Saturday, May 22, 2010

ಮಂಗಳೂರಿನಲ್ಲಿ ವಿಮಾನ ಭಸ್ಮ: 160ಕ್ಕೂ ಹೆಚ್ಚು ಸಾವು?

ಮಂಗಳೂರಿನಲ್ಲಿ ವಿಮಾನ ಭಸ್ಮ: 160ಕ್ಕೂ ಹೆಚ್ಚು ಸಾವು?

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದ ಬಳಿ ದುಬೈಯಿಂದ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ಸ್ ವಿಮಾನ ಶನಿವಾರ ಮುಂಜಾನೆ ಭೀಕರವಾಗಿ ಅಪಘಾತಕ್ಕೆ ಈಡಾಗಿದ್ದು 160ಕ್ಕೂ ಹೆಚ್ಚು ಮಂದಿ ಮೃತರಾಗಿರುವ ಶಂಕೆ ಇದೆ.

ದುಬೈಯಿಂದ ಬರುತ್ತಿದ್ದ ವಿಮಾನ ಮಂಗಳೂರಿನಲ್ಲಿ ಇಳಿಯುವ ಮುನ್ನ ತಾಂತ್ರಿಕ ದೋಷ ಕಾಣಿಸಿದ್ದು ಅಪಘಾತಕ್ಕೆಕಾರಣ ಎಂದು ಹೇಳಲಾಗುತ್ತಿದೆ.

ಬಜ್ಪೆ ವಿಮಾನ ನಿಲ್ದಾಣದಿಂದ ಸುಮಾರು 10 ಕಿ.ಮೀ. ದೂರದ ಕೆಂಜಾರುವಿನಲ್ಲಿ ಬೆಳಗ್ಗೆ 6.20ರ ವೇಳೆಗೆ ದುರಂತ ಸಂಭವಿಸಿದ್ದು ವಿಮಾನ ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ. ಇಡೀ ಪ್ರದೇಶದಲ್ಲಿ ದಟ್ಟ ಹೊಗೆ ವ್ಯಾಪಿಸಿದೆ.

ವಿಮಾನದಲ್ಲಿ 163 ಪ್ರಯಾಣಿಕರು ಮತ್ತು 6 ಮಂದಿ ಸಿಬ್ಬಂದಿ ನಾಲ್ಕು ಮಕ್ಕಳು ಸೇರಿ 173 ಮಂದಿ ಇದ್ದರು ಎಂದು ಹೇಳಲಾಗಿದೆ.

ವಿಮಾನವು ರನ್ ವೇಗೆ ತಾಗಿ, ನಂತರ ಮುಳ್ಳುಬೇಲಿಗೆ ಹೊಡೆದು ವಿಮಾನ ನಿಲ್ದಾಣದ ಆವರಣದ ಗೋಡೆಯಿಂದ ಆಚೆಗೆ ಹೋಗಿ ಬಿತ್ತು ಎಂದು ವಿಮಾನನಿಲ್ದಾಣದ ಮೂಲಗಳು ಹೇಳಿವೆ.

'ಇದು ಅಪಘಾತವೇ ಹೊರತು ಘಟನೆ ಅಲ್ಲ' ಎಂದು ಮೂಲಗಳು ಹೇಳಿವೆ.

ದುರಂತದ ಸುದ್ದಿ ತಿಳಿದೊಡನೆಯೇ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಸಮರೋಪಾದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಸ್ಥಳೀಯರು ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ.

ದಟ್ಟ ಹೊಗೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.

ಕರ್ನಾಟಕದಲ್ಲಿ ಇಷ್ಟೊಂದು ಭೀಕರ ಹಾಗೂ ಭಾರೀ ಪ್ರಮಾಣದ ವಿಮಾನ ಅಪಘಾತ ಸಂಭವಿಸಿದ್ದು ಇದೇ ಮೊದಲು ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ತುರ್ತಾಗಿ ಮಂಗಳೂರಿಗೆ ಧಾವಿಸುವುದಾಗಿ ತಿಳಿಸಿದ್ದಾರೆ.

No comments:

Advertisement