ಇಂದಿನ ಇತಿಹಾಸ
ನವೆಂಬರ್ 29
ಭಾರತೀಯ ಕೈಗಾರಿಕೋದ್ಯಮಿ ಹಾಗೂ ಭಾರತದಲ್ಲಿ ವಿಮಾನಯಾನದ ಮೊದಲಿಗರಾದ ಜೆ. ಆರ್. ಡಿ. ಟಾಟಾ ಅವರು ಜಿನೇವಾದಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು. ಪ್ಯಾರಿಸ್ಸಿನ ಅತ್ಯಂತ ದೊಡ್ಡದಾದ ಹಾಗೂ ಹೆಸರುವಾಸಿಯಾದ ಪೇರೆ ಲಾಚೈಸ್ನ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
2007: ಪಾಕಿಸ್ಥಾನದ ಅಧ್ಯಕ್ಷರಾಗಿ ಜನರಲ್ ಪರ್ವೇಜ್ ಮುಷರಫ್ ಅವರು ಸತತ ಎರಡನೇ ಅವಧಿಗಾಗಿ ಇಸ್ಲಾಮಾಬಾದಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಐವಾನ್- ಎ - ಅಧ್ಯಕ್ಷರ ಅರಮನೆಯಲ್ಲಿ ಮುಖ್ಯ ನ್ಯಾಯಮೂರ್ತಿ ಅಬ್ದುಲ್ ಹಮೀದ್ ದೋಗರ್ ಅವರು ಮುಷರಫ್ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸಿದರು. ಅಂತಾರಾಷ್ಟ್ರೀಯ ಹಾಗೂ ದೇಶದಲ್ಲಿ ಒತ್ತಡಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮುಷರಫ್ ಅವರು ಇದಕ್ಕೆ ಒಂದು ದಿನ ಮೊದಲು ಸೇನಾ ಮುಖ್ಯಸ್ಥನ ಹುದ್ದೆಯನ್ನು ತೊರೆದಿದ್ದರು.
2007: ಕಂಪೆನಿಯ ಮುಖ್ಯಸ್ಥರ ವಿರುದ್ಧ ಜನಾಂಗೀಯ ನಿಂದನೆ ಆರೋಪ ದಾಖಲಿಸಿದ್ದ ಭಾರತೀಯ ಮೂಲದ ಕಾಲ್ ಸೆಂಟರ್ ಉದ್ಯೋಗಿ ನಾರ್ಥ್ಯಾಂಪ್ಟನ್ ನಿವಾಸಿ ಚೇತನ್ ಕುಮಾರ್ ಮೆಶ್ರಾಮ್ ಅವರಿಗೆ ಪರಿಹಾರವಾಗಿ 5 ಸಾವಿರ ಪೌಂಡುಗಳನ್ನು ನೀಡಲು ಸಂಬಂಧಿಸಿದ ಕಂಪೆನಿಗೆ ನಾರ್ಥ್ಯಾಂಪ್ಟನ್ ಜನಾಂಗೀಯ ಸಮಾನತೆ ಮಂಡಳಿ ಲಂಡನ್ನಿನಲ್ಲಿ ಆದೇಶಿಸಿತು. ಬ್ರಿಟಿಷರಂತೆ ಇಂಗ್ಲಿಷಿನಲ್ಲಿ ಮಾತನಾಡದ ಕಾರಣವೊಡ್ಡಿ ಕಂಪೆನಿಯ ಮುಖ್ಯಸ್ಥರು ತನ್ನನ್ನು ಕೆಲಸದಿಂದ ಕಿತ್ತುಹಾಕಿರುವುದಾಗಿ ಚೇತನ್ ಕುಮಾರ್ ಮೆಶ್ರಾಮ್ ಅವರು ಮಂಡಳಿಗೆ ದೂರು ಸಲ್ಲಿಸಿದ್ದರು.
2007: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಗೆ ಪ್ರತೀಕಾರವಾಗಿ 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಪಾತ್ರದ ಕುರಿತು ಸಾಕ್ಷ್ಯ ಹೇಳುವುದಾಗಿ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ ಜಸ್ಬೀರ್ ಸಿಂಗ್ ಪ್ರಕಟಿಸಿದರು. ಇದರಿಂದ ಇಡೀ ಪ್ರಕರಣಕ್ಕೆ ಹೊಸ ತಿರುವು ಲಭಿಸಿತು. ಸಿಖ್ಖರ ವಿರುದ್ಧ ದೌರ್ಜನ್ಯ, ಹಲ್ಲೆಗೆ ಪ್ರಚೋದನೆ ನೀಡಿದ್ದರು ಎಂಬ ಆರೋಪ ಟೈಟ್ಲರ್ ಮೇಲಿದ್ದು, ಅಕ್ಟೋಬರ್ ತಿಂಗಳಲ್ಲಷ್ಟೇ ಸಿಬಿಐ ಅವರ ವಿರುದ್ಧ ತನಗೆ ಯಾವುದೇ ಸಾಕ್ಷ್ಯ ಲಭಿಸಿಲ್ಲ ಎಂದು ಹೇಳಿತ್ತು.
2007: ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್) ನಿರ್ದೇಶಕ ಪಿ.ವೇಣುಗೋಪಾಲ್ ನಿವೃತ್ತಿ ವಯೋಮಿತಿಯನ್ನು 65 ವರ್ಷಕ್ಕ್ಕೆ ನಿಗದಿಗೊಳಿಸುವ ವಿವಾದಾತ್ಮಕ ಮಸೂದೆ ವಿರೋಧಿಸಿ ಆರಂಭಿಸಿದ್ದ ತಮ್ಮ ಮುಷ್ಕರವನ್ನು ಏಮ್ಸ್ ವೈದ್ಯರು ಹೈಕೋರ್ಟ್ ಆದೇಶದ ಮೇರೆಗೆ ಹಿಂತೆಗೆದುಕೊಂಡರು.
2007: ಮಿತ `ವೈನ್' ಸೇವನೆ ಹೃದಯಕ್ಕೆ ಒಳ್ಳೆಯದು ಎಂಬ ಮಾತಿದೆ. ಆದರೆ ಈ ತೆರನಾದ `ವೈನ್' ಸೇವನೆಯು ಮಹಿಳೆಯರ ರಕ್ತನಾಳದ ಉರಿಯನ್ನು ತಂಪಾಗಿ ಇಡುತ್ತದಂತೆ..! ಸ್ಪೇನ್ ದೇಶದ ಸಂಶೋಧಕರು ಒಂದು ತಿಂಗಳ ಕಾಲ ನಡೆಸಿದ ಪ್ರಯೋಗವೊಂದರಲ್ಲಿ ಕಂಡುಬಂದ ಸತ್ಯಾಂಶವಿದು. ಕೆಲವು ಮಹಿಳೆಯರಿಗೆ ನಿತ್ಯವೂ ಎರಡು ಲೋಟಗಳಷ್ಟು `ಕೆಂಪು ವೈನ್' ಅನ್ನು ನಾಲ್ಕು ವಾರಗಳ ಕಾಲ ನೀಡಲಾಯಿತು. ಆ ಒಂದು ತಿಂಗಳ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರ ರಕ್ತದಲ್ಲಿ ಉರಿ ಉಂಟು ಮಾಡುವ ಅಂಶದಲ್ಲಿ ಗಣನೀಯ ಇಳಿತ ಕಂಡುಬಂದಿತು.
2007: ಕನ್ನಡ ಪುಸ್ತಕ ಪ್ರಾಧಿಕಾರದ 2006ನೇ ಸಾಲಿನ `ಪುಸ್ತಕ ಸೊಗಸು' ಬಹುಮಾನಕ್ಕೆ ಆಯ್ಕೆಯಾದ 4 ಕೃತಿಗಳ ಪೈಕಿ ಮೊದಲ ಬಹುಮಾನವು ಬೆಂಗಳೂರಿನ ಅಸೀಮ ಪ್ರತಿಷ್ಠಾನ ಪ್ರಕಾಶಿಸಿದ ಹರೀಶ್ ಆರ್. ಭಟ್ ಮತ್ತು ಪ್ರಮೋದ್ ಸುಬ್ಬರಾವ್ ಅವರ `ಪಕ್ಷಿ ಪ್ರಪಂಚ' ಪುಸ್ತಕದ ಪಾಲಾಯಿತು. ಬೆಂಗಳೂರಿನ ಚಾರ್ವಾಕ ಪ್ರಕಾಶನ ಹೊರತಂದ ಈರಪ್ಪ ಎಂ. ಕಂಬಳಿ ಅವರ `ಚಾಚಾ ನೆಹರು ಮತ್ತು ಈಚಲು ಮರ' ಕೃತಿಗೆ 2ನೇ ಬಹುಮಾನ, ಅಂಕಿತ ಪುಸ್ತಕ ಹೊರತಂದ ಜಯಂತ ಕಾಯ್ಕಿಣಿ ಅವರ `ಶಬ್ದತೀರ' ಕೃತಿಗೆ 3ನೇ ಬಹುಮಾನ ಹಾಗೂ ಅಭಿನವ ಪ್ರಕಾಶನ ಹೊರತಂದ ಭಾಗೀರಥಿ ಹೆಗಡೆ ಅವರ `ಗುಬ್ಬಿಯ ಸ್ವರ್ಗ' ಕೃತಿಗೆ ಮಕ್ಕಳ ಪುಸ್ತಕ ಬಹುಮಾನ ಲಭಿಸಿತು.
2007: ಸರ್ಕಾರಕ್ಕೆ ಪಾವತಿ ಮಾಡಬೇಕಾದ ಸುಮಾರು 20.3 ಕೋಟಿ ರೂಪಾಯಿಯ ವಾಣಿಜ್ಯ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಚಿತ್ರನಟ ಹಾಗೂ ನಿರ್ದೇಶಕ ಸಂಜಯ್ ಖಾನ್ ಅವರು ನಿರ್ದೇಶಕರಾಗಿರುವ ನಗರದಲ್ಲಿನ `ವರ್ಲ್ಡ್ ರೆಸಾರ್ಟ್' ಕಂಪೆನಿಗೆ ಕರ್ನಾಟಕ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತು.
2007: ವಿದೇಶ ಯಾತ್ರೆ ಹಾಗೂ ವಿದೇಶ ವಾಸಕ್ಕೆ ಶಾಸ್ತ್ರ ಹಾಗೂ ಸಂಪ್ರದಾಯಗಳಲ್ಲಿ ವಿರೋಧವಿರುವುದರಿಂದ ಯಾವುದೇ ಕಾರಣಕ್ಕೂ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರು ಪರ್ಯಾಯ ವೇಳೆ ಕೃಷ್ಣನ ಪೂಜೆ ಮಾಡುವಂತಿಲ್ಲ ಎಂದು ಉಡುಪಿ ಅಷ್ಟಮಠಗಳ ಯತಿಗಳು ತಾಕೀತು ಮಾಡಿದರು. ಕೃಷ್ಣಮಠದಲ್ಲಿ ತುರ್ತುಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಪೇಜಾವರ ಮಠಾಧೀಶ ವಿಶ್ವೇಶತೀರ್ಥರು, ವಿದೇಶ ಯಾತ್ರೆ ಮಾಡಿದವರಿಗೆ ಕೃಷ್ಣನ ಪೂಜೆಗೆ ಈ ತನಕ ಅವಕಾಶ ನೀಡಲಾಗಿಲ್ಲ. ಆ ನಿಯಮವನ್ನು ಪುತ್ತಿಗೆ ಶ್ರೀಗಳೂ ಪಾಲಿಸಬೇಕಾಗಿದೆ ಎಂದು ಹೇಳಿದರು.
2007: ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಐಸಿಐಸಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಕೆ. ವಿ. ಕಾಮತ್ ಅವರನ್ನು ಫೋಬ್ಸ್ ಏಷ್ಯಾ `ವರ್ಷದ ಉದ್ಯಮಿ' ಎಂಬುದಾಗಿ ಗುರುತಿಸಿತು.
2006: ಇಂಡೋನೇಷ್ಯದ ಮೊಲುಕಾಸ್ ದ್ವೀಪದ ಸಾಗರ ತಳದಲ್ಲಿ ಬೆಳಗ್ಗೆ 7 ಗಂಟೆ ವೇಳೆಗೆ ಶಕ್ತಿಶಾಲಿ ಭೂಕಂಪ ಸಂಭವಿಸಿತು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.1ರಷ್ಟಿತ್ತು.
2006: ತಮಿಳುನಾಡಿನ ಮದುರೈಯಲ್ಲಿ ಜನಿಸಿದ ಚಿತ್ರಾ ಭರೂಚ ಅವರು ಬಿಬಿಸಿಯ ಪ್ರಪ್ರಥಮ ಮಹಿಳಾ ಮುಖ್ಯಸ್ಥೆಯಾಗಿ ನೇಮಕಗೊಂಡರು. ಬಿಬಿಸಿ ಅಧ್ಯಕ್ಷ ಮೈಕೆಲ್ ಗ್ರೇಡ್ ರಾಜೀನಾಮೆ ಕಾರಣ ಭರೂಚ ಅವರು ಹಂಗಾಮಿ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡರು.
2006: ಭಾರತೀಯ ಕ್ರಿಕೆಟ್ ತಂಡದ ಮಾಜಿ ಟೆಸ್ಟ್ ಆಟಗಾರ ಹನುಮಂತ ಸಿಂಗ್ (67) ಮುಂಬೈಯಲ್ಲಿ ನಿಧನರಾದರು.
2006: ವೈಜ್ಞಾನಿಕ ಸಂಶೋಧನೆಗಳಿಗಾಗಿ ಪ್ರತಿವರ್ಷ ನೀಡಲಾಗುವ ಜಿ.ಡಿ. ಬಿರ್ಲಾ ಪ್ರಶಸ್ತಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಭೌತಶಾಸ್ತ್ರ ವಿಜ್ಞಾನಿ ಪ್ರೋ. ಶ್ರೀರಾಮ್ ರಾಮಸ್ವಾಮಿ ಆಯ್ಕೆಯಾದರು.
2006: ಮಣಿಪಾಲ ಕೆ.ಎಂ.ಸಿ.ಯ ಪ್ರಾಕ್ತನ ವಿದ್ಯಾರ್ಥಿ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ. ರಾಧಾಕೃಷ್ಣ ಸುಧಾಕರ ಶಾನಭಾಗ ಅವರು ಇಂಗ್ಲೆಂಡಿನ ಮ್ಯಾಜಿಸ್ಟ್ರೇಟ್ ಹುದ್ದೆಗೆ ನೇಮಕಗೊಂಡರು. ಇಂಗ್ಲೆಂಡಿನ ಲಾರ್ಡ್ ಚಾನ್ಸಲರ್ ಅವರು ಈ ನೇಮಕ ಮಾಡಿದ್ದು, ಇಂಗ್ಲೆಂಡಿನಲ್ಲಿ ಈ ಹ್ದುದೆಗೆ ನೇಮಕ ಗೊಂಡ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೆ ಶಾನಭೋಗ ಪಾತ್ರರಾದರು.
2006: ಕೇರಳದ ನಿಲಕ್ಕಲ್ ಎಕ್ಯುಮಾನಿಕಲ್ ಟ್ರಸ್ಟ್ ಸ್ಥಾಪಿಸಿದ ಧಾರ್ಮಿಕ ಸದ್ಭಾವನಾ ಪ್ರಶಸ್ತಿಗೆ ಖ್ಯಾತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಮತ್ತು ಆರ್ಚ್ ಬಿಷಪ್ ಮಾರ್ ಜೋಸೆಫ್ ಪೊವಾಥಿಲ್ ಆಯ್ಕೆಯಾದರು.
2005: ಕುದುರೆಮುಖ ಕಬ್ಬಿಣದ ಅದಿರು ಗಣಿಯನ್ನು 2005ರ ಡಿಸೆಂಬರ್ 31ರ ಒಳಗೆ ಕಾಯಂ ಆಗಿ ಮುಚ್ಚುವಂತೆ ಕರ್ನಾಟಕ ಸರ್ಕಾರಕ್ಕೆ ನೀಡಿದ ಆದೇಶವನ್ನು ಪುನರ್ವಿಮರ್ಶಿಸಬೇಕು ಎಂದು ಕೋರಿ ಕುದುರೆಮುಖ ಶ್ರಮಶಕ್ತಿ ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು.
2005: ಬೆಂಗಳೂರು ಕಾನೂನು ವಿಶ್ವ ವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಡಾ. ಶ್ರೀಪಾದ್ ಗಣಪ ಭಟ್ ಅವರು ಕೇರಳದ ಎರ್ನಾಕುಳಂನಲ್ಲಿ ಸ್ಥಾಪನೆಗೊಂಡಿರುವ ನ್ಯಾಷನಲ್ ಯುನಿವರ್ಸಿಟಿ ಆಫ್ ಅಡ್ವಾನ್ಸಡ್ ಲೀಗಲ್ ಸ್ಟಡೀಸ್ನ ಪ್ರಥಮ ಕುಲಪತಿಯಾಗಿ ನೇಮಕಗೊಂಡರು.
2005: ದೂರದರ್ಶಿತ್ವ, ವೈಯಕ್ತಿಕ ಪ್ರತಿಭೆ ಹಾಗೂ 21ನೇ ಶತಮಾನದಲ್ಲಿ ವಿಶ್ವಶಾಂತಿಯೆಡೆಗೆ ತೋರಿದ ಆಸಕ್ತಿಗಾಗಿ ಪಾಕಿಸ್ಥಾನದ ಮಾಜಿ ಪ್ರಧಾನಿ, ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷೆ ಬೆನಜೀರ್ ಭುಟ್ಟೋ ಅವರಿಗೆ 2005ರ ಸಾಲಿನ `ವಿಶ್ವ ಸಹಿಷ್ಣುತೆ ಪ್ರಶಸ್ತಿ'ಯನ್ನು ಜರ್ಮನಿಯ ಬರ್ಲಿನ್ನಿನಲ್ಲಿ ಪ್ರದಾನ ಮಾಡಲಾಯಿತು. ರಷ್ಯಾದ ಮಾಜಿ ಅಧ್ಯಕ್ಷ ಮಿಖಾಯಿಲ್ ಗೊರ್ಬಚೆವ್ ಪ್ರಶಸ್ತಿ ಪ್ರದಾನ ಮಾಡಿದರು.
2005: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಕೇಂದ್ರ ಸಚಿವ ಶರದ್ ಪವಾರ್ ಆಯ್ಕೆಯಾದರು. ಹಾಲಿ ಅಧ್ಯಕ್ಷ ಜಗನ್ ಮೋಹನ್ ದಾಲ್ಮಿಯಾ ಬಣದ ರಣಬೀರ್ ಸಿಂಗ್ ಮಹೇಂದ್ರ ಅವರು ಪವಾರ್ ಕೈಯಲ್ಲಿ ಸೋಲು ಅನುಭವಿಸಿದರು.
2005: ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ವೇಣೂರು ಸುಂದರ ಆಚಾರ್ಯ (65) ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾದರು.
2001: ಖ್ಯಾತ ಗಾಯಕ ಜಾರ್ಜ್ ಹ್ಯಾರಿಸನ್ ತಮ್ಮ 58ನೇ ವಯಸ್ಸಿನಲ್ಲಿ ಲಾಸ್ ಏಂಜೆಲಿಸ್ನಲ್ಲಿ ಗಂಟಲ ಕ್ಯಾನ್ಸರ್ ಪರಿಣಾಮವಾಗಿ ನಿಧನರಾದರು.
1993: ಭಾರತೀಯ ಕೈಗಾರಿಕೋದ್ಯಮಿ ಹಾಗೂ ಭಾರತದಲ್ಲಿ ವಿಮಾನಯಾನದ ಮೊದಲಿಗರಾದ ಜೆ. ಆರ್. ಡಿ. ಟಾಟಾ ಅವರು ಜಿನೇವಾದಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು. ಪ್ಯಾರಿಸ್ಸಿನ ಅತ್ಯಂತ ದೊಡ್ಡದಾದ ಹಾಗೂ ಹೆಸರುವಾಸಿಯಾದ ಪೇರೆ ಲಾಚೈಸ್ನ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಬಲ್ಜಾಕ್, ಪಿಸ್ಸಾರೊ, ಚೋಪಿನ್ ಮತ್ತು ಸರಾಹ ಬೆರ್ನಾರ್ಡ್ ಅವರ ಸಾಲಿನಲ್ಲೇ ಟಾಟಾ ಸಮಾಧಿಯನ್ನೂ ನಿರ್ಮಿಸಲಾಯಿತು.
1988: ಪ್ರಧಾನಿ ಸ್ಥಾನಕ್ಕೆ ರಾಜೀವಗಾಂಧಿ ರಾಜೀನಾಮೆ ನೀಡಿದರು.
1977: ಭಾರತದ ಮೈಕೆಲ್ ಫರೀರಾ ಅವರು ತಮ್ಮ ಮೂರು ವಿಶ್ವ ಬಿಲಿಯರ್ಡ್ಸ್ ಅಮೆಚೂರ್ ಚಾಂಪಿಯನ್ ಶಿಪ್ ಗಳ ಪೈಕಿ ಮೊದಲನೆಯದನ್ನು ಮೆಲ್ಬೋರ್ನಿನಲ್ಲಿ ಗೆದ್ದುಕೊಂಡರು. 1981ರಲ್ಲಿ ನವದೆಹಲಿಯಲ್ಲಿ ಹಾಗೂ 1983ರಲ್ಲಿ ಮಾಲ್ಟಾದಲ್ಲೂ ಅವರು ವಿಶ್ವ ಬಿಲಿಯರ್ಡ್ಸ್ ಹವ್ಯಾಸಿ ಚಾಂಪಿಯನ್ ಶಿಪ್ ಗಳನ್ನು ತಮ್ಮ ಹೆಗಲಿಗೆ ಏರಿಸಿಕೊಂಡರು.
1977: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ದಿನವನ್ನು ಅಂತಾರಾಷ್ಟ್ರೀಯ ಸಾಮರಸ್ಯ ದಿನವಾಗಿ ಆಚರಿಸಲು ಪ್ರಾರಂಭಿಸಿತು. ಈ ದಿನ ಪ್ಯಾಲೆಸ್ಟೈನ್ ವಿಭಜನೆ ಕರಡನ್ನು ಸಭೆ ಅಂಗೀಕರಿಸಿತು. ಸ್ವತಂತ್ರ ಯಹೂದ್ಯ ಮತ್ತು ಅರಬ್ ರಾಜ್ಯವಾಗಿ ಪ್ಯಾಲೆಸ್ಟೈನನ್ನು ವಿಭಜಿಸಲಾಯಿತು. ಪ್ಯಾಲೆಸ್ಟೈನ್ ಜನರಿಗೆ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ಲಭಿಸಿತು.
1960: ಸಾಹಿತಿ ಚಂದ್ರಿಕಾ ಪುರಾಣಿಕ ಜನನ.
1951: ಭಾಷಾಶಾಸ್ತ್ರ, ಕನ್ನಡ ಶೈಲಿ ಶಾಸ್ತ್ರದಲ್ಲಿ ವಿದ್ವಾಂಸರಾದ ಡಾ. ಬಿ. ಮಲ್ಲಿಕಾರ್ಜುನ ಅವರು ಆರ್. ಭದ್ರಣ್ಣ- ತಾಯಮ್ಮ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಜನಿಸಿದರು.
1947: ಪ್ಯಾಲೆಸ್ಟೈನನ್ನು ಅರಬರು ಮತ್ತು ಯಹೂದ್ಯರ ಮಧ್ಯೆ ವಿಭಜನೆ ಮಾಡಲು ಕರೆ ನೀಡುವ ಗೊತ್ತುವಳಿಯನ್ನು ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯು ಅಂಗೀಕರಿಸಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment