ಇಂದಿನ ಇತಿಹಾಸ
ಜನವರಿ 10
ಜನಪ್ರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು 2005ನೇ ಸಾಲಿನ ಪ್ರತಿಷ್ಠಿತ `ಪಂಪ ಪ್ರಶಸ್ತಿ'ಗೆ ಆಯ್ಕೆಯಾದರು. ಒಂದು ಲಕ್ಷ ರೂಪಾಯಿ ನಗದು, ತಾಮ್ರ ಫಲಕ, ಪುತ್ಥಳಿಯನ್ನು ಒಳಗೊಂಡ ಈ ಪ್ರಶಸ್ತಿಯನ್ನು ಕನ್ನಡದ ಸೃಜನಶೀಲ ಕ್ಷೇತದಲ್ಲಿ ಸಲ್ಲಿಸಿದ ಸೇವೆಗಾಗಿ ನೀಡಲಾಗುತ್ತದೆ.
3000ಕ್ಕೂ ಹೆಚ್ಚು ಮಂದಿ ಪತ್ರಕರ್ತರು ಕಿಕ್ಕಿರಿದು ಸೇರಿದ್ದರು. ನೋಡಲು ಸ್ವಲ್ಪ ಮಾರುತಿ ಸುಜುಕಿಯ ಜೆನ್ ಎಸ್ಟಿಲೋ ಕಾರನ್ನು ಹೋಲುವ `ನ್ಯಾನೊ' ಒಂದೇ ನೋಟಕ್ಕೆ ಆತ್ಮೀಯತೆಯನ್ನು ಉಕ್ಕಿಸುತ್ತದೆ. ಮೂರು ಮಾದರಿಗಳಲ್ಲಿ ನ್ಯಾನೊ ಲಭ್ಯ. ಮೂಲ ಮಾದರಿಯ ಕಾರಿನ ಡೀಲರ್ ಬೆಲೆ ಒಂದು ಲಕ್ಷ ರೂಪಾಯಿ! ಈ ಮೂಲಕ ಎಲ್ಲ ವದಂತಿಗಳನ್ನು ಟಾಟಾ ಸುಳ್ಳಾಗಿಸಿತು. `ಒಂದು ಲಕ್ಷ ರೂ. ವೆಚ್ಚದಲ್ಲಿ ಕಾರು ನೀಡುವುದಾಗಿ ಘೋಷಿಸಿದ ನಾಲ್ಕು ವರ್ಷಗಳಲ್ಲಿ ಉಕ್ಕು, ಟಯರ್ ಎಲ್ಲ ಕಚ್ಚಾವಸ್ತುಗಳ ಬೆಲೆ ಹೆಚ್ಚಾಗಿದೆ. ಆದರೆ ಇದನ್ನು ನೆಪವಾಗಿ ನಾನು ನೀಡುವುದಿಲ್ಲ. ಭರವಸೆ ಅಂದರೆ ಅದು ಈಡೇರಲೇಬೇಕು' ಎನ್ನುವುದು ರತನ್ ಟಾಟಾ ಅವರ ಸ್ಪಷ್ಟನುಡಿ. ಆದರೆ ಸಾಗಣೆ ವೆಚ್ಚ ಮತ್ತು ವ್ಯಾಟ್ ಪ್ರತ್ಯೇಕ. ಬೆಂಗಳೂರಿನಲ್ಲಿ ಕಾರಿನ ಬೆಲೆ ಸುಮಾರು 1.25 ರಿಂದ 1.35 ಲಕ್ಷ ರೂ.ಆಗಬಹುದು.
2008: ಕರ್ನಾಟಕದ ಆರನ್ ಡಿಸೋಜಾ ಅವರು ಬೆಂಗಳೂರಿನಲ್ಲಿ ನಡೆದ 21ನೇ ದಕ್ಷಿಣ ವಲಯ ಈಜು ಚಾಂಪಿಯನ್ ಶಿಪ್ನ ಬಾಲಕರ ಮೊದಲ ಗುಂಪಿನ 100 ಮೀಟರ್ ಬಟರ್ ಫ್ಲೈ ಸ್ಪರ್ಧೆಯಲ್ಲಿ ಹೊಸ ಕೂಟ ದಾಖಲೆ ಸ್ಥಾಪಿಸಿದರು. ಜಯನಗರದ ಕಾರ್ಪೋರೇಷನ್ ಈಜುಕೊಳದಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು ಈ ದೂರವನ್ನು 58.33 ಸೆಕೆಂಡುಗಳಲ್ಲಿ ಮುಟ್ಟುವ ಮೂಲಕ 2005ರಲ್ಲಿ ಕರ್ನಾಟಕದವರೇ ಆದ ಅನಿಕೇತ್ ಡಿಸೋಜಾ ಅವರು 59.79 ಸೆಕೆಂಡುಗಳಲ್ಲಿ ಮುಟ್ಟಿ ಸ್ಥಾಪಿಸಿದ್ದ ದಾಖಲೆಯನ್ನು ಮುರಿದರು.
2008: ಕರ್ನಾಟಕದ ಮೂವರು ವಿದ್ಯಾರ್ಥಿಗಳಾದ ಮಂಜುಶ್ರೀ ಹೆಬ್ಬಾರ್, ಹಾರ್ದಿಕ ಎಸ್.ಶೆಟ್ಟಿ ಮತ್ತು ದಿವಂಗತ ಎಸ್. ಜಗದೀಶ್ 2006-07ನೇ ಸಾಲಿನ `ಇಂದಿರಾಗಾಂಧಿ ರಾಷ್ಟ್ರೀಯ ಸೇವಾ ಯೋಜನಾ ಪ್ರಶಸ್ತಿ'ಗೆ ಆಯ್ಕೆಯಾದರು. ಮಂಜುಶ್ರೀ ಹೆಬ್ಬಾರ್ ಮತ್ತು ಹಾರ್ದಿಕ ಎಸ್.ಶೆಟ್ಟಿ ಮಂಗಳೂರಿನ ಸೇಂಟ್ ಆಗ್ನೇಸ್ ಕಾಲೇಜು ವಿದ್ಯಾರ್ಥಿಗಳು. ಮರಣೋತ್ತರ ಪ್ರಶಸ್ತಿಗೆ ಆಯ್ಕೆಯಾಗಿರುವ ಜಗದೀಶ್ ಉಡುಪಿ ಜಿಲ್ಲೆಯ ಬಾರ್ಕೂರಿನ ನ್ಯಾಷನಲ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದವರು.
2008: ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ನೀಡುತ್ತಿದ್ದ ಸಂಬಳವನ್ನು ದ್ವಿಗುಣಗೊಳಿಸುವುದಕ್ಕೆ ಕೇಂದ್ರ ಸಂಪುಟ ಸಭೆ ಸಮ್ಮತಿ ಸೂಚಿಸಿತು. ಅದರಂತೆ ರಾಷ್ಟ್ರಪತಿಗಳ ಸಂಬಳ ತಿಂಗಳಿಗೆ ಹಾಲಿ 50 ಸಾವಿರದಿಂದ 1 ಲಕ್ಷ ರೂಪಾಯಿಗೆ ಹೆಚ್ಚಿತು. ಉಪರಾಷ್ಟ್ರಪತಿಗಳ ವೇತನ 40 ಸಾವಿರದಿಂದ 85 ಸಾವಿರಕ್ಕೆ ಹಾಗೂ ರಾಜ್ಯಪಾಲರ ವೇತನ 36 ಸಾವಿರದಿಂದ 75ಸಾವಿರಕ್ಕೆ ಏರಿಕೆಯಾಯಿತು. ಈ ವೇತನ ಹೆಚ್ಚಳ 2007ರ ಜನವರಿಯಿಂದಲೇ ಪೂರ್ವಾನ್ವಯವಾಗುವುದು.
2008: ರಾಮಸೇತು ವಿವಾದಕ್ಕೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸಲು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿನಲ್ಲಿ ಇನ್ನಷ್ಟು ಕಾಲಾವಕಾಶ ಕೋರಿತು. ಈ ವಿವಾದದ ಕುರಿತು ವಿವಿಧ ಸಚಿವಾಲಯಗಳ ಮಧ್ಯೆ ಭಿನ್ನಾಭಿಪ್ರಾಯವಿರುವುದಕ್ಕೆ ಇದು ಸಾಕ್ಷಿಯಾಯಿತು.
2008: ತಮಿಳು ಚಿತ್ರರಂಗದ ಖ್ಯಾತ ನಟ ಪಾಂಡ್ಯನ್ (48) ಮದುರೆಯ ಖಾಸಗಿ ಆಸ್ಪತ್ರೆಯಲ್ಲಿ ಕಾಮಾಲೆ ಮತ್ತು ಯಕೃತ್ ವೈಫಲ್ಯದಿಂದ ನಿಧನರಾದರು. 75ಕ್ಕೂ ಅಧಿಕ ಚಿತ್ರಗಳಲ್ಲಿ ಅವರು ನಟಿಸಿದ್ದರು. ಭಾರತೀರಾಜ ನಿರ್ದೇಶನದ ತಮ್ಮ ಮೊದಲ ಚಿತ್ರ `ಮನ್ವಸನೈ' ಚಿತ್ರದಲ್ಲೇ ಯಶಸ್ಸು ಕಂಡ ಪಾಂಡ್ಯನ್ ಬಳಿಕ ಹಲವು ಸದಭಿರುಚಿಯ ಚಿತ್ರಗಳನ್ನು ನೀಡಿದರು. 2001ರಲ್ಲಿ ಅವರು ಎಐಎಡಿಎಂಕೆ ಪಕ್ಷ ಸೇರಿದ್ದರು.
2007: ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಧ್ರುವಗಾಮಿ ಉಪಗ್ರಹ ವಾಹನ (ಪಿಎಸ್ಎಲ್ವಿ - ಸಿ 7) ಯಶಸ್ವಿಯಾಗಿ ಗಗನಕ್ಕೆ ಚಿಮ್ಮಿ ನಾಲ್ಕು ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರಿಸಿತು. ಇದರೊಂದಿಗೆ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಗರಿಯನ್ನು ತನ್ನ ಮುಡಿಗೆ ಏರಿಸಿಕೊಂಡಿತು.
2007: ಸದನದಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ದುರ್ನಡತೆಗಾಗಿ ಲೋಕಸಭೆಯ 10 ಮಂದಿ ಮತ್ತು ರಾಜ್ಯ ಸಭೆಯ ಇಬ್ಬರು ಸದಸ್ಯರನ್ನು ಉಚ್ಚಾಟಿಸಿದ ಸಂಸತ್ತಿನ ಐತಿಹಾಸಿಕ ನಿರ್ಣಯವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ತಪ್ಪೆಸಗಿದ ಸಂಸತ್ ಸದಸ್ಯರನ್ನು ಸದನದಿಂದ ಉಚ್ಚಾಟಿಸುವ ಅಧಿಕಾರ ಸಂಸತ್ತಿಗೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ನೇತೃತ್ವದ ಪಂಚಸದಸ್ಯ ಪೀಠವು 4-1ರ ಬಹುಮತದ ತೀರ್ಪು ನೀಡಿತು.
2007: ನೋಯಿಡಾದ ನಿಥಾರಿ ಗ್ರಾಮದಲ್ಲಿ ಮಕ್ಕಳ ಸರಣಿ ಕೊಲೆಯ ಹಿಂದೆ ತನ್ನ ಪಾತ್ರವಿದೆ ಆರೋಪಿ ಸುರೇಂದ್ರ ಕೊಲಿ ಮಂಪರು ಪರೀಕ್ಷೆಯ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡ.
2007: ನಾಟ್ಯಾಚಾರ್ಯ ಯು.ಎಸ್. ಕೃಷ್ಣರಾವ್ (92) ಮಂಗಳೂರಿನಲ್ಲಿ ನಿಧನರಾದರು. ಕರ್ನಾಟಕ ಕಲಾ ತಿಲಕ, ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತ ಕೃಷ್ಣರಾವ್ ಮಂಗಳೂರಿಗೆ ನೃತ್ಯ ಕಲಾ ಸಂಪತ್ತನ್ನು ತಂದುಕೊಟ್ಟ ಮಹಾನ್ ಸಾಧಕ.
2007: ಬೆಂಗಳೂರಿನ ಉದ್ಯಮಿ ಅರುಣ್ ಭರತ್ ರಾಮ್ ಅವರಿಗೆ ಪ್ರತಿಷ್ಠಿತ ಜೆಮ್ಷೆಡ್ ಜಿ ಟಾಟಾ ಪ್ರಶಸ್ತಿ ಲಭಿಸಿತು.
2006: ಮರಾಠಾ ನಾಯಕ ಶಿವಾಜಿಯ ತೇಜೋವಧೆ ಮಾಡುವಂತಹ ವಿಷಯಗಳನ್ನು ಒಳಗೊಂಡಿದೆ ಎನ್ನಲಾದ ಅಮೆರಿಕದ ವಿದ್ವಾಂಸ ಜೇಮ್ಸ್ ಲೇನ್ ಅವರ `ಎಪಿಕ್ ಆಫ್ ಶಿವಾಜಿ' ಪುಸ್ತಕವನ್ನು ಮಹಾರಾಷ್ಟ್ರ ಸರ್ಕಾರ ನಿಷೇಧಿಸಿತು. ಈ ಪುಸ್ತಕವನ್ನು ದೆಹಲಿಯ ಓರಿಯಂಟ್ ಲಾಂಗ್ಮನ್ 2001ರಲ್ಲಿ ಪ್ರಕಟಿಸಿದೆ. ಜೇಮ್ಸ್ ಲೇನ್ ಅವರ ಹಿಂದಿನ ಪುಸ್ತಕ `ಶಿವಾಜಿ- ಹಿಂದೂ ಕಿಂಗ್ ಇನ್ ಇಸ್ಲಾಮಿಕ್ ಇಂಡಿಯಾ' ಪುಸ್ತಕವನ್ನೂ 2004ರಲ್ಲಿ ನಿಷೇಧಿಸಲಾಗಿತ್ತು.
2006: ಯಾವ ವಿಚಾರಣೆಯೂ ಇಲ್ಲದೆ 54 ವರ್ಷಗಳ ಕಾಲ ಬಂಧನದಲ್ಲಿ ಇಟ್ಟ ತಪ್ಪಿಗಾಗಿ ಅಸ್ಸಾಂ ಸರ್ಕಾರವು ತೇಜಪುರದ ಎಲ್ ಜಿ ಪಿ ಪ್ರಾದೇಶಿಕ ಮಾನಸಿಕ ಆರೋಗ್ಯ ಸಂಸ್ಥೆಯಲ್ಲಿದ್ದ 78 ವರ್ಷಗಳ ವೃದ್ಧ ಲಾಲುಂಗ್ ಗೆ 3 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತು. ಕೇಂದ್ರ ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಸಿಲ್ಚಾಂಗ್ ನ ಟಿನ್ ಹೊದ್ದ ಪುಟ್ಟ ಮನೆಯಲ್ಲಿ ಈಗ ಇರುವ ಈ ವೃದ್ಧನ ಪ್ರಶ್ನೆ: ಈ ಹಣ ನನ್ನ ಉಳಿದ ಜೀವನ ಪೂರ್ತಿಮೀನು ಮತ್ತು ಕೋಳಿ ತಿನ್ನಲು ಸಾಕಾಗಬಹುದೇ? 1950ರಲ್ಲಿ ಬಂಧಿತನಾಗಿದ್ದ ಈತನನ್ನು ಒಂದೇ ಒಂದು ಸಲ ಕೂಡಾ ವಿಚಾರಣೆಗೆ ಗುರಿಪಡಿಸಲಾಗಿಲ್ಲ. ಯಾರ ಮೇಲೋ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ್ದಕ್ಕಾಗಿ ಈತನನ್ನು ಬಂಧಿಸಲಾಯಿತಂತೆ. ಆದರೆ ಅದು ಎಷ್ಟು ನಿಜ ಯಾರಿಗೂ ಗೊತ್ತಿಲ್ಲ. ಪೊಲೀಸರ ಬಳಿ ಅದಕ್ಕೆ ಸಂಬಂಧಿಸಿದ ದಾಖಲೆಗಳೂ ಇಲ್ಲ!. ಪ್ರಕರಣ ದಾಖಲಾಗಿ ಬಂಧಿತನಾದಾಗ ಈತನಿಗೆ 23 ವರ್ಷ ವಯಸ್ಸು. ತನ್ನನ್ನು ಸಮರ್ಥಿಸಿಕೊಳ್ಳಲು ಮಾನಸಿಕವಾಗಿ ಸಮರ್ಥನಾಗಿಲ್ಲ ಎಂಬ ಕಾರಣಕ್ಕಾಗಿ ಈತನನ್ನು ಗುವಾಹಟಿ ಸೆರೆಮನೆಯಿಂದ 1951ರ ಏಪ್ರಿಲ್ 14ರಂದು ತೇಜಪುರದ ಮಾನಸಿಕ ಅನಾಥಾಲಯದಲ್ಲಿ ತಂದು ಇರಿಸಲಾಯಿತು. ಕಳೆದ ವರ್ಷ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಣ್ಣಿಗೆ ಬೀಳುವವರೆಗೂ ಆತ ಅಲ್ಲೇ ಇದ್ದ. ಆರು ತಿಂಗಳ ಹಿಂದೆ ಬಿಡುಗಡೆ ಆದ ಬಳಿಕ ಸೋದರಳಿಯ ಬಡ ರೈತ ಬದನ್ ಪಟೋರಿನ ಮನೆಯಲ್ಲಿ ವಾಸವಿದ್ದಾನೆ.
2006: ಜನಪ್ರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು 2005ನೇ ಸಾಲಿನ ಪ್ರತಿಷ್ಠಿತ `ಪಂಪ ಪ್ರಶಸ್ತಿ'ಗೆ ಆಯ್ಕೆಯಾದರು. ಒಂದು ಲಕ್ಷ ರೂಪಾಯಿ ನಗದು, ತಾಮ್ರ ಫಲಕ, ಪುತ್ಥಳಿಯನ್ನು ಒಳಗೊಂಡ ಈ ಪ್ರಶಸ್ತಿಯನ್ನು ಕನ್ನಡದ ಸೃಜನಶೀಲ ಕ್ಷೇತದಲ್ಲಿ ಸಲ್ಲಿಸಿದ ಸೇವೆಗಾಗಿ ನೀಡಲಾಗುತ್ತದೆ.
1987: ಕರ್ನಲ್ ಟಿ.ಪಿ.ಎಸ್. ಚೌಧರಿ ನೇತೃತ್ವದಲ್ಲಿ 37 ಅಡಿ ಉದ್ದ 10.5 ಟನ್ ತೂಕದ ಫೈಬರ್ ಗ್ಲಾಸ್ ವಿಹಾರ ನೌಕೆ ತೃಷ್ಣಾವು ಬಾಂಬೆ (ಈಗಿನ ಮುಂಬೈ) ತಲುಪುವುದರೊಂದಿಗೆ ಭಾರತೀಯರ ಮೊತ್ತ ಮೊದಲ `ನೌಕೆ ಮೂಲಕ ವಿಶ್ವ ಪ್ರದಕ್ಷಿಣಾ ಯಾನ' ಪೂರ್ಣಗೊಂಡಿತು.
1966: ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಮತ್ತು ಪಾಕಿಸ್ಥಾನದ ಅಧ್ಯಕ್ಷ ಅಯೂಬ್ ಖಾನ್ ಅವರು ರಷ್ಯಾದ ತಾಷ್ಕೆಂಟಿನಲ್ಲಿ ಭಾರತ- ಪಾಕಿಸ್ಥಾನ ನಡುವಣ 17ದಿನಗಳ ಸಮರ ಕೊನೆಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದರು. ಉಭಯ ರಾಷ್ಟ್ರಗಳು ತಮ್ಮ ತಮ್ಮ ಸೇನೆಗಳನ್ನು ಸಮರಭೂಮಿಯಿಂದ ಹಿಂತೆಗೆದುಕೊಂಡು ರಾಜತಾಂತ್ರಿಕ ಬಾಂಧವ್ಯ ಮರುಸ್ಥಾಪನೆಗೆ ಒಪ್ಪಿಕೊಂಡವು. ಮರುದಿನ ಲಾಲ್ ಬಹಾದುರ್ ಶಾಸ್ತ್ರಿ ಅವರು ಹೃದಯಾಘಾತದಿಂದ ನಿಧನರಾದರು.
1954: ಕಲಾವಿದ ನಾಗರಾಜು ಸಿ ಜನನ.
1946: ಆಗ್ರಾ ಘರಾಣೆ ಶೈಲಿಯ ಹಿಂದೂಸ್ತಾನಿ ಸಂಗೀತದ ಪ್ರಖ್ಯಾತ ಗಾಯಕಿ ವತ್ಸಲಾ ಮಾಪಾರಿ ಅವರು ದಾಸಪ್ಪ ಮಾಪಾರಿ- ಲಕ್ಷ್ಮಿ ಮಾಪಾರಿ ದಂಪತಿಯ ಮಗಳಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜನಿಸಿದರು.
1946: ವಿಶ್ವಸಂಸ್ಥೆಯ ಮೊದಲ ಮಹಾ ಅಧಿವೇಶನ (ಜನರಲ್ ಅಸೆಂಬ್ಲಿ) ಲಂಡನ್ನಿನಲ್ಲಿ ಸಮಾವೇಶಗೊಂಡಿತು.
1945: ಕಲಾವಿದ ಬಸವಲಿಂಗಯ್ಯ ಎಸ್. ಮಠ ಜನನ.
1929: ಮೊದಲ ಬಾರಿಗೆ ಡೈಲಿ ಬೆಲ್ಜಿಯನ್ ಕ್ಯಾಥೋಲಿಕ್ ವೃತ್ತ ಪತ್ರಿಕೆ `ಲೀ ಎಕ್ಸ್ ಎಕ್ಸೆ ಸೀಕ್ಲೆ' ಯಲ್ಲಿ `ಟಿನ್ ಟಿನ್' ಪ್ರಥಮ ಬಾರಿಗೆ ಪ್ರಕಟಗೊಂಡಿತು. `ಲಿ ಪೆಟಿಟ್ ವಿಂಗ್ಟೀಮ್' ಎಂದು ಅದನ್ನು ಕರೆಯಲಾಗುತ್ತಿತ್ತು. `ಹೆರ್ ಗೆ' ಎಂದೇ ಖ್ಯಾತರಾದ ರೆಮಿ ಜಾರ್ಜಸ್ ಅವರು `ಟಿನ್ ಟಿನ್' ಸೃಷ್ಟಿಕರ್ತರು.
1922: ಕಲಾವಿದ ವಿ.ಸಿ. ಮಾಲಗತ್ತಿ ಜನನ.
1920: ಜಿನೇವಾದಲ್ಲಿ `ಲೀಗ್ ಆಫ್ ನೇಷನ್ಸ್' ಉದ್ಘಾಟನೆಗೊಂಡಿತು.
1870: ಬಾಂಬೆಯ ಚರ್ಚ್ ಗೇಟ್ ನಿಲ್ದಾಣ ರೈಲ್ವೆ ಸಂಚಾರಕ್ಕಾಗಿ ತೆರವುಗೊಂಡಿತು.
1863: ಜಗತ್ತಿನ ಮೊತ್ತ ಮೊದಲ ಭೂಗತ ಪ್ಯಾಸೆಂಜರ್ ರೈಲ್ವೆ `ಲಂಡನ್ ಮೆಟ್ರೋಪಾಲಿಟನ್ ರೈಲ್ವೆ'ಯು ಲಂಡನ್ನಿನಲ್ಲಿ ಉದ್ಘಾಟನೆಗೊಂಡಿತು.
1839: ಬ್ರಿಟನ್ನಿನಲ್ಲಿ ಮೊತ್ತ ಮೊದಲ ಬಾರಿಗೆ `ಭಾರತೀಯ ಚಹಾ'ದ ಹರಾಜು ನಡೆಯಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment