ವಿಶ್ವದ ೬೪ ದೇಶಗಳಲ್ಲಿ ಕೊರೊನಾವೈರಸ್ ದಾಂಗುಡಿ
ಅಮೆರಿಕದಲ್ಲಿ ಮೊದಲ ಸಾವು, ಇರಾನ್ ಪ್ರವಾಸಕ್ಕೆ ನಿಷೇಧ
ನವದೆಹಲಿ: ಚೀನಾದಲ್ಲಿ ಮೊದಲು ಪತ್ತೆಯಾದ ಮಾರಣಾಂತಿಕ ಕೊರೊನಾವೈರಸ್ ಈಗ ವಿಶ್ವಾದ್ಯಂತ ದಾಂಗುಡಿ ಇಟ್ಟು ಸಾವಿನ ಭೀತಿಯನ್ನು ಸೃಷ್ಟಿಸಿದೆ. ಅಮೆರಿಕ, ಆಸ್ಟ್ರೇಲಿಯದಲ್ಲಿ ಕೊರೊನಾವೈರಸ್ ಪರಿಣಾಮವಾಗಿ ಮೊದಲ ಸಾವುಗಳು ಸಂಭವಿಸುತ್ತಿದ್ದಂತೆಯೇ 2020 ಮಾರ್ಚ್ 01ರ ಭಾನುವಾರ ಇರಾನ್ ಪ್ರವಾಸವನ್ನು ಅಮೆರಿಕ ನಿಷೇಧಿಸಿತು.
ಜಗತ್ತಿನಾದ್ಯಂತ ಪ್ರಸ್ತುತ ೬೪ ರಾಷ್ಟ್ರಗಳಿಗೆ ಕೊರೋನಾವೈರಸ್ ಹರಡಿದೆ ಎಂದು ವರದಿಗಳು ಸ್ಪಷ್ಟ ಪಡಿಸಿದವು.
ಅಮೆರಿಕದಲ್ಲಿ ಮೊದಲ ಕೊರೋನಾವೈರಸ್ ಸಾವು ದೃಢ ಪಡುತ್ತಿದ್ದಂತೆಯೇ ಅತಿ ವೇಗವಾಗಿ ಕೊರೋನಾವೈರಸ್ ಹರಡುತ್ತಿರುವ ಇರಾನಿಗೆ ಪ್ರವಾಸವನ್ನು ನಿಷೇಧಿಸಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದರು.
ಕೊರೋನಾವೈರಸ್ ಸೋಂಕಿಗೆ ಅಮೆರಿಕದಲ್ಲಿ ಒಬ್ಬ ವ್ಯಕ್ತಿ ಬಲಿಯಾಗಿದ್ದಾನೆ ಎಂಬುದನ್ನು ಹೇಳಿಕೆಯೊಂದರಲ್ಲಿ ವಾಷಿಂಗ್ಟನ್ ಸ್ಟೇಟ್ ಗವರ್ನರ್ ಜೇ ಇನ್ ಸ್ಲೀ ಸ್ಪಷ್ಟ ಪಡಿಸಿದರು.
ಚೀನಾವನ್ನು ಥರಗುಟ್ಟಿಸಿದ ಕೊರೋನಾವೈರಸ್ ಬಳಿಕ ಜಪಾನ್, ಇಟಲಿ, ಕೆನಡಾ, ದಕ್ಷಿಣ ಕೊರಿಯಾಕ್ಕೆ ವ್ಯಾಪಿಸಿತ್ತು. ದಕ್ಷಿಣ ಕೊರಿಯಾದಲ್ಲಿ ಕೊರೊನಾವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿತ್ತು. ಇದೀಗ ಅಮೆರಿಕದಲ್ಲೂ ಮೊದಲ ಕೊರೊನಾವೈರಸ್ ಸೋಂಕಿನಿಂದ ಸಾವನ್ನಪ್ಪಿದ ಪ್ರಕರಣ ದಾಖಲಾಗಿದೆ. ಕೊರೋನಾವೈರಸ್ ಸಾವನ್ನು ಖಾತರಿ ಪಡಿಸಿದ ಅಮೆರಿಕದ ಅಮೆರಿಕದ ವಾಷಿಂಗ್ಟನ್ ಸ್ಟೇಟ್, ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದ್ದರೂ ಯಾವ ರೀತಿಯಲ್ಲಿ ಇಲ್ಲಿನ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ ಎಂಬುದು ಪತ್ತೆಯಾಗಿಲ್ಲ ಎಂದು ಹೇಳಿದೆ.
ಅಮೆರಿಕದಲ್ಲಿ ಕೊರೊನಾವೈರಸ್ ಸೋಂಕು ತಗುಲಿದ ವ್ಯಕ್ತಿ ಯಾರು ಎಂಬ ಮಾಹಿತಿಯನ್ನು ಬಹಿರಂಗಗೊಳಿಸಲಾಗಿಲ್ಲ. ಈ ಕುರಿತು ಎವರ್ಗ್ರೀನ್ ಹೆಲ್ತ್ ಮೆಡಿಕಲ್ ಸೆಂಟರಿನ ಕಯ್ಸೆ ದಹ್ಲ್ ಹೇಳಿಕೆ ನೀಡಿದ್ದು, ಕಿರ್ಕ್ಲ್ಯಾಂಡಿನ ಉಪನಗರ ಸೀಟೆಲ್ನಲ್ಲಿ ಇರುವ ವ್ಯಕ್ತಿ ಸಾವನ್ನಪ್ಪಿದ್ದು, ಆತನ ಬಗ್ಗೆ ಶೀಘ್ರದಲ್ಲೇ ಮಾಹಿತಿ ಬಹಿರಂಗಪಡಿಸುತ್ತೇವೆ ಎಂದು ಹೇಳಿದ್ದಾರೆ. ಇತರ ಅನೇಕರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗಿರುವ ಚೀನಾ, ದಕ್ಷಿಣ ಕೊರಿಯಾ, ಜಪಾನ್ ದೇಶಗಳಿಗೆ ಪ್ರಯಾಣ ನಿರ್ಬಂಧವನ್ನು ಇನ್ನಷ್ಟು ಬಿಗಿಗೊಳಿಸಿರುವುದಾಗಿ ಕೂಡಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಪ್ರಸ್ತುತ ವಾರಾರಂಭದಲ್ಲಿ ಐದು ರಾಷ್ಟ್ರಗಳಲ್ಲಿ ಕೊರನಾವೈರಸ್ ಸೋಂಕು ತಗುಲಿದ ಮೊದಲ ಪ್ರಕರಣಗಳು ದೇಶಗಳಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಹಾಹಾಕಾರ ಉಂಟು ಮಾಡಿದೆ.
ಮಾರಕ ವೈರಸ್ ಸೋಂಕು ಇನ್ನಷ್ಟು ವೇಗವಾಗಿ ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಚೀನಾದ ವುಹಾನ್ ನಗರದಲ್ಲಿ ಮೊದಲಿಗೆ ಕಾಣಿಸಿದ ಕೊರೋನಾವೈರಸ್ ಈವರೆಗೆ ವಿಶ್ವಾದ್ಯಂತ ೨೯೭೮ ಪ್ರಾಣಗಳನ್ನು ಬಲಿ ಪಡೆದಿದ್ದು, ೬೪ ರಾಷ್ಟ್ರಗಳಿಗೆ ವ್ಯಾಪಿಸಿದೆ. ವಿಶ್ವಾಂದ್ಯಂತ ಸೋಂಕು ತಗಲಿದ ಪ್ರಕರಣಗಳ ಸಂಖ್ಯೆ ೮೬,೯೯೨ಕ್ಕೆ ಏರಿದೆ.
ಆಸ್ಟ್ರೇಲಿಯಾ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ಸಹ ಕೊರೊನಾ ವೈರಸ್ ಸೋಂಕಿನಿಂದ ರೋಗಿಗಳು ಸಾವನ್ನಪ್ಪಿದ ಮೊದಲ ಪ್ರಕರಣಗಳು ವರದಿಯಾಗಿದೆ.
ಜಪಾನಿನಲ್ಲಿ ಕೊರೊನಾವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ೭೦ಕ್ಕೆ ಏರಿಕೆಯಾಗಿದೆ.
ಕುವೈತಿನಲ್ಲಿ ೪೫ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಕೊರಿಯಾದಲ್ಲಿ ಸೋಂಕಿನಿಂದಾಗಿ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ವರದಿ ತಿಳಿಸಿದೆ.
ಕುವೈತಿನಲ್ಲಿ ೪೫ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಕೊರಿಯಾದಲ್ಲಿ ಸೋಂಕಿನಿಂದಾಗಿ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ವರದಿ ತಿಳಿಸಿದೆ.
No comments:
Post a Comment