Tuesday, July 28, 2020

3ನೇ ಹಂತದ ದಿಗ್ಬಂಧನ: ಕೇಂದ್ರ ಸಂಪುಟ ಸಭೆ ಬುಧವಾರ

3ನೇ ಹಂತದ ದಿಗ್ಬಂಧನ: ಕೇಂದ್ರ ಸಂಪುಟ ಸಭೆ ಬುಧವಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜುಲೈ ೨೯ರ ಬುಧವಾರ ಮಹತ್ವದ ಕೇಂದ್ರ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ರಾಷ್ಟ್ರವ್ಯಾಪಿ ದಿಗ್ಬಂಧದ (ಲಾಕ್ ಡೌನ್) ಮೂರನೇ ಹಂತದ ಬಗ್ಗೆ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಎರಡನೇ ಹಂತದ ದಿಗ್ಬಂಧನ ಜುಲೈ ೩೧ಕ್ಕೆ ಕೊನೆಯಾಗಲಿದೆ. ಹಿನ್ನೆಲೆಯಲ್ಲಿ ಸಂಪುಟ ಸಭೆ ಮಹತ್ವ ಪಡೆದುಕೊಂಡಿದೆ. ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಮುಂದಿನ ದಿನಗಳಲ್ಲಿ ಸೋಂಕು ನಿಯಂತ್ರಣ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚೆ ನಡೆಯಲಿದೆ.

ಬುಧವಾರ ಬೆಳಗ್ಗೆ ೧೦.೩೦ಕ್ಕೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು ಮೂರನೇ ಹಂತದ ದಿಗ್ಬಂಧನ ಬಗ್ಗೆ  ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಅಭಿಪ್ರಾಯ ಪಡೆದು ತೀರ್ಮಾನ ಮಾಡಲಾಗುವುದು ನಂಬಲರ್ಹ  ಮೂಲಗಳು 2020 ಜುಲೈ 28ರ ಮಂಗಳವಾರ ತಿಳಿಸಿದವು.

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಘೋಷಿಸಲಾದ ಕೇಂದ್ರದ ೨೦ ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಯೋಜನೆಯ ಪರಾಮರ್ಶೆ ನಡೆಯುವ ಸಾಧ್ಯತೆಗಳು ಇವೆ ಎಂದು ಸುದ್ದಿ ಮೂಲಗಳು ತಿಳಿಸಿದವು.

ಇದಕ್ಕೆ ಮುನ್ನ ಮೊದಲ ಮತ್ತು ಎರಡನೇ ಹಂತದಲ್ಲಿ ದಿಗ್ಬಂಧನ ವಿಸ್ತರಣೆ ಮಾಡುವಾಗ ಪ್ರಧಾನಿ ಮೋದಿಯವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿದ್ದರು. ಆದರೆ ಸಲ ಅಂತಹ ಯಾವುದೇ ಮಹತ್ವದ ಬೆಳವಣಿಗೆಗಳು ಕಂಡುಬಂದಿಲ್ಲ. ಬಾರಿ ಮುಖ್ಯಮಂತ್ರಿಗಳ ಅಭಿಪ್ರಾಯ ಸಂಗ್ರಹ ಮಾಡದೇ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ದೇಶದ ವಿವಿಧ ಮಹಾನಗರಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿರುವುದರ ಬಗ್ಗೆಯೂ ಚರ್ಚೆ ನಡೆಯಲಿದೆ. ಚಿತ್ರ ಮಂದಿರ, ಶಾಲೆ, ಕಾಲೇಜು, ಮೆಟ್ರೋ, ರೈಲು ಸೇವೆ ಆರಂಭದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ  ಎಂದು ಮೂಲಗಳು ಹೇಳಿವೆ.

No comments:

Advertisement