Sunday, January 26, 2020

ನಿರ್ಭಯಾ ಪ್ರಕರಣ ಮತ್ತೆ ಕೋರ್ಟಿಗೆ; ಕ್ಷಮೆ ಕೋರಿಕೆ ಅರ್ಜಿಗೆ ಸಿದ್ಧತೆ

ನಿರ್ಭಯಾ ಪ್ರಕರಣ ಮತ್ತೆ ಕೋರ್ಟಿಗೆ; ಕ್ಷಮೆ ಅರ್ಜಿಗೆ ಸಿದ್ಧತೆ
ರಾಷ್ಟ್ರಪತಿಗೆ ಖಾಸಗಿ ದಿನಚರಿ ಸಲ್ಲಿಸಲು ಅಪರಾಧಿ ವಿನಯ್ ಇಚ್ಛೆ
ನವದೆಹಲಿ: ಫೆಬ್ರುವರಿ ೧ರಂದು ಗಲ್ಲಿಗೆ ಏರಿಸಲು ದಿನ ನಿಗದಿಯಾಗಿರುವ ನಿರ್ಭಯಾ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ೨೬ರ ಹರೆಯದ ವಿನಯ್ ಶರ್ಮ 2020 ಜನವರಿ 24ರ ಶುಕ್ರವಾರ  ಮತ್ತೆ ದೆಹಲಿಯ ನ್ಯಾಯಾಲಯದ ಮೆಟ್ಟಿಲೇರಿದ್ದು. ತತ್ ಕ್ಷಣ ತನ್ನ ೧೭೦ ಪುಟಗಳ ಖಾಸಗಿ ದಿನಚರಿಯನ್ನು ತನಗೆ ಒಪ್ಪಿಸುವಂತೆ ತಿಹಾರ್ ಸೆರೆಮನೆ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿದ. 

ತಾನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸಲು ಬಯಸಿದ್ದು, ಅದರ ಜೊತೆಗೆ ತನ್ನ ಖಾಸಗಿ ದಿನಚರಿಯನ್ನು ಲಗತ್ತಿಸಬಯಸಿರುವುದಾಗಿಯೂ, ಅಧಿಕಾರಿಗಳು ಅದನ್ನು ಒದಗಿಸದೆ ಸತಾಯಿಸುತ್ತಿರುವುದಾಗಿಯೂ ವಿನಯ್ ಶರ್ಮ ತನ್ನ ಹೊಸ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಿದ. ಅರ್ಜಿಯನ್ನು ಶರ್ಮ ಪರ ವಕೀಲ ಎಪಿ ಸಿಂಗ್ ಸಲ್ಲಿಸಿದರು.

ದೆಹಲಿಯ ೨೩ರ ಹರೆಯದ ಫಿಸಿಯೋಥೆರೆಪಿ ವಿದ್ಯಾರ್ಥಿನಿ ಮೇಲೆ ೨೦೧೨ರ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಪೈಕಿ ಒಬ್ಬ ವ್ಯಕ್ತಿ ಮಾತ್ರ ಈವರೆಗೆ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಸಲ್ಲಿಸಿದ್ದ.

ಮುಖೇಶ್ ಸಿಂಗ್ ಸಲ್ಲಿಸಿದ ಕ್ಷಮಾದಾನ ಕೋರಿಕೆ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೇವಲ ನಾಲ್ಕು ದಿನಗಳ ಒಳಗಾಗಿ ತಿರಸ್ಕರಿಸಿದ್ದರು.  ಕ್ಷಮಾದಾನ ಕೋರಿಕೆ ಅರ್ಜಿಗಳ ಮೇಲೆ ಅತ್ಯಂತ ವೇಗವಾಗಿ ನಿರ್ಧಾರ ಕೈಗೊಂಡ ಪ್ರಕರಣ ಇದಾಗಿತ್ತು. ಆದರೆ ರಾಷ್ಟ್ರಪತಿಯವರಿಂದ ಕ್ಷಮಾದಾನ ಪಡೆಯಲು ನಡೆಸಿದ ಮುಖೇಶ್ ಸಿಂಗ್ ವಿಫಲಯತ್ನದ ಫಲವಾಗಿ ನಾಲ್ಕು ಮಂದಿ ಅಪರಾಧಿಗಳಿಗೆ ಜನವರಿ ೨೨ಕ್ಕೆ ನಿಗದಿ ಪಡಿಸಲಾಗಿದ್ದ ಗಲ್ಲು ಶಿಕ್ಷೆ ಜಾರಿಯನ್ನು ಮುಂದೂಡಿ ಅವರನ್ನು ಫೆಬ್ರುವರಿ ೧ರಂದು ಗಲ್ಲಿಗೇರಿಸಲು ದಿನ ನಿಗದಿ ಪಡಿಸಿ ಹೊಸದಾಗಿ ಡೆತ್ ವಾರಂಟ್ ಜಾರಿಗೊಳಿಸಬೇಕಾಗಿ ಬಂದಿತ್ತು.

ಇದೀಗ, ವಿನಯ್ ಶರ್ಮ ಪರವಾಗಿ ಸಲ್ಲಿಸಿದ ಹೊಸ ಅರ್ಜಿಯಲ್ಲಿ ವಕೀಲ ಎಪಿ ಸಿಂಗ್ ಅವರು ತಮ್ಮ ಬಳಿ ಕ್ಷಮಾದಾನ ಕೋರಿಕೆ ಅರ್ಜಿ ಸಿದ್ಧವಿದೆ, ಆದರೆ ಜನವರಿ ೨೨ರಂದು ಶಿಕ್ಷಿತ ಅಪರಾಧಿ ವಿನಯ್ ಶರ್ಮ ಜೊತೆಗಿನ ಸಂಭಾಷಣೆ ವೇಳೆಯಲ್ಲಿ ಆತ ೧೭೦ ಪುಟಗಳ ತನ್ನ ಖಾಸಗಿ ದಿನಚರಿಯನ್ನು ಕ್ಷಮದಾನ ಕೋರಿಕೆ ಅರ್ಜಿಯ ಜೊತೆಗೆ ಲಗತ್ತಿಸುವ ಇಚ್ಛೆಯನ್ನು ವ್ಯಕ್ತ ಪಡಿಸಿದ್ದಾನೆ ಎಂದು ತಿಳಿಸಿದ್ದಾರೆ.

ಸೆರೆಮನೆ ಅಧಿಕಾರಿಗಳಿಗೆ ಬಗ್ಗೆ ಮನವಿ ಸಲ್ಲಿಸಿದ್ದು ಅವರು ಇನ್ನೂ ದಿನಚರಿಯನ್ನು ಒದಗಿಸಿಲ್ಲ ಎಂದು ಎಪಿ ಸಿಂಗ್ ತಿಳಿಸಿದ್ದಾರೆ.

ಸೆರೆಮನೆ ಅಧಿಕಾರಿಗಳು ಹಿಂದೆ ವಿನಯ್ ಶರ್ಮನಿಗೆ ವೈದ್ಯಕೀಯ ದಾಖಲೆಗಳು, ಸೆಲ್ಯುಲರ್ ವಾಸದ ದಾಖಲೆಗಳು, ಸೆರೆಮನೆಯಲ್ಲಿ ಕೆಲಸ ಮಾಡುವ ಮೂಲಕ ಗಳಿಸಿದ ಹಣ ಮತ್ತು ಶೈಕ್ಷಣಿಕ ಹಾಗೂ ತಿಹಾರ್ ಒಲಿಂಪಿಕ್ಸ್ ಮತ್ತು ವರ್ಣಚಿತ್ರದಂತಹ ಸುಧಾರಣಾ ಚಟುವಟಿಕೆಗಳ ದಾಖಲೆಗಳನ್ನು ಒದಗಿಸಿದ್ದರು.

ಪವನ್ ಗುಪ್ತ (೨೫), ವಿನಯ್ ಶರ್ಮ (೨೬), ಮುಖೇಶ್ ಕುಮಾರ್ (೩೨) ಮತ್ತು ಅಕ್ಷಯ್ ಕುಮಾರ್ ಸಿಂಗ್ (೩೧) ನಾಲ್ಕೂ ಮಂದಿಗೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆ ವಿಧಿಸಲಾಗಿದೆ. ಬಂಧಿಸಲ್ಪಟ್ಟಿದ್ದ ಮಂದಿಯ ಪೈಕಿ ಒಬ್ಬನನ್ನು ಅಪ್ರಾಪ್ತ ವಯಸ್ಕ ಎಂಬ ಕಾರಣಕ್ಕಾಗಿ ಸುಧಾರಣಾ ಗೃಹದಲ್ಲಿ ಮೂರು ವರ್ಷಗಳ ವಾಸದ ಬಳಿಕ ಬಿಡುಗಡೆ ಮಾಡಲಾಗಿತ್ತು. ಆರನೇ ಆರೋಪಿ ರಾಮ್ ಸಿಂಗ್ ತಿಹಾರ್ ಸೆರೆಮನೆಯಲ್ಲಿ ವಿಚಾರಣಾವೇಳೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಆಪಾದಿಸಲಾಗಿತ್ತು.

ವಿಚಾರಣೆಯು ಅಪರಾಧ ಘಟಿಸಿದ ಒಂದು ವರ್ಷದ ಒಳಗಾಗಿ ಪೂರ್ಣಗೊಂಡು ಮರಣದಂಡನೆ ವಿಧಿಸಲಾಗಿತ್ತು. ಆದರೆ ಕಾನೂನು ವಿಧಿವಿಧಾನಗಳು ಮತ್ತು ಮೇಲ್ಮನವಿಗಳ ಇತ್ಯರ್ಥ ಬಾಕಿ ಪರಿಣಾಮವಾಗಿ ಈವರೆಗೂ ಗಲ್ಲು ಶಿಕ್ಷೆ ಜಾರಿಯಾಗಿಲ್ಲ.

ಅಪರಾಧಿಗಳ ಗಲ್ಲು ಜಾರಿ ವಿಳಂಬವು ಘಟನೆಯಲ್ಲಿ ದಾರುಣವಾದ ಸಾವನ್ನಪ್ಪಿದ ೨೩ರ ಹರೆಯದ ವಿದ್ಯಾರ್ಥಿನಿಯ ಕುಟುಂಬವನ್ನು ಭ್ರಮನಿರಸನಗೊಳಿಸಿದ್ದು, ಅವರು ಕ್ರಿಮಿನಲ್ ನ್ಯಾಯವ್ಯವಸ್ಥೆಯನ್ನು ಟೀಕಿಸಿದ್ದಾರೆ. ವ್ಯವಸ್ಥೆಯು ಆರೋಪಿಗಳ ಹಕ್ಕುಗಳನ್ನು ಮಾತ್ರವೇ ಅಲ್ಲ ಬಲಿಪಶುಗಳ (ನೊಂದವರ) ಹಕ್ಕುಗಳನ್ನು ಕೂಡಾ ರಕ್ಷಿಸುವ ಅಗತ್ಯವಿದೆ ಎಂದು ಅವರು ಆಗ್ರಹಿಸಿದ್ದಾರೆ.

೨೦೧೨ರ ಡಿಸೆಂಬರ್ ತಿಂಗಳ ಚಳಿಯಿಂದ ದೇಹ ಮರಗಟ್ಟುತ್ತಿದ್ದ ದಿನಗಳಲ್ಲಿ ಚಲಿಸುವ ಬಸ್ಸಿನಲ್ಲಿ ವಿದ್ಯಾರ್ಥಿನಿ ಮತ್ತು ಆಕೆಯ ಗೆಳೆಯನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಅಪರಾಧಿಗಳು ಕ್ರೂರವಾಗಿ ಆಕೆಯನ್ನು ಚಿತ್ರಹಿಂಸೆಗೆ ಗುರಿಪಡಿಸಿ ಬಳಿಕ ಇಬ್ಬರನ್ನೂ ರಸ್ತೆಗೆ ಎಸೆದಿದ್ದರು.

ಮೈಕೊರೆಯುತ್ತಿದ್ದ ಚಳಿಗಾಳಿಯ ರಾತ್ರಿಯಲ್ಲಿ ತೀವ್ರ ಗಾಯಗಳೊಂದಿಗೆ ರಸ್ತೆಯಲ್ಲಿ ಅರೆ ನಗ್ನಾವಸ್ಥೆಯಲ್ಲಿ ಬಿದ್ದಿದ್ದ ವಿದ್ಯಾರ್ಥಿನಿ ಕೆಲದಿನಗಳ ಜೀವನ್ಮರಣ ಹೋರಾಟ ನಡೆಸಿ ಬಳಿಕ ಸಿಂಗಾಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಇಡೀ ದೇಶದ ಪ್ರಜ್ಞೆಯನ್ನು ಅಲುಗಾಡಿಸಿದ್ದ ಪ್ರಕರಣ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದ್ದಲ್ಲದೆ, ಕಾನೂನು ಬದಲಾವಣೆಗೂ ದಾರಿ ಮಾಡಿತ್ತು.

No comments:

Advertisement