Saturday, May 12, 2012

Justice at last to Forestry Students ಕಾನೂನು ಸಚಿವರ ಮನ ಕಲಕಿತು.. ಅರಣ್ಯ ಮಕ್ಕಳಿಗೆ ನ್ಯಾಯ ಲಭಿಸಿತು..!

Justice at last to Forestry Students ಕಾನೂನು ಸಚಿವರ ಮನ ಕಲಕಿತು.. ಅರಣ್ಯ ಮಕ್ಕಳಿಗೆ ನ್ಯಾಯ ಲಭಿಸಿತು..!

ಒಂದೂಕಾಲು ವರ್ಷದ ಬಳಿಕ ಕೊನೆಗೂ ನ್ಯಾಯ ಲಭಿಸಿತು. ಅರಣ್ಯ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು ನಡೆಸಿದ ನಿರಂತರ ೧೨೦ ದಿನಗಳ ಹೋರಾಟಕ್ಕೆ ಅಂತಿಮವಾಗಿ ಫಲ ಲಭಿಸಿತು. ೨೦೧೨ರ ಮೇ ೭ರ ಸೋಮವಾರ ನಡೆದ ಕರ್ನಾಟಕ ರಾಜ್ಯ  ಸಚಿವ ಸಂಪುಟ ಸಭೆಯು ಅರಣ್ಯ ಇಲಾಖೆಯ ನೇಮಕಾತಿಗಳಲ್ಲಿ ನೇರ ನೇಮಕಾತಿಯ ಶೇಕಡಾ ೭೫ರಷ್ಟು ಹುದ್ದೆಗಳನ್ನು ಬಿಎಸ್ ಸಿ (ಫಾರೆಸ್ಟ್ರಿ) ಅಧ್ಯಯನ ಮಾಡಿದ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೂ, ಉಳಿದ ಶೇಕಡಾ ೨೫ರಷ್ಟು ಹುದ್ದೆಗಳನ್ನು ಇತರ ಅಭ್ಯರ್ಥಿಗಳಿಗೂ  ನೀಡುವ ನಿರ್ಧಾರಕ್ಕೆ ಅಂತಿಮ ಮುದ್ರೆ ಒತ್ತಿತು.

ಮೇ ೭ರಂದೇ ಸಂಜೆ ಸಂಪುಟ ಸಭೆಯ ಬಳಿಕ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ, ಮರುದಿನ ಕೆಲವು ಪತ್ರಿಕೆಗಳಲ್ಲಿ ಈ ಬಗ್ಗೆ ಸಂಕ್ಷಿಪ್ತ ವರದಿಗಳು ಬಂದವು. ಆದರೆ ಅವೆಲ್ಲವೂ ಗೊಂದಲಮಯ ವರದಿಗಳು. ಸಚಿವ ಸಂಪುಟ ಕೈಗೊಂಡ ನಿರ್ಧಾರ ಏನು ಎಂಬುದರ ಸ್ಪಷ್ಟ ಚಿತ್ರಣ ಈ ವರದಿಗಳಲ್ಲಿ ಇರಲಿಲ್ಲ.


ವರ್ಷದ ಹಿಂದೆ ಈ ವಿದ್ಯಾರ್ಥಿ ಹೋರಾಟಗಾರರ ಚಳವಳಿಯ ಪರಿ ಕಂಡು ಮನ ಕಲಕಿ ಅವರ ನೆರವಿಗೆ ಮುಂದಾಗಿದ್ದ ಕಾನೂನು ಸಚಿವ ಎಸ್. ಸುರೇಶ ಕುಮಾರ್ ಅವರಿಗೆ ದೂರವಾಣಿ ಮಾಡಲು ಯತ್ನಿಸಿದೆ. ಸಂಪರ್ಕ ಸಾಧ್ಯವಾಗಲಿಲ್ಲ. ಅರಣ್ಯ ವಿದ್ಯಾರ್ಥಿಗಳ ಬೇಡಿಕೆಗೆ ಸಂಬಂಧಿಸಿದಂತೆ ನೀಡಿದ ಭರವಸೆ ಈಡೇರಿಸಿದ್ದಕ್ಕಾಗಿ ವಂದನೆ ಸಲ್ಲಿಸಿ, ಗೊಂದಲದ ಬಗ್ಗೆ ಸ್ಪಷ್ಟನೆ ಸಿಗಬಹುದೇ ಎಂದು ಪ್ರಶ್ನಿಸಿ ಮೇ ೮ರ ಮಂಗಳವಾರ ಎಸ್ಸೆಮ್ಮೆಸ್ ಕಳಿಸಿದೆ.

ಪ್ರಯತ್ನ ವ್ಯರ್ಥವಾಗಲಿಲ್ಲ. ಸಚಿವ ಸುರೇಶ ಕುಮಾರ್ ಅವರಿಂದ ಎಸ್ಸೆಮ್ಮೆಸ್ ಉತ್ತರ ಬಂತು:It is 75-25 in favour of Forestry students. ಅಂದರೆ ಅರಣ್ಯ  ವಿದ್ಯಾರ್ಥಿಗಳ ಪರವಾಗಿ ೭೫-೨೫ ಪ್ರಮಾಣದಲ್ಲಿ ಹುದ್ದೆಗಳ ಮೀಸಲಾತಿಗೆ ಸಂಪುಟ ನಿರ್ಧರಿಸಿದೆ ಅಂತ.

ಲಭ್ಯ ವರ್ತಮಾನಗಳ ಪ್ರಕಾರ ಸಚಿವ ಸಂಪುಟದಲ್ಲಿ ಅರಣ್ಯ ವಿದ್ಯಾರ್ಥಿಗಳ ಬೇಡಿಕೆ ವಿಚಾರದಲ್ಲಿ ಮತ್ತೊಮ್ಮೆ ಕಾವೇರಿದ ಚರ್ಚೆ ನಡೆದು ಈ ಮಕ್ಕಳಿಗೆ ಭರವಸೆ ನೀಡಿದ್ದ ಪ್ರಕಾರ ಶೇಕಡಾ ೭೦ರಷ್ಟು ಅಲ್ಲ, ಬದಲಿಗೆ ಶೇಕಡಾ ೭೫ರಷ್ಟು ಹುದ್ದೆಗಳನ್ನು ಮೀಸಲಿಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಅರಣ್ಯ ಸಚಿವ ಸಿ.ಪಿ. ಯೋಗೀಶ್ವರರಿಂದ ಹಿಡಿದು ಕಾನೂನು ಸಚಿವ ಸುರೇಶ ಕುಮಾರ್ ವರೆಗೆ ಬಹಳಷ್ಟು ಸಚಿವರೂ  ಈ ವಿಚಾರದಲ್ಲಿ ದೃಢವಾಗಿ ನಿಂತರು. ಪರಿಣಾಮವಾಗಿ ಕೊನೆಗೆ ಅರಣ್ಯ ವಿದ್ಯಾರ್ಥಿಗಳಿಗೆ ಶೇಕಡಾ ೭೫ರಷ್ಟು ಹುದ್ದೆ ಮೀಸಲಿಡುವ ನಿರ್ಧಾರ ಗೆದ್ದಿತು. ಮಕ್ಕಳಿಗೆ ಕಡೆಗೂ ನ್ಯಾಯ ಲಭಿಸಿತು.


೧೨೦ ದಿನಗಳ ನಿರಂತರ ಹೋರಾಟ ನಡೆಸಿದ ಈ ಮಕ್ಕಳ ಹೋರಾಟಕ್ಕೆ ಲಭಿಸಿದ ಜಯದ ಸುದ್ದಿ ಬಹುತೇಕ  ಮಾಧ್ಯಮಗಳಿಗೆ ಸುದ್ದಿಯಾಗಲೇ ಇಲ್ಲ ಎಂಬುದು ಮಾತ್ರ ಅತ್ಯಂತ ವಿಷಾದದ ಸಂಗತಿ. ಹೀಗಾಗಿ ಇಲ್ಲಿ ಮತ್ತೊಮ್ಮೆ ಈ ಮಕ್ಕಳು ಹೋರಾಡಿದ್ದು ಏತಕ್ಕಾಗಿ ಎಂಬುದರ ಹಿನ್ನೆಲೆಯನ್ನು ಇಲ್ಲಿ ನೀಡುತ್ತಿದ್ದೇನೆ.

ಹೌದು, ೨೦೧೦-೨೦೧೧ರ ಸಾಲಿನಲ್ಲಿ ಕರ್ನಾಟಕ ಒಂದು ಅಪೂರ್ವ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಅದು ರಾಜ್ಯದಲ್ಲಿ ೧೨೦ ದಿನಗಳ ಕಾಲ ನಡೆದ ಅರಣ್ಯ ವಿದ್ಯಾರ್ಥಿಗಳ ಮುಷ್ಕರ. ೨೦೧೦ ರ ಸೆಪ್ಟೆಂಬರ್ ೨೭ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮತ್ತು ಕೊಡಗಿನ ಪೊನ್ನಂಪೇಟೆಯ ಅರಣ್ಯ ಕಾಲೇಜುಗಳಲ್ಲಿ ಆರಂಭವಾದ ವಿದ್ಯಾರ್ಥಿಗಳ ಮುಷ್ಕರ ಬೆಂಗಳೂರಿಗೂ ವ್ಯಾಪಿಸಿ ನಿರಂತರ ೧೨೦ ದಿನಗಳವರೆಗೆ ಮುಂದುವರೆದು ಕೊನೆಗೆ ಮುಕ್ತಾಯವಾದದ್ದು ೨೦೧೧ರ ಜನವರಿ ೨೫ರಂದು- ಬೇಡಿಕೆ ಈಡೇರಿಸುವ ಬಗ್ಗೆ ಅರಣ್ಯ ಸಚಿವರ ಲಿಖಿತ ಆಶ್ವಾಸನೆಯೊಂದಿಗೆ.

ಈ ವಿದ್ಯಾರ್ಥಿಗಳು ಮುಂದಿಟ್ಟದ್ದು ಎರಡು ಬೇಡಿಕೆಗಳು ಮಾತ್ರ. ತಾವು ಕಲಿಯುತ್ತಿರುವ ಫಾರೆಸ್ಟ್ರಿ ಬಿಎಸ್ ಸಿ ಪದವಿಗೆ ಅರಣ್ಯ ಇಲಾಖೆಯಲ್ಲಿ ನೇಮಕಾತಿ ಸಂದರ್ಭದಲ್ಲಿ ಆದ್ಯತೆ ಲಭಿಸಬೇಕು. ಎಸಿಎಫ್ (ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ) ಮತ್ತು ಆರ್ ಎಫ್ ಓ (ಪ್ರಾದೇಶಿಕ ಅರಣ್ಯಾಧಿಕಾರಿ) ಹುದ್ದೆಗಳಿಗೆ ಬಿಎಸ್ ಸಿ (ಫಾರೆಸ್ಟ್ರಿ) ಪದವಿಯನ್ನು ಏಕೈಕ ಅರ್ಹತೆಯನ್ನಾಗಿ ಪರಿಗಣಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು.


ಉಭಯ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮುಷ್ಕರ ನಡೆದ ಈ ನಾಲ್ಕೂ ತಿಂಗಳುಗಳ ಕಾಲ ತರಗತಿ ಬಹಿಷ್ಕರಿಸಿದ್ದಲ್ಲದೆ, ಸ್ವಭೂತ ದಹನ, ಸಚಿವರಿಗೆ ನೆತ್ತರ ಪತ್ರ ರವಾನೆ, ರಸ್ತೆತಡೆ, ನಿರಶನ ಸೇರಿದಂತೆ ವೈವಿಧ್ಯಮಯ ರೀತಿಯಲ್ಲಿ ಅಹಿಂಸಾತ್ಮಕ ಚಳವಳಿ ನಡೆಸಿದರು. ಶಿರಸಿ ಮತ್ತು  ಪೊನ್ನಂಪೇಟೆಯ ಪುಟ್ಟ ಊರುಗಳಲ್ಲಿ ನಡೆಯುತ್ತಿರುವ ಚಳವಳಿ ರಾಜಧಾನಿಯಲ್ಲಿ ಸರ್ಕಾರದ ಕಿವಿಗೆ ಬೀಳುತ್ತಿಲ್ಲ ಎಂದು ಅರಿವಾದಾಗ ನೂರಾರು ಸಂಖ್ಯೆಯಲ್ಲಿ ರಾಜಧಾನಿಗೆ ನುಗ್ಗಿ ಸ್ವಾತಂತ್ರ್ಯ ಮೈದಾನದಲ್ಲಿ ಬೀಡುಬಿಟ್ಟರು. ಗಡ ಗಡ ನಡುಗುತ್ತಿದ್ದ ಚಳಿಯಲ್ಲಿ ಮೈದಾನದಲ್ಲೇ ದಿನಗಳನ್ನು ದೂಡಿದರು.

ನಾನು ನನ್ನ ( www.paryaya.blogspot.com )  ಮತ್ತು ( http://spardha.wordpress.com ) ಬ್ಲಾಗುಗಳಲ್ಲಿ ಅರಣ್ಯ ವಿದ್ಯಾರ್ಥಿಗಳ ಈ ಚಾರಿತ್ರಿಕ ಹೋರಾಟದ ಬಗ್ಗೆ ಸುದ್ದಿ, ಬಹಿರಂಗ ಪತ್ರಗಳನ್ನು ನಿರಂತರ ಬರೆಯುತ್ತಲೇ ಬಂದಿದ್ದೆ. ವಿದ್ಯಾರ್ಥಿಗಳ ಹೋರಾಟದ ವಿಡಿಯೋಗಳನ್ನೂ ಪ್ರಕಟಿಸುತ್ತಾ ಬಂದಿದ್ದೆ. ಇದನ್ನು ಕಾನೂನು ಸಚಿವ ಸುರೇಶ ಕುಮಾರ್, ಆಗಿನ ಅರಣ್ಯ ಸಚಿವ ಸಿ.ಎಚ್. ವಿಜಯಶಂಕರ, ಮುಖ್ಯಮಂತ್ರಿ  ಯಡಿಯೂರಪ್ಪ ಮತ್ತಿತರರ ಮಿಂಚಂಚೆಗೂ (ಇ-ಮೇಲ್) ಕಳಿಸಿದ್ದೆ.


ನನ್ನ ಮಿಂಚಂಚೆ ಗಮನಿಸಿ ಬ್ಲಾಗ್ ನೋಡಿದ ಸಚಿವ ಸುರೇಶ ಕುಮಾರ್ ಅವರು ದೂರವಾಣಿಯಲ್ಲಿ ನನ್ನೊಂದಿಗೆ ಮಾತನಾಡಿದ್ದಲ್ಲದೆ ಒಂದು ದಿನ ಮುಸ್ಸಂಜೆಯ ಹೊತ್ತಿಗೆ ಸ್ವಾತಂತ್ರ್ಯ ಮೈದಾನಕ್ಕೆ ಧಾವಿಸಿ ಮಕ್ಕಳ ಜೊತೆಗೆ ಕುಳಿತು ಅವರ ಕಷ್ಟಗಳನ್ನು ಆಲಿಸಿದರು. ಸಂಬಂಧ ಪಟ್ಟ ಎಲ್ಲರ ಸಭೆ ಕರೆದು ಸಮಸ್ಯೆ ಬಗೆ ಹರಿಸುವ ಭರವಸೆ ಕೊಟ್ಟರು. ಅದಕ್ಕೂ ಹೆಚ್ಚಾಗಿ ಸ್ಥಳದಲ್ಲಿದ್ದ ನನ್ನನ್ನೂ ವಿಧಾನಸೌಧಕ್ಕೆ ಬರುವಂತೆ ಹೇಳಿ ಅರಣ್ಯ  ಸಚಿವ ಸಿ.ಎಚ್. ವಿಜಯಶಂಕರ ಅವರ ಜೊತೆಗೆ ಸಭೆ ನಡೆಸಿದರು. ಅರಣ್ಯ ಸಚಿವರಿಗೆ ಅರಣ್ಯ ಕಾಲೇಜು ಮಕ್ಕಳ ಸಮಸ್ಯೆಯ ಚಿತ್ರವನ್ನು ಸ್ವತಃ ತಾವೇ ವಿವರಿಸಿ, ಅಧಿಕಾರಿಗಳು ದಂತಗೋಪುರದಲ್ಲಿ ಕುಳಿತುಕೊಂಡು ಮಕ್ಕಳ ಸಮಸ್ಯೆ ಬಗ್ಗೆ ಹೇಗೆ ಕುರುಡಾಗಿದ್ದಾರೆ ಎಂಬುದನ್ನೂ  ಬಣ್ಣಿಸಿದರು.

ಸುರೇಶ ಕುಮಾರ್ ಅವರ ಕಾಳಜಿ ವ್ಯರ್ಥವಾಗಲಿಲ್ಲ. ಅರಣ್ಯ ಸಚಿವ ವಿಜಯಶಂಕರ ಅವರು ಕಡೆಗೂ ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿಯನ್ನು ಅರ್ಥ ಮಾಡಿಸುವಲ್ಲಿ ಸಫಲರಾದರು. ಕಡೆಗೆ ೨೫ ಜನವರಿ ೨೦೧೧ರಂದು ಪ್ರಾದೇಶಿಕ ಅರಣ್ಯಾಧಿಕಾರಿಗಳ ಹುದ್ದೆಯಲ್ಲಿ ಶೇಕಡಾ ೭೦ರಷ್ಟನ್ನು ಅರಣ್ಯ ಕಾಲೇಜು ವಿದ್ಯಾರ್ಥಿಗಳಿಗೆ ಮೀಸಲು ಇರಿಸುವುದರ ಜೊತೆಗೆ ಸಹಾಯಕ ಪ್ರಾದೇಶಿಕ ಅರಣ್ಯಾಧಿಕಾರಿಗಳ ಹೊಸ ಹುದ್ದೆ ಸೃಷ್ಟಿಸಿ ಅದರಲ್ಲೂ ಶೇಕಡಾ ೭೦ರಷ್ಟು ಹುದ್ದೆಗಳನ್ನು ಅರಣ್ಯ ಕಾಲೇಜು ವಿದ್ಯಾರ್ಥಿಗಳಿಗೆ ಮೀಸಲು ಇಡುವ ಸ್ಪಷ್ಟ ಭರವಸೆ ಕೊಟ್ಟು ಈ ನಿಟ್ಟಿನಲ್ಲಿ ಆದೇಶವನ್ನೂ ಹೊರಡಿಸಿದರು.

ಆದೇಶ ಜಾರಿಯಾಗಲು ಮತ್ತೆ ಒಂದೂಕಾಲು  ವರ್ಷ ಬೇಕಾಯಿತು. ನೇಮಕಾತಿ ನಿಯಮಾವಳಿಗಳಲ್ಲಿ ಅಗತ್ಯ ತಿದ್ದುಪಡಿಗಳಾಗಬೇಕಿತ್ತು. ಕೊನೆಗೂ ಅವೆಲ್ಲ ಪ್ರಕ್ರಿಯೆಗಳು ಮುಗಿದು, ಸಚಿವ ಸಂಪುಟದ ಅನುಮೋದನೆಯ ಪ್ರಕ್ರಿಯೆಯೂ ಇದೀಗ ಅಂತಿಮಗೊಂಡಿದೆ.


ಪರ್ಯಾಯ ಪತ್ರಿಕೋದ್ಯಮವಾಗಿ ಬ್ಲಾಗನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ಪುಟ್ಟ ಉದಾಹರಣೆಯಾಗಬಹುದೇನೋ? (ಈ ಬರಹ, ವಿಡಿಯೋಗಳನ್ನು ಈಗಲೂ ಮೇಲೆ ತಿಳಿಸಿದ ಈ ಬ್ಲಾಗುಗಳಲ್ಲಿ ಲಭ್ಯವಿದೆ. ಇಲ್ಲಿರುವ ಚಿತ್ರಗಳನ್ನು ಕ್ಲಿಕ್ಕಿಸಿ ಹೋರಾಟಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳನ್ನು ವೀಕ್ಷಿಸಬಹುದು.

-ನೆತ್ರಕೆರೆ ಉದಯಶಂಕರ

No comments:

Advertisement