ಇಂದಿನ ಇತಿಹಾಸ
ಫೆಬ್ರುವರಿ 23
`ಚೀನಿ ಕಮ್' ಚಿತ್ರದಲ್ಲಿ ಅಭಿನಯಕ್ಕಾಗಿ ನಟಿ ಟಬು ಫಿಲಂ ಫೇರ್ ಪ್ರಶಸ್ತಿಯ `ಉತ್ತಮ ನಟಿ' ಗೌರವವನ್ನು ತಮ್ಮದಾಗಿಸಿಕೊಂಡರು. `ತಾರೆ ಜಮೀನ್ ಪರ್' ಚಿತ್ರದ ದರ್ಶೀಲ್ ಉತ್ತಮ ನಟ ಪ್ರಶಸ್ತಿ ಗಳಿಸಿದರು. ಶಾರುಕ್ ಖಾನ್ ನಟಿಸಿದ `ಚಕ್ ದೇ ಇಂಡಿಯ'ವು ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದರೆ, `ಗುರು' ಚಿತ್ರಕ್ಕಾಗಿ ಎ. ಆರ್. ರೆಹಮಾನ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದರು.
2008: ಕನ್ನಡದ ಖ್ಯಾತ ಸಾಹಿತಿ ಯಶವಂತ ಚಿತ್ತಾಲ ಅವರಿಗೆ ಅವರ
ಕರ್ಮಭೂಮಿಯಾದ ಮಹಾನಗರ ಮುಂಬೈಯಲ್ಲಿ ಅಪಾರ ಸಂಖ್ಯೆಯ ಕನ್ನಡಿಗರ ಸಮ್ಮುಖದಲ್ಲಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮುಂಬೈಯ ಕನ್ನಡ ಸಂಘಗಳ ಸಹಕಾರದಿಂದ ಏರ್ಪಡಿಸಿದ ಸುವರ್ಣ ಕರ್ನಾಟಕ ಮುಂಬಯಿ ಉತ್ಸವದ ಸಂದರ್ಭದಲ್ಲಿ ನಾಡೋಜ ಪ್ರೊ. ದೇ.ಜವರೇಗೌಡ ಅವರು ಒಂದು ಲಕ್ಷ ರೂಪಾಯಿ ನಗದು, ಪ್ರಶಸ್ತಿ ಪುತ್ಥಳಿ, ಪ್ರಶಸ್ತಿ ಪತ್ರವನ್ನು ಒಳಗೊಂಡ ಪ್ರಶಸ್ತಿಯನ್ನು ಯಶವಂತ ಚಿತ್ತಾಲ ಅವರಿಗೆ ನೀಡಿದರು.
2008: ಬೀದರಿನ ವಾಯುಪಡೆಯ ತರಬೇತಿ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಬ್ರಿಟನ್ ನಿರ್ಮಿತ ಅತ್ಯಾಧುನಿಕ `ಹಾಕ್ ಎಂ.ಕೆ. 132' (ಅಡ್ವಾನ್ಸ್ಡ್ ಜೆಟ್ ಟ್ರೇನರ್) ಯುದ್ಧವಿಮಾನಗಳನ್ನು ದೇಶಕ್ಕೆ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ವಾಯುಪಡೆಯ ಅಂಚೆ ವಿಭಾಗವು ಸಿದ್ಧಪಡಿಸಿದ ವಿಶೇಷ ಲಕೋಟೆಯನ್ನು ರಕ್ಷಣಾ ಸಚಿವರು ಬಿಡುಗಡೆಗೊಳಿಸಿದರು.
2008: ವಾಣಿಜ್ಯ ಉದ್ದೇಶದ ಸಾರಿಗೆ ವಾಹನಗಳಿಗೆ ವೇಗ ನಿಯಂತ್ರಕ ಕಡ್ಡಾಯ ಆದೇಶ ವಿರೋಧಿಸಿ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘಗಳ ಒಕ್ಕೂಟ ಹಾಗೂ ಇತರೆ ಸಂಘಟನೆಗಳು ಕರೆ ಮೇರೆಗೆ ನಡೆದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ ರಾಜ್ಯದಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜ್ಯದ ದಕ್ಷಿಣ ಭಾಗದಲ್ಲಿ ಮುಷ್ಕರ ಬಹುತೇಕ ಯಶಸ್ವಿಯಾದರೆ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಬೆಂಬಲ ವ್ಯಕ್ತವಾಗಲಿಲ್ಲ.
2008: ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ಮಾಜಿ ನಿರ್ದೇಶಕ ಮತ್ತು ರಾಜ್ಯ ಆಟೊಮೊಬೈಲ್ ವಿತರಕರ ಸಂಘಟನೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಖ್ಯಾತ ಉದ್ಯಮಿ ವಿ.ಟಿ.ವೇಲು (88) ಬೆಂಗಳೂರಿನಲ್ಲಿ ನಿಧನರಾದರು. ಉದ್ಯಮಿ ವಿ.ಎಸ್. ತಿರುವೆಂಗಡಸ್ವಾಮಿ ಮುದಲಿಯಾರ್ ಅವರ ಪುತ್ರ ವಿ.ಟಿ.ವೇಲು ಅವರು ಬೆಂಗಳೂರಿನ ಆರ್ ಬಿ ಎ ಎನ್ ಎಂ ಎಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಬಳಿಕ ಮದ್ರಾಸಿನಲ್ಲಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಧ್ಯಯನ ಪೂರ್ಣಗೊಳಿಸಿ ಉದ್ಯಮಕ್ಷೇತ್ರದತ್ತ ಆಸಕ್ತಿ ತಳೆದರು. ಇಂಡಿಯಾ ಗ್ಯಾರೇಜ್ ಮತ್ತು ಸದರ್ನ್ ಮೋಟಾರ್ಸ್ ಸಂಸ್ಥೆಗಳಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು ವಿ ಎಸ್ ಟಿ ಮೋಟಾರ್ಸ್ ಲಿಮಿಟೆಡ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಜೂನ್ 1967ರಲ್ಲಿ ರಾಜ್ಯ ಆಟೊಮೊಬೈಲ್ ವಿತರಕರ ಸಂಘಟನೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು ಕೆಲ ವರ್ಷಗಳ ಕಾಲ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಮಿಟ್ಸುಬಿಷಿ ಪವರ್ ಟಿಲ್ಲರ್ಸ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಮೂವತ್ತು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಮೈಸೂರು ಪೇಪರ್ ಮಿಲ್ಸ್, ಚೋಳಮಂಡಲಂ ಇನ್ವೆಸ್ಟ್ ಮೆಂಟ್ ಅಂಡ್ ಫೈನಾನ್ಸ್ ಲಿಮಿಟೆಡ್, ಹಟ್ಟಿ ಗೋಲ್ಡ್ ಮೈನ್ಸ್ ಮತ್ತು ಲಕ್ಷ್ಮಿ ಮಿಲ್ಸ್ ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ಥಾಪನೆಗೊಳ್ಳುವ ಮುನ್ನ ನಗರಾಭಿವೃದ್ಧಿಗಾಗಿ ರೂಪಿಸಲಾಗಿದ್ದ ಮಂಡಳಿಗೆ ಸದಸ್ಯರಾಗಿ ವೇಲು ಅವರನ್ನು ಸರ್ಕಾರ ನಾಮಕರಣ ಮಾಡಿತ್ತು. ಟೆನ್ನಿಸ್ ಪಟು ಕೂಡ ಆಗಿದ್ದ ಅವರು ಮೈಸೂರು ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್, ಬೆಂಗಳೂರು ಟರ್ಫ್ ಕ್ಲಬ್ ಮತ್ತು ಬೆಂಗಳೂರು ಕ್ಲಬ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕಮಲಾಬಾಯಿ ಬಾಲಕಿಯರ ಶೈಕ್ಷಣಿಕ ಟ್ರಸ್ಟಿನ ಗೌರವ ಕಾರ್ಯದರ್ಶಿ ಮತ್ತು ರೋಟರಿ ಕ್ಲಬ್ ಸದಸ್ಯರಾಗಿದ್ದ ಅವರು ಸಾಮಾಜಿಕ ಕಳಕಳಿ ಹೊಂದಿದ್ದರು.
2008: ಕೊಂಕಣಿಯ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂವರು ಸಾಧಕರಾದ ಸಾಹಿತ್ಯ ಕ್ಷೇತ್ರದ ಉಡುಪಿಯ ಡಾ. ಜೆರಾಲ್ಡ್ ಪಿಂಟೋ, ಜಾನಪದ ಕ್ಷೇತ್ರದ ಕುಂಬ್ರಿ ಹೊನ್ನಾವರದ ಮಂಜಯ್ಯ ಶಿವು ಹಾಗೂ ಕಲೆ (ನಾಟಕ) ಕ್ಷೇತ್ರದ ಮಂಗಳೂರಿನ ಫ್ರಾನ್ಸಿಸ್ ಫರ್ನಾಂಡಿಸ್ ಕಾಸ್ಸಿಯಾ ಅವರನ್ನು ಕೊಂಕಣಿ ಸಾಹಿತ್ಯ ಅಕಾಡೆಮಿಯ 2007ನೇ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿತು.
2008: `ಚೀನಿ ಕಮ್' ಚಿತ್ರದಲ್ಲಿ ಅಭಿನಯಕ್ಕಾಗಿ ನಟಿ ಟಬು ಫಿಲಂ ಫೇರ್ ಪ್ರಶಸ್ತಿಯ `ಉತ್ತಮ ನಟಿ' ಗೌರವವನ್ನು ತಮ್ಮದಾಗಿಸಿಕೊಂಡರು. `ತಾರೆ ಜಮೀನ್ ಪರ್' ಚಿತ್ರದ ದರ್ಶೀಲ್ ಉತ್ತಮ ನಟ ಪ್ರಶಸ್ತಿ ಗಳಿಸಿದರು. ಶಾರುಕ್ ಖಾನ್ ನಟಿಸಿದ `ಚಕ್ ದೇ ಇಂಡಿಯ'ವು ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದರೆ, `ಗುರು' ಚಿತ್ರಕ್ಕಾಗಿ ಎ. ಆರ್. ರೆಹಮಾನ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದರು.
2007: ನಿತಾರಿ ಮಕ್ಕಳ ಸರಣಿ ಹತ್ಯೆ ಹಿನ್ನೆಲಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಅಸ್ತಿತ್ವಕ್ಕೆ ಬಂತು. ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತೆ ಶಾಂತಾ ಸಿನ್ಹಾ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಮಕ್ಕಳ ಹಕ್ಕುಗಳ ಸೂಕ್ತ ಜಾರಿ ಹಾಗೂ ಅವರಿಗೆ ಸಂಬಂಧಿಸಿದ ಯೋಜನೆಗಳು ಮತ್ತು ಕಾನೂನಿನ ಪರಿಣಾಮಕಾರಿ ಅನುಷ್ಠಾನದ ಉಸ್ತುವಾರಿಯನ್ನು ಈ ಆಯೋಗದ್ದು.
2007: ಅಲ್ಕಟೆಲ್-ಲುಸೆಂಟ್ ಸಂಸ್ಥೆ ಹಕ್ಕುಸ್ವಾಮ್ಯ ಹೊಂದಿದ್ದ ಆಡಿಯೋ ತಂತ್ರಜ್ಞಾನವನ್ನು ಕೃತಿ ಚೌರ್ಯ ಮಾಡ್ದಿದಕ್ಕಾಗಿ 15.2 ಕೋಟಿ ಡಾಲರ್ (ಸುಮಾರು 6800 ಕೋಟಿ ರೂಪಾಯಿ) ನಷ್ಟ ತುಂಬಿಕೊಡಬೇಕು ಎಂದು ಅಮೆರಿಕದ ಫೆಡರಲ್ ಕೋರ್ಟ್ ಪ್ರಮುಖ ಸಾಫ್ಟ್ ವೇರ್ ಸಂಸ್ಥೆ ಮೈಕ್ರೋಸಾಫ್ಟ್ ಗೆ ಆದೇಶ ನೀಡಿತು.
2007: ಪಾಕಿಸ್ಥಾನವು 2000 ಕಿ.ಮೀ. ವ್ಯಾಪ್ತಿಯ ದೂರಗಾಮೀ ಕ್ಷಿಪಣಿ `ಶಹೀನ್-2'ರ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಈ ಕ್ಷಿಪಣಿಯು ಅಣ್ವಸ್ತ್ರ ಸಿಡಿತಲೆಯನ್ನು ನಿರ್ದಿಷ್ಟ ಗುರಿಯ ಮೇಲೆ ಕರಾರುವಾಕ್ಕಾಗಿ ಸ್ಫೋಟಿಸುವ ಸಾಮರ್ಥ್ಯ ಹೊಂದಿದೆ.
2007: ರಂಗಭೂಮಿಯ ಕಲಾ ಕಣಜ ಎಂದೇ ಖ್ಯಾತರಾಗಿದ್ದ ರಂಗ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಣ್ಣಿ ವೀರಭದ್ರಪ್ಪ (97) ಅವರು ಹೂವಿನ ಹಡಗಲಿ ಪಟ್ಟಣದಲ್ಲಿ ನಿಧನರಾದರು.
2007: ನೇಪಾಳದ ರಾಜಕುಟುಂಬದ ಹತ್ಯಾಕಾಂಡದ (2001) ಕಥಾ ನಾಯಕಿ ದೇವಯಾನಿ (34) ರಾಣಾ ಅವರ ಮದುವೆ ಭಾರತದ ಕೇಂದ್ರ ಸಚಿವ ಅರ್ಜುನ್ ಸಿಂಗ್ ಅವರ ಮೊಮ್ಮಗ 25ರ ಹರೆಯದ ಉದ್ಯಮಿ ಐಶ್ವರ್ಯಸಿಂಗ್ ಜೊತೆ ನವದೆಹಲಿಯಲ್ಲಿ ನಡೆಯಿತು.
2006: ರಷ್ಯಾ ರಾಜಧಾನಿ ಮಾಸ್ಕೋದಲ್ಲಿನ ಒಳಾಂಗಣ ವಾಣಿಜ್ಯ ಸಮುಚ್ಛಯ ಕುಸಿದು ಬಿದ್ದು 40 ಜನ ಮೃತರಾಗಿ 24ಕ್ಕೂ ಹೆಚ್ಚು ಜನ ಗಾಯಗೊಂಡರು.
2006: ಆಫ್ರಿಕಾ ಖಂಡದ ಮೊಜಾಂಬಿಕ್, ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಫೆಬ್ರುವರಿ 22 ಮಧ್ಯರಾತ್ರಿ ಪ್ರಬಲ ಭೂಕಂಪ ಸಂಭವಿಸಿತು. 100 ವರ್ಷಗಳ ನಂತರ ಆಫ್ರಿಕಾದಲ್ಲಿ ಇಂತಹ ಪ್ರಬಲ ಭೂಕಂಪ ಸಂಭವಿಸಿತು.
2006: ಚಿತ್ರನಟಿ ಪ್ರೇಮಾ ಅವರ ನಿಶ್ಚಿತಾರ್ಥ ಸಾಫ್ಟ್ ವೇರ್ ಎಂಜಿನಿಯರ್ ಜೀವನ್ ಅಪ್ಪಚ್ಚು ಅವರ ಜೊತೆಗೆ ಬೆಂಗಳೂರಿನಲ್ಲಿ ನೆರವೇರಿತು.
2006: ಪ್ರೋತ್ಸಾಹದ ಮತ್ತು ಪ್ರಾಯೋಜಕರ ಕೊರತೆಯ ಕಾರಣ ಕರ್ನಾಟಕದ ಖ್ಯಾತ ಈಜುಗಾರ್ತಿ ನಿಶಾ ಮಿಲ್ಲೆಟ್ ನಿವೃತ್ತಿ ಘೋಷಿಸಿದರು.
2000: ವರ್ಷದ ಆಲ್ಬಮ್ ಸೇರಿದಂತೆ ಎಂಟು ಗ್ರಾಮ್ಮಿ ಪ್ರಶಸ್ತಿಗಳನ್ನು `ಸೂಪರ್ ನ್ಯಾಚುರಲ್' ಗಾಗಿ ಗೆದ್ದ ಕಾರ್ಲೋಸ್ ಸಂಟಾನಾ ಅವರು 1983ರಲ್ಲಿ ಒಂದೇ ರಾತ್ರಿಯಲ್ಲಿ ಮೈಕೆಲ್ ಜಾಕ್ಸನ್ ಮಾಡಿದ್ದ ದಾಖಲೆಗಳನ್ನು ಸರಿಗಟ್ಟಿದರು.
1997: ಸ್ಕಾಟ್ ಲ್ಯಾಂಡಿನಲ್ಲಿ ವಿಜ್ಞಾನಿಗಳು ವಯಸ್ಕ ಸ್ತನಿಯ ತದ್ರೂಪು ಸೃಷ್ಟಿಯಲ್ಲಿ (ಕ್ಲೋನಿಂಗ್) ತಾವು ಯಶಸ್ವಿಯಾಗಿದ್ದು ಈ ವಿಧಾನದಲ್ಲಿ `ಡಾಲಿ' ಹೆಸರಿನ ಕುರಿ ಮರಿಯನ್ನು ಸೃಷ್ಟಿಸಿರುವುದಾಗಿ ಪ್ರಕಟಿಸಿದರು.
1954: ಪಿಟ್ಸ್ ಬರ್ಗಿನಲ್ಲಿ ಮೊತ್ತ ಮೊದಲ ಬಾರಿಗೆ ಪೋಲಿಯೊ ವಿರುದ್ಧ ಮಕ್ಕಳಿಗೆ ಸಾಮೂಹಿಕ ಲಸಿಕೆ ಹಾಕಲಾಯಿತು.
1937: ರಾಜಲಕ್ಷ್ಮೀ ತಿರುನಾರಾಯಣ್ ಜನನ.
1935: ಕಲಾವಿದ ಎಚ್. ಎಂ. ಚೆನ್ನಯ್ಯ ಜನನ.
1930: ಖ್ಯಾತ ಸುಗಮ ಸಂಗೀತ ಗಾಯಕ ದೀನನಾಥ ಮಂಜೇಶ್ವರ ಅವರ ಶಿಷ್ಯ ಪರಂಪರೆಯ ಎಂ. ಎನ್. ಶೇಷಗಿರಿ (23-2-1930ರಿಂದ 15-2-2005) ಅವರು ನಿಂಗಪ್ಪ- ಗಂಗಮ್ಮ ದಂಪತಿಯ ಮಗನಾಗಿ ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ ಜನಿಸಿದರು.
1905: ನಾಗರಿಕ ಸೇವಾ ಸಂಸ್ಥೆ ರೋಟರಿ ಕ್ಲಬ್ ಅಮೆರಿಕಾದಲ್ಲಿ ಸ್ಥಾಪನೆಗೊಂಡಿತು. ಷಿಕಾಗೊ ಅಟಾರ್ನಿ ಪಾವುಲ್ ಪಿ. ಹ್ಯಾರಿಸ್ ಇದರ ಸ್ಥಾಪಕರು. ಒಬ್ಬರ ಬಳಿಕ ಒಬ್ಬರಂತೆ ಸದಸ್ಯರ ಕಚೇರಿಗಳಲ್ಲಿ ಸಂಸ್ಥೆಯ ಸಭೆ ನಡೆಯಬೇಕಾಗಿದ್ದುದರಿಂದ ಇದಕ್ಕೆ `ರೋಟರಿ' ಹೆಸರನ್ನು ನೀಡಲಾಯಿತು. 1912ರಲ್ಲಿ ಇದರ ಹೆಸರು `ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ರೋಟರಿ ಕ್ಲಬ್ಸ್' ಎಂಬುದಾಗಿ ಬದಲಾಯಿತು. ಈಗಿನ `ರೋಟರಿ ಇಂಟರ್ ನ್ಯಾಷನಲ್' ಎಂಬ ಹೆಸರನ್ನು 1922ರಲ್ಲಿ ಅಂಗೀಕರಿಸಲಾಯಿತು.
1884: ಕಾಸಿಮೀರ್ ಫಂಕ್ (1884-1967) ಹುಟ್ಟಿದ ದಿನ. ಪೋಲಿಷ್ ಅಮೆರಿಕನ್ ಜೀವ ರಸಾಯನ ತಜ್ಞನಾದ ಈತ `ವಿಟಮಿನ್' ಶಬ್ಧವನ್ನು ಚಲಾವಣೆಗೆ ತಂದ.
1874: ಇಂಗ್ಲಿಷ್ ವ್ಯಕ್ತಿ ಮೇಜರ್ ವಾಲ್ಟೇರ್ ವಿಂಗ್ ಫೀಲ್ಡ್ `ಸ್ಪೆಯಿರಿಸ್ಟಿಕ್' (Sphairistike') ಹೆಸರಿನಲ್ಲಿ `ಲಾನ್ ಟೆನಿಸ್' ಆಟಕ್ಕೆ ಪೇಟೆಂಟ್ ಪಡೆದ.
1834: ಗುಸ್ತಾವ್ ನಾಚ್ಟಿಗಲ್ (1834-1885) ಹುಟ್ಟಿದ ದಿನ. ಜರ್ಮನ್ ಸಂಶೋಧಕನಾದ ಈತ ಸಹಾರಾ ಮರುಭೂಮಿಯನ್ನು ಕಂಡು ಹಿಡಿದ.
1821: ಕವಿ ಜಾನ್ ಕೀಟ್ಸ್ ರೋಮಿನಲ್ಲಿ ತನ್ನ 25ನೇ ವಯಸ್ಸಿನಲ್ಲಿ ಕ್ಷಯರೋಗಕ್ಕೆ ತುತ್ತಾಗಿ ಅಸುನೀಗಿದ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment