Monday, November 23, 2020

ಕೊರೋನಾ: ರಾಜ್ಯಗಳಿಂದ ವಸ್ತುಸ್ಥಿತಿ ವರದಿ ಕೋರಿದ ಸುಪ್ರೀಂ

 ಕೊರೋನಾ:  ರಾಜ್ಯಗಳಿಂದ ವಸ್ತುಸ್ಥಿತಿ ವರದಿ ಕೋರಿದ ಸುಪ್ರೀಂ

ನವದೆಹಲಿ: ದೆಹಲಿಯಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ಪರಿಸ್ಥಿತಿ ಹದಗೆಟ್ಟಿದೆ ಮತ್ತು ಗುಜರಾತಿನಲ್ಲೂ ಅದು ನಿಯಂತ್ರಣ ತಪ್ಪಿದೆ ಎಂಬುದಾಗಿ  2020 ನವೆಂಬರ 23ರ ಸೋಮವಾರ ಆತಂಕ ವ್ಯಕ್ತ ಪಡಿಸಿದ ಸುಪ್ರೀಂಕೋರ್ಟ್, ದೇಶಾದ್ಯಂತ ಕೋವಿಡ್-೧೯ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಎರಡು ದಿನಗಳ ಒಳಗೆ ವಿವರ ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿತು.

ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಡಿಸೆಂಬರ್ ತಿಂಗಳಲ್ಲಿ ಕೋವಿಡ್ ಪರಿಸ್ಥಿತಿ ಇನ್ನಷ್ಟು ಆತಂಕಕಾರಿಯಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು.

ದೆಹಲಿಯಲ್ಲಿ ವಿಶೇಷವಾಗಿ ನವೆಂಬರಿನಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದರ ಕುರಿತು ನೀವು ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠವು ದೆಹಲಿ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರಿಗೆ ತಿಳಿಸಿತು. ಗುಜರಾತಿನಲ್ಲಿ ಕೂಡಾ ಪರಿಸ್ಥಿತಿ ನಿಯಂತ್ರಣ ಮೀರುತ್ತಿದೆ ಎಂದು ನ್ಯಾಯಮೂರ್ತಿಗಳಾದ ಆರ್ ಎಸ್ ರೆಡ್ಡಿ ಮತ್ತು ಎಂ ಆರ್ ಷಾ ಅವರನ್ನೂ ಒಳಗೊಂಡ ನ್ಯಾಯಪೀಠ ಹೇಳಿತು.

ಪ್ರಕರಣಗಳು ಹೆಚ್ಚುತ್ತಿವೆ. ಈಗಿನ್ನೂ ನವೆಂಬರ್ ಮಾತ್ರ. ಡಿಸೆಂಬರಿನ ಇನ್ನಷ್ಟು ಕೆಟ್ಟ ದಿನಗಳಿಗಾಗಿ ತಯಾರಿ ನಡೆಸಬೇಕು ಎಂದು ಪೀಠ ಮಹಾರಾಷ್ಟ್ರದ ವಕೀಲರಿಗೆ ತಿಳಿಸಿತು.

ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಹೆಚ್ಚುತ್ತಿರುವ ಕೋವಿಡ್-೧೯ ಪ್ರಕರಣಗಳನ್ನು ನಿಗ್ರಹಿಸಲು ಕೇಂದ್ರ ಮತ್ತು ರಾಜ್ಯಗಳು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು.

ಕೋವಿಡ್-೧೯ ರೋಗಿಗಳಿಗೆ ಸರಿಯಾದ ಚಿಕಿತ್ಸೆಯ ಅಗತ್ಯತೆ ಮತ್ತು ಆಸ್ಪತ್ರೆಗಳಲ್ಲಿ ಮೃತ ದೇಹಗಳನ್ನು ಗೌರವಯುತವಾಗಿ ನಿರ್ವಹಿಸುವ ಬಗ್ಗೆ ಅರಿವು ಮೂಡಿಸುವುದಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಪೀಠ ವಿಚಾರಣೆ ನಡೆಸಿತು. ಬಳಿಕ ವಿಚಾರಣೆಯನ್ನು ನವೆಂಬರ್ ೨೭ಕ್ಕೆ ಮುಂದೂಡಿತು.

ದೇಶಾದ್ಯಂತ ವಿಶೇಷವಾಗಿ ದೆಹಲಿ, ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿ ಕೋವಿಡ್ -೧೯ ಪ್ರಕರಣಗಳು ಹೆಚ್ಚುತ್ತಿವೆ ಎಂದು ಗಮನಿಸಿದ ಪೀಠ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರ ಅಹವಾಲುಗಳನ್ನು ಗಮನಕ್ಕೆ ತೆಗೆದುಕೊಂಡಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನವೆಂಬರ್ ೧೫ ರಂದು ಸಭೆ ನಡೆಸಿದ್ದಾರೆ ಮತ್ತು ರಾಷ್ಟ್ರ ರಾಜಧಾನಿಯಲ್ಲಿನ ಪರಿಸ್ಥಿತಿಯನ್ನು ಎದುರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮೆಹ್ತ ಪೀಠಕ್ಕೆ ತಿಳಿಸಿದರು.

ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶದಂತೆ ತಜ್ಞರ ಸಮಿತಿಯನ್ನು ರಚಿಸಲಾಗಿದೆ ಮತ್ತು ಇತರ ನಿರ್ದೇಶನಗಳನ್ನು ದೆಹಲಿ ಸರ್ಕಾರವು ಪಾಲಿಸಿದೆ ಎಂದು ಸಂಜಯ ಜೈನ್ ಪೀಠಕ್ಕೆ ತಿಳಿಸಿದರು. ೩೮೫ ಶವಗಳ ಅಂತ್ಯಕ್ರಿಯೆಗಾಗಿ ಪ್ರತ್ಯೇಕ ಜಾಗವನ್ನು ನಿಗದಿಪಡಿಸಲಾಗಿದೆ ಎಂದೂ ಅವರು ಹೇಳಿದರು.

ನ್ಯಾಯಾಲಯದ ಆದೇಶಗಳನ್ನು ನೀವು ಪಾಲಿಸಿದ್ದೀರಿ. ಆದರೆ ಹದಗೆಡುತ್ತಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ  ನೀವು ಇನ್ನೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ಪೀಠ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಿ ಎಂದು ಜೈನ್ ಅವರಿಗೆ ನಿರ್ದೇಶಿಸಿತು.

ಸಾಂಕ್ರಾಮಿಕ ಸಮಯದಲ್ಲಿ ವಿವಾಹ ಸಂಭ್ರಮಾಚರಣೆಯ ನೀತಿಯ ಬಗ್ಗೆ ಗುಜರಾತ್ ಸರ್ಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ಅಲ್ಲಿ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ದೆಹಲಿ ಮತ್ತು ಮಹಾರಾಷ್ಟ್ರದ ನಂತರ ಗುಜರಾತ್ ರಾಜ್ಯದಲ್ಲಿ ಪರಿಸ್ಥಿತಿ ಹೆಚ್ಚು ಕೆಟ್ಟಿದೆ. ಹಗಲಿನ ವೇಳೆಯಲ್ಲಿ ನೀವು ಮದುವೆ ಆಚರಣೆಗೆ ಅನುಮತಿ ನೀಡುತ್ತಿರುವುದು ಏಕೆ? ಪ್ರಮಾಣಪತ್ರದ ಮೂಲಕ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ವಸ್ತುಸ್ಥಿತಿ ವರದಿ ಸಲ್ಲಿಸಿ ಎಂದು ಪೀಠ ಹೇಳಿತು.

ಆರಂಭದಲ್ಲಿ, ಮೆಹ್ತ ಅವರು ವಿಷಯವು ಮೃತ ದೇಹಗಳನ್ನು ನಿರ್ವಹಿಸುವುದಕ್ಕೆ ಸಂಬಂಧಿಸಿದೆ ಮತ್ತು ನ್ಯಾಯಾಲಯವು ಸಮಸ್ಯೆಯನ್ನು ಎದುರಿಸಬೇಕಾಗಿರುವುದು ನೋವಿನ ಸಂಗತಿಯಾಗಿದೆ. ಇದು ಆದೇಶದ ಒಂದು ಭಾಗವಾಗಿತ್ತು. ಇದು ಆಸ್ಪತ್ರೆಯ ಪರಿಸ್ಥಿತಿಗೂ ಸಂಬಂಧಿಸಿದೆ ಎಂದು ಪೀಠ ಹೇಳಿತು.

ಜೂನ್ ೧೯ ಆದೇಶದಲ್ಲಿ, ರೋಗಿಗಳಿಗೆ ಸರಿಯಾದ ಆರೋಗ್ಯ ಸೇವೆ ಒದಗಿಸಲು ಸರ್ಕಾರಿ ಮತ್ತು ಕೋವಿಡ್ ಮೀಸಲು ಆಸ್ಪತ್ರೆಗಳ ಪರಿಣಾಮಕಾರಿ ಮೇಲ್ವಿಚಾರಣೆ, ಮೇಲ್ವಿಚಾರಣೆ ಮತ್ತು ಮಾರ್ಗದರ್ಶನಕ್ಕಾಗಿ ತಜ್ಞರ ಸಮಿತಿ ರಚಿಸುವಂತೆಯೂ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡಿತ್ತು.

ಪರೀಕ್ಷಾ ಶುಲ್ಕರ ಮತ್ತು ಇತರ ಸೌಲಭ್ಯಗಲ್ಲಿ ಏಕರೂಪತೆಯನ್ನು ತರಲು ಪೀಠ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು ಮತ್ತು ಕೇಂದ್ರ ಸರ್ಕಾರಿ ಆಸ್ಪತ್ರೆಗಳು, ಜಿಎನ್‌ಸಿಟಿಡಿ ನಡೆಸುತ್ತಿರುವ ಆಸ್ಪತ್ರೆಗಳು, ಏಮ್ಸ್ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಜವಾಬ್ದಾರಿಯುತ ಅಧಿಕಾರಿಗಳ ತಜ್ಞರ ಸಮಿತಿಯನ್ನು ರಚಿಸುವಂತೆ ಆದೇಶಿಸಿತ್ತು.

ಕೋವಿಡ್ ರೋಗಿಗಳ ಆರೈಕೆಗಾಗಿ ತಜ್ಞರ ಸಮಿತಿಯು ದೆಹಲಿಯ ಎನ್‌ಸಿಟಿಯಲ್ಲಿರುವ ಎಲ್ಲ ಸರ್ಕಾರಿ ಆಸ್ಪತ್ರೆಗಳು, ಕೋವಿಡ್ ಆಸ್ಪತ್ರೆಗಳು ಮತ್ತು ಇತರ ಆಸ್ಪತ್ರೆಗಳಿಗೆ ತಪಾಸಣೆ, ಮೇಲ್ವಿಚಾರಣೆ ಮತ್ತು ಅಗತ್ಯ ನಿರ್ದೇಶನಗಳನ್ನು ನೀqಬೇಕು ಮತ್ತು ಪ್ರತಿ ಆಸ್ಪತ್ರೆಗೆ ವಾರಕ್ಕೆ ಕನಿಷ್ಠ ಒಂದು ಭೇಟಿಯನ್ನಾದರೂ ನೀಡಬೇಕು ಎಂದು ಪೀಠ ಸೂಚಿಸಿತ್ತು.

ಪ್ರತಿ ರಾಜ್ಯದಲ್ಲಿ ಕೋವಿಡ್-೧೯ ಗೆ ಮೀಸಲಾಗಿರುವ ಸರ್ಕಾರಿ ಆಸ್ಪತ್ರೆಗಳು ಮತ್ತು ಇತರ ಆಸ್ಪತ್ರೆಗಳ ಪರಿಶೀಲನೆ, ಮೇಲ್ವಿಚಾರಣೆ ಮತ್ತು ಮಾರ್ಗದರ್ಶನಕ್ಕಾಗಿ ಎಲ್ಲ ರಾಜ್ಯಗಳು ವೈದ್ಯರು ಮತ್ತು ಇತರ ತಜ್ಞರ ತಂಡವನ್ನು ರಚಿಸಬೇಕು ಎಂದು ಉನ್ನತ ನ್ಯಾಯಾಲಯವು ನಿರ್ದೇಶಿಸಿತ್ತು.

ತಂಡವು ರಾಜ್ಯದ ಆಸ್ಪತ್ರೆಗಳನ್ನು ಪರಿಶೀಲಿಸಬಹುದು, ಮೇಲ್ವಿಚಾರಣೆ ಮಾಡಬಹುದು ಮತ್ತು ಸಂಬಂಧಪಟ್ಟ ಆಸ್ಪತ್ರೆಯ ಸುಧಾರಣೆಗೆ ಅಗತ್ಯ ನಿರ್ದೇಶನಗಳನ್ನು ನೀಡಬಹುದು ಮತ್ತು ಸರ್ಕಾರಕ್ಕೆ ವರದಿ ಮಾಡಬಹುದು ಎಂದು ಅದು ಹೇಳಿತ್ತು.

No comments:

Advertisement