನು ತಿರಸ್ಕರಿಸಿದ ಸೆನೆಟ್, 85-12 ಮತಗಳ ಅಂತರದಿಂದ ಮಸೂದೆಯನ್ನು ಅನುಮೋದಿಸಿತು.

2006: ಹೌರಾ ಜಿಲ್ಲೆಯ ಕೆ.ಕೆ. ಸಿಂಹಾನಿಯಾ ಅವರು ಪರಿಸರದ ಮಾಲಿನ್ಯ ನಿವಾರಣೆಗಾಗಿ 1008 ಹೋಮಕುಂಡಗಳೊಂದಿಗೆ ಮೂರು ದಿನಗಳ `ಆಶ್ವಮೇಧ ಯಜ್ಞ'ವನ್ನು ಕೋಲ್ಕತಾದಲ್ಲಿ (ಹಿಂದಿನ ಕಲ್ಕತ್ತ) ಆರಂಭಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿಯ ತೀವ್ರ ವಿರೋಧದ ಮಧ್ಯೆ ನಗರದ ಗುಲ್ ಮೊಹರ್ ರೈಲ್ವೇ ಮೈದಾನದಲ್ಲಿ ಈ ಮಹಾ ಯಜ್ಞ ಆರಂಭಗೊಂಡಿತು. ವೇದ ಮಂತ್ರಗಳೊಂದಿಗೆ ಆರಂಭವಾದ ಯಜ್ಞವನ್ನು ವೀಕ್ಷಿಸಲು ಸಹಸ್ರಾರು ಮಂದಿ ಸೇರಿದ್ದರು.  ಯಜ್ಞಕ್ಕೆ ತಡೆಯಾಜ್ಞೆ ನೀಡಲು ರಾಜ್ಯ ಹೈಕೋರ್ಟ್ ನಿರಾಕರಿಸಿತ್ತು. 

2006: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಏರ್ಪಡಿಸಿದ ನಾಲ್ಕು ದಿನಗಳ ಕೃಷಿ ಮೇಳ ಹಾಗೂ ರಾಷ್ಟ್ರೀಯ ಕೃಷಿ ಯಂತ್ರೋಪಕರಣಗಳ ಪ್ರದರ್ಶನಕ್ಕೆ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಚಾಲನೆ ನೀಡಿದರು. ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಿಸಲಾಗಿರುವ ವಿಶಾಲವಾದ ಶಾಶ್ವತ ಮೇಳ ಪ್ರಾಂಗಣದಲ್ಲಿ ಆರಂಭಗೊಂಡ `ಬೇಸಾಯದ ಹಬ್ಬ'ಕ್ಕೆ ನೆರೆದಿದ್ದ ರಾಜ್ಯದ 15 ಜಿಲ್ಲೆಗಳ ಸಹಸ್ರಾರು ರೈತರು ಸಾಕ್ಷಿಯಾದರು.

2006: ದುಬೈಯ ಹೈಪರ್ ಮಾರ್ಕೆಟ್ಟಿಗೆ ಭೇಟಿ ನೀಡುತ್ತಿದ್ದ ಮಹಿಳೆಯರನ್ನು ಅಸಭ್ಯವಾಗಿ ಚಿತ್ರೀಕರಿಸಿದ್ದಕ್ಕಾಗಿ ಬ್ರಿಟಿಷ್ ಕಂಪೆನಿಯೊಂದರ ಜನರಲ್ ಮ್ಯಾನೇಜರನಿಗೆ ಆರು ತಿಂಗಳುಗಳ ಸೆರೆವಾಸದ ಶಿಕ್ಷೆ ವಿಧಿಸಲಾಯಿತು. 34 ವರ್ಷ ವಯಸ್ಸಿನ ಈ ಬ್ರಿಟಿಷ್ ಪ್ರಜೆಯನ್ನು ಕೇವಲ `ಪಿಎಸ್' ಎಂಬುದಾಗಿ ಗುರುತಿಸಲಾಗಿದ್ದು, ಮಿನಿಸ್ಕರ್ಟ್ ಧರಿಸುತ್ತಿದ್ದ ಮಹಿಳೆಯರ ಗುಪ್ತಭಾಗಗಳ ಚಿತ್ರೀಕರಣ ನಡೆಸುವ ಮೂಲಕ ಅವರ ಖಾಸಗಿ ಬದುಕಿಗೆ ಕನ್ನ ಹಾಕಿದ ಆರೋಪವನ್ನು ಈತನ ಮೇಲೆ ಹೊರಿಸಲಾಗಿದೆ. ಈ ಆರೋಪಿಯು ಡಿಜಿಟಲ್ ವಿಡಿಯೋ ಕ್ಯಾಮ್ ಕಾರ್ಡರ್ ಬಳಸಿ ರಹಸ್ಯವಾಗಿ ಮಹಿಳೆಯರ ಚಿತ್ರೀಕರಣ ಮಾಡುತ್ತಿದ್ದ.

2006: ಭಾರತದ ಅತ್ಯಂತ ಶ್ರೀಮಂತ ನಿವಾಸಿ ಎನಿಸಿದ್ದ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜಿ ಅವರನ್ನು, ಕಳೆದ ವರ್ಷ ಪ್ರತ್ಯೇಕ ಮಾರ್ಗಗಳಲ್ಲಿ ಕ್ರಮಿಸಲು ನಿರ್ಧರಿಸಿದ ಅಂಬಾನಿ ಸಹೋದರರಾದ ಮುಖೇಶ್ ಮತ್ತು ಅನಿಲ್ ಎರಡನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ತಳ್ಳಿದ್ದು, ದೇಶದ ಅತ್ಯಂತ ಶ್ರೀಮಂತರ ಸ್ಥಾನಕ್ಕೆ ಏರಿದ್ದಾರೆ. ಆದರೆ ಜಗತ್ತಿನಲ್ಲಿ ಮೂರನೇ ಶ್ರೀಮಂತ ವ್ಯಕ್ತಿ ಎನಿಸಿರುವ ಉಕ್ಕು ಉದ್ಯಮಿ ಅನಿವಾಸಿ ಭಾರತೀಯ ಲಕ್ಷ್ಮಿ ನಿವಾಸ್ ಮಿತ್ತಲ್ `ಭಾರತದ 40 ಶ್ರೀಮಂತರ ಪಟ್ಟಿ'ಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ ಎಂದು `ಫೋಬ್ಸ್ ಏಷ್ಯಾ' ನಿಯತಕಾಲಿಕವು `ಭಾರತದ 40 ಶ್ರೀಮಂತರ' ಪಟಿಯಲ್ಲಿ ಪ್ರಕಟಿಸಿತು.

2006: ಅನಾರೋಗ್ಯದಿಂದ ಬಳಲುತ್ತಿದ್ದ ಹಂಗೇರಿಯ ವಿಶ್ವ ವಿಖ್ಯಾತ ಫುಟ್ಬಾಲ್ ಆಟಗಾರ ಫರೆನ್ಸ್ ಪುಸ್ಕಾಸ್ (79) ಬುಡಾಪೆಸ್ಟಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು. 85 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಒಟ್ಟು 85 ಗೋಲುಗಳನ್ನು ಪಡೆದಿದ್ದರು. 1952ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಫುಟ್ಬಾಲ್ ವಿಭಾಗದಲ್ಲಿ ಚಿನ್ನ ಗೆದ್ದ ಹಂಗೇರಿ ತಂಡದ ನಾಯಕ ಇವರೇ ಆಗಿದ್ದರು.

2005: ಇರಾನಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ಖ್ಯಾತ ತನಿಖಾ ವರದಿಗಾರ ಅಕ್ಬರ್ ಗಾಂಜಿ ಅವರಿಗೆ ವಿಶ್ವ ದಿನ ಪತ್ರಿಕೆಗಳ ಸಂಘದ 2006ನೇ ಸಾಲಿನ `ಗೋಲ್ಡನ್ ಪೆನ್ ಆಫ್ ಫ್ರೀಡಂ' ಪ್ರಶಸ್ತಿ ಘೋಷಿಸಲಾಯಿತು. ರಾಜಕೀಯ ಕಾರಣಕ್ಕಾಗಿ 2000ನೇ ಇಸವಿಯಲ್ಲಿ ಬಂಧಿತರಾದ ಗಾಂಜಿ ಅವರಿಗೆ 6 ವರ್ಷಗಳ ಸೆರೆಮನೆವಾಸದ ಶಿಕ್ಷೆ ವಿಧಿಸಲಾಗಿದೆ.

2005: ಕೆಲವು ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬುದಾಗಿ ಬೆಳಗಾವಿ ಮಹಾನಗರ ಪಾಲಿಕೆ ಕೈಗೊಂಡಿದ್ದ ನಿರ್ಣಯವನ್ನು ರಾಜ್ಯ ಸರ್ಕಾರ ತತ್ ಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿತು.

2005: ಭಾರತದ ಅಗ್ರಮಾನ್ಯ ಮಹಿಳಾ ಹೆಪಥ್ಲಾನ್ ಪಟು ಜೆ.ಜೆ. ಶೋಭಾ ಅವರು ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಹಾಕಿಪಟು ಅಜಯಕುಮಾರ್ ಅವರ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಅಡಿ ಇರಿಸಿದರು.

1988: ಬೆನಜೀರ್ ಭುಟ್ಟೋ ಅವರು ಇಸ್ಲಾಮಿಕ್ ರಾಷ್ಟ್ರವೊಂದರ ಮೊತ್ತ ಮೊದಲ ನಾಯಕಿಯಾದರು. ಪಾಕಿಸ್ಥಾನದಲ್ಲಿ 11 ವರ್ಷಗಳ ಬಳಿಕ ನಡೆದ ಮೊದಲ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಅವರ ಪಕ್ಷ ಜಯಗಳಿಸಿ ಅವರು ನಾಯಕಿಯಾಗಿ ಆಯ್ಕೆಯಾದರು.

1970: ಸಂಶೋಧಕ ಡಗ್ಲಾಸ್ ಎಂಗೆಲ್ಬರ್ಟ್ ಅವರು ಸಂಶೋಧಿಸಿದ `ಕಂಪ್ಯೂಟರ್ ಮೌಸ್' ಗೆ ಅಮೆರಿಕನ್ ಪೇಟೆಂಟ್ ನೀಡಲಾಯಿತು. 

1966: ಲಂಡನ್ನಿನ ಲೈಸಿಯಮ್ ಥಿಯೇಟರಿನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ರೀಟಾ ಫರಿಯಾ `ವಿಶ್ವ ಸುಂದರಿ' ಕಿರೀಟ ಧರಿಸಿ, ವಿಶ್ವ ಸುಂದರಿ ಎನಿಸಿದ ಭಾರತದ ಮೊತ್ತ ಮೊದಲ ಮಹಿಳೆಯಾದರು.

1932: ಮೂರನೇ `ದುಂಡು ಮೇಜಿನ ಪರಿಷತ್ತು' (ರೌಂಡ್ ಟೇಬಲ್ ಕಾನ್ಫರೆನ್ಸ್) ಲಂಡನ್ನಿನಲ್ಲಿ ಆರಂಭವಾಯಿತು. ಕಾಂಗ್ರೆಸ್ ಮತ್ತು ಬ್ರಿಟಿಷ್ ಲೇಬರ್ ಪಾರ್ಟಿ ಅದರಲ್ಲಿ ಪಾಲ್ಗೊಳ್ಳದೇ ಇದ್ದುದರಿಂದ ಅದು ಮೊದಲ ಪರಿಷತ್ತುಗಳಷ್ಟು ಮಹತ್ವ ಪಡೆಯಲಿಲ್ಲ. ಪರಿಣಾಮವಾಗಿ ಪ್ರಾಂತೀಯ ಸ್ವಾಯತ್ತತೆ ಹಾಗೂ ಒಕ್ಕೂಟ ವ್ಯವಸ್ಥೆ ಸ್ಥಾಪನೆ ಉದ್ದೇಶದ 1935ರ ಭಾರತ ಸರ್ಕಾರ ಕಾಯ್ದೆ ಅನುಷ್ಠಾನಗೊಳ್ಳಲಿಲ್ಲ.

1928: ಭಾರತದ ರಾಷ್ಟ್ರೀಯ ನಾಯಕ ಲಾಲಾ ಲಜಪತರಾಯ್ ಅವರು ಸೈಮನ್ ಕಮೀಷನ್ ವಿರೋಧಿ ಪ್ರದರ್ಶನಕಾಲದಲ್ಲಿ ಪೊಲೀಸರ ಲಾಠಿ ಪ್ರಹಾರದಿಂದ ಆದ ಗಾಯಗಳ ಪರಿಣಾಮವಾಗಿ ಮೃತರಾದರು.

1869: ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರವನ್ನು (ರೆಡ್ ಸೀ) ಸಂಪರ್ಕಿಸುವ ಸುಯೆಜ್ ಕಾಲುವೆ ಈಜಿಪ್ಟಿನಲ್ಲಿ ಸಂಚಾರಕ್ಕಾಗಿ ತೆರೆಯಲಾಯಿತು. ಉತ್ತರದ ಪೋರ್ಟ್ ಸೆಡ್ ನಿಂದ ದಕ್ಷಿಣದ ಸುಯೆಜ್ ವರೆಗೆ ಈ ಕಾಲುವೆಯ ಉದ್ದ 163 ಕಿ.ಮೀ.ಗಳು. ಇದು ಆಫ್ರಿಕಾ ಖಂಡವನ್ನು ಏಷ್ಯಾ ಖಂಡದಿಂದ ಬೇರ್ಪಡಿಸುತ್ತದೆ. ಹಿಂದೂ ಸಾಗರ ಮತ್ತು ಪಶ್ಚಿಮದ ಫೆಸಿಫಿಕ್ ಸಾಗರ ಪ್ರದೇಶಗಳಿಗೆ ಯುರೋಪಿನಿಂದ ಸಂಪರ್ಕ ಕಲ್ಪಿಸುವ ಅತ್ಯಂತ ಹತ್ತಿರದ ಜಲಮಾರ್ಗವಿದು. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement