ಪಾಕ್ ಬಿಟ್ಟು ೫ ನೆರೆಹೊರೆ ದೇಶಗಳ ಜೊತೆ ಭಾರತದ ಏರ್ ಬಬಲ್
ನವದೆಹಲಿ: ಕೋವಿಡ್ -೧೯ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ರದ್ದಾಗಿರುವ ಅಂತಾರಾಷ್ಟ್ರೀಯ ವಾಯುಯಾನ ಇನ್ನೂ ಪ್ರಾರಂಭವಾಗಿಲ್ಲ, ಈ ಮಧ್ಯೆ ಭಾರತವು ನೆರೆಹೊರೆಯ ಐದು ರಾಷ್ಟ್ರಗಳೊಂದಿಗೆ ವಿಮಾನಯಾನ ಸಂಚಾರಕ್ಕಾಗಿ ’ಟ್ರಾವಲ್ ಏರ್ ಬಬಲ್’ ಸ್ಥಾಪನೆಯ ಪ್ರಸ್ತಾಪವನ್ನು ಇಟ್ಟಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ 2020 ಆಗಸ್ಟ್ 18ರ ಮಂಗಳವಾರ ಹೇಳಿದರು.
ಏರ್ ಬಬಲ್ಗಳು ವಾಣಿಜ್ಯ ಪ್ರಯಾಣಿಕರ ಸೇವೆಗಳನ್ನು ಸಾಂಕ್ರಾಮಿಕ ಪೂರ್ವ ಮಟ್ಟಕ್ಕೆ ಪುನಃಸ್ಥಾಪಿಸಲು ಪ್ರಯತ್ನಿಸುತ್ತವೆ. ಅದರೆ ಪಾಕಿಸ್ತಾನ ಈ ಐದು ದೇಶಗಳ ಪಟ್ಟಿಯಲ್ಲಿಲ್ಲ.
"ನಮ್ಮ ನೆರೆಹೊರೆಯ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ಥಾಮ, ನೇಪಾಳ ಮತ್ತು ಭೂತಾನ್ ಜೊತೆ ಏರ್ ಬಬಲ್ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಪ್ರಸ್ತಾಪಿಸಲಾಗಿದೆ. ನಾವು ಇತರ ದೇಶಗಳೊಂದಿಗೆ ಅಂತಹ ವ್ಯವಸ್ಥೆಗಳನ್ನು ಪರಿಗಣಿಸುತ್ತೇವೆ. ಸಿಕ್ಕಿಬಿದ್ದ ಪ್ರತಿಯೊಬ್ಬ ಪ್ರಜೆಯನ್ನೂ ತಲುಪುವುದು ಯಾವಾಗಲೂ ನಮ್ಮ ಪ್ರಯತ್ನ. ಯಾವುದೇ ಭಾರತೀಯನನ್ನೂ ಬಿಡುವುದಿಲ್ಲ’ ಎಂದು ಪುರಿ ಟ್ವೀಟ್ ಮಾಡಿದರು.
ಭಾರತದ ಅಂತಾರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಗಳು ಪ್ರಸ್ತುತ ವಂದೇ ಭಾರತ ಮಿಷನ್ (ವಿಬಿಎಂ) ಅಡಿಯಲ್ಲಿ ವಿವಿಧ ದೇಶಗಳಿಂದ ತನ್ನ ನಿವಾಸಿಗಳನ್ನು ಸ್ಥಳಾಂತರಿಸಲು ಮಾತ್ರ ಸೀಮಿತವಾಗಿವೆ.
"ನಾವು ವಂದೇ ಭಾರತ ಮಿಷನ್ ವ್ಯಾಪ್ತಿಯನ್ನು ಮತ್ತಷ್ಟು ಬಲಪಡಿಸುತ್ತಿದ್ದೇವೆ. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಕತಾರ್ ಮತ್ತು ಮಾಲ್ಡೀವ್ಸ್ ಜೊತೆ ವಿಮಾನ ಪ್ರಯಾಣ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ನಾವು ಈಗ ಈ ಪ್ರಯತ್ನಗಳನ್ನು ಮುಂದಕ್ಕೆ ಒಯ್ಯುತ್ತಿದ್ದೇವೆ ಮತ್ತು ಅಂತಹ ವ್ಯವಸ್ಥೆಗಳನ್ನು ಸ್ಥಾಪಿಸಲು ಇನ್ನೂ ೧೩ ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ಸಚಿವರು ನುಡಿದರು.
"ಇವುಗಳಲ್ಲಿ ಆಸ್ಟ್ರೇಲಿಯಾ, ಇಟಲಿ, ಜಪಾನ್, ನ್ಯೂಜಿಲೆಂಡ್, ನೈಜೀರಿಯಾ, ಬಹ್ರೇನ್, ಇಸ್ರೇಲ್, ಕೀನ್ಯಾ, ಫಿಲಿಪೈನ್ಸ್, ರಷ್ಯಾ, ಸಿಂಗಾಪುರ, ದಕ್ಷಿಣ ಕೊರಿಯಾ ಮತ್ತು ಥೈಲ್ಯಾಂಡ್ ಸೇರಿವೆ" ಎಂದು ಪುರಿ ಅವರು ಮತ್ತೊಂದು ಟ್ವೀಟಿನಲ್ಲಿ ತಿಳಿಸಿದರು.
ಆಗಸ್ಟ್ ೧೫ ರಂದು ಕೆನಡಾದೊಂದಿಗೆ ಇತ್ತೀಚಿನ ಏರ್ ಬಬಲ್ ಕಾರ್ಯನಿರ್ವಹಿಸಿತ್ತು.
No comments:
Post a Comment