ಕಾವೇರಿಗಾಗಿ ಭಗೀರಥ ಹೋರಾಟ…!
ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಕಾವೇರಿ ನೀರು ಕೆಲ ಸಮಯದಿಂದ ಜೋರಾಗಿ ಸದ್ದು ಮಾಡುತ್ತಿದೆ. ಬ್ಯಾಟರಾಯನಪುರ ಶಾಸಕ ಶ್ರೀ ಕೃಷ್ಣ ಭೈರೇಗೌಡ ಅವರು ಇಲ್ಲಿ ಬೆಂಗಳೂರಿನಲ್ಲಿಯೇ ಅತಿ ದೊಡ್ಡದಾದ ಬೃಹತ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ.
ನಾಗವಾರದ ಬಳಿಕ ಹೆಬ್ಬಾಳದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದವರೆಗಿನ ಈ ಪ್ರದೇಶದಲ್ಲಿ ಅಂದರೆ ಥಣಿಸಂದ್ರ, ರಾಮಕೃಷ್ಣ ಹೆಗಡೆ ನಗರ, ಶಬರಿ ಬಡಾವಣೆ, ರಾಮಕೃಷ್ಣ ಹೆಗಡೆ ನಗರ, ಎಂಸಿಎಸಿಎಚ್, ಶಿವರಾಮ ಕಾರಂತ ನಗರ, ಸೆಂಟ್ರಲ್ ಎಕ್ಸೈಸ್ ಬಡಾವಣೆ, ಸಂಪಿಗೆ ಹಳ್ಳಿ, ಜಕ್ಕೂರು, ಭಾರತೀಯ ಸಿಟಿ, ಚೊಕ್ಕನಹಳ್ಳಿ, ವಿನಾಯಕ ನಗರ, ಕೋಗಿಲು, ಬಾಗಲೂರು ಸೇರಿದಂತೆ ಈ ಪ್ರದೇಶದಲ್ಲಿ ಅಭಿವೃದ್ಧಿ ಜೋರಾಗಿದೆ. ಮೂಲಭೂತ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲೂ ಸಾಕಷ್ಟು ಕ್ರಮಗಳಾಗುತ್ತಿವೆ.
ಇಲ್ಲಿ ನೀರಿನ ಸಮಸ್ಯೆ ಮಾತ್ರ ಬಹಳ ವರ್ಷಗಳಿಂದ ಕಾಡುತ್ತಿದ್ದು ಬಹುತೇಕ
ಜನರಿಗೆ ಕೊಳವೆ ಬಾವಿ ನೀರೇ ಜೀವನಕ್ಕೆ ಆಧಾರವಾಗಿದೆ. ಈ ಹಿನ್ನೆಲೆಯಲ್ಲೇ ಈ ಪ್ರದೇಶ ಅಂದರೆ ಬ್ಯಾಟರಾಯನಪುರ
ಕ್ಷೇತ್ರದ ಶಾಸಕರಾದ ಶ್ರೀ ಕೃಷ್ಣ ಭೈರೇಗೌಡ ಅವರು ಇಲ್ಲಿಗೆ ಕಾವೇರಿ ನೀರನ್ನು ತರುವ ಮೂಲಕ ಶಾಶ್ವತ
ಪರಿಹಾರ ತರಬೇಕು ಎಂಬ ಪ್ರಯತ್ನಕ್ಕೆ ಕೈ ಹಾಕಿದರು.
ನಾಲ್ಕೈದು ವರ್ಷಗಳ ಹಿಂದೆ ಅಂದರೆ ೨೦೧೮-೧೯ರ ಸುಮಾರಿಗೆ ಜಿಕೆವಿಕೆಯಿಂದ ಈ ಪ್ರದೇಶಕ್ಕೆ ಕಾವೇರಿ ನೀರು ಒದಗಿಸಲು ನೀರಿನ ಪೈಪ್ ಲೈನ್ ಹಾಕಿಸಿದರು. ಹಾಗೆಯೇ ಇಲೊಂದು ಬೃಹತ್ ನೀರಿನ ಟ್ಯಾಂಕ್ ನಿರ್ಮಿಸಿ ಅದರ ಮೂಲಕ ಕಾವೇರಿ ನೀರನ್ನು ಈ ಪ್ರದೇಶಕ್ಕೆ ಹರಿಸಬೇಕು ಎಂಬ ಯೋಜನೆ ಹಾಕಿಕೊಂಡು ಕಾರ್ಯ ಪ್ರವೃತ್ತರಾದರು. ಜಾಗವನ್ನೂ ಚೊಕ್ಕನಹಳ್ಳಿ ಪ್ರದೇಶದಲ್ಲಿ ಗುರುತಿಸಿ, ಜಲಮಂಡಳಿಗೆ ಜಾಗವನ್ನೂ ಮಂಜೂರು ಮಾಡಿಸಿಕೊಂಡರು.
ಈ ಬೃಹತ್ ನೀರಿನ ಟ್ಯಾಂಕಿಗೆ ಕಾವೇರಿ ನದಿಯಿಂದ ನೀರು ತರಲು, ಇಲ್ಲಿಂದ
ಬಡಾವಣೆಗಳಿಗೆ ಅಪಾರ್ಟ್‌ಮೆಂಟುಗಳಿಗೆ ನೀರು ಹರಿಸಲು ಕೊಳವೆಗಳ ಜಾಲವನ್ನೂ ನಿರ್ಮಿಸಿದರು. ಆದರೆ ಈ
ಪ್ರದೇಶದ ಜನರ ದುರಾದೃಷ್ಟ. ಜಿಕೆವಿಕೆಯಿಂದ ಹಾಕಿದ ಕೊಳವೆಯ ಮೂಲಕ ಬಾಲಾಜಿ ಕೃಪಾ ಬಡಾವಣೆಯವರೆಗೆ ನೀರು
ಸರಾಗವಾಗಿ ಬರಲಿಲ್ಲ.
ಜಲಮಂಡಳಿ ಅಧಿಕಾರಿಗಳಿಗೆ ಜನ ಮಾಡಿದ ಮನವಿಗಳೆಲ್ಲ ನೀರ ಮೇಲಣ ಹೋಮವಾದವು. ಒಂದಿಲ್ಲ ಒಂದು ಕಾರಣದಿಂದ ಅಧಿಕಾರಿಗಳು ಕೊಟ್ಟ ಭರವಸೆ ಈಡೇರಲಿಲ್ಲ. ಜನ ಸಹಜವಾಗಿ ಸಿಟ್ಟಿಗೆದ್ದರು. ಚುನಾವಣೆ ಬಹಿಷ್ಕಾರದ ಬಗ್ಗೆ ಮಾತನಾಡತೊಡಗಿದರು. ಈ ವಿಚಾರ ಸಹಜವಾಗಿಯೇ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಲ್ಲೂ ಪ್ರತಿಫಲಿಸಿದವು.
ಆದರೆ ಈ ಪ್ರದೇಶಕ್ಕೆ ಕಾವೇರಿ ಹರಿಸುವ ಭಗೀರಥ ಪ್ರಯತ್ನ ನಡೆಸಿದ್ದ
ಶಾಸಕ ಶ್ರೀ ಕೃಷ್ಣ ಭೈರೇಗೌಡರು ಹೇಳುವ ಪ್ರಕಾರ ಸಮಸ್ಯೆಯ ಮೂಲ ಕಾರಣ ಬೇರೆಯೇ ಆಗಿತ್ತು. ಈ ಜಾಗದಲ್ಲಿ
ನಿರ್ಮಿಸಲು ಉದ್ದೇಶಿಸಲಾಗಿದ್ದ ನೀರಿನ ಟ್ಯಾಂಕಿಗಾಗಿ ಗುರುತಿಸಲಾಗಿದ್ದ ಸರ್ಕಾರಿ ಜಾಗ ಭೂ ವಿವಾದಕ್ಕೆ
ಸಿಕ್ಕಿಹಾಕಿಕೊಂಡಿತ್ತು. ಈ ಸರ್ಕಾರಿ ಜಾಗವನ್ನು ಕಬಳಿಸಲು ಇಲ್ಲಿ ನಿರಂತರ ಯತ್ನ ನಡೆದಿತ್ತು. ಈ ವಿವಾದ
ಕೋರ್ಟ್ ಮೆಟ್ಟಿಲನ್ನು ಕೂಡಾ ಏರಿತ್ತು. ಈ ಸಿಕ್ಕುಗಳು ಕಾಮಗಾರಿಯನ್ನು ವಿಳಂಬಗೊಳಿಸಿದವು.
ಕಟ್ಟ ಕಡೆಗೂ ೨೦೨೩ ಮಾರ್ಚ್ ೨೪ರ ಶುಕ್ರವಾರ ಈ ನೀರಿನ ಟ್ಯಾಂಕಿಗಾಗಿ ಭೂಮಿ ಪೂಜೆ ನಡೆಸುವ ಅವಕಾಶ ಒದಗಿ ಬಂತು. ಜಾಗ ಕಬಳಿಸುವ ಸಲುವಾಗಿ ಸೃಷ್ಟಿಸಲಾಗಿದ್ದ ದಾಖಲೆಗಳೆಲ್ಲವೂ ನಕಲಿ ಎಂಬುದಾಗಿ ಫೋರೆನ್ಸಿಕ್ ಲ್ಯಾಬ್ ವರದಿಗಳಿಂದ ಖಚಿತವಾಗಿ ಆ ವರದಿಗಳನ್ನು ಆಧರಿಸಿ ನ್ಯಾಯಾಲಯ ಜಲಮಂಡಳಿ ಪರವಾಗಿ ನ್ಯಾಯಾಲಯ ತೀರ್ಪು ಕೊಟ್ಟಿದೆ.
ಇದನ್ನು ಆಧರಿಸಿಯೇ ಭೂಮಿ ಪೂಜೆ ನೆರವೇರಿಸಿದ ಈ ಸಂದರ್ಭದಲ್ಲಿ ಕೃಷ್ಣ
ಭೈರೇಗೌಡ ಅವರು ʼಕಾವೇರಿ ನೀರು ತರಲು ನಡೆಸಿದ ಈ ʼಭಗೀರಥʼ ಹೋರಾಟದ
ಕಥೆಯನ್ನು ಸವಿಸ್ತಾರವಾಗಿಯೇ ಬಿಚ್ಚಿಟ್ಟರು. ಸಂಭ್ರಮದ ವಾತಾವರಣದಲ್ಲಿ ಭೂಮಿ ಪೂಜೆ ನೆರವೇರಿಸಿದರು.
ಈ ಟ್ಯಾಂಕ್ ಸಾಮರ್ಥ್ಯ ೬೫ ಎಂಎಲ್ ಡಿ ಆಗಿದ್ದು (ದಿನಕ್ಕೆ ೬೫೦ ಲಕ್ಷ ಲೀಟರ್), ಇದನ್ನು ೧೫ ಎಂಎಲ್ ಡಿಯಷ್ಟು ಹೆಚ್ಚಿಸುವ ಅವಕಾಶಗಳಿವೆ. ಇದು ಆಸು ಪಾಸಿನ ಸುಮಾರು ಒಂದು ಲಕ್ಷ ಜನರ ನೀರಿನ ಸಮಸ್ಯೆ
ನಿವಾರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.
ಓದಿರಿ:
No comments:
Post a Comment