ರಾಷ್ಟ್ರವ್ಯಾಪಿ ಲಾಕ್ ಡೌನ್ ವಿಸ್ತರಣೆ
ಬಂಗಾಳ ಸಹಿತ ೬ ರಾಜ್ಯಗಳ ಆಗ್ರಹ
ನವದೆಹಲಿ: ಪಶ್ಚಿಮ ಬಂಗಾಳ ಸೇರಿದಂತೆ ಕನಿಷ್ಠ ೬ ರಾಜ್ಯಗಳ ಮುಖ್ಯಮಂತ್ರಿಗಳು 2020
ಏಪ್ರಿಲ್ 27ರ ಸೋಮವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ವಿಡಿಯೋ ಕಾನ್ಫರೆನ್ಸಿನಲ್ಲಿ ಕೊರೋನಾವೈರಸ್ ಪ್ರಸರಣವನ್ನು ತಡೆಗಟ್ಟುವ ಸಲುವಾಗಿ ವಿಧಿಸಲಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧವನ್ನು (ಲಾಕ್ ಡೌನ್) ಮೇ ೩ರಿಂದ ಆಚೆಗೆ ವಿಸ್ತರಿಸುವಂತೆ ಆಗ್ರಹಿಸಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕನಿಷ್ಠ ಮೇ ೨೧ರವರೆಗೆ ಲಾಕ್‌ಡೌನ್ ವಿಸ್ತರಿಸಬೇಕು ಎಂಬುದಾಗಿ ಆಗ್ರಹಿಸಿದ್ದರೆ, ಇತರ ಐವರು ಮುಖ್ಯಮಂತ್ರಿಗಳಾದ ಆಂಧ್ರಪ್ರದೇಶದ ಜಗನ್ ಮೋಹನ ರೆಡ್ಡಿ, ಗೋವಾದ ಪ್ರಮೋದ ಸಾವಂತ್, ಹಿಮಾಚಲ ಪ್ರದೇಶದ ಜೈರಾಮ್ ಠಾಕೂರ್, ಮಿಜೋರಂನ ಝೊರಾಮ್ತಂಗ ಮತ್ತು ಮೇಘಾಲಯದ ಕೊನ್ರಾಡ್ ಸಂಗ್ಮಾ ಅವರು ದಿಗ್ಬಂಧನ ವಿಸ್ತರಣೆಗೆ ಬೆಂಬಲ ಸೂಚಿಸಿದರು. ಆದರೆ ಯಾವುದೇ ಕಾಲಮಿತಿಯನ್ನು ಸೂಚಿಸಲಿಲ್ಲ.
ಪತ್ರಕರ್ತರೊಂದಿಗೆ ಆನ್ ಲೈನ್ ಪತ್ರಿಕಾಗೋಷ್ಠಿ ನಡೆಸಿದ ಮಮತಾ ಬ್ಯಾನರ್ಜಿ, ನಿರ್ಬಂಧಗಳು ಮುಂದುವರೆಯಬೇಕು, ಜೊತೆಗೇ ಸಡಿಲಿಕೆಗಳೂ ಇರಬೇಕು ಎಂದು ಹೇಳಿದರು.
’ನಾವು ದಿಗ್ಬಂಧನವನ್ನು ಮೇ ೨೧ರವರೆಗೆ ವಿಸ್ತರಿಸಲು ಒಲವು ಹೊಂದಿದ್ದೇವೆ. ಪ್ರಧಾನಿಯವರ ಜೊತೆಗಿನ ಈದಿನ ಸಭೆಯಲ್ಲಿ ಈ ಲಾಕ್ ಡೌನ್ ಮುಂದುವರೆಯುವುದು ಎಂಬ ಇಂಗಿತವನ್ನು ಅವರು ನೀಡಿದ್ದಾರೆ ಎಂದು ನನಗೆ ಅನಿಸಿದೆ’ ಎಂದು ಮಮತಾ ನುಡಿದರು.
ವಿಡಿಯೋ ಕಾನ್ಫರೆನ್ಸಿನಲ್ಲಿ ಕೇರಳ ಮಾತ್ರ ಪ್ರತಿನಿಧಿಸದ ಏಕೈಕ ರಾಜ್ಯವಾಗಿತ್ತು. ಮಾತನಾಡಲು ಪಟ್ಟಿ ಮಾಡಲಾದ ಮುಖ್ಯಮಂತ್ರಿಗಳ ಹೆಸರಿನಲ್ಲಿ ತಮ್ಮ ಹೆಸರು ಸೇರ್ಪಡೆಯಾಗದ ಕಾರಣಕ್ಕಾಗಿ ಪಿಣರಾಯಿ ವಿಜಯನ್ ಅವರು ಕಾನ್ಫರೆನ್ಸಿನಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಅವರ ಕಚೇರಿ ತಿಳಿಸಿದೆ.
No comments:
Post a Comment